Shocking: ಶಸ್ತ್ರಚಿಕಿತ್ಸೆ ಮಾಡಿ ಮಹಿಳೆಯ ಹೊಟ್ಟೆಯಲ್ಲೇ ಸರ್ಜಿಕಲ್ ಮಾಪ್ ಉಳಿಸಿದ ವೈದ್ಯರು!
ಶಸ್ತ್ರಚಿಕಿತ್ಸೆಗೆ ಬಳಸುವ ಬಟ್ಟೆಯನ್ನು ವೈದ್ಯರು ಬೆಂಗಳೂರಿನ ಮಹಿಳೆಯ ಹೊಟ್ಟೆಯಲ್ಲಿ ಬಾಕಿ ಉಳಿಸಿದ ಆಘಾತಕಾರಿ ಸಂಗತಿಯೊಂದು ನಡೆದಿದೆ. ಈ ಬಗ್ಗೆ ದೂರು ದಾಖಲಾದ ಹಿನ್ನೆಲೆ ಗ್ರಾಹಕರ ನ್ಯಾಯಾಲಯವು ಮಹಿಳೆಗೆ ಪರಿಹಾರ ನೀಡುವಂತೆ ಆದೇಶ ಹೊರಡಿಸಿದೆ.
ಬೆಂಗಳೂರು: ಉಡುಪಿ ಆಸ್ಪತ್ರೆ ವೈದ್ಯರು ಹೊಟ್ಟೆ ಶಸ್ತ್ರಚಿಕಿತ್ಸೆ ಮಾಡುವ ವೇಳೆ ಮಾಡಿದ ಎಡವಟ್ಟಿನಿಂದಾಗಿ ಮಹಿಳೆ ಮತ್ತೆ ಮೂರು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. 31 ವರ್ಷದ ಬೆಂಗಳೂರಿನ ಮಹಿಳೆಯ ಹೊಟ್ಟೆ ಶಸ್ತ್ರಚಿಕಿತ್ಸೆ ಮಾಡಿ ಸರ್ಜರಿಗೆ ಬಳಸಿದ ಬಟ್ಟೆಯನ್ನು ಹೊಟ್ಟೆಯಲ್ಲೇ ಬಾಕಿ ಉಳಿಸಿದ್ದಾರೆ. ಈ ಬಗ್ಗೆ ನೊಂದ ಮಹಿಳೆ ಗ್ರಾಹಕರ ನ್ಯಾಯಾಲಯದ (Consumer Court) ಮೊರೆ ಹೋಗಿದ್ದು, ವೈದ್ಯಕೀಯ ನಿರ್ಲಕ್ಷ್ಯಕ್ಕಾಗಿ 20 ಲಕ್ಷ ರೂ.ಗಳ ಪರಿಹಾರವನ್ನು ಪಾವತಿಸುವಂತೆ ಕೋರ್ಟ್ ಆದೇಶಿಸಿದೆ. 2018ರ ಜುಲೈ 29 ರಂದು ಯಲಹಂಕ ನಿವಾಸಿಗೆ ಹೆರಿಗೆ ನೋವು ಕಾಣಿಸಿಕೊಂಡು ಉಡುಪಿಯ ಹಳೆಯ ತಾಲ್ಲೂಕು ಕಚೇರಿ ಎದುರಿನ ಟಿಎಂಎ ಪೈ ಆಸ್ಪತ್ರೆಗೆ (TMA Pai Hospital) ದಾಖಲಿಸಲಾಯಿತು. ತೊಡಕುಗಳ ನಡುವೆ ವೈದ್ಯರು ಸಿ-ಸೆಕ್ಷನ್ ಶಸ್ತ್ರಚಿಕಿತ್ಸೆಯನ್ನು ನಡೆಸಿದರು ಮತ್ತು ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.
ಆದಾಗ್ಯೂ, ಕೆಳಹೊಟ್ಟೆಯಲ್ಲಿ ವಿಪರೀತ ನೋವು ಮತ್ತು ಯೋನಿ ವಿಸರ್ಜನೆಯನ್ನು ಆಕೆ ಅನುಭವಿಸಲು ಪ್ರಾರಂಭಿಸಿದಳು. ಹೀಗಾಗಿ ಆಕೆ ತನಗೆ ಚಿಕಿತ್ಸೆ ನೀಡಿದ ವೈದ್ಯರನ್ನು ಸಂಪರ್ಕಿಸಿ ಸಮಸ್ಯೆ ಹೇಳಿಕೊಂಡಿದ್ದಾಳೆ. ಆದರೆ ಸಿ-ಸೆಕ್ಷನ್ ನಂತರ ನೋವು ಮತ್ತು ಡಿಸ್ಚಾರ್ಜ್ ಸಾಮಾನ್ಯ ಎಂದು ವೈದ್ಯರು ವಿವರಿಸಿ ಮನೆಗೆ ಕಳುಹಿಸಿದ್ದರು. ಆದರೆ ನೋವು ಶಮನವಾಗದ ಹಿನ್ನಲೆ ವೈದ್ಯರು ಸೆಪ್ಟೆಂಬರ್ 24ರಂದು ಮಹಿಳೆಗೆ ಎರಡನೇ ಬಾರಿ ಶಸ್ತ್ರಚಿಕಿತ್ಸೆ ನಡೆಸಿ ಅಕ್ಟೋಬರ್ 6ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದರು.
ನಂತರ ಮಹಿಳೆಯ ಮೊಲೆತೊಟ್ಟುಗಳಲ್ಲಿ ತೀವ್ರವಾದ ನೋವು ಕಾಣಿಸಿಕೊಂಡಿದೆ. ಇದರಿಂದಾಗಿ ಅವಳು ತನ್ನ ಮಗುವಿಗೆ ಹಾಲುಣಿಸಲು ಕಷ್ಟಸಾಧ್ಯವಾಗುತ್ತಿತ್ತು. ಎರಡನೇ ಶಸ್ತ್ರಚಿಕಿತ್ಸೆಯ ನಂತರ ಚಿಕಿತ್ಸೆಗಾಗಿ ಬದಲಿ ದಿನಗಳಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ಆಕೆ, ಟಿಎಂಎ ಪೈ ವೈದ್ಯರಿಗೆ ದೇಹದಲ್ಲಿ ಇನ್ನೂ ಏನೋ ತಪ್ಪಾಗಿದೆ ಎಂದು ಹೇಳಿದ್ದಾಳೆ. ಆದರೆ ಶಸ್ತ್ರಚಿಕಿತ್ಸಕರು ಮತ್ತು ತಜ್ಞರು ಗಂಭೀರವಾಗಿ ಪರಿಗಣಿಸದ ಕಾರಣ ಮಹಿಳೆಯ ಪತಿ ಬೆಂಗಳೂರಿನ ಆಯುರ್ವೇದ ತಜ್ಞರನ್ನು ಸಂಪರ್ಕಿಸಿದರು.
ಇದನ್ನೂ ಓದಿ: ಬಳ್ಳಾರಿ: ಕಾರು ಗುದ್ದಿದ ರಭಸಕ್ಕೆ ಬೈಕ್ ಸವಾರ ನೆಲಕ್ಕೆ ಬಿದ್ದು ಸಾಯುವ ಮೊದಲು 10 ಅಡಿ ಮೇಲಕ್ಕೆ ಚಿಮ್ಮಲ್ಪಟ್ಟ!
ಬೆಂಗಳೂರಿನ ವೈದ್ಯರ ಸಲೆಹೆ ಮೇರೆಗೆ ಎಂಆರ್ಐ ಮಾಡಿದಾಗ ಮಹಿಳೆಯ ಕಿಬ್ಬೊಟ್ಟೆಯಲ್ಲಿ ಶಸ್ತ್ರಚಿಕಿತ್ಸೆಯ ಮಾಪ್ ಪತ್ತೆಯಾಗಿದೆ. ಕೂಡಲೇ ವೈದ್ಯರು ತುರ್ತು ಶಸ್ತ್ರಚಿಕಿತ್ಸೆ ನಡೆಸಲು ಶಿಫಾರಸು ಮಾಡಿದರು. ಅದರಂತೆ ಮಹಿಳೆಯನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಶಸ್ತ್ರಚಿಕಿತ್ಸೆಯನ್ನು ನಡೆಸಿ ಮಾಪ್ ಅನ್ನು ತೆಗೆದುಹಾಕಲಾಯಿತು. ಇದು ಮೂರನೇ ಶಸ್ತ್ರಚಿಕಿತ್ಸೆಯಾಗಿದೆ. ಬಳಿಕ ಮಹಿಳೆಯ ಕಿಬ್ಬೊಟ್ಟೆ ನೋವು ಕಡಿಮೆಯಾಯಿತು.
ಸಿಗ್ಮಾಯ್ಡ್ ಕರುಳಿನ ಮೇಲೆ ಶಸ್ತ್ರಚಿಕಿತ್ಸೆಯ ಬಟ್ಟೆ ಪರಿಣಾಮ ಬೀರಿದ್ದರಿಂದ ಮಹಿಳೆ ಮತ್ತೊಮ್ಮೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಕಸ್ತೂರ್ಬಾ ಆಸ್ಪತ್ರೆಯಲ್ಲಿ ನಾಲ್ಕನೇ ಶಸ್ತ್ರಚಿಕಿತ್ಸೆಯನ್ನು ನಡೆಸಿ ಕೊಲೊಸ್ಟೋಮಿ ಚೀಲವನ್ನು ತೆಗೆದುಹಾಕಲಾಯಿತು. ಟಿಎಂಎ ಪೈ ಆಸ್ಪತ್ರೆಯ ಶಸ್ತ್ರಚಿಕಿತ್ಸಕರ ವಿರುದ್ಧ ನೊಂದ ಮಹಿಳೆ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದ್ದರು. ವೈದ್ಯಕೀಯ ನಿರ್ಲಕ್ಷ್ಯದಿಂದ ಆರೋಗ್ಯ ಹದಗೆಡಲು ಕಾರಣವಾದ ವೈದ್ಯಕೀಯ ನಿರ್ಲಕ್ಷ್ಯದ ವಿರುದ್ಧ ಮೊಕದ್ದಮೆ ಹೂಡಿದ್ದಳು.
ವಿಚಾರಣೆ ವೇಳೆ ಮಹಿಳೆಯ ಪರ ವಕೀಲರು ವಾದ ಮಂಡಿಸಿದರು. ಪ್ರತಿವಾದ ಮಂಡಿಸಿದ ಟಿಎಂಎ ಪೈ ಆಸ್ಪತ್ರೆ ಮತ್ತು ನಾಲ್ವರು ವೈದ್ಯರನ್ನು ಪ್ರತಿನಿಧಿಸಿದ ವಕೀಲರು, ಅವರು ನೀಡಿದ ದೂರು ಸುಳ್ಳು. ಆಧಾರರಹಿತವಾಗಿ ಆರೋಪಿಸುತ್ತಿದ್ದಾರೆ ಎಂದು ಹೇಳಿದರು. ಶಸ್ತ್ರಚಿಕಿತ್ಸೆಯ ಮಾಪ್ಗಳು ಸೇರಿದಂತೆ ಎಲ್ಲಾ ವಸ್ತುಗಳನ್ನು ಸಿ-ಸೆಕ್ಷನ್ ಸಮಯದಲ್ಲಿ ಮತ್ತು ನಂತರ ಲೆಕ್ಕಹಾಕಲಾಗಿದೆ. ಮಹಿಳೆಯ ಕಿಬ್ಬೊಟ್ಟೆಯೊಳಗೆ ಯಾವುದೇ ವಸ್ತುವನ್ನು ಬಿಡಲಾಗಿಲ್ಲ ಎಂದು ವಾದಿಸಿದರು. ವಾದ ಪ್ರತಿವಾದ ಆಲಿಸಿದ ಕೋರ್ಟ್, ಮಹಿಳೆಗೆ 20 ಲಕ್ಷ ಪರಿಹಾರ ನೀಡುವಂತೆ ಆದೇಶ ಹೊರಡಿಸಿತು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ