ಬೆಂಗಳೂರು: ಒಂದೇ ವರ್ಷಕ್ಕೆ ಹಳ್ಳಹಿಡಿದ ‘ಸ್ಮಾರ್ಟ್ ಬಸ್ ನಿಲ್ದಾಣ’; ಮಹಿಳೆಯರ ಸುರಕ್ಷತೆಗೆ ನಿರ್ಮಿಸಿದ್ದ ನಿಲ್ದಾಣ ಅಧ್ವಾನ

ಮಹಿಳೆಯರ ಸುರಕ್ಷತೆಗಾಗಿ ಕೆಲ ಸ್ವಯಂ ಸೇವಾಸಂಸ್ಥೆಗಳ ಜೊತೆ ಸೇರಿ ರಾಜಧಾನಿಯ ಹೃದಯಭಾಗ ನೃಪತುಂಗ ರಸ್ತೆಯಲ್ಲಿ ಬರೋಬ್ಬರಿ 1 ಕೋಟಿ ರೂ. ಖರ್ಚು ಮಾಡಿ ಸ್ಮಾರ್ಟ್ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಇದೀಗ ನಿರ್ವಹಣೆಯಿಲ್ಲದೇ ಇಡೀ ನಿಲ್ದಾಣ ಅವ್ಯವಸ್ಥೆಯ ಆಗರವಾಗಿ ಬದಲಾಗಿದೆ.

ಬೆಂಗಳೂರು: ಒಂದೇ ವರ್ಷಕ್ಕೆ ಹಳ್ಳಹಿಡಿದ ಸ್ಮಾರ್ಟ್ ಬಸ್ ನಿಲ್ದಾಣ; ಮಹಿಳೆಯರ ಸುರಕ್ಷತೆಗೆ ನಿರ್ಮಿಸಿದ್ದ ನಿಲ್ದಾಣ ಅಧ್ವಾನ
ಒಂದೇ ವರ್ಷಕ್ಕೆ ಹಳ್ಳಹಿಡಿದ 'ಸ್ಮಾರ್ಟ್ ಬಸ್ ನಿಲ್ದಾಣ'
Edited By:

Updated on: Oct 10, 2025 | 9:57 AM

ಬೆಂಗಳೂರು, ಅಕ್ಟೋಬರ್ 10: ಬೆಂಗಳೂರನ್ನು (Bengaluru) ಬ್ರ್ಯಾಂಡ್ ಬೆಂಗಳೂರು ಮಾಡುತ್ತೇವೆ ಎಂದು ಹೊರಟಿದ್ದ ಸರ್ಕಾರ ಬೆಂಗಳೂರಲ್ಲಿ ಎಂಟು ಪರಿಕಲ್ಪನೆ ಇಟ್ಟುಕೊಂಡು ಹಲವು ಯೋಜನೆಗಳನ್ನು ರೂಪಿಸಿತ್ತು. ಇದೇ ಬ್ರ್ಯಾಂಡ್ ಬೆಂಗಳೂರಿನ ಅಡಿಯಲ್ಲಿ ರಾಜಧಾನಿಯ ಹೃದಯಭಾಗ ನೃಪತುಂಗ ರಸ್ತೆಯಲ್ಲಿ ಬರೋಬ್ಬರಿ 1 ಕೋಟಿ ರೂ. ಖರ್ಚು ಮಾಡಿ ಸ್ಮಾರ್ಟ್ ಬಸ್ ನಿಲ್ದಾಣವನ್ನು ಕೂಡ ನಿರ್ಮಾಣ ಮಾಡಲಾಗಿತ್ತು. ಆದರೆ ವರ್ಷ ತುಂಬುವುದರೊಳಗೆ ಸ್ಮಾರ್ಟ್ ನಿಲ್ದಾಣ ಕೆಲಸಕ್ಕೆ ಬಾರದ ನಿರುಪಯುಕ್ತ ಜಾಗದಂತೆ ಬದಲಾಗಿಬಿಟ್ಟಿದೆ.

ಸ್ಮಾರ್ಟ್​ ನಿಲ್ದಾಣದಲ್ಲಿಲ್ಲ ಮಹಿಳೆಯರಿಗೆ ಸುರಕ್ಷತೆಗೆ

ಮಹಿಳೆಯರ ಸುರಕ್ಷತೆಗಾಗಿ ಕೆಲ ಸ್ವಯಂ ಸೇವಾಸಂಸ್ಥೆಗಳ ಜೊತೆ ಸೇರಿ ನಿರ್ಮಿಸಿದ್ದ ಈ ಸ್ಮಾರ್ಟ್ ನಿಲ್ದಾಣವನ್ನು ಕಳೆದ ವರ್ಷ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಉದ್ಘಾಟಿಸಿದ್ದರು. ಆದರೆ ಇದೀಗ ನಿರ್ವಹಣೆಯಿಲ್ಲದೇ ಇಡೀ ನಿಲ್ದಾಣ ಅವ್ಯವಸ್ಥೆಯ ಆಗರವಾಗಿ ಬದಲಾಗಿದೆ. ಮಹಿಳೆಯರ ಸುರಕ್ಷತೆಗೆ ಎಂದು ಅಳವಡಿಸಿದ್ದ ಸಿಸಿ ಕ್ಯಾಮರಾಗಳನ್ನು ಕಿಡಿಗೇಡಿಗಳು ಕದ್ದೋಯ್ದಿದ್ದಾರೆ. ಇತ್ತ ತುರ್ತು ಸಮಯದಲ್ಲಿ ಸಹಾಯಕ್ಕೆ ಅಳವಡಿಸಿದ್ದ ಪ್ಯಾನಿಕ್ ಬಟನ್ ಕೆಲಸ ನಿಲ್ಲಿಸಿ ತಿಂಗಳುಗಳೇ ಉರುಳಿವೆ. ಸ್ಯಾನಿಟರಿ ಪ್ಯಾಡ್ ಯಂತ್ರ ತುಕ್ಕು ಹಿಡಿದು ಮೂಲೆ ಸೇರಿದ್ದು, ಬಸ್ ನಿಲ್ದಾಣದಲ್ಲಿ ಕೂರುವ ಬದಲು ಫುಟ್ ಪಾತ್ ನಲ್ಲಿ ನಿಂತು ಬಸ್ ಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ.

ಸದ್ಯ ಒಂದು ಕೋಟಿ ಹಣ ಸುರಿದು ನಿರ್ಮಿಸಿದ್ದ ಈ ಹೈಫೈ ಸ್ಮಾರ್ಟ್ ಬಸ್ ನಿಲ್ದಾಣ ಬಳಕೆಗೆ ಸಿಗದಂತಾಗಿರುವುದಕ್ಕೆ ಆಕ್ರೋಶ ಹೊರಹಾಕುತ್ತಿರುವ ಮಹಿಳಾ ಪ್ರಯಾಣಿಕರು, ಜನರ ಉಪಯೋಗಕ್ಕೆ ಸಿಗದ ಮೇಲೆ ಕೋಟಿ ಕೋಟಿ ಹಣ ವ್ಯರ್ಥ ಮಾಡಿದ್ದೇಕೆ ಎಂದು ಕಿಡಿಕಾರುತ್ತಿದ್ದಾರೆ. ಅಲ್ಲದೇ ಬಸ್ ನಿಲ್ದಾಣದಲ್ಲಿ ಏನೇ ಸೌಲಭ್ಯ ಅಳವಡಿಸಿದರೂ ಅದು ಸರಿಯಾಗಿ ಕೆಲಸಕ್ಕೆ ಬಾರದ ಮೇಲೆ ಇದ್ದೇನು ಪ್ರಯೋಜನ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ Bangaluru: ಎಲೆಕ್ಟ್ರಾನಿಕ್​ ಸಿಟಿಯಲ್ಲೊಂದು ಸ್ಮಾರ್ಟ್ ಬಸ್ ನಿಲ್ದಾಣ; ಇದರ ವಿಶೇಷತೆ ಹೀಗಿದೆ

ಬ್ರ್ಯಾಂಡ್ ಬೆಂಗಳೂರಿನ ಹೆಸರಲ್ಲಿ ಮಾಡಿದ ಯೋಜನೆ ಒಂದು ವರ್ಷ ತುಂಬುವುದರೊಳಗೆ ತುಕ್ಕು ಹಿಡಿದಿರುವುದು ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸಿದೆ. ಇತ್ತ ಕೋಟಿ ಕೋಟಿ ಹಣ ಸುರಿದು ನಿರ್ಮಿಸಿದ್ದ ಸ್ಮಾರ್ಟ್ ಬಸ್ ನಿಲ್ದಾಣ ಮತ್ತೆ ಮಹಿಳೆಯರ ಬಳಕೆಗೆ ಸಿಗುವಂತಾಗುತ್ತದೆಯೇ ಎಂದು ಮಹಿಳೆಯರು ಕಾಯುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 9:56 am, Fri, 10 October 25