ಬೆಡ್ಗಾಗಿ 5 ಆಸ್ಪತ್ರೆಗಳಿಗೆ ಅಲೆದು ಪ್ರಾಣ ಬಿಟ್ಟ ಮಹಿಳೆ; ಮೇಡಿ ಅಗ್ರಹಾರ ಚಿತಾಗಾರದ ಮುಂದೆ ಕಣ್ಣೀರಿಟ್ಟ ಪತಿ
ಸತ್ತ ಮೇಲೆ ಕೆಲವೇ ನಿಮಿಷಗಳಲ್ಲಿ ಪಾಸಿಟಿವ್ ರಿಪೋರ್ಟ್ ಕೊಡುತ್ತಾರೆ. ಬದುಕಿದ್ದಾಗ ಪಾಸಿಟಿವ್ ಅಂತ ಕೊಟ್ಟಿದ್ರೆ, ಪತ್ನಿ ಉಳಿಯುತ್ತಿದ್ದಳು ಎಂದು ಲಕ್ಷ್ಮಿಪುರದ ಮೇಡಿ ಅಗ್ರಹಾರ ಚಿತಾಗಾರದ ಬಳಿ ಪತಿ ಕಣ್ಣೀರು ಹಾಕಿದ್ದಾರೆ.
ಬೆಂಗಳೂರು: ಕೊರೊನಾ ಎರಡನೇ ಅಲೆ ವೇಗವಾಗಿ ಹರಡುತ್ತಿದೆ. ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಸಾವಿನ ಸಂಖ್ಯೆಯಲ್ಲಿ ಕೂಡ ಏರಿಕೆ ಕಂಡುಬಂದಿದೆ. ಹೀಗಾಗಿ ಸರ್ಕಾರ ಸಾಕಷ್ಟು ಕೊವಿಡ್ ಕೇರ್ ಸೆಂಟರ್ಗಳನ್ನು ಮಾಡಿದೆ. ಅಲ್ಲದೇ ಕೆಲವು ಸೆಲೆಬ್ರಿಟಿಗಳು ಕೂಡ ಆಕ್ಸಿಜನ್, ಬೆಡ್ ಕೊರತೆಯನ್ನು ನೀಗಿಸಲು ಪ್ರಯತ್ನಪಡುತ್ತಿದ್ದಾರೆ. ಆದರೆ ಬೆಡ್ ಸಿಗದೆ ಸಾಯುವವರ ಸಂಖ್ಯೆ ಮಾತ್ರ ಇನ್ನು ಕೂಡ ಕಡಿಮೆಯಾಗಿಲ್ಲ. ಬೆಂಗಳೂರಿನಲ್ಲಿ ಇಂದು 5 ಆಸ್ಪತ್ರೆಗಳಿಗೆ ಅಲೆದಾಡಿದರು ಬೆಡ್ ಸಿಗದೆ 50 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
2 ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಬುಧವಾರ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಮೇಲೆ ಆಸ್ಪತ್ರೆಗಳ ಹುಡುಕಾಟ ನಡೆಸಲಾಯಿತು. ನೆಗೆಟಿವ್ ರಿಪೋರ್ಟ್ ಇಲ್ಲದಿದ್ದಕ್ಕೆ ಬಾಗಲಗುಂಟೆಯ ಸಪ್ತಗಿರಿಯಲ್ಲಿ ಅಡ್ಮಿಟ್ ಮಾಡಿಕೊಂಡಿಲ್ಲ. ಇನ್ನೊಂದು ಆಸ್ಪತ್ರೆಯಲ್ಲಿ ಪಾಸಿಟಿವ್ ರಿಪೋರ್ಟ್ ಇದ್ದರೆ ಮಾತ್ರ ಅಡ್ಮಿಟ್ ಅಂತೇಳಿ ವಾಪಾಸ್ ಕಳುಹಿಸಿದ್ದಾರೆ. ಇನ್ನು ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಆಕ್ಸಿಜನ್ನೇ ಇಲ್ಲ ಅಂತ ಹೇಳಿ ಕಳುಹಿಸಿ ಬಿಟ್ಟರು ಎಂದು ಮೃತ ಮಹಿಳೆಯ ಪತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನ್ನ ಉಳಿಸಿ ಅಂತ ಕೂಗ್ತಿದ್ರೂ ನನ್ನ ಕೈಲಿ ಪ್ರಾಣ ಉಳಿಸೋಕೆ ಆಗಿಲ್ಲ. ಸಪ್ತಗಿರಿ, ಸಿಂಗಾಪುರದ ಅವಿಕ್ಷಾ ಆಸ್ಪತ್ರೆ, ಜಿಕೆವಿಕೆ ಆಸ್ಪತ್ರೆ, ಯಲಹಂಕ ಸಾರ್ವಜನಿಕ ಆಸ್ಪತ್ರೆ, ಕೆ.ಸಿ ಜನರಲ್ ಆಸ್ಪತ್ರೆಗಳಿಗೆ ಅಲೆದಾಟ ನಡೆಸಿದರು ಪತ್ನಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಪತ್ನಿಯನ್ನ ಕಳೆದುಕೊಂಡ ಪತಿ ಅಳಲು ತೋಡಿಕೊಂಡಿದ್ದಾರೆ.
ಕೊನೆಗೆ ನನ್ನ ಪತ್ನಿ ಆ್ಯಂಬುಲೆನ್ಸ್ನಲ್ಲೇ ಪ್ರಾಣ ಬಿಟ್ಟಳು. ಆಸ್ಪತ್ರೆಗಳಲ್ಲಿ ರೋಗಿಗೆ ಚಿಕಿತ್ಸೆ ಕೊಟ್ಟಿದ್ದರೆ. ನನ್ನ ಪತ್ನಿ ಉಳಿಯುತ್ತಿದ್ದಳು. ಸತ್ತ ಮೇಲೆ ಕೆಲವೇ ನಿಮಿಷಗಳಲ್ಲಿ ಪಾಸಿಟಿವ್ ರಿಪೋರ್ಟ್ ಕೊಡುತ್ತಾರೆ. ಬದುಕಿದ್ದಾಗ ಪಾಸಿಟಿವ್ ಅಂತ ಕೊಟ್ಟಿದ್ರೆ, ಪತ್ನಿ ಉಳಿಯುತ್ತಿದ್ದಳು ಎಂದು ಲಕ್ಷ್ಮಿಪುರದ ಮೇಡಿ ಅಗ್ರಹಾರ ಚಿತಾಗಾರದ ಬಳಿ ಪತಿ ಕಣ್ಣೀರು ಹಾಕಿದ್ದಾರೆ.
ಮೃತ ಮಹಿಳೆಯ ಮಕ್ಕಳಿಬ್ಬರು ಗಾರೆ ಕೆಲಸ ಮಾಡುತ್ತಿದ್ದಾರೆ. ಪತಿ BWSSB ನಲ್ಲಿ ಕೆಲಸ ಮಾಡುತ್ತಿದ್ದಾರೆ. ತಿಂಡ್ಲು ಭಾಗದ ಮನೆಗಳಿಗೆಲ್ಲ ನೀರು ಬಿಡಿವಾಗ ಸೋಂಕು ಹೊತ್ತಿಕೊಂಡು ಬಂದಿರಬಹುದು. ಮನೆಯಿಂದ ಅಮ್ಮ ಎಲ್ಲೂ ಹೋಗುತ್ತಿರಲಿಲ್ಲ ಎಂದು ತಾಯಿಯನ್ನ ಕಳೆದುಕೊಂಡ ಮಗ ಅಳಲು ತೋಡಿಕೊಂಡಿದ್ದಾನೆ.
ಇದನ್ನೂ ಓದಿ: ಅಕ್ರಮ ಆಕ್ಸಿಜನ್ ಕಾನ್ಸ್ಂಟ್ರೇಟರ್ ಸಂಗ್ರಹ ಪ್ರಕರಣ; ಉದ್ಯಮಿ ನವನೀತ್ ಕಲ್ರಾಗೆ ಮಧ್ಯಂತರ ಜಾಮೀನು ನಿರಾಕರಣೆ
ಕೋವಿಶೀಲ್ಡ್ ಲಸಿಕೆ ಸಾಕಾಷ್ಟಿದೆ, ಆದರೆ ಕೋವ್ಯಾಕ್ಸೀನ್ ನಮ್ಮ ಬಳಿ ಇಲ್ಲ: ವೈದ್ಯಾಧಿಕಾರಿ ಡಾ.ವೆಂಕಟೇಶಯ್ಯ