ನೆಲಮಂಗಲ, ಡಿಸೆಂಬರ್ 16: ದೇಶದಾದ್ಯಂತ ಟೆಕ್ಕಿ ಅತುಲ್ ಸುಭಾಷ್ (Atul Subhash) ಆತ್ಮಹತ್ಯೆ ಪ್ರಕರಣ ಚರ್ಚೆಯಾಗುತ್ತಿರುವ ಹೊತ್ತಿನಲ್ಲೇ, ಹೆಂಡತಿ, ಮಾವನ ಕಿರುಕುಳಕ್ಕೆ ಬೇಸತ್ತು ಪೊಲೀಸ್ ಕಾನ್‌ಸ್ಟೇಬಲ್ ತಿಪ್ಪಣ್ಣ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದರು. ಇದರ ಬೆನ್ನಲ್ಲೇ ಇದೀಗ ಹೆಂಡತಿಯ ಕಿರುಕುಳ ಆರೋಪದಲ್ಲಿ ಬೆಂಗಳೂರಿನಲ್ಲಿ ಮತ್ತೊಂದು ಸಾವಾಗಿದೆ. ಹೌದು. ಪತ್ನಿಯ ಕಿರುಕುಳ ಹಾಗೂ ಅಕ್ರಮ ಸಂಬಂಧದಿಂದ ಬೇಸತ್ತು ಬಾಲರಾಜ್(41) ಎನ್ನುವ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟ ರಸ್ತೆ ಸಿಲುವೆಪುರದಲ್ಲಿ ಈ ಘಟನೆ ನಡೆದಿದೆ.
18 ವರ್ಷದ ಹಿಂದೆ ಪತ್ನಿ ಕುಮಾರಿಯನ್ನ ಬಾಲರಾಜ್ ಎರಡನೇ ಮದುವೆಯಾಗಿದ್ದರು. ಕಿರುಕುಳದ ಜೊತೆಗೆ ಅಕ್ರಮ ಸಂಬಂಧ ಹೊಂದಿರುವ ಆರೋಪ ಕೂಡ ಮಾಡಲಾಗಿದ್ದು, ಗಲಾಟೆ ನಡೆದಿದೆ. ಗಲಾಟೆ ಬಳಿಕ ಮನೆ ತೊರೆದು ಪತ್ನಿ ತವರು ಸೇರಿದ್ದರು.
ಇದನ್ನೂ ಓದಿ: ಬೆಂಗಳೂರು: ಟೆಕ್ಕಿ ಅತುಲ್ ಆಯ್ತು ಈಗ ಪೊಲೀಸ್ ಸರದಿ, ಹೆಂಡತಿ ಕಾಟಕ್ಕೆ ಕಾನ್ಸ್ಟೇಬಲ್ ತಿಪ್ಪಣ್ಣ ಆತ್ಮಹತ್ಯೆ!
ಇತ್ತ ಯಾರು ಇಲ್ಲದ ವೇಳೆ ಮನೆಯ ಫ್ಯಾನ್ಗೆ ನೇಣುಬಿಗಿದು ಕೊಂಡು ಬಾಲರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಬಾಲರಾಜ್ ಗ್ರಾಮಾಂತರ ಭಾಗದಲ್ಲಿ ಕ್ರಿಕೆಟ್ ಪಟುವಾಗಿದ್ದರು. ತನ್ನ ಮೃತದೇಹದ ಜೊತೆ ತಾನು ಪಡೆದಿದ್ದ ಟ್ರೋಫಿ, ಬ್ಯಾಟ್, ಬಾಲ್, ವಿಕೆಟ್ ಇಡುವಂತೆ ಡೆತ್ ನೋಟ್ನಲ್ಲಿ ಉಲ್ಲೇಖಿಸಲಾಗಿದೆ. ಅವರ ಕೊನೆಯ ಆಸೆಯಂತೆ ಶವದ ಪೆಟ್ಟಿಗೆಯಲ್ಲಿ ಎಲ್ಲವನ್ನು ಇಟ್ಟು ಶವ ಸಂಸ್ಕಾರ ಮಾಡಲಾಗಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತುಲ್ ಸುಭಾಷ್ ಆತ್ಮಹತ್ಯೆ ಬೆನ್ನಲ್ಲೇ ಬೆಂಗಳೂರಿನಲ್ಲಿ ಕಾನ್‌ಸ್ಟೇಬಲ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಹೆಂಡತಿ, ಮಾವನ ಕಾಟಕ್ಕೆ ಬೇಸತ್ತ ಕಾನ್‌ಸ್ಟೇಬಲ್ ಪಿಸಿ ತಿಪ್ಪಣ್ಣ ಬೈಯ್ಯಪ್ಪನಹಳ್ಳಿಯಲ್ಲಿ ರೈಲಿಗೆ ತಲೆಕೊಟ್ಟಿದ್ದರು.
ಇದನ್ನೂ ಓದಿ: Bengaluru techie death: ಟೆಕ್ಕಿ ಅತುಲ್ ಸುಭಾಷ್ ಮಗು ಎಲ್ಲಿ? ಬೆಂಗಳೂರು ಪೊಲೀಸರಿಂದ ಮಹತ್ವದ ಸುಳಿವು
ಬಿಜಾಪುರ ಜಿಲ್ಲೆ ಸಿಂದಗಿ ತಾಲೂಕಿನ ಹಂದಿಗನೂರು ಗ್ರಾಮದ ತಿಪ್ಪಣ್ಣ, ಹುಳಿಮಾವು ಪೋಲಿಸ್ ಠಾಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ನಾಗನಾತಪುರದ ಕೃಷ್ಣಪ್ಪಲೇಔಟ್ನಲ್ಲಿ ವಾಸವಿದ್ದರು. ಹೆಂಡತಿ, ಮಾವನ ಕಿರುಕುಳ ನೀಡುತ್ತಿದ್ದಕ್ಕೆ ಬೇಸತ್ತಿದ್ದ ಸಾವಿನ ಮನೆ ಸೇರಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:20 pm, Mon, 16 December 24