ಬೆಂಗಳೂರು: ಟೆಕ್ಕಿ ಅತುಲ್ ಆಯ್ತು ಈಗ ಪೊಲೀಸ್ ಸರದಿ, ಹೆಂಡತಿ ಕಾಟಕ್ಕೆ ಕಾನ್ಸ್ಟೇಬಲ್ ತಿಪ್ಪಣ್ಣ ಆತ್ಮಹತ್ಯೆ!
ಬೆಂಗಳೂರಿನಲ್ಲಿ ಹೆಂಡತಿಯ ಕಿರುಕುಳದ ಆರೋಪದಲ್ಲಿ ಮತ್ತೊಂದು ಸಾವಾಗಿದೆ. ಸೋಮವಾರವಷ್ಟೇ ಟೆಕ್ಕಿ ಅತುಲ್ ಸುಭಾಷ್ ನೇಣಿಗೆ ಶರಣಾಗಿದ್ದರು. ಇದು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈಗ ಕಾನ್‌ಸ್ಟೇಬಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆಂಡತಿ, ಮಾವನ ಕಿರುಕುಳಕ್ಕೆ ಬೇಸತ್ತು ಕಾನ್‌ಸ್ಟೇಬಲ್ ತಿಪ್ಪಣ್ಣ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಂಗಳೂರು, ಡಿಸೆಂಬರ್ 14: ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಇಡೀ ದೇಶವನ್ನೇ ಬೆಚ್ಚಿ ಬೀಳಿದೆ. ಹೆಂಡತಿ ಹಾಗೂ ಆಕೆಯ ಕುಟುಂಬದ ಕಿರುಕುಳಕ್ಕೆ ಬೇಸತ್ತ ಅತುಲ್, ಡೆತ್‌ನೋಟ್ ಬರೆದಿಟ್ಟು ವಿಡಿಯೋ ಮಾಡಿ ನೇಣಿಗೆ ಶರಣಾಗಿದ್ದರು. ಅತುಲ್ ಸುಭಾಷ್‌ಗೆ ನ್ಯಾಯ ದೊರಕಿಸಿಕೊಡಬೇಕು ಎಂಬ ಅಭಿಯಾನ ಕೂಡ ದೇಶಾದ್ಯಂತ ಶುರುವಾಗಿದೆ. ಈ ಪ್ರಕರಣ ಹಚ್ಚ ಹಸಿರಾಗಿರುವಾಗಲೇ ಬೆಂಗಳೂರಿನಲ್ಲಿ ಇದೇ ರೀತಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಮಾವನ ಕಾಟಕ್ಕೆ ಬೇಸತ್ತ ಕಾನ್‌ಸ್ಟೇಬಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೈಯ್ಯಪ್ಪನಹಳ್ಳಿಯಲ್ಲಿ ರೈಲಿಗೆ ತಲೆಕೊಟ್ಟು ಪಿಸಿ ತಿಪ್ಪಣ್ಣ ಸೂಸೈಡ್ ಮಾಡಿಕೊಂಡಿದ್ದಾರೆ. ಬಿಜಾಪುರ ಜಿಲ್ಲೆ ಸಿಂದಗಿ ತಾಲೂಕಿನ ಹಂದಿಗನೂರು ಗ್ರಾಮದ ತಿಪ್ಪಣ್ಣ, ಹುಳಿಮಾವು ಪೋಲಿಸ್ ಠಾಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ನಾಗನಾತಪುರದ ಕೃಷ್ಣಪ್ಪಲೇಔಟ್ನಲ್ಲಿ ವಾಸವಿದ್ದರು. ಹೆಂಡತಿ, ಮಾವ ಕಿರುಕುಳ ನೀಡುತ್ತಿದ್ದಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡೆತ್ನೋಟ್ನಲ್ಲೇನಿದೆ?
ಪತ್ನಿ, ಮಾವ ವಿರುದ್ಧ ಡೆತ್‌ನೋಟ್ ಬರೆದು ತಿಪ್ಪಣ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗುರುವಾರ ಕರೆ ಮಾಡಿದಾಗ, ‘ನೀನು ಸತ್ತು ಹೋಗು, ನನ್ನ ಮಗಳು ಚೆನ್ನಾಗಿ ಇರುತ್ತಾಳೆ’ ಎಂದು ಹೇಳಿ ಅವಾಚ್ಯ ಪದಗಳಿಂದ ಮಾವ ನಿಂದಿಸಿದ್ದಾರೆ ಎಂದು ಡೆತ್‌ನೋಟ್‌ನಲ್ಲಿ ತಿಪ್ಪಣ್ಣ ಉಲ್ಲೇಖಿಸಿದ್ದಾರೆ.
ಹೆಂಡತಿ, ಮಾವ ಕಾಟದಿಂದ ಬೇಸತ್ತಿದ್ದ ತಿಪ್ಪಣ್ಣ ಬೈಕ್‌ನಲ್ಲಿ ಶುಕ್ರವಾರ ರಾತ್ರಿ 10.45ರ ಸಮಯದಲ್ಲಿ ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣ ಬಳಿ ಬಂದಿದ್ದರು. ಬಳಿಕ ರೈಲಿಗೆ ತಲೆ ಕೊಟ್ಟು ಸಾವಿಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ತಿಪ್ಪಣ್ಣ ತಂದೆ ದೂರು ನೀಡಿದ್ದಾರೆ. ತನ್ನ ಮಗನಿಗೆ ನ್ಯಾಯ ಕೊಡಿಸುವಂತೆ ದೂರಿನಲ್ಲಿ ತಿಳಿಸಿದ್ದಾರೆ.
ತಿಪ್ಪಣ್ಣ ಪತ್ನಿ, ಮಾವನ ವಿರುದ್ಧ ಪ್ರಕರಣ ದಾಖಲು
ಡೆತ್‌ನೋಟ್ ಆಧರಿಸಿ ಹೆಂಡತಿ ಹಾಗೂ ಮಾವನ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಿಎನ್‌ಎಸ್ ಕಾಯ್ದೆ 108 ಸೆಕ್ಷನ್ ಅನ್ವಯ ಆತ್ಮಹತ್ಯೆ ಗೆ ಪ್ರಚೋದನೆ, 351 (3) ಸೆಕ್ಷನ್ ಅನ್ವಯ ಬೆದರಿಕೆ ಹಾಗೂ 352 ಸೆಕ್ಷನ್ ಅನ್ವಯ ಉದ್ದೇಶ ಪೂರ್ವಕವಾಗಿ ಅವಮಾನ ಮಾಡಿದ ಪ್ರಕರಣವನ್ನು ದಾಖಲಿಸಲಾಗಿದೆ. ಸಿವಿ.ರಾಮನ್ ನಗರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: ಅತುಲ್ ಸುಭಾಷ್ ಆತ್ಮಹತ್ಯೆ ಕೇಸ್: ಬಾಮೈದ, ಅತ್ತೆಯನ್ನು ಬಂಧಿಸಿದ ಬೆಂಗಳೂರು ಪೊಲೀಸ್
ಬಿಜಾಪುರದ ಸಿಂದಗಿಯಿಂದ ತಿಪ್ಪಣ್ಣ ಪೋಷಕರು ಆಗಮಿಸುತ್ತಿದ್ದಾರೆ. ಸಹೋದ್ಯೋಗಿಗಳ ಜೊತೆ ಲವಲವಿಕೆಯಿಂದ ಇರುತ್ತಿದ್ದ ತಿಪ್ಪಣ್ಣ, ಹುಳಿಮಾವು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸ್ತಿದ್ದರು. ಕೌಟುಂಬಿಕ ಕಲಹದ ಬಗ್ಗೆ ಯಾರೊಂದಿಗೂ ನೋವು ಹಂಚಿಕೊಳ್ಳದ ತಿಪ್ಪಣ್ಣ ಸಾವು, ಸಹೋದ್ಯೋಗಿಗಳಿಗೂ ಶಾಕ್ ನೀಡಿದೆ.
ನಿರೀಕ್ಷಣಾ ಜಾಮೀನು ಮೊರೆ ಹೋದ ಅತುಲ್ ಪತ್ನಿ
ಅತ್ತ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಕೇಸ್ ಪ್ರಕರಣ ಬೆನ್ನತ್ತಿರುವ ಮಾರತಹಹಳ್ಳಿ ಪೊಲೀಸರು ಆರೋಪಿಗಳಿಗಾಗಿ ಉತ್ತರ ಪ್ರದೇಶದಲ್ಲಿಯೇ ಬೀಡು ಬಿಟ್ಟಿದ್ದಾರೆ. ಪತ್ನಿ ನಿಖಿತಾ ಸಿಂಘಾನಿಯಾ ಸೇರಿದಂತೆ ಇತರೆ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಆರೋಪಿಗಳ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಉತ್ತರ ಪ್ರದೇಶ ಬಿಟ್ಟು ಬೇರೆ ರಾಜ್ಯದಲ್ಲಿ ತಲೆಮರೆಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ ಪೊಲೀಸರು ನಿಖಿತಾ ಮನೆ ಬಾಗಿಲಿಗೆ ನೋಟಿಸ್ ಅಂಟಿಸಿದ್ದು, ಮೂರು ದಿನದೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಈ ನಡುವೆ ಪತ್ನಿ ನಿಖಿತಾ ಸಿಂಘಾನಿಯಾ ಸೇರಿದಂತೆ ಇತರೆ ಆರೋಪಿಗಳು ನಿರೀಕ್ಷಣಾ ಜಾಮೀನು ಮೊರೆ ಹೋಗಿದ್ದಾರೆ. ಅಲಹಾಬಾದ್ ಹೈಕೋರ್ಟ್ಗೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:26 pm, Sat, 14 December 24