ಸ್ಟ್ರೀಟ್ ಫುಡ್ ವ್ಯಾಪಾರಿಗಳಿಗೆ ವಿಶೇಷ ತರಬೇತಿ: ಕರ್ನಾಟಕ ಆರೋಗ್ಯ ಇಲಾಖೆಯಿಂದ ಹೊಸ ಪ್ರಯತ್ನ
ಪಾನಿಪುರಿ, ಕಬಾಬ್, ಗೋಬಿ ಮಂಚೂರಿ, ಕೇಕ್ ಹೀಗೆ ನಾನಾ ತಿನಿಸುಗಳಲ್ಲಿ ಪುಡ್ ಕಲರ್ ಬಳಕೆ ನಿಷೇಧದ ಕಾರಣ ನಗರ ಪ್ರದೇಶಗಳ ಜನರು ಸ್ಟ್ರೀಟ್ ಫುಡ್ ಎಂದರೆ ಭಯ ಪಡುತ್ತಿದ್ದಾರೆ. ಹೀಗಾಗಿ ಈ ಭಯ ಹೋಗಲಾಡಿಸಲು ಆಹಾರ ಮತ್ತು ಸುರಕ್ಷತಾ ಇಲಾಖೆ ಹೊಸ ಯೋಜನೆಯೊಂದನ್ನು ಹಮ್ಮಿಕೊಂಡಿದೆ. ಏನದು ಎಂಬ ವಿವರ ಇಲ್ಲಿದೆ.
ಬೆಂಗಳೂರು, ಡಿಸೆಂಬರ್ 14: ನಗರ ಪ್ರದೇಶದ ಜನರಿಗೆ ಸ್ಟ್ರೀಟ್ ಫುಡ್ ಅಚ್ಚುಮೆಚ್ಚು. ಸಂಜೆ ಆಗುತ್ತಲೇ ಮನಸ್ಸು ಫುಡ್ ಸ್ಟ್ರೀಟ್ಗಳತ್ತ ಸೆಳೆಯುತ್ತದೆ. ಭರ್ಜರಿ ಅಲ್ಲದಿದ್ದರೂ ಒಂದು ಪ್ಲೇಟ್ ಮಸಾಲೆ, ಒಂದು ಪ್ಲೇಟ್ ಬಿಸಿ ಬಿಸಿ ಗೋಬಿ ಮಂಚೂರಿ ತಿಂದರೆ ಅದೇನೋ ಆನಂದ. ಆದರೆ, ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಗೋಬಿ ಮಂಚೂರಿ, ಪಾನಿ ಪುರಿ ಹೀಗೆ ನಾನಾ ಆಹಾರವಸ್ತುಗಳು ಭಾಗಶಃ ನಿಷೇಧಿಸಲ್ಪಟ್ಟಿವೆ. ಕೆಲ ವರ್ಗದ ಗ್ರಾಹಕರಂತೂ ಸ್ಟ್ರೀಟ್ ಫುಡ್ ಬಗ್ಗೆ ಅನುಮಾನ ಹೊರಹಾಕುತ್ತಿದ್ದಾರೆ.
ನಿಷೇಧದ ಬಿಸಿ ವ್ಯಾಪಾರಿಗಳಿಗೂ ತಟ್ಟಿದೆ. ಇದನ್ನೇ ನಂಬಿ ಜೀವನ ನಡೆಸುತ್ತಿರುವ ಬೀದಿ ಬದಿ ವ್ಯಾಪಾರಿಗಳಿಗೆ ದೊಡ್ಡ ಹೊಡೆತ ಅಲ್ಲದಿದ್ದರೂ, ವ್ಯಾಪಾರ ಕೊಂಚ ಕಡಿಮೆ ಆಗಿದೆ. ಇಂತಹ ಸಂಕಷ್ಟದ ಹೊತ್ತಿನಲ್ಲಿ ವ್ಯಾಪಾರಿಗಳ ಬದುಕಿಗೆ ಆಸರೆ ಆಗಲು ಆರೋಗ್ಯ ಇಲಾಖೆ ಮುಂದಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ವಿಶೇಷ ತರಬೇತಿ ಆರಂಭಿಸಿದೆ. ಸುರಕ್ಷತೆಯ ಪಾಠ ಹೇಳಿ ಕೊಡುತ್ತಿದೆ.
ಬೀದಿ ಬದಿ ವ್ಯಾಪಾರಿಗಳಿಗೆ ನೀಡುವ ತರಬೇತಿ ಏನು?
ಆರೋಗ್ಯ ಇಲಾಖೆಯಡಿ ಆಹಾರ ಮತ್ತು ಸುರಕ್ಷತಾ ಇಲಾಖೆ ಈ ಸ್ಪೆಷಲ್ ಟ್ರೈನಿಂಗ್ ಆರಂಭಿಸಿದೆ. ಈಗಾಗಲೇ 4 ಸಾವಿರಕ್ಕೂ ಅಧಿಕ ಬೀದಿ ಬದಿ ವ್ಯಾಪಾರಿಗಳಿಗೆ ತರಬೇತಿ ನೀಡಿದೆ. ಯಾವ ಪದಾರ್ಥ ಬಳಸಬೇಕು, ಕೃತಕ ಬಣ್ಣ ಬಳಸಬಾರದು, ಸ್ವಚ್ಛತೆ ಕಾಪಾಡ ಬೇಕು ಎಂಬಿತ್ಯಾದಿ ಟ್ರೈನಿಂಗ್ ನೀಡಿದೆ.
‘‘ಈಟ್ ರೈಟ್’’ ಎಂಬ ಅಭಿಯಾನಡಿ ಎಫ್ಎಸ್ಎಸ್ಐ ಸರ್ಟಿಫಿಕೇಶನ್ ಕೊಡಲು ಆಹಾರ ಇಲಾಖೆ ನಿರ್ಧರಿಸಿದ್ದು ಆಹಾರ ತಯಾರಿಕೆಯ ಬಗ್ಗೆ ಸಾಕಷ್ಟು ನಿಗಾವಿಸಲು ಮುಂದಾಗಿದೆ ಎಂದು ಆಹಾರ ಗುಣಮಟ್ಟ ಇಲಾಖೆ ಆಯುಕ್ತ ಶ್ರೀನಿವಾಸ್ ತಿಳಿಸಿದ್ದಾರೆ.
ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶಾಕ್: ಹೊಸ ವರ್ಷದಿಂದ ಮೆಟ್ರೋ ಟಿಕೆಟ್ ದರ ಹೆಚ್ಚಳ ಬಹುತೇಕ ಖಚಿತ
10 ಸಾವಿರ ಬೀದಿಬದಿ ವ್ಯಾಪಾರಿಗಳಿಗೆ ವಿಶೇಷ ತರಬೇತಿ ನೀಡಲು ಕೇಂದ್ರ ಸರ್ಕಾರ ಈ ಹಿಂದೆಯೇ ತೀರ್ಮಾನಿಸಿತ್ತು. ಇದೀಗ ಕರ್ನಾಟಕ ಆರೋಗ್ಯ ಇಲಾಖೆ ಕೂಡ ವಿಶೇಷ ತರಬೇತಿ ನೀಡುತ್ತಿದ್ದು, ಇದು ಗ್ರಾಹಕರಿಗೆ ಆರೋಗ್ಯಕರ ಆಹಾರ ನೀಡುವಲ್ಲಿ ಮುಖ್ಯವಾದದ್ದಾಗಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:15 am, Sat, 14 December 24