ರಾಯಚೂರಿನ ಈ ಹೊಸ ತಾಲ್ಲೂಕಿಗೆ ಹೋಗಲು ಜನರು ಹಿಂದೇಟು: ಕಾರಣವೇನು?
ರಾಯಚೂರಿನ ದೇವದುರ್ಗ ತಾಲ್ಲೂಕಿನ ಹಲವು ಹಳ್ಳಿಗಳನ್ನು ಅರಕೇರಾ ತಾಲ್ಲೂಕಿಗೆ ಸೇರ್ಪಡೆ ಮಾಡಿದ್ದು, ಅವೈಜ್ಞಾನಿಕ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕ ಸೇವೆಗಳಿಗೆ ತೊಂದರೆಯಾಗುತ್ತಿದೆ. ವಿಧಾನಸಭೆಯಲ್ಲಿ ಶಾಸಕಿ ಕರೆಮ್ಮಾ ನಾಯಕ್ ಈ ಬಗ್ಗೆ ಪ್ರಸ್ತಾಪಿಸಿದ್ದು, ಹಳ್ಳಿಗಳನ್ನು ಮತ್ತೆ ದೇವದುರ್ಗ ತಾಲ್ಲೂಕಿಗೆ ಸೇರ್ಪಡೆ ಮಾಡುವಂತೆ ಮನವಿ ಮಾಡಿದ್ದಾರೆ. ಗ್ರಾಮಸ್ಥರು ಕಾನೂನು ಹೋರಾಟಕ್ಕೆ ಸಿದ್ಧರಾಗಿದ್ದಾರೆ.

ರಾಯಚೂರು, ಮಾರ್ಚ್ 23: ಅವೈಜ್ಞಾನಿಕ ಶಿಫಾರಸ್ಸು ಅನ್ನೋ ಗಂಭೀರ ಆರೋಪದಡಿ ಆ ಹಿಂದುಳಿದ ತಾಲ್ಲೂಕಿನ ಗ್ರಾಮಸ್ಥರು ಹೋರಾಟಕ್ಕಿಳಿದಿದ್ದಾರೆ. ರಾಜಕೀಯ ಒತ್ತಡಕ್ಕೆ ಅಲ್ಲಿ ತಾಲ್ಲೂಕು ವಿಂಗಡಣೆಯಾಗಿದ್ದು, ಹತ್ತಾರು ಹಳ್ಳಿ ಜನ ಈಗ ಹೊಸ ತಾಲ್ಲೂಕಿನತ್ತ (Taluk) ಮುಖ ಮಾಡಲು ಹಿಂದೇಟು ಹಾಕ್ತಿದ್ದಾರೆ. ಈ ಕುರಿತಾಗಿ ವಿಧಾನಸಭೆ ಕಲಾಪದಲ್ಲಿ ಜಿಲ್ಲೆಯ ದೇವದುರ್ಗ ಕ್ಷೇತ್ರದ ಶಾಸಕಿ ಕರೆಮ್ಮಾ ಜಿ ನಾಯಕ್ (Karemma G Nayaka) ಮಾತನಾಡಿದ್ದಾರೆ. ತಮ್ಮ ಕ್ಷೇತ್ರ ವ್ಯಾಪ್ತಿಯ ದೇವದುರ್ಗ ತಾಲ್ಲೂಕಿನ ಹತ್ತಾರು ಹಳ್ಳಿಗಳನ್ನ ಅವೈಜ್ಞಾನಿಕವಾಗಿ ಹೊಸ ತಾಲ್ಲೂಕಿಗೆ ಸೇರ್ಪಡೆ ಮಾಡಿರುವ ಬಗ್ಗೆ ಧ್ವನಿ ಎತ್ತಿದ್ದಾರೆ. ಇತ್ತ ಹಳ್ಳಿ ಜನ ಇದೀಗ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಈ ಬಗ್ಗೆ ಒಂದು ಕಮಿಟಿ ಮಾಡಿ ಪರಿಶೀಲಿಸಿ ಮತ್ತೆ ಆಯಾ ಹಳ್ಳಿಗಳನ್ನ ದೇವದುರ್ಗ ತಾಲ್ಲೂಕಿಗೆ ಮರು ಸೇರ್ಪಡೆ ಮಾಡಿ ಅಂತ ಸಭಾಧ್ಯಕ್ಷರನ್ನ ಶಾಸಕಿ ಕರೆಮ್ಮಾ ಜಿ ನಾಯಕ್ ಮನವಿ ಮಾಡಿದ್ದಾರೆ. ಹೀಗೆ ಮೊನ್ನೆ ನಡೆದ ವಿಧಾನಸಭೆ ಕಲಾಪದಲ್ಲಿ ಈ ವಿಷ್ಯ ಪ್ರತಿಧ್ವನಿಸುವುದಕ್ಕೆ ಕಾರಣವೇ ಆ ಹಳ್ಳಿಗರ ಪರದಾಟ.
ಇದನ್ನೂ ಓದಿ: ಮಕ್ಕಳಾಗದ ಕೊರಗು: ವಿಶೇಷ ಚೇತನ, ಬಡ ಮಕ್ಕಳ ಬಾಳಿಗೆ ಬೆಳಕಾದ ರಾಯಚೂರಿನ ಶಿಕ್ಷಕ ದಂಪತಿ
ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಾಲ್ಕೈದು ಹಳ್ಳಿಗಳ ಸಹಸ್ರಾರು ಗ್ರಾಮಸ್ಥರು ಉಗ್ರ ಹೋರಾಟ ನಡೆಸಿದ್ದರು. ಬೇಸಿಗೆ ತಾಪವನ್ನೂ ಲೆಕ್ಕಿಸದೇ ಮಹಿಳೆಯರು, ವೃದ್ಧರು ಸೇರಿದಂತೆ ಹಳ್ಳಿಗೆ ಹಳ್ಳಿಯೇ ಹೋರಾಟಕ್ಕೆ ಇಳಿದಿತ್ತು. ಇಷ್ಟ ಹೋರಾಟಕ್ಕೆ ಕಾರಣ ದೇವದುರ್ಗ ತಾಲ್ಲೂಕಿನಲ್ಲಿದ್ದ ಹಳ್ಳಿಗಳು, ಗ್ರಾಮ ಪಂಚಾಯಿತಿಯನ್ನ ಹೊಸ ತಾಲ್ಲೂಕು ಕೇಂದ್ರ ಅರಕೇರಾಗೆ ಸೇರ್ಪಡೆ ಮಾಡಿರುವುದು.
ಗ್ರಾಮಸ್ಥರು ಸರಣಿ ಹೋರಾಟ
ದೇವದುರ್ಗ ತಾಲ್ಲೂಕಿನಿಂದ ತೀರಾ ಹತ್ತಿರವಿರುವ ಹಳ್ಳಿಗಳನ್ನ ದೂರದ ಹೊಸ ಅರಕೇರಾ ತಾಲ್ಲೂಕಿಗೆ ಸೇರ್ಪಡೆ ಮಾಡಿರುವುದು ಒಂದು ಕಾರಣವಾದರೆ, ಇದರ ಜೊತೆ ಅರಕೇರಾ ತಾಲ್ಲೂಕು ಕೇಂದ್ರವಾದ ಬಳಿಕ ಇಲ್ಲಿ ಇನ್ನೂ ಪೂರ್ಣಪ್ರಮಾಣದಲ್ಲಿ ಎಲ್ಲಾ ಇಲಾಖೆಗಳ ಕಚೇರಿಗಳು ಕಾರ್ಯನಿರ್ವಹಿಸುತ್ತಿಲ್ಲ ಅನ್ನೋ ಆರೋಪ. ಅಧಿಕಾರಿಗಳ ಕೊರತೆ, ಸಿಬ್ಬಂದಿ ಸಮಸ್ಯೆ ಇದೆಯಂತೆ. ಹೀಗಾಗಿ ಕಳೆದ ಕೆಲ ದಿನಗಳಿಂದ ಸಿದ್ದಾಪುರ ಗ್ರಾಮ ಪಂಚಾಯಿತಿ, ಕೊತ್ತದೊಡ್ಡಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಸರಣಿ ಹೋರಾಟ ನಡೆಸಿದ್ದಾರೆ.
ಹೊಸ ತಾಲ್ಲೂಕು ಸೇರ್ಪಡೆಗೂ ಮುನ್ನ ಇಲ್ಲಿನ ಗ್ರಾಮಸ್ಥರು ದೇವದುರ್ಗ ತಾಲ್ಲುಕು ಕೇಂದ್ರಕ್ಕೆ ಬಹಳ ಸುಲಭವಾಗ ಹೋಗಿ ಬರ್ತಿದ್ರು. ಯಾವುದೇ ಸಮಸ್ಯೆ ಆಗಿರ್ಲಿಲ್ಲ. ಆದರೆ ಈಗ ಇಲ್ಲಿನ ಹಳ್ಳಿಗರಿಗೆ ಅರಕೇರಾ ತಾಲ್ಲೂಕು ಅಧಿಕೃತಗೊಂಡಿರುವ ಹಿನ್ನೆಲೆ ಕಚೇರಿ ಕೆಲಸ, ದಾಖಲೆಗಳಿಗಾಗಿ ಅರಕೇರಾಗೆ ಹೋಗಲು 40 ಕಿಮಿ ದೂರ ಕ್ರಮಿಸಬೇಕಂತೆ. ಇದರಿಂದ ಸಮಸ್ಯೆ ಆಗ್ತಿದೆಯಂತೆ. ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು, ರೈತರು ಕೆಲಸ ಕಾರ್ಯಗಳಿಗೆ ಅರಕೇರಾಗೆ ಹೋಗಿ ಬರೋದಕ್ಕೆ ಬಹಳ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರಾದ ಕಮಲಮ್ಮ ಅವರು ಹೇಳಿದ್ದಾರೆ.
ಇದನ್ನೂ ಓದಿ: ತುಂಗಭದ್ರಾ ಜಲಾಶಯ ಅಚ್ಚುಕಟ್ಟು ಪ್ರದೇಶದ ಜನರಿಗೆ ಗುಡ್ನ್ಯೂಸ್: ನೀರಾವರಿ ಸಮಿತಿ ಮಹತ್ವದ ತೀರ್ಮಾನ
ವಿಧಾನಸಭೆ ಕಲಾಪದಲ್ಲೂ ದೇವದುರ್ಗ ಶಾಸಕಿ ಕರೆಮ್ಮಾ ನಾಯಕ್ ಇದೇ ವಿಚಾರ ಪ್ರಸ್ತಾಪಿಸಿದರು. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಅರಕೇರಾವನ್ನ ತಾಲ್ಲೂಕು ಕೇಂದ್ರವಾಗಿ ಘೋಷಣೆ ಮಾಡಲಾಗಿತ್ತು. ಅಂದಿನ ದೇವದುರ್ಗ ಶಾಸಕ ಶಿವನಗೌಡ ನಾಯಕ್ ರಾಜಕೀಯ ಉದ್ದೇಶಕ್ಕಾಗಿ ಈ ಬದಲಾವಣೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.
ಕಾನೂನು ಹೋರಾಟಕ್ಕೆ ಸಜ್ಜು
ಇತ್ತ ಕೊತ್ತದೊಡ್ಡಿ, ಸಿದ್ದಾಪುರ, ಬಿ.ಗಣೇಕಲ್, ಮಂದಕಲ್ ಹಾಗೂ ಗಬ್ಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನ ಅರಕೇರಾ ಬದಲು ದೇವದುರ್ಗಕ್ಕೆ ನಮ್ಮನ್ನ ಮರು ಸೇರ್ಪಡೆ ಮಾಡಿ ಅಂತ ಜಿಲ್ಲಾಧಿಕಾರಿಗಳು ಸೇರಿದಂತೆ ತಾಲ್ಲುಕು ಆಡಳಿತಕ್ಕೆ ಮನವಿ ಕೊಡ್ತಿದ್ದಾರೆ. ಇದರ ಮುಂದುವರೆದ ಭಾಗವಾಗಿ ಕೊತ್ತದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಹಳ್ಳಿಗರು ಕೂಡ ಹೋರಾಟ ನಡೆಸಿದ್ದಾರೆ. ಅದರಲ್ಲೂ ಒಂದು ಹೆಜ್ಜೆ ಮುಂದೆ ಹೋಗಿರೊ ಸಿದ್ದಾಪುರ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಕಾನೂನು ಹೋರಾಟಕ್ಕೆ ಸಜ್ಜಾಗಿದ್ದಾರೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮಕೈಗೊಳ್ಳತ್ತಾ, ಇಲ್ಲಾ ಗ್ರಾಮಸ್ಥರೇ ತನ್ನ ತೀರ್ಮಾನದಂತೆ ಕಾನೂನು ಹೋರಾಟ ಮಾಡುತ್ತಾರಾ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.