ಉತ್ತರ ಕರ್ನಾಟಕಕ್ಕೆ ಬಿಸಿಲಾಘಾತ: ರಾಜ್ಯ ವಿಪತ್ತು ಎಂದು ಘೋಷಿಸಲು ಆಗ್ರಹ
ಉತ್ತರ ಕರ್ನಾಟಕದ ಕಲಬುರಗಿ, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಉಷ್ಣ ಅಲೆ ಹೆಚ್ಚಾಗಿದ್ದು, ಕೆಲವು ಪ್ರದೇಶಗಳಲ್ಲಿ ಗರಿಷ್ಠ ಉಷ್ಣಾಂಶ 43 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ವೃದ್ಧರು ಮತ್ತು ಮಕ್ಕಳು ಹೆಚ್ಚು ಅಪಾಯದಲ್ಲಿದ್ದಾರೆ. ತಜ್ಞರು ಈ ಪರಿಸ್ಥಿತಿಯನ್ನು ರಾಜ್ಯ ವಿಪತ್ತು ಎಂದು ಘೋಷಿಸುವಂತೆ ಒತ್ತಾಯಿಸಿದ್ದಾರೆ.

ಬೆಂಗಳೂರು, ಮಾರ್ಚ್ 21: ಕಲಬುರಗಿ, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳು ಸೇರಿದಂತೆ ಉತ್ತರ ಕರ್ನಾಟಕದ (North Karnataka) ಹಲವು ಭಾಗಗಳಲ್ಲಿ ಉಷ್ಣ ಅಲೆ (Heatwave) ಕಾಣಿಸಿಕೊಂಡಿದ್ದು, ಈ ಪ್ರದೇಶದಲ್ಲಿ ತಾಪಮಾನ ಸುಮಾರು 43 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಇದು ವೃದ್ಧರು, ಮಕ್ಕಳು ಮತ್ತು ರೋಗಿಗಳಂತಹ ದುರ್ಬಲ ವರ್ಗದವರ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತಿದೆ. ಕುಡಿಯುವ ನೀರು ಮತ್ತು ವಿದ್ಯುತ್ ಸರಬರಾಜು ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದಾಗಿ ಗ್ರಾಮೀಣ ಪ್ರದೇಶದ ಜನರು ಹೆಚ್ಚಿನ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ಪ್ರದೇಶಗಳ ತಾಪಮಾನದಲ್ಲಿ ಮತ್ತಷ್ಟು ಏರಿಕೆಯಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿರುವುದು ಜನರನ್ನು ಕಂಗಾಲಾಗಿಸಿದೆ.
ಉಷ್ಣ ಅಲೆ ಸಮಸ್ಯೆಯನ್ನು ‘ರಾಜ್ಯ ವಿಪತ್ತು’ ಎಂಬುದಾಗಿ ಘೋಷಿಸುವಂತೆ ತಜ್ಞರು ಒತ್ತಾಯಿಸಿದ್ದಾರೆ. ಕಳೆದ ವರ್ಷ ತಮಿಳುನಾಡು ಸರ್ಕಾರ ಉಷ್ಣ ಅಲೆಯನ್ನು ರಾಜ್ಯ ವಿಪತ್ತು ಎಂದು ಘೋಷಿಸಿತ್ತು.
ರಾಜ್ಯ ವಿಪತ್ತು ಘೋಷಿಸುವುದರಿಂದ ಪ್ರಯೋಜನವೇನು?
ಉಷ್ಣ ಅಲೆಯನ್ನು ರಾಜ್ಯ ವಿಪತ್ತು ಎಂದು ಘೋಷಿಸುವುದರಿಂದ ಸರ್ಕಾರವು ಕರ್ನಾಟಕ ವಿಪತ್ತು ಪರಿಹಾರ ನಿಧಿಯಿಂದ ಸಂತ್ರಸ್ತರಿಗೆ ಪರಿಹಾರ ನೀಡಲು ಸಾಧ್ಯವಾಗಲಿದೆ. ಪರಿಸ್ಥಿತಿಯನ್ನು ಎದುರಿಸಲು ಉತ್ತಮವಾಗಿ ಸಿದ್ಧವಾಗಲು ಜಿಲ್ಲೆಗಳಿಗೆ ನೆರವಾಗಲಿದೆ. ಏತನ್ಮಧ್ಯೆ, ಅಧಿಕ ತಾಪಮಾನದಿಂದ ರಕ್ಷಣೆಗೆ ಜನರಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಕಲ್ಯಾಣ ಕರ್ನಾಟಕ ಪ್ರದೇಶ ಈಗಾಗಲೇ ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು ಹೆಚ್ಚಿನ ತಾಯಂದಿರ ಮರಣ ಪ್ರಮಾಣದಿಂದ ಬಳಲುತ್ತಿದ್ದು, ಇಲ್ಲಿನ ಜನರಿಗೆ ಅಧಿಕ ತಾಪಮಾನದಿಂದ ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಸಹಾಯ ಮಾಡಲು ಯಾವುದೇ ಕ್ರಿಯಾ ಯೋಜನೆ ಜಾರಿಯಲ್ಲಿಲ್ಲ ಎಂದು ತಜ್ಞರು ಹೇಳಿದ್ದಾರೆ.
ಇದುವರೆಗೆ ಯಾವುದೇ ರೋಗಿಗಳು ಅಥವಾ ಜನ ಬಿಸಿಲಾಘಾತ ಅಥವಾ ಉಷ್ಣ ಅಲೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿಲ್ಲ ಎಂದು ಕಲಬುರಗಿ ಜಿಲ್ಲಾ ಆರೋಗ್ಯ ಅಧಿಕಾರಿ ಶರಣಬಸಪ್ಪ ಕ್ಯಾತನಾಳ್ ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ತಾಪಮಾನ ಏರಿಕೆಯಿಂದಾಗಿ ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಮನೆಯಿಂದ ಹೊರ ಹೋಗುವುದನ್ನು ತಪ್ಪಿಸುವಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ, ಬೆಂಗಳೂರು ಸೇರಿ ಕರ್ನಾಟಕದ 25ಕ್ಕೂ ಅಧಿಕ ಜಿಲ್ಲೆಗಳಲ್ಲಿ ಒಂದು ವಾರ ಮಳೆ
ಹತ್ತಿ ಬಟ್ಟೆಗಳನ್ನು ಧರಿಸುವುದು, ಬಿಸಿಲಿನಿಂದ ರಕ್ಷಣೆ ಪಡೆಯಲು ಟೋಪಿಗಳನ್ನು ಧರಿಸುವುದು ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದ್ದೇವೆ. ಮಕ್ಕಳು ಮತ್ತು ವೃದ್ಧರು ನಿರ್ಜಲೀಕರಣಕ್ಕೆ ಗುರಿಯಾಗುತ್ತಾರೆ. ಆದ್ದರಿಂದ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯವಿರುವವರಿಗೆ ಹಾಸಿಗೆಗಳನ್ನು ಕಾಯ್ದಿರಿಸುವುದರ ಜೊತೆಗೆ, ಒಆರ್ಎಸ್ ಪುಡಿ ಮತ್ತು ಇತರ ಔಷಧಿಗಳ ಸಾಕಷ್ಟು ದಾಸ್ತಾನುಗಳನ್ನು ಇರಿಸಿದ್ದೇವೆ. ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅರಿವು ಮೂಡಿಸುವ ಪೋಸ್ಟರ್‌ಗಳು ಮತ್ತು ಇತರ ಪ್ರಚಾರ ಸಾಮಗ್ರಿಗಳನ್ನು ನಾವು ಪಂಚಾಯತ್‌ಗಳಿಗೆ ವಿತರಿಸಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.