PAK vs NZ: ಹೀನಾಯವಾಗಿ ಸೋತು ಸರಣಿಯನ್ನು ಕಳೆದುಕೊಂಡ ಪಾಕಿಸ್ತಾನ
. Pakistan's Humiliating Defeat: ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ ತಂಡ ಅವಮಾನಕರ ಸೋಲನ್ನು ಅನುಭವಿಸಿತು. ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 220 ರನ್ ಗಳಿಸಿದರೆ, ಗುರಿ ಬೆನ್ನಟ್ಟಿದ ಪಾಕಿಸ್ತಾನ 105 ರನ್‌ಗಳಿಗೆ ಆಲ್ ಔಟ್ ಆಯಿತು. ಈ ಸೋಲಿನೊಂದಿಗೆ ಪಾಕಿಸ್ತಾನ ಸರಣಿಯನ್ನು ಕಳೆದುಕೊಂಡಿತು.

ಪಾಕಿಸ್ತಾನ ಕ್ರಿಕೆಟ್ ತಂಡ ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿದೆ. ಟೌರಂಗಾದ ಬೇ ಓವಲ್ ಕ್ರೀಡಾಂಗಣದಲ್ಲಿ ನಡೆದ ಈ ಸರಣಿಯ ನಾಲ್ಕನೇ ಪಂದ್ಯದಲ್ಲಿ ಪಾಕಿಸ್ತಾನ ಅವಮಾನಕರ ಸೋಲನ್ನು ಎದುರಿಸಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಪ್ರತಿಯೊಂದು ವಿಭಾಗದಲ್ಲೂ ವಿಫಲವಾಯಿತು. ಮೊದಲು ಬೌಲರ್‌ಗಳು ಸರಾಗವಾಗಿ ರನ್ ಬಿಟ್ಟುಕೊಟ್ಟರೆ, ಆ ನಂತರ ಗುರಿ ಬೆನ್ನಟ್ಟುವಾಗ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಪರೇಡ್ ನಡೆಸಿದರು. ಈ ಸೋಲಿನೊಂದಿಗೆ ಪಾಕಿಸ್ತಾನ ತಂಡ ಸರಣಿಯನ್ನು ಸಹ ಕಳೆದುಕೊಂಡಿದ್ದು, ನ್ಯೂಜಿಲೆಂಡ್ 3-1 ಅಂತರದ ಮುನ್ನಡೆ ಸಾಧಿಸಿದೆ.
ಬೃಹತ್ ಮೊತ್ತ ಕಲೆಹಾಕಿದ ನ್ಯೂಜಿಲೆಂಡ್
ಪಾಕಿಸ್ತಾನ ನಾಯಕ ಸಲ್ಮಾನ್ ಆಘಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 220 ರನ್ ಕಲೆಹಾಕಿತು. ತಂಡದ ಪರ ಟಿಮ್ ಸೀಫರ್ಟ್ ಮತ್ತು ಫಿನ್ ಅಲೆನ್ ತಂಡಕ್ಕೆ ಸ್ಫೋಟಕ ಆರಂಭ ನೀಡಿದರು. ಟಿಮ್ ಸೀಫರ್ಟ್ 22 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ 44 ರನ್ ಗಳಿಸಿ ಔಟಾದರೆ, ಫಿನ್ ಅಲೆನ್ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು, ಆದರೆ ಮುಂದಿನ ಎಸೆತದಲ್ಲಿಯೇ ವಿಕೆಟ್ ಕಳೆದುಕೊಂಡರು. ಇದಾದ ನಂತರ, ಮೈಕೆಲ್ ಬ್ರೇಸ್‌ವೆಲ್ ಅಜೇಯ 46 ರನ್ಗಳ ಕಾಣಿಕೆ ನೀಡಿದರೆ, ಡ್ಯಾರಿಲ್ ಮಿಚೆಲ್ 29 ರನ್ ಗಳಿಸಿ ತಂಡವನ್ನು ಈ ಸ್ಕೋರ್‌ಗೆ ಕೊಂಡೊಯ್ದರು.
ಮತ್ತೊಂದೆಡೆ, ಪಾಕಿಸ್ತಾನದ ಪರ ಅತ್ಯಂತ ಯಶಸ್ವಿ ಬೌಲರ್ ಆದ ಹ್ಯಾರಿಸ್ ರೌಫ್, 4 ಓವರ್‌ಗಳಲ್ಲಿ 27 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದರು. ಉಳಿದಂತೆ ಅಬ್ರಾರ್ ಅಹ್ಮದ್ 2 ವಿಕೆಟ್ ಮತ್ತು ಅಬ್ಬಾಸ್ ಆಫ್ರಿದಿ 1 ವಿಕೆಟ್ ಪಡೆದರು. ಆದರೆ ಶಾಹೀನ್ ಶಾ ಅಫ್ರಿದಿ ಮತ್ತು ಶಾದಾಬ್ ಖಾನ್ ಅತ್ಯಂತ ದುಬಾರಿಯಾದರು. ಇಬ್ಬರೂ ಬೌಲರ್‌ಗಳು ತಮ್ಮ 4 ಓವರ್‌ಗಳ ಸ್ಪೆಲ್‌ಗಳಲ್ಲಿ ತಲಾ 49 ರನ್‌ಗಳನ್ನು ಬಿಟ್ಟುಕೊಟ್ಟರು.
ಹೀನಾಯವಾಗಿ ಸೋತ ಪಾಕ್ ತಂಡ
ಮೇಲೆ ಹೇಳಿದಂತೆ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡಕ್ಕೆ ಬ್ಯಾಟಿಂಗ್ ವಿಭಾಗ ಕೈಕೊಟ್ಟಿತು. ತಂಡದ ಯಾವುದೇ ಬ್ಯಾಟ್ಸ್ಮನ್ಗೂ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ಉಳಿಯಲು ಸಾಧ್ಯವಾಗಲಿಲ್ಲ. ತಂಡವು ಒಂದರ ನಂತರ ಒಂದರಂತೆ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಲೇ ಇತ್ತು. ಪವರ್‌ಪ್ಲೇನಲ್ಲಿಯೇ ಪಾಕಿಸ್ತಾನ ತಂಡದ ಅರ್ಧದಷ್ಟು ಆಟಗಾರರು ಪೆವಿಲಿಯನ್ ಸೇರಿಕೊಂಡರು. ಹೀಗಾಗಿ ನ್ಯೂಜಿಲೆಂಡ್ ಪಂದ್ಯದಲ್ಲಿ ಸಂಪೂರ್ಣವಾಗಿ ಹಿಡಿತ ಸಾಧಿಸಿ, ಸ್ವಲ್ಪ ಸಮಯದಲ್ಲೇ ಪಾಕಿಸ್ತಾನವನ್ನು ಆಲೌಟ್ ಮಾಡಿತು. ಕೇವಲ 16.2 ಓವರ್‌ಗಳವರೆಗೆ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 105 ರನ್‌ಗಳಿಗೆ ಆಲ್ ಔಟ್ ಆಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:47 pm, Sun, 23 March 25