ಬೆಂಗಳೂರು, ಏಪ್ರಿಲ್ 28: ಸ್ಟಾರ್ಟ್-ಅಪ್ ಉದ್ಯೋಗಿಯೊಬ್ಬರು ತಮ್ಮ ಚಾಕೊಲೇಟ್ (chocolate) ಉತ್ಪನ್ನಗಳನ್ನು ಮಾರಾಟ ಮಾಡುವ ಉದ್ದೇಶದಿಂದಾಗಿ ನಗರದಾದ್ಯಂತ ಮೆಟ್ರೋ (metro) ವಾಶ್‌ರೂಮ್‌ಗಳಲ್ಲಿ ಕ್ಯೂಆರ್ ಕೋಡ್‌ಗಳನ್ನು ಅಂಟಿಸಿರುತ್ತಿರುವಾಗ ಸಿಕ್ಕಿಬಿದ್ದಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಏಪ್ರಿಲ್ 23 ರಂದು ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದಲ್ಲಿ ಕ್ಯೂಆರ್ ಕೋಡ್ ಅಂಟಿಸುವಾಗ ಸಿಕ್ಕಿಬಿದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅನುಮತಿಯಿಲ್ಲದೆ ಕೃತ್ಯವೆಸಗಿದ್ದ ಸ್ಟಾರ್ಟ್-ಅಪ್ ಉದ್ಯೋಗಿ ಅರುಣ್ ಎಂಬುವವರ ವಿರುದ್ಧ ಮೆಟ್ರೋ ಭದ್ರತಾ ಸಿಬ್ಬಂದಿ ಪ್ರಕರಣ ದಾಖಲಿಸಿದ್ದು, ಸದ್ಯ ಬೆಂಗಳೂರು ಪೊಲೀಸರು ಆತನನ್ನು ಬಂಧಿಸಿದ್ದಾರೆ.
ನಗರದಾದ್ಯಂತ ಇರುವ ನಮ್ಮ ಮೆಟ್ರೋ ನಿಲ್ದಾಣಗಳ ವಾಶ್ ರೂಂನಲ್ಲಿ ಅರುಣ್ ಕ್ಯೂಆರ್ ಕೋಡ್ ಸ್ಟಿಕ್ಕರ್‌ಗಳನ್ನು ಅಂಟಿಸಿದ್ದಾರೆ. “ನಿಮ್ಮ ಪ್ರೀತಿಪಾತ್ರರನ್ನು ಡಿಜಿರ್‌ನೊಂದಿಗೆ ಆಕರ್ಷಿಸಿ. ನನ್ನನ್ನು ಸ್ಕ್ಯಾನ್ ಮಾಡಿ” ಎಂದು ಟ್ಯಾಗ್ಲೈನ್ ನೀಡಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ 38.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ: ಇತಿಹಾಸದಲ್ಲೇ ಅತಿ ಹೆಚ್ಚು ತಾಪಮಾನ ದಾಖಲು
31 ವರ್ಷ ಉದ್ಯಮಿ ಅರುಣ್ ತಲಘಟ್ಟಪುರ ನಿವಾಸಿ. ಚಾಕೊಲೇಟ್ ಉತ್ಪನ್ನಗಳ ಮಾರಾಟಕ್ಕಾಗಿ ಗೆರಿಲ್ಲಾ ಮಾರ್ಕೆಟಿಂಗ್ ತಂತ್ರವನ್ನು ಅನುಸರಿಸಿದ್ದಾರೆ. ಗೆರಿಲ್ಲಾ ಮಾರ್ಕೆಟಿಂಗ್ ಎನ್ನುವುದು ಸಾಕಷ್ಟು ಕಂಪನಿಗಳು ಬಳಸುವ ಅಸಾಂಪ್ರದಾಯಿಕ ಮಾರ್ಕೆಟಿಂಗ್ ವಿಧಾನಗಳಲ್ಲಿ ಒಂದು. ಆದರೆ ಈ ಗೆರಿಲ್ಲಾ ಮಾರ್ಕೆಟಿಂಗ್ ಕಾನೂನುಬಾಹಿರವಾಗಿದೆ ಎಂಬುವುದನ್ನು ತಿಳಿಯದೆ ಈ ರೀತಿಯಾಗಿ ಮಾಡಿರುವುದಾಗಿ ಅರುಣ್ ವಿಚಾರಣೆ ವೇಳೆ ಹೇಳಿಕೊಂಡಿರುವುದಾಗಿ ವರದಿ ಆಗಿದೆ.
ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದ ಸಹಾಯಕ ಭದ್ರತಾ ಅಧಿಕಾರಿ ಚಂದ್ರಶೇಖರಯ್ಯ ಅವರು ನೀಡಿದ ದೂರಿನ ಪ್ರಕಾರ, ಏಪ್ರಿಲ್ 23 ರಂದು ಮಧ್ಯಾಹ್ನ 2.45 ರ ಸುಮಾರಿಗೆ ಸ್ಟೇಷನ್‌ನ ವಾಶ್‌ರೂಮ್‌ನಲ್ಲಿ ಸ್ಟಿಕ್ಕರ್‌ಗಳನ್ನು ಅಂಟಿಸುವಾಗ ಅರುಣ್ ಸಿಕ್ಕಿಬಿದ್ದಿದ್ದಾರೆ. ತಮ್ಮ ಚಾಕೊಲೇಟ್ ಉತ್ಪನ್ನಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಕ್ಯೂಆರ್ ಕೋಡ್‌ಗಳನ್ನು ಅಂಟಿಸುತ್ತಿರುವುದಾಗಿ ಅರುಣ್ ಹೇಳಿದ್ದಾರೆಂದು ಅವರು ಹೇಳಿದರು. ಅಷ್ಟೇ ಅಲ್ಲದೆ QR ಕೋಡ್ ಅನ್ನು ಸ್ಕ್ಯಾನ್ ಮಾಡುವುದರೊಂದಿಗೆ ಜನರು ಅಥವಾ ಗ್ರಾಹಕರು ‘ಡೈಜ್ ಕಪಲ್ ಚಾಕೊಲೆಟ್’ ಅನ್ನು ಹೇಗೆ ಖರೀದಿಸುತ್ತಾರೆ ಎಂಬುದನ್ನು ಸಹ ಅವರು ತೋರಿಸಿರುವುದಾಗಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Kamaraj Road: ನಾಲ್ಕು ವರ್ಷಗಳ ಬಳಿಕ ಬೆಂಗಳೂರಿನ ಕಾಮರಾಜ್ ರಸ್ತೆ ಸಾರ್ವಜನಿಕ ಸಂಚಾರಕ್ಕೆ ಮುಕ್ತ
ನಮ್ಮ ಮೆಟ್ರೋ ಅಧಿಕಾರಿಯೊಬ್ಬರ ಹೇಳಿಕೆ ಪ್ರಕಾರ, ಮೆಟ್ರೋ ಆವರಣದಲ್ಲಿ ಯಾವುದೇ ಜಾಹೀರಾತಿಗೆ ಸಂಬಂಧಪಟ್ಟಂತೆ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆಯಬೇಕು. ಜಾಹೀರಾತುದಾರರು ಮೆಟ್ರೋ ಸಂಸ್ಥೆಗೆ ಪಾವತಿಸುವುದರೊಂದಿಗೆ ಕೆಲವು ಕಾರ್ಯವಿಧಾನಗಳನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ. ಸದ್ಯ ಆಸ್ತಿ ನಷ್ಟ ತಡೆ ಕಾಯ್ದೆ, ಕರ್ನಾಟಕ ತೆರೆದ ಸ್ಥಳಗಳ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 427 ಅಡಿಯಲ್ಲಿ ಅರುಣ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ ಸದ್ಯ ಅರುಣ್ರನ್ನು ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದ್ದು, ಚುನಾವಣೆ ಮುಗಿದ ಬಳಿಕ ನಾವು ಮತ್ತೊಮ್ಮೆ ವಿಚಾರಣೆ ಮಾಡುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.