Kamaraj Road: ನಾಲ್ಕು ವರ್ಷಗಳ ಬಳಿಕ ಬೆಂಗಳೂರಿನ ಕಾಮರಾಜ್ ರಸ್ತೆ ಸಾರ್ವಜನಿಕ ಸಂಚಾರಕ್ಕೆ ಮುಕ್ತ
ಮೇ ತಿಂಗಳ ಮಧ್ಯೆದ ವೇಳೆಗೆ ಎಂಜಿ ರಸ್ತೆ ಮತ್ತು ಕಬ್ಬನ್ ರಸ್ತೆಯನ್ನು ಸಂಪರ್ಕಿಸುವ ಕಾಮರಾಜ್ ರಸ್ತೆಯ ಒಂದು ಭಾಗ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದೆ. ಏಕಮುಖ ಸಂಚಾರಕ್ಕೆ ಅನುವುಮಾಡಿಕೊಡಲು ಸಂಚಾರಿ ಅಧಿಕಾರಿಗಳು ನಿರ್ಧರಿಸಿದ್ದಾರೆ. ಆ ಮೂಲಕ ವಾಹನಗಳು ಎಂಜಿ ರಸ್ತೆಯಿಂದ ಕಬ್ಬನ್ ರಸ್ತೆಯ ಕಡೆಗೆ ಮಾತ್ರ ಪ್ರಯಾಣಿಸಲು ಅನುವು ಮಾಡಿಕೊಡಲಾಗುತ್ತಿದೆ.
ಬೆಂಗಳೂರು, ಏಪ್ರಿಲ್ 27: ಮೇ ತಿಂಗಳ ಮಧ್ಯೆದ ವೇಳೆಗೆ ಎಂಜಿ ರಸ್ತೆ (MG Road) ಮತ್ತು ಕಬ್ಬನ್ ರಸ್ತೆಯನ್ನು ಸಂಪರ್ಕಿಸುವ ಕಾಮರಾಜ್ ರಸ್ತೆಯ ಒಂದು ಭಾಗ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದೆ. ಈ ಹಿಂದೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ರಸ್ತೆಯ ಅರ್ಧದಷ್ಟು ಭಾಗವನ್ನು ತೆರೆಯುವಂತೆ ಏಪ್ರಿಲ್ ಅಂತ್ಯದವರೆಗೆ ಗಡುವು ನೀಡಿತ್ತು. ಆದರೆ ಪ್ರಸ್ತುತ ಇದನ್ನು ಏಕಮುಖ ಮಾರ್ಗವನ್ನಾಗಿ ಮಾಡಲು ಸಂಚಾರಿ ಅಧಿಕಾರಿಗಳು ನಿರ್ಧರಿಸಿದ್ದಾರೆ. ಆ ಮೂಲಕ ವಾಹನಗಳು ಎಂಜಿ ರಸ್ತೆಯಿಂದ ಕಬ್ಬನ್ ರಸ್ತೆಯ ಕಡೆಗೆ ಮಾತ್ರ ಪ್ರಯಾಣಿಸಲು ಅನುವು ಮಾಡಿಕೊಡಲಾಗುತ್ತಿದೆ.
ನಾಗವಾರದಿಂದ ಕಾಳೇನ ಅಗ್ರಹಾರದ ಎಂಜಿ ರಸ್ತೆಯ ಅಂಡರ್ ಪಾಸ್ ಒಳಗೆ ಮೆಟ್ರೋ ನಿಲ್ದಾಣವನ್ನು ನಿರ್ಮಿಸಲು 220 ಮೀಟರ್ ಉದ್ದದ ಕಾಮರಾಜ್ ರಸ್ತೆಯನ್ನು 2019ರ ಜೂನ್‌ನಲ್ಲೇ ಮುಚ್ಚಲಾಗಿತ್ತು. ಈ ನಿಲ್ದಾಣವು ಅಸ್ತಿತ್ವದಲ್ಲಿರುವ ಪರ್ಪಲ್ ಲೈನ್‌ನೊಂದಿಗೆ ವರ್ಗಾವಣೆ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.
ಇದನ್ನೂ ಓದಿ: ಡಂಪಿಂಗ್ ಯಾರ್ಡ್ಗಳಾಗುತ್ತಿರುವ ಬೆಂಗಳೂರು ಮೇಲ್ಸೇತುವೆಗಳು, ಈಜಿಪುರ ಫ್ಲೈಓವರ್ನಲ್ಲಿ ದುರ್ನಾತ
ರಸ್ತೆಯನ್ನು ಮುಚ್ಚಲ್ಪಟ್ಟಿರುವುದರಿಂದಾಗಿ ಶಿವಾಜಿನಗರ ಅಥವಾ ಕಮರ್ಷಿಯಲ್ ಸ್ಟ್ರೀಟ್‌ಗೆ ಹೋಗುವ ಪ್ರಯಾಣಿಕರು ತಮ್ಮ ಮಾರ್ಗವನ್ನು ಬದಲಾಯಿಸಲು ಮೊದಲು ಅನಿಲ್ ಕುಂಬ್ಳೆ ವೃತ್ತ ಅಥವಾ ಟ್ರಿನಿಟಿ ವೃತ್ತದಲ್ಲಿ ತಿರುವು ಪಡೆಯುವಂತೆ ಒತ್ತಾಯಿಸಲಾಗಿದೆ. ಇಲ್ಲದಿದ್ದರೆ ಎಂಜಿ ರಸ್ತೆಯುದ್ದಕ್ಕೂ ಇರುವ ಜಂಕ್ಷನ್‌ಗಳಲ್ಲಿ ಸಂಚಾರ ಅಡಚಣೆ ಉಂಟಾಗುತ್ತದೆ.
ಸದ್ಯಕ್ಕೆ ಏಕಮುಖ ಸಂಚಾರಕ್ಕೆ ನಿರ್ಧಾರ: ಸಂಚಾರ ಡಿಸಿಪಿ
‘ಎಂಜಿ ರಸ್ತೆಯಲ್ಲಿ ಸಾಕಷ್ಟು ಸಂಚಾರ ದಟ್ಟಣೆ ಇರುವುದರಿಂದ ಈ ಸಂಪರ್ಕ ರಸ್ತೆಯನ್ನು ಶೀಘ್ರದಲ್ಲಿಯೇ ತೆರೆಯಲು ನಾವು ಉತ್ಸುಕರಾಗಿದ್ದೇವೆ. ಕಮರ್ಷಿಯಲ್ ಸ್ಟ್ರೀಟ್‌ಗೆ ಭೇಟಿ ನೀಡಲು ಬಯಸುವವರು ಸುತ್ತು ಹಾಕಿಕೊಂಡು ಬರಬೇಕಾಗಿತ್ತು. ಹೀಗಾಗಿ ಸಾರ್ವಜನಿಕರಿಂದ ಭಾರಿ ಬೇಡಿಕೆಯಿತ್ತು. ಎಂಜಿ ರಸ್ತೆಯಿಂದ ಕಬ್ಬನ್ ರಸ್ತೆಗೆ ಸದ್ಯಕ್ಕೆ ನಾವು ಏಕಮುಖ ಸಂಚಾರವನ್ನು ಮಾತ್ರ ತೆರೆಯಲು ನಿರ್ಧರಿಸಿದ್ದೇವೆ’ ಎಂದು ಪಶ್ಚಿಮ ಸಂಚಾರ ಡಿಸಿಪಿ ಅನಿತಾ ಬಿ ಹದ್ದಣ್ಣನವರ್ ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಕಾಮಗಾರಿ ನಡೆಯುತ್ತಿದೆ: ಬಿಎಲ್ ಯಶವಂತ ಚವ್ಹಾಣ
ಇದೇ ವೇಳೆ ಬಿಎಂಆರ್‌ಸಿಎಲ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಎಲ್ ಯಶವಂತ ಚವ್ಹಾಣ ಪ್ರತಿಕ್ರಿಯಿಸಿದ್ದು, ಕಾಮಗಾರಿ ನಿರಂತರವಾಗಿ ನಡೆಯುತ್ತಿದೆ. ಸಂಚಾರ ಪೊಲೀಸರು ಪರಿಶೀಲನೆ ಪೂರ್ಣಗೊಳಿಸಿದ್ದು, ಮತ್ತೊಂದು ತಪಾಸಣೆಗೆ ಮುಂದಾಗಿದ್ದಾರೆ. ನಾವು ಮೇ ಮಧ್ಯದಲ್ಲಿ ಕಾಮರಾಜ್ ರಸ್ತೆಯನ್ನು ಭಾಗಶಃ ತೆರೆಯಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:39 pm, Sat, 27 April 24