ಬೆಳಗಾವಿ, ಡಿಸೆಂಬರ್ 17: ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಯೋಜಿಸಿದ್ದ ಔತಣ ಕೂಟದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭಾಗವಹಿಸಿಲ್ಲ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಬಿವೈ ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದಾರೆ.
ವಿಜಯೇಂದ್ರ ಔತಣಕೂಟಕ್ಕೆ ನಾನು ಹೊಗಿಲ್ಲ, ರಮೇಶ್ ಜಾರಕಿಹೊಳಿ ಕೂಡ ಹೋಗಲ್ಲ. ಅವರು ಇಲ್ಲಿ ಔತಣ ಕೂಟಕ್ಕೆ ಕರೆಯುತ್ತಾರೆ. ದಾವಣಗೆರೆಯಲ್ಲಿ ಚೇಲಾಗಳನ್ನು ಬಿಟ್ಟು ಸಭೆ ಮಾಡುತ್ತಾರೆ. ಅವರ ಗನ್ಮ್ಯಾನ್ಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎಂದು ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯತ್ನಾಳ್ ಉಚ್ಚಾಟನೆ ಮಾಡಿ ಎಂದ ಮಾಹಿತಿ ನಮಗೆ ದೊರೆತಿದೆ. ಯಡಿಯೂರಪ್ಪ ಸೇರಿ ಕೆಲವು ಶಾಸಕರು ಮಾತನಾಡಿದ್ದು ಗೊತ್ತಾಗಿದೆ. ಇದರ ಹಿಂದೆ ಯಡಿಯೂರಪ್ಪ ಕುತಂತ್ರ ಯಾವಾಗಲೂ ಇದ್ದೇ ಇರುತ್ತದೆ. ಯತ್ನಾಳ್ ವಿಪಕ್ಷ ನಾಯಕ, ಶೋಭಾ ಕರಂದ್ಲಾಜೆ ರಾಜ್ಯಾಧ್ಯಕ್ಷರಾಗಲಿ ಎಂದು ಈ ಹಿಂದೆಯೂ ವಿಜಯೇಂದ್ರ ಹೇಳಿಕೆ ಕೊಟ್ಟಿದ್ದರು. ಆದರೆ, ಅದಾದ ಎರಡೇ ದಿನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರ ಘೋಷಣೆ ಆಯಿತು. ಸಭೆ ಮಾಡಿದ್ದಕ್ಕೆ ನನ್ನ ವಿರೋಧ ಇದೆ ಎಂದು ವಿಜಯೇಂದ್ರ ಹೇಳುತ್ತಾರೆ. ಇವರದ್ದು ನಾಟಕದ ಕಂಪನಿ ಎಂಬುದು ಇದರಿಂದಲೇ ಗೊತ್ತಾಗುತ್ತದೆ ಎಂದು ಯತ್ನಾಳ್ ಕಿಡಿಕಾರಿದ್ದಾರೆ.
ನಾವು 35-40 ವರ್ಷಗಳಿಂದ ಬಿಎಸ್ವೈ ಜೊತೆಗೇ ಜೀವನ ಮಾಡಿದ್ದಲ್ಲವೇ? ಯಡಿಯೂರಪ್ಪ ಒಬ್ಬರೇ ಬಿಜೆಪಿ ಕಟ್ಟಿದ್ದಾರಾ ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ. ನಾವೇ ಪೆಟ್ರೋಲ್ ಹಾಕಿ ಬಸ್ ಟಿಕೆಟ್ ಕೊಡಿಸಿ ಕಳುಹಿಸಿ ಕೊಟ್ಟೆವು. ಈಗ ಅವರ ಶಿಷ್ಯಂದಿರು ನಮಗೆ, ‘ಸೈಕಲ್ ಹೊಡೆದಿದ್ದು’ ಎಂದು ಹೇಳುತ್ತಾರೆ. ಸ್ವತಃ ಯಡಿಯೂರಪ್ಪ ಮನೆಯಲ್ಲೇ ಭಿನ್ನಮತೀಯರ ಸಭೆ ಆಗುತ್ತದೆ. ಔತಣಕೂಟ ಮಾಡುವುದು, ಅಲ್ಲಿಂದ ಬೆನ್ನಿಗೆ ಚಾಕು ಹಾಕುವುದು ಅಲ್ಲ ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಪಂಚಮಸಾಲಿ ಹೋರಾಟಕ್ಕೆ ಅನುಮತಿ ನೀಡದಿರಲು ಬೆಳಗಾವಿ ಡಿಸಿ ಸರ್ವಾಧಿಕಾರ ನಡೆಸುತ್ತಿದ್ದಾರೆಯೇ? ಬಸನಗೌಡ ಯತ್ನಾಳ್
ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವಂಥ ಹೇಳಿಕೆಗಳನ್ನು ನೀಡಿದ ಆರೋಪದಲ್ಲಿ ಇತ್ತೀಚೆಗಷ್ಟೇ ಯತ್ನಾಳ್ ಅವರಿಗೆ ಬಿಜೆಪಿ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿತ್ತು. ನಂತರ ದೆಹಲಿಗೆ ತೆರಳಿ ಅವರು ನೋಟಿಸ್ಗೆ ಉತ್ತರ ನೀಡಿದ್ದರು. ಆ ನಂತರ ಹೈಕಮಾಂಡ್ ಸೂಚನೆಯಿಂದ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗುತ್ತಿದೆ ಎನ್ನುವಷ್ಟರಲ್ಲೇ ಮತ್ತೆ ವಾಗ್ದಾಳಿ ಆರಂಭಿಸಿದ್ದರು. ಇದೀಗ ಮತ್ತೆ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ