ಬೆಂಗಳೂರು: ಮಹಿಳೆಯೊಬ್ಬರ ಅಂಗಡಿಯಲ್ಲಿ 24 ಕೋಟಿ ರೂ. ಮೌಲ್ಯದ ಡ್ರಗ್ಸ್ ಪತ್ತೆ
ಬೆಂಗಳೂರಿನಲ್ಲಿ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) 24 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದೆ. ನೈಜೀರಿಯಾದ ರೋಜ್ಲೈಮ್ ಎಂಬ ಮಹಿಳೆಯನ್ನು ಬಂಧಿಸಲಾಗಿದೆ. ಮುಂಬೈನಿಂದ ಜೂಲಿಯೆಟ್ ಎಂಬ ಮಹಿಳೆ ಡ್ರಗ್ಸ್ ತಂದು ರೋಜ್ಲೈಮ್‌ಗೆ ಪೂರೈಸುತ್ತಿದ್ದಳು. ರೋಜ್ಲೈಮ್ ಕೆ.ಆರ್.ಪುರಂನಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದಳು. ಜೂಲಿಯೆಟ್ ಪರಾರಿಯಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.
ಬೆಂಗಳೂರು, ಡಿಸೆಂಬರ್ 17: ಬೆಂಗಳೂರಿನಲ್ಲಿ (Bengaluru) ಬರೋಬ್ಬರಿ 24 ಕೋಟಿ ರೂ. ಮೌಲ್ಯದ ಡ್ರಗ್ಸ್ (Drugs) ಅನ್ನು ಕೇಂದ್ರ ಅಪರಾಧ ವಿಭಾಗ (CCB) ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಡ್ರಗ್ಸ್ ಮಾರುತ್ತಿದ್ದ ನೈಜೀರಿಯಾ ಮೂಲದ ರೋಜ್ಲೈಮ್ (40) ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ವಿದೇಶಿ ಮಹಿಳೆ ಜೂಲಿಯೆಟ್ ಎಂಬಾಕೆ ಮುಂಬೈನಿಂದ ಆಹಾರ ಧಾನ್ಯದ ಜೊತೆಗೆ ಡ್ರಗ್ಸ್ ತಂದು ಬೆಂಗಳೂರಿನಲ್ಲಿ ನೈಜೀರಿಯನ್ ಪ್ರಜೆಗಳಿಗೆ ಮತ್ತು ಸ್ಥಳೀಯರಿಗೆ ಮಾರಾಟ ಮಾಡುತ್ತಿದ್ದಳು. ಈಕೆಯಿಂದ ಡ್ರಗ್ಸ್ ಪಡೆದು ರೋಜ್ಲೈಮ್ ಕೆ.ಆರ್.ಪುರಂನ ಟಿ.ಸಿ.ಪಾಳ್ಯದಲ್ಲಿ ಅಂಗಡಿಯಲ್ಲಿಟ್ಟು ಮಾರುತ್ತಿದ್ದಳು.
ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಅಂಗಡಿ ಬಳಿ ತೆರಳಿದ್ದರು. ಇದೇ ವೇಳೆ, ರೋಜ್ಲೈಮ್ ಡ್ರಗ್ಸ್ ಹಂಚತ್ತಿದ್ದಳು. ಅಲರ್ಟ್ ಆದ ಸಿಸಿಬಿ ಪೊಲೀಸರು ರೋಜ್ಲೈಮ್ಳನ್ನು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇನ್ನು, ದೆಹಲಿಯಿಂದ ಡ್ರಗ್ಸ್ ತಂದಿದ್ದ ಜೂಲಿಯೆಟ್ ಎಂಬಾಕೆ ಪರಾರಿಯಾಗಿದ್ದಾಳೆ.
ಆರೋಪಿ ರೋಜ್ಲೈಮ್ ಬಳಿ ಇದ್ದ 12 ಕೆಜಿ ತೂಕದ ಬಿಳಿ, ಹಳದಿ ಬಣ್ಣದ ಎಂಡಿಎಂಎ ಕ್ರಿಸ್ಟಲ್ ಮತ್ತು 70 ಸಿಮ್ಗಳನ್ನು ಸಿಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪರಾರಿಯಾಗಿರುವ ಆರೋಪಿ ಜೂಲಿಯೆಟ್ಗಾಗಿ ಪೊಲೀಸರ ಶೋಧ ನಡೆಸಿದ್ದಾರೆ.
ಇದನ್ನೂ ಓದಿ: ಚಾಮರಾಜಪೇಟೆ ಅಂಚೆ ಕಚೇರಿಯಲ್ಲಿ ಡ್ರಗ್ಸ್ ಬಾಕ್ಸ್ ಪತ್ತೆ ಕೇಸ್: ಸಿಸಿಬಿ ತನಿಖೆಯಲ್ಲಿ ಸ್ಫೋಟಕ ಅಂಶಗಳು ಬಹಿರಂಗ
ಇನ್ನು, ರೋಜ್ಲೈಮ್ ಐದು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ವೀಸಾ ಅವಧಿ ಮುಗಿದರೂ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದಳು. ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಂಜಾ ಮಾರಾಟ, ಸಾಗಿಸುತ್ತಿದ್ದವರ ಬಂಧನ
ವಿವಿಧ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾರುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶ್ರೀಕಾಂತ್, ಮುನಿರಾಜು, ಚಂದ್ರಕಾಂತ್, ಬಾಲಕೃಷ್ಣ ಸೇರಿದಂತೆ ಒಟ್ಟು 11 ಮಂದಿ ಬಂಧಿತ ಆರೋಪಿಗಳು. ಆರೋಪಿಗಳು ಯಲಹಂಕ, ಅಶೋಕ್ ನಗರ, ಬಾಣಸವಾಡಿ, ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರುತ್ತಿದ್ದರು.
ಆರೋಪಿಗಳು ಬಲೋರೋ ಪಿಕ್ ಅಪ್ ವಾಹನದ ಹಿಂಬದಿಯಲ್ಲಿ ಬೇರೆಯ ರೀತಿಯಲ್ಲಿ ಬಾಡಿ ನಿರ್ಮಿಸಿ ಅದರಲ್ಲಿ ಗಾಂಜಾವನ್ನು ವಿಶಾಖಪಟ್ಟಣಂನಿಂದ ಬೆಂಗಳೂರಿಗೆ ಸಾಗಿಸುತ್ತಿದ್ದರು. ಆರೋಪಿಗಳು, ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನೇರುಘಟ್ಟ ರಸ್ತೆಯ ಕ್ರಿಶ್ಚಿಯನ್ ಸ್ಮಶಾನದ ಪಕ್ಕ ವಾಹನ ನಿಲ್ಲಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 31 ಲಕ್ಷ ಮೌಲ್ಯದ 77 ಕೆ.ಜಿ ಗಾಂಜಾ ಸೇರಿದಂತೆ ಬುಲೆರೋ ವಾಹನ, ಮೂರು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ಯಲಹಂಕ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಟ್ರಕ್, ಇನೋವಾ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 74 ಲಕ್ಷ ಮೌಲ್ಯದ 93 ಕೆಜಿ ಸೇರಿ ಒಂದು ಟ್ರಕ್, ಇನೋವಾ ಕಾರು, ನಾಲ್ಕು ಮೊಬೈಲ್ ವಶಕ್ಕೆ ಪಡೆದಿದ್ದಾರೆ.
ಬಾಣಸವಾಡಿ ಮತ್ತು ಅಮೃತಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ, ಐವರು ಗಾಂಜಾ ಪೆಡ್ಲರ್ಗಳನ್ನು ಬಂಧಿಸಿದ್ದಾರೆ. ಹೊಸ ವರ್ಷಕ್ಕೆ ಮಾರಾಟ ಮಾಡಲು ತಂದಿದ್ದ ಮಾಡಲು ಆರೋಪಿಗಳು ಗಾಂಜಾ ತಂದಿದ್ದರು. ಬಾಣಸವಾಡಿ ಪೊಲೀಸರು 15 ಲಕ್ಷ ಮೌಲ್ಯದ 15 ಕೆಜಿ ಗಾಂಜಾ ಮತ್ತು ಅಮೃತಹಳ್ಳಿ ಪೊಲೀಸರು 1.5 ಲಕ್ಷ ಮೌಲ್ಯದ 5 ಕೆಜಿ ಗಾಂಜಾ ಸೀಜ್ ಮಾಡಿದ್ದಾರೆ. ಪೊಲೀಸರು ಕಳೆದ ಒಂದು ವಾರದಲ್ಲಿ 1 ಕೋಟಿ ಮೌಲ್ಯದ 190 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.
ವರದಿ: ಪ್ರದೀಪ್
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:35 pm, Tue, 17 December 24