ಟ್ರೆಂಡ್ ಆಗ್ತಿದೆ ಪತ್ನಿಯ ಕಾಟದಿಂದ ಬೇಸತ್ತ ಪತಿಯ ಆತ್ಮಹತ್ಯೆ ಪ್ರಕರಣಗಳು, ಇದಕ್ಕೆ ಈ ಕಾರಣ ನೋಡಿ
ಕೆಲ ದಿನಗಳ ಹಿಂದೆಯಷ್ಟೇ ಕೌಟುಂಬಿಕ ಕಲಹದಿಂದ ನೊಂದು ಬೆಂಗಳೂರಿನ ಖಾಸಗಿ ಕಂಪೆನಿಯ ಉದ್ಯೋಗಿ ಅತುಲ್ ಸುಭಾಷ್ ಅವರು ಆತ್ಮಹತ್ಯೆ ಮಾಡಿಕೊಂಡ ವಿಚಾರ ಭಾರೀ ಸುದ್ದಿಯಾಗಿತ್ತು. ಈ ಪ್ರಕರಣ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಪತ್ನಿ ಕಾಟಕ್ಕೆ ಬೇಸತ್ತು ಹೆಡ್ ಕಾನ್‌ಸ್ಟೇಬಲ್ ಮತ್ತು ಬೆಂಗಳೂರಿನ ಇನ್ನೊಬ್ಬ ವ್ಯಕ್ತಿ ಕೂಡಾ ಆತ್ಮಹತ್ಯೆ ಮಾಡಿಕೊಂಡಂತಹ ಘಟನೆಗಳೂ ನಡೆದಿವೆ. ಅಷ್ಟಕ್ಕೂ ವಿವಾಹಿತ ಪುರುಷರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಇದರ ಹಿಂದಿರುವ ಕಾರಣಗಳೇನು ಈ ಎಲ್ಲದರ ಬಗ್ಗೆ ತಿಳಿಯೋಣ.
ಹಿಂದೆಲ್ಲಾ ಗಂಡ ಹಾಗೂ ಮನೆಯವರ ಕಿರುಕುಳಕ್ಕೆ ಹೆಂಡತಿ ಆತ್ಮಹತ್ಯೆ ಮಾಡಿಕೊಳ್ಳುವಂತ ಪ್ರಕರಣಗಳು ಕೇಳಿ ಬರುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ವಿವಾಹಿತ ಪುರುಷರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ವಿವಾಹಿತ ಮಹಿಳೆಯರಿಗಿಂತಲೂ ವಿವಾಹಿತ ಪುರುಷರೇ ಆತ್ಮಹತ್ಯೆಗೆ ಹೆಚ್ಚು ಶರಣಾಗುತ್ತಿದ್ದಾರೆ ಅಂತ 2023 ರಲ್ಲಿ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ವರದಿ ಕೂಡಾ ತಿಳಿಸಿತ್ತು. ಇದೇ ತಿಂಗಳಲ್ಲಿ ನಮ್ಮ ಬೆಂಗಳೂರಿನಲ್ಲಿಯೇ ಮಾನಸಿಕ ಹಿಂಸೆ ಹಾಗೂ ಪತ್ನಿ ಕಿರುಕುಳುದ ಕಾರಣದಿಂದ ಮೂವರು ವಿವಾಹಿತ ಪುರುಷರು ಆತ್ಮಹತ್ಯೆಗೆ ಶರಣಾದ ಆತಂಕಕಾರಿ ಘಟನೆ ಕೂಡಾ ನಡೆದಿವೆ. ಅದರಲ್ಲಿ ಟೆಕ್ಕಿ ಅತುಲ್ ಸುಭಾಷ್ ಅವರ ಅತ್ಮಹತ್ಯೆ ಪ್ರಕರಣ ದೇಶಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ಅಷ್ಟಕ್ಕೂ ವಿವಾಹಿತ ಪುರುಷರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಇದರ ಹಿಂದಿರುವ ಕಾರಣಗಳೇನು ಈ ಎಲ್ಲದರ ಬಗ್ಗೆ ತಿಳಿಯೋಣ.
ದೇಶಾದ್ಯಂತ ಸಂಚಲನ ಮೂಡಿಸಿತ್ತು ಅತುಲ್ ಆತ್ಮಹತ್ಯೆ ಪ್ರಕರಣ:
ಕೆಲ ದಿನಗಳ ಹಿಂದೆಯಷ್ಟೇ ಬೆಂಗಳೂರಿನ ಟೆಕ್ಕಿ ಪತ್ನಿಯ ಕಾಟದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಭಾರಿ ಸಂಚಲನ ಸೃಷ್ಟಿಸಿತ್ತು. ಮಾರತಹಳ್ಳಿ ಬಳಿಕ ಮಂಜುನಾಥ ಲೇಔಟ್‌ನ ಅಪಾರ್ಟ್‌ಮೆಂಟ್ ಒಂದರಲ್ಲಿ ನೆಲೆಸಿದ್ದ ಉತ್ತರ ಪ್ರದೇಶ ಮೂಲದ ಅತುಲ್ ಸುಭಾಷ್ ಕೌಟುಂಬಿಕ ಕಲಹದಿಂದ ಮನನೊಂದು ಡಿಸೆಂಬರ್ 9 ರಂದು ನೇಣಿಗೆ ಶರಣಾಗಿದ್ದಾರೆ. ಜೊತೆಗೆ ಆತ್ಮಹತ್ಯೆಗೂ ಮುನ್ನ ಅವರು ಪತ್ನಿ ನಿಖಿತಾ ಸೇರಿದಂತೆ ನಾಲ್ವರ ವಿರುದ್ಧ 26 ಪುಟಗಳ ಡೆತ್‌ನೋಟ್ ಬರೆದಿಟ್ಟಿದ್ದರು ಮತ್ತು 90 ನಿಮಿಷಗಳ ಸೆಲ್ಫಿ ವಿಡಿಯೋ ಮಾಡಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಮಾತ್ರವಲ್ಲದೆ ಆ ವಿಡಿಯೋವನ್ನು ಇ-ಮೇಲ್ ಮೂಲಕ ರಾಷ್ಟ್ರಪತಿಗಳು, ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಮತ್ತು ಸ್ನೇಹಿತರಿಗೆ ಕಳುಹಿಸಿದ್ದರು. ಈ ಆತ್ಮಹತ್ಯೆ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿ ಇದೀಗ ಅತುಲ್ ಸಾವಿಗೆ ನ್ಯಾಯ ಕೊಡಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಅಭಿಯಾನವೇ ನಡೆಯುತ್ತಿದೆ. ಈ ಪ್ರಕರಣ ಮಾಸುವ ಮುನ್ನವೇ ಪತ್ನಿ ಹಾಗೂ ಮಾವನ ಕಾಟಕ್ಕೆ ಬೇಸತ್ತು ಬೆಂಗಳೂರಿನ ಹುಳಿಮಾವು ಠಾಣೆ ಹೆಡ್ ಕಾನ್‌ಸ್ಟೇಬಲ್ ತಿಪ್ಪಣ್ಣ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಹಾಗೂ ಪತ್ನಿ ಕಿರುಕುಳದಿಂದ ಬೆಂಗಳೂರಿನ ಉತ್ತರ ತಾಲೂಕಿನ ಬಾಲರಾಜ್ ಎಂಬ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಂತಹ ಘಟನೆಗಳು ನಡೆದಿವೆ.
ಮಹಿಳೆಯರಿಗಿಂತ ವಿವಾಹಿತ ಪುರುಷರೇ ಆತ್ಮಹತ್ಯೆಗೆ ಹೆಚ್ಚು ಶರಣಾಗುತ್ತಿದ್ದಾರೆ:
ಇದೇ ಮೊದಲಲ್ಲ, ವಿವಾಹಿತ ಪುರುಷರು ಆತ್ಮಹತ್ಯೆ ಮಾಡಿಕೊಂಡಂತಹ ಹಲವು ಪ್ರಕರಣಗಳು ಈ ಹಿಂದೆಯೂ ನಡೆದಿವೆ. ವಿವಾಹಿತ ಮಹಿಳೆಯರಿಗೆ ಹೋಲಿಸಿದರೆ, ವಿವಾಹಿತ ಪುರುಷರೇ ಆತ್ಮಹತ್ಯೆ ಹೆಚ್ಚು ಶರಣಾಗುತ್ತಿದ್ದಾರೆ ಎಂಬುದನ್ನು ಹಲವು ವರದಿಗಳು ಕೂಡಾ ತಿಳಿಸಿವೆ. ಎನ್.ಸಿ.ಆರ್.ಬಿ ಅಂಕಿ ಅಂಶಗಳ ಪ್ರಕಾರ 2022 ರಲ್ಲಿ 83,713 ವಿವಾಹಿತ ಪುರುಷರು ಆತ್ಮಹತ್ಯೆ ಮಾಡಿಕೊಂಡಿದ್ದರು, ಅದೇ ಅವಧಿಯಲ್ಲಿ ಆತ್ಮಹತ್ಯೆಗೆ ಶರಣಾದ ಮಹಿಳೆಯರ ಸಂಖ್ಯೆ 30,771. ಅದೇ 2014 ರಲ್ಲಿ 60 ಸಾವಿರ ಪುರುಷರು ಆತ್ಮಹತ್ಯೆ ಮಾಡಿಕೊಂಡಿದ್ದರೆ 27 ಸಾವಿರ ಮಹಿಳೆಯರು ಸಾವಿಗೆ ಶರಣಾಗಿದ್ದಾರೆ.
2021 ರಲ್ಲಿ ಆತ್ಮಹತ್ಯೆ ಮಾಡಿಕೊಂಡ ಪುರುಷರಲ್ಲಿ 33.2% ಜನ ಕೌಟುಂಬಿಕ ಸಮಸ್ಯೆಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರೆ 4.8% ಪುರುಷರು ವಿವಾಹ ಸಂಬಂಧಿತ ಸಮಸ್ಯೆಗಳಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಎನ್.ಸಿ.ಆರ್.ಬಿ ವರದಿ ತಿಳಿಸಿತ್ತು. ಜೊತೆಗೆ ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳ ಈ ಐದು ರಾಜ್ಯಗಳಲ್ಲಿ ಆತ್ಮಹತ್ಯೆಯ ಪ್ರಕರಣಗಳು ಹೆಚ್ಚಿವೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ: ಪತ್ನಿ ಕಾಟಕ್ಕೆ ಬೆಂಗಳೂರಿನಲ್ಲಿ ಮತ್ತೋರ್ವ ವ್ಯಕ್ತಿ ಬಲಿ: ಡೆತ್‌ನೋಟ್ ಬರೆದಿಟ್ಟು ಬಾಲರಾಜ್ ಆತ್ಮಹತ್ಯೆ
ವಿವಾಹಿತ ಪುರುಷರ ಆತ್ಮಹತ್ಯೆಗೆ ಕಾರಣಗಳು:
ಒತ್ತಡದ ಕಾರಣ:
ಒತ್ತಡದ ಕಾರಣದಿಂದಲೂ ಪುರುಷರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ, ಮಹಿಳೆಯರು ಒತ್ತಡವನ್ನು ಸಮರ್ಪಕವಾಗಿ ನಿಭಾಯಿಸುತ್ತಿರುವುದು ಅವರಲ್ಲಿ ಆತ್ಮಹತ್ಯೆ ಕಡಿಮೆ ಇರುವುದಕ್ಕೆ ಕಾರಣ ಎಂದು ವರದಿಗಳು ಹೇಳಿವೆ. ವಿದ್ಯಾವಂತ ಪುರುಷರು ಕೈತುಂಬಾ ಸಂಬಳ ಪಡೆಯುತ್ತಿದ್ದರೂ ಜೀವನದಲ್ಲಿ ನೆಮ್ಮದಿ ಇಲ್ಲದೆ ನೇಣಿಗೆ ಕೊರಳೊಡ್ಡುತ್ತಿದ್ದಾರೆ.
ಕಾನೂನುಗಳು:
ಮಹಿಳೆಯರಿಗೆ ಹೋಲಿಸಿದರೆ ಪುರುಷರ ಪರವಾಗಿ ಯಾವುದೇ ಕಾನೂನುಗಳು ಅಷ್ಟು ಪ್ರಬಲವಾಗಿಲ್ಲ. ಇದೇ ಕಾನೂನನ್ನು ದುರುಪಯೋಗ ಪಡಿಸಿಕೊಂಡು ಕೆಲ ಮಹಿಳೆಯರು ತಮ್ಮ ಗಂಡನ ಮೇಲೆ ಇಲ್ಲ ಸಲ್ಲದ ಅಪವಾದಗಳನ್ನು ಹಾಕಿ ಅವರು ಭಯದಿಂದ ನೇಣಿಗೆ ಕೊರಳೊಡ್ಡುವಂತೆ ಮಾಡುತ್ತಿದ್ದಾರೆ. ಹೌದು ಕೋರ್ಟ್, ಸುಳ್ಳು ಕೇಸು, ಜೈಲು ಈ ಎಲ್ಲಾ ಕಾರಣದಿಂದ ಬೇಸತ್ತು ವಿವಾಹಿತ ಪುರುಷರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ಪತ್ನಿಯ ಕಿರುಕುಳ:
ಇತ್ತೀಚಿಗೆ ಪತ್ನಿಯ ಕಿರುಕುಳದಿಂದ ವಿವಾಹಿತ ಪುರುಷರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪ್ರಕರಣಗಳು ತೀರಾ ಹೆಚ್ಚಾಗುತ್ತಿದೆ. ಕಾನೂನುಗಳು ತಮ್ಮ ಪರವಾಗಿಯೇ ಇದೆ ಎಂದು ಕೆಲವು ಮಹಿಳೆಯರು ಗಂಡನ ಮೇಲೆ ದೌರ್ಜನ್ಯದ ಪ್ರಕರಣ, ವರದಕ್ಷಿಣೆಯ ಕಿರುಕುಳ ಹೀಗೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಅವರನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತಿದ್ದಾರೆ. ಜೊತೆಗೆ ಡಿವೋರ್ಸ್ ಪಡೆದ ಬಳಿಕ ಕೋಟಿ ಕೋಟಿ ಜೀವನಾಂಶವನ್ನು ಕೇಳುವ ಮೂಲಕ ಗಂಡನನ್ನು ಆರ್ಥಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಕುಗ್ಗಿಸುವಂತೆ ಮಾಡುತ್ತಾರೆ. ಈ ಕಿರುಕುಳಗಳ ಕಾರಣದಿಂದಲೂ ವಿವಾಹಿತ ಪುರುಷರು ಹೆಚ್ಚಾಗಿ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ.
ಅನೈತಿಕ ಸಂಬಂಧದ ಪ್ರಕರಣಗಳು:
ಅನೈತಿಕ ಸಂಬಂಧಕ ಕಾರಣಗಳಿಂದಲೂ ವಿವಾಹಿತ ಪುರುಷರು ಆತ್ಮಹತ್ಯೆಗೆ ಶರಣಾಗಿದ್ದುಂಟು. ಹೌದು ಹೆಂಡತಿಯ ಅನೈತಿಕ ಸಂಬಂಧದಿಂದ ಬೇಸತ್ತು, ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡವರಿದ್ದಾರೆ. ಕುಟುಂಬ ಕಲಹ, ಪತ್ನಿಯ ಕಾಟ, ಮಾನಸಿಕ ಕಿರುಕುಳ ಈ ಎಲ್ಲಾ ಕಾರಣಗಳಿಂದ ಮನಸ್ಸಿಗೆ ನೆಮ್ಮದಿಯಿಲ್ಲದೆ ಖಿನ್ನತೆಗೆ ಒಳಗಾಗಿ ವಿವಾಹಿತ ಪುರುಷರು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ