ಕೊವಿಡ್ ನೆಪದಲ್ಲಿ ಕೇವಲ ಹಿಂದೂಗಳ ಹಬ್ಬಕ್ಕೆ ನಿರ್ಬಂಧ ನಡೆಯಲ್ಲ: ಬಸನಗೌಡ ಪಾಟೀಲ ಯತ್ನಾಳ್ ಎಚ್ಚರಿಕೆ

Basanagouda Patil Yatnal: ಬಿಜೆಪಿ ಸರ್ಕಾರ, ಬೊಮ್ಮಾಯಿ ಸರ್ಕಾರದಲ್ಲಿ‌ ಅವರಿಗೊಂದು ಕಾನೂನು, ನಮಗೊಂದು ಕಾನೂನು ನಡಿಯಲ್ಲ ಅಂದುಕೊಂಡಿದ್ದೇನೆ. ಕೇವಲ ಹಿಂದೂಗಳಿಗೆ ಮಾತ್ರ ನಿರ್ಬಂಧ ಹಾಕಿದರೆ ಅದನ್ನು ಉಲ್ಲಂಘನೆ ಮಾಡುತ್ತೇವೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

ಕೊವಿಡ್ ನೆಪದಲ್ಲಿ ಕೇವಲ ಹಿಂದೂಗಳ ಹಬ್ಬಕ್ಕೆ ನಿರ್ಬಂಧ ನಡೆಯಲ್ಲ: ಬಸನಗೌಡ ಪಾಟೀಲ ಯತ್ನಾಳ್ ಎಚ್ಚರಿಕೆ
ಬಸನಗೌಡ ಪಾಟೀಲ್ ಯತ್ನಾಳ್ (ಸಂಗ್ರಹ ಚಿತ್ರ)
Follow us
TV9 Web
| Updated By: ganapathi bhat

Updated on:Aug 13, 2021 | 5:02 PM

ವಿಜಯಪುರ: ಕೊವಿಡ್ ನೆಪದಲ್ಲಿ ಹಿಂದೂಗಳ ಹಬ್ಬಕ್ಕೆ ನಿರ್ಬಂಧ ನಡೆಯಲ್ಲ. ಕೇವಲ ಹಿಂದೂಗಳ ಹಬ್ಬಕ್ಕೆ ನಿರ್ಬಂಧ ವಿಧಿಸಿದರೆ ನಡೆಯಲ್ಲ. ಮೋಹರಂ‌‌‌ ಸೇರಿ ಎಲ್ಲ ಹಬ್ಬಕ್ಕೂ ನಿರ್ಬಂಧ ಅನ್ವಯವಾಗಲಿ ಎಂದು ವಿಜಯಪುರದಲ್ಲಿ ಬಿಜೆಪಿ ಶಾಸಕ‌‌ ಬಸನಗೌಡ ಪಾಟೀಲ್ ಯತ್ನಾಳ್ ಇಂದು (ಆಗಸ್ಟ್ 13) ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಅವರಿಗೊಂದು ಕಾನೂನು, ನಮಗೊಂದು ಕಾನೂನು ನಡೆಯಲ್ಲ. ಹಿಂದೂಗಳಿಗೆ ಮಾತ್ರ ನಿರ್ಬಂಧ ಹಾಕಿದರೆ ಅದನ್ನು ಉಲ್ಲಂಘಿಸುತ್ತೇವೆ ಎಂದು ಬಸನಗೌಡ ಯತ್ನಾಳ್ ಸರ್ಕಾರದ ವಿರುದ್ಧವೇ ಹರಿಹಾಯ್ದಿದ್ದಾರೆ.

ರಾಜ್ಯದಲ್ಲಿ ಗಣೇಶ ಹಬ್ಬಕ್ಕೆ ಹಲವು ನಿರ್ಬಂಧ ವಿಚಾರವಾಗಿ ವಿಜಯಪುರದಲ್ಲಿ ಶಾಸಕ ಯತ್ನಾಳ್ ತಮ್ಮದೇ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಕೊವಿಡ್ ಮೂರನೆಯ ಅಲೆ ಭಯಾನಕವಾಗಿದೆ ಎಂಬ ಆತಂಕವಿದೆ. ಹೀಗಾಗಿ ಸರ್ಕಾರ ಗಣೇಶ ಹಬ್ಬಕ್ಕೆ ನಿರ್ಭಂದಗಳನ್ನ ವಿಧಿಸಿದೆ. ಜನರ ರಕ್ಷಣೆಗಾಗಿ ನಿರ್ಭಂಧ ವಿಧಿಸಿದ್ದರ ಬಗ್ಗೆ ನಮಗೆ ಆಕ್ಷೇಪವಿಲ್ಲ. ಅದನ್ನ ಎಲ್ಲರೂ ಪಾಲಿಸುತ್ತೇವೆ. ಆದರೆ ಕೊವಿಡ್ ನೆಪದಲ್ಲಿ ಕೇವಲ ಹಿಂದೂಗಳ ಹಬ್ಬಕ್ಕೆ ನಿರ್ಬಂಧ ವಿಧಿಸಿದರೆ ನಡೆಯಲ್ಲ. ಮೋಹರಂ‌‌‌ ಸೇರಿದಂತೆ ಮುಂಬರುವ ಎಲ್ಲ ಹಬ್ಬಗಳಿಗೂ ನಿರ್ಭಂದಗಳು ಅನ್ವಯವಾಗಬೇಕು ಎಂದು ಹೇಳಿದ್ದಾರೆ.

ಬಿಜೆಪಿ ಸರ್ಕಾರ, ಬೊಮ್ಮಾಯಿ ಸರ್ಕಾರದಲ್ಲಿ‌ ಅವರಿಗೊಂದು ಕಾನೂನು, ನಮಗೊಂದು ಕಾನೂನು ನಡಿಯಲ್ಲ ಅಂದುಕೊಂಡಿದ್ದೇನೆ. ಕೇವಲ ಹಿಂದೂಗಳಿಗೆ ಮಾತ್ರ ನಿರ್ಬಂಧ ಹಾಕಿದರೆ ಅದನ್ನು ಉಲ್ಲಂಘನೆ ಮಾಡುತ್ತೇವೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

ಆನಂದ್ ಸಿಂಗ್​ರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಖಾತೆ ಹಂಚಿಕೆ ಬಗ್ಗೆ ಸಚಿವ ಆನಂದ ಸಿಂಗ್ ಅಸಮಾಧಾನ‌‌ ವಿಚಾರವಾಗಿ ಮಾತನಾಡಿದ ಯತ್ನಾಳ್, ಆನಂದ್ ಸಿಂಗ್ ಉತ್ತಮ ಆಡಳಿತಗಾರರು. ಅವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಸರ್ಕಾರನ ರಚನೆ ಮಾಡಲು ಆನಂದ್ ಸಿಂಗ್ ಪಾತ್ರ ಬಹಳ ಪ್ರಮುಖವಾಗಿದೆ. ಈ‌ ಹಿಂದೆ ಅರಣ್ಯ ಇಲಾಖೆಯಲ್ಲಿದ್ದ ಹಲವು ಸಮಸ್ಯೆಗಳನ್ನ ಆನಂದ್ ಸಿಂಗ್ ಬಗೆಹರಿಸಿದ್ದಾರೆ. ಆನಂದ್ ಸಿಂಗ್ ಸಮರ್ಥವಾಗಿ ಖಾತೆಗಳನ್ನ ನಿಭಾಯಿಸಿದ್ದಾರೆ. ಅವರ ಬೇಡಿಕೆಯನ್ನು ಮುಖ್ಯಮಂತ್ರಿಗಳು ಪೂರೈಸಬೇಕು ಎಂದು ಹೇಳಿಕೆ ನೀಡಿದ್ದಾರೆ.

ಸಹಕಾರಿ ಸಂಘ, ಬ್ಯಾಂಕ್ ಅವ್ಯವಹಾರ; ತನಿಖೆಗೆ ಆಗ್ರಹ ಎಂಆರ್​ಎನ್​ ಸೌಹಾರ್ದ ಸಹಕಾರಿ ಸಂಘದಲ್ಲಿ ಅವ್ಯವಹಾರ ನಡೆದಿದೆ. 40 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ವಿಜಯಪುರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್​ ಹೇಳಿದ್ದಾರೆ. ಅವ್ಯವಹಾರವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ. ಇದೇ ರೀತಿ ಈಶ್ವರ ಕ್ರೆಡಿಟ್ ಸೊಸೈಟಿಯಲ್ಲೂ ಅವ್ಯವಹಾರ ನಡೆದಿದೆ. ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಯತ್ನಾಳ್ ಆಗ್ರಹಿಸಿದ್ದಾರೆ.

ಇದೇ ರೀತಿ ಅಪೆಕ್ಸ್​ ಬ್ಯಾಂಕ್​ನಲ್ಲೂ ಅವ್ಯವಹಾರ ನಡೆದಿದೆ. ದಾಖಲೆ ಇಲ್ಲದೆ ಸಾಲ ನೀಡಲಾಗಿದೆ. ಅವ್ಯವಹಾರಗಳ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ್ದೇನೆ. ಸಕ್ಕರೆಯಿಲ್ಲದ ಗೋದಾಮಿಗೆ ಸಹಕಾರಿ ಬ್ಯಾಂಕ್‌ಗಳಿಂದ ಸಾಲ ನೀಡಲಾಗಿದೆ ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಸಮಗ್ರ ತನಿಖೆ ನಡೆಸಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ. ಸಚಿವ ಮುರುಗೇಶ್ ನಿರಾಣಿ ವಿರುದ್ಧ ಮತ್ತೆ ಪರೋಕ್ಷವಾಗಿ ಯತ್ನಾಳ್ ಹರಿಹಾಯ್ದಿದ್ದಾರೆ.

ಮೀಸಲಾತಿ ಕುರಿತು ಸಿಎಂ ಕ್ರಮಕೈಗೊಳ್ಳದಿದ್ದರೆ ಹೋರಾಟ ನಡೆಸುತ್ತೇವೆ ಮೀಸಲಾತಿ ನೀಡುವ ಅಧಿಕಾರ ರಾಜ್ಯಗಳಿಗೆ ನೀಡಿದ್ದಾರೆ. ಪ್ರಧಾನಿಗಳ ಈ ಐತಿಹಾಸಿಕ ತಿದ್ದುಪಡಿ ಸ್ವಾಗತಿಸುತ್ತೇನೆ ಎಂದು ಶಾಸಕ ಬಸನಗೌಡ ಯತ್ನಾಳ್ ತಿಳಿಸಿದ್ದಾರೆ. ಮೀಸಲಾತಿ ವಿಚಾರವಾಗಿ ನಾನು ಸಿಎಂ ಬೊಮ್ಮಾಯಿ ಅವರಿಗೆ ಒತ್ತಾಯ ಮಾಡುವೆ. ಈಗ ಯಾವುದೇ ನೆಪ‌ ಹೇಳಲು ಬರಲ್ಲ. ಆದಷ್ಟು ಬೇಗ ಪಂಚಮಸಾಲಿ ಸಮಾಜ, ಆದಿ ಬಣಜಿಗ, ಕೂಡು‌ಒಕ್ಕಲಿಗ ಸಮಾಜಗಳಿಗೆ 2 ಎ ಮೀಸಲಾತಿ ನೀಡಬೇಕು. ಕುರುಬ ಸಮಾಜವನ್ನು ಎಸ್​ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ಎಸ್​ಸಿ ಸಮಾಜದ ಮೀಸಲಾತಿಯನ್ನು ಮೂರು ಪ್ರತಿಶತದಿಂದ 7.5 ಪ್ರತಿಶತಕ್ಕೆ ಏರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು ಯತ್ನಾಳ್ ಒತ್ತಾಯಿಸಿದ್ದಾರೆ.

ಜೊತೆಗೆ ಮಡಿವಾಳ ಸಮಾಜ, ಹಡಪದ ಸಮಾಜ, ಗಂಗಾ ಮತಸ್ಥ, ತಳವಾರ ,ಕೋಳಿ ಸಮಾಜಕ್ಕೂ ಎಸ್ಟಿ ಗೆ ಸೇರಿಸಬೇಕು. ಈ‌ ನಿಟ್ಟಿನಲ್ಲಿ ಸಿಎಂ‌ ಅವರು ಕ್ರಮ ತೆಗೆದುಕೊಳ್ಳದಿದ್ದರೆ ಅನಿವಾರ್ಯವಾಗಿ ಹೋರಾಟ ನಡೆಸುತ್ತೇವೆ ಎಂದು ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ.

ಬಸವರಾಜ ಬೊಮ್ಮಾಯಿ- ದೇವೇಗೌಡ ಭೇಟಿ ಬಗ್ಗೆ ಪ್ರತಿಕ್ರಿಯೆ ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಜೆಡಿಎಸ್ ವರಿಷ್ಠ ದೇವೇಗೌಡರ ಭೇಟಿ ವಿಚಾರವಾಗಿ ಯತ್ನಾಳ್ ಪ್ರತಿಕ್ರಿಯಿಸಿದ್ದಾರೆ. ಪ್ರೀತಂ ಗೌಡ ಅವರು ಜೆಡಿಎಸ್ ವಿರುದ್ಧ ಹೋರಾಟ ಮಾಡಿ ಶಾಸಕರಾಗಿ ಆಯ್ಕೆಯಾಗಿ ಬಂದಿದ್ದಾರೆ. ಸಿಎಂ ಅವರು ದೇವೇಗೌಡ ಬೇಟಿ ಆಗಿದ್ದಕ್ಕೆ ಅವರಿಗೆ ಒಂದು ರೀತಿಯ ಕಸಿವಿಸಿ ಆಗಿದೆ. ಸಿಎಂ ಅವರು ದೇವೇಗೌಡರ ಭೇಟಿಯಾಗಿದ್ದ ಬಗ್ಗೆ ನನಗೆ ವೈಯಕ್ತಿಕ ಅಪಸ್ವರವಿಲ್ಲ. ದೇವೇಗೌಡರು ದೇಶದ ಪ್ರಧಾನಿಯಾಗಿದ್ದವರು. ಆದರೆ ಮುಖ್ಯಮಂತ್ರಿ ಕೇವಲ ದೇವೇಗೌಡರನ್ನು ಮಾತ್ರ ಭೇಟಿಯಾಗಿದ್ದು ಸರಿಯಲ್ಲ ಎಂದು ಯತ್ನಾಳ್ ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದೆ ಎಸ್​ಎಂ ಕೃಷ್ಣ ಅವರು ಸಿಎಂ ಆಗಿದ್ದಾಗ ರಾಜ್ಯದ ಎಲ್ಲಾ ಮಾಜಿ ಸಿಎಂಗಳ ಮನೆಗೆ ಹೋಗಿ ಭೇಟಿಯಾಗಿದ್ದರು. ಅದೇ ಮಾದರಿಯಲ್ಲಿ ಸಿಎಂ ಬೊಮ್ಮಾಯಿ ಅವರು ರಾಜ್ಯದ ಮಾಜಿ ಸಿಎಂಗಳ ಭೇಟಿ ಮಾಡಿದ್ದರೆ ಯಾವುದೇ ಸಮಸ್ಯೆಯಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಿಜಯೇಂದ್ರ ಸರ್ಕಾರದಲ್ಲಿ ಇನ್ನೂ ಹಸ್ತಕ್ಷೇಪ ಮಾಡುತ್ತಿದ್ದಾರೆ, ಹಿಂದೂ ವಿರೋಧಿ ಸಿಎಂ ಆಗಿದ್ದಾರೆ ಎಂಬ ಭಾವನೆ ಕಾರ್ಯಕರ್ತರಲ್ಲಿದೆ: ಶಾಸಕ ಯತ್ನಾಳ್

ಇದು ಶಿವಾಜಿ ಮಹಾರಾಜ ಶಿಕ್ಷಣ ಪಡೆದ ಪವಿತ್ರ ಭೂಮಿ; ಜಿಲ್ಲೆಗೆ ಸಚಿವ ಸ್ಥಾನ ಸಿಗದಿದ್ದರೆ ಮತ್ತೊಮ್ಮೆ ಕ್ರಾಂತಿ: ಬಸನಗೌಡ ಪಾಟೀಲ ಯತ್ನಾಳ್

(Basanagouda Patil Yatnal slams Karnataka Govt BJP Govt Murugesh Nirani Anand Singh and on Reservation)

Published On - 5:00 pm, Fri, 13 August 21