AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಸ್ಲಿಮರ ಮೀಸಲಾತಿ ರದ್ದತಿ ವಿಚಾರದಲ್ಲಿ ಬಿಜೆಪಿಯ ನಿಲುವು ಅಚಲ: ಬಸವರಾಜ ಬೊಮ್ಮಾಯಿ

ಧರ್ಮದ ಆಧಾರದ ಮೇಲೆ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವಿಲ್ಲ. ಈ ನಿಬಂಧನೆಯ ಹೊರತಾಗಿಯೂ, ಸುಮಾರು 24 ಮುಸ್ಲಿಂ ಸಮುದಾಯಗಳನ್ನು 2A ಕೋಟಾ ವರ್ಗಕ್ಕೆ ಸೇರಿಸಲಾಗಿತ್ತು. ಹೀಗಾಗಿ ಮುಸ್ಲಿಮರ ಶೇ 4ರಷ್ಟು ಮೀಸಲಾತಿಯನ್ನು ರದ್ದುಪಡಿಸುವ ವಿಚಾರದಲ್ಲಿ ಬಿಜೆಪಿಯ ನಿಲುವು ದೃಢವಾಗಿದೆ ಎಂದು ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮುಸ್ಲಿಮರ ಮೀಸಲಾತಿ ರದ್ದತಿ ವಿಚಾರದಲ್ಲಿ ಬಿಜೆಪಿಯ ನಿಲುವು ಅಚಲ: ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
Ganapathi Sharma
|

Updated on: Apr 27, 2024 | 10:13 AM

Share

ಬೆಂಗಳೂರು, ಏಪ್ರಿಲ್ 27: ಮುಸ್ಲಿಮರ ಶೇ 4ರಷ್ಟು ಮೀಸಲಾತಿಯನ್ನು (Muslim quota) ರದ್ದುಪಡಿಸುವ ವಿಚಾರದಲ್ಲಿ ಬಿಜೆಪಿ (BJP) ದೃಢವಾಗಿದೆ ಮತ್ತು ಆ ವಿಚಾರಕ್ಕೆ ಸಂಬಂಧಿಸಿ ಚೆಂಡು ಈಗ ಕಾಂಗ್ರೆಸ್ ಅಂಗಳದಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಶುಕ್ರವಾರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಸ್ಲಿಂ ಕೋಟಾ ವಿಚಾರ ಸದ್ಯ ಸುಪ್ರೀಂ ಕೋರ್ಟ್​​ನಲ್ಲಿದೆ. ಹಾಗಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ’ ಎಂದರು.

ನಾವು ಮುಸ್ಲಿಂ ಕೋಟಾವನ್ನು ರದ್ದುಗೊಳಿಸುತ್ತೇವೆ ಅಥವಾ ಅದನ್ನು ಮುಂದುವರಿಸುತ್ತೇವೆ ಎಂದು ಸುಪ್ರೀಂ ಕೋರ್ಟ್‌ಗೆ ಯಾವತ್ತೂ ಹೇಳಿರಲಿಲ್ಲ. ನಮ್ಮ ನಿರ್ಧಾರವನ್ನು ಪ್ರಶ್ನಿಸಿ ಸಿದ್ದರಾಮಯ್ಯ ಅವರ ಆಪ್ತ ರವಿವರ್ಮ ಕುಮಾರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸಿದ್ದರಾಮಯ್ಯನವರ ಆಗ್ರಹದ ಮೇರೆಗೆ ಅವರು ಹಾಗೆ ಮಾಡಿದ್ದರು. ನ್ಯಾಯಾಲಯ ಇನ್ನಷ್ಟೇ ಈ ವಿಷಯವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕಿದೆ. ನಮ್ಮ ವಾದವನ್ನು ನಾವು ನ್ಯಾಯಾಲಯದಲ್ಲಿ ಮಂಡಿಸುತ್ತೇವೆ ಎಂದು ಮಾಜಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ಬೊಮ್ಮಾಯಿ ಹೇಳಿದರು.

ವಿವಾದ ನ್ಯಾಯಾಲಯದಲ್ಲಿ ಇತ್ಯರ್ಥವಾಗುವವರೆಗೆ ಮುಸ್ಲಿಂ ಕೋಟಾವನ್ನು ರದ್ದುಗೊಳಿಸುವ ನಿರ್ಧಾರವನ್ನು ಜಾರಿಗೊಳಿಸುವುದಿಲ್ಲ ಎಂದು ಬಿಜೆಪಿ ಸರಕಾರ ಸ್ಪಷ್ಟಪಡಿಸಿತ್ತು. ನಮ್ಮ ನಿಲುವು ಇಂದಿಗೂ ಅದಕ್ಕೆ ಬದ್ಧವಾಗಿಯೇ ಇದೆ. ಆಗ ಪ್ರತಿಪಕ್ಷ ಕಾಂಗ್ರೆಸ್ ನಮ್ಮ ನಿರ್ಧಾರವನ್ನು ವಿರೋಧಿಸಿತ್ತು. ಈಗ, ಆಡಳಿತಾರೂಢ ಕಾಂಗ್ರೆಸ್ ಕೋಟಾವನ್ನು ಮುಂದುವರಿಸುತ್ತದೆಯೇ ಎಂಬುದು ಪ್ರಶ್ನೆ ಎಂದು ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ: ಬೆಳಗಾವಿ ಮೇಲೆ ಪಿಎಂ-ಸಿಎಂ ಕಣ್ಣು, ಅಖಾಡಕ್ಕೆ ಏಕಕಾಲಕ್ಕೆ ಮೋದಿ, ಸಿದ್ದರಾಮಯ್ಯ ಎಂಟ್ರಿ

ಧರ್ಮದ ಆಧಾರದ ಮೇಲೆ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವಿಲ್ಲ. ಈ ನಿಬಂಧನೆಯ ಹೊರತಾಗಿಯೂ, ಸುಮಾರು 24 ಮುಸ್ಲಿಂ ಸಮುದಾಯಗಳನ್ನು 2A ಕೋಟಾ ವರ್ಗಕ್ಕೆ ಸೇರಿಸಲಾಗಿತ್ತು. ಧರ್ಮಾಧಾರಿತ ಮೀಸಲಾತಿ ಕುರಿತ ಆಂಧ್ರಪ್ರದೇಶ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಆಡಳಿತಾರೂಢ ಕಾಂಗ್ರೆಸ್ ಈಗ ಸಂದಿಗ್ಧ ಪರಿಸ್ಥಿತಿಯಲ್ಲಿದ್ದು, ಎಂದಿನಂತೆ ಬಿಜೆಪಿ ಮೇಲೆ ಗೂಬೆ ಕೂರಿಸಲು ಯತ್ನಿಸುತ್ತಿದೆ ಎಂದು ಬೊಮ್ಮಾಯಿ ಆರೋಪಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ