ಬೆಂಗಳೂರು, ಫೆಬ್ರವರಿ 28: ರಾಜ್ಯ ರಾಜಧಾನಿಯಲ್ಲಿ ಮತ್ತೊಮ್ಮೆ ಕನ್ನಡ (Kannada) ದ ರಣಕಹಳೆ ಮೊಳಗಲು ಸಜ್ಜಾಗುತ್ತಿದೆ. ಕನ್ನಡ ಕಡ್ಡಾಯ ನಾಮಫಲಕ ಅಳವಡಿಕೆಗೆ ನೀಡಿದ್ದ ಡೆಡ್ ಲೈನ್ ಇಂದು ಮುಕ್ತಾಯವಾಗಿದೆ. ಹೀಗಿದ್ದರೂ ಬೆಂಗಳೂರಿನ ಅಂಗಡಿ-ಮುಂಗಟ್ಟುಗಳ ಮುಂದಿನ ನಾಮಫಲಕ ಬದಲಾಗಿಲ್ಲ. ಇದು ಕನ್ನಡ ಹೋರಾಟಗಾರರನ್ನು ಕೆರಳಿಸಿದೆ. ಕಡ್ಡಾಯ ಕನ್ನಡ ನಾಮಫಲಕ ಬಳಸದವರಿಗೆ ಮತ್ತೊಂದು ದಿನ ಅವಕಾಶ ನೀಡಲಾಗಿದೆ. ನಾಳೆ ಸಂಜೆವರೆಗೆ ನಾಮಫಲಕ ಬದಲಾಯಿಸದಿದ್ದರೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿದ್ದು, ಕನ್ನಡ ನಾಮಫಲಕ ಹಾಕದಿದ್ದರೆ ಅಂಗಡಿಗಳನ್ನು ಬಂದ್ ಮಾಡುತ್ತೇವೆ. ಈಗಾಗಲೇ ಶೇಕಡಾ 90ರಷ್ಟು ಕನ್ನಡ ನಾಮಫಲಕ ಹಾಕಲಾಗಿದೆ. ಇನ್ನು ಉಳಿದಿರುವುದು 3 ಸಾವಿರ ನಾಮಫಲಕ ಮಾತ್ರ. ಅಂತಾರಾಷ್ಟ್ರೀಯ ಕಂಪನಿಗಳು, SBI, ಕೆನರಾ ಬ್ಯಾಂಕ್ ಮನವಿ ನೀಡಿವೆ. ಕನ್ನಡ ನಾಮಫಲಕ ಅಳವಡಿಕೆಗೆ ಮತ್ತಷ್ಟು ಗಡುವು ಕೇಳಿದ್ದಾರೆ. ಈ ಬಗ್ಗೆ ನಾಳೆ ಸಂಜೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕನ್ನಡ ನಾಮಫಲಕ ಕಡ್ಡಾಯಕ್ಕೆ ಇಂದೇ ಡೆಡ್ಲೈನ್! ಬಹುತೇಕ ಕಡೆ ಬದಲಾದ ಚಿತ್ರಣ, ಖಡಕ್ ಎಚ್ಚರಿಕೆ ಕೊಟ್ಟ ಕರವೇ
ಹಾಸನದಲ್ಲಿ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಕನ್ನಡ ನಾಮಫಲಕ ಕಡ್ಡಾಯ ಗಡುವು ಇಂದಿಗೆ ಮುಗಿದಿದೆ. ನಾಳೆ ಕನ್ನಡ ಉಳಿಸಿ ಕನ್ನಡ ಬೆಳೆಸಿ ಕನ್ನಡ ರಥ ನಾಳೆ ಬೀದಿ ಬೀದಿಗೆ ಹೋಗುತ್ತೇವೆ. ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತ ದಿಂದ ಎಲ್ಲೆಡೆ ಹೋಗಿ ಎಚ್ಚರಿಕೆ ನೀಡುತ್ತೇವೆ. ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ. ಸರ್ಕಾರಿ ಸ್ವಾಮ್ಯದ ಎಲ್ಲಾ ಕೈಗಾರಿಕೆ ಮುಚ್ಚಿ ಹೋಗಿದೆ. ದೊಡ್ಡ ದೊಡ್ಡ ಕಂಪನಿಗಳ ಕೈಗಾರಿಕೆಗಳು ಓಪನ್ ಆಗಿದೆ ಎಂದರು.
ಇದನ್ನೂ ಓದಿ: ನಾಳೆ ಡೆಡ್ಲೈನ್: ಹಲವೆಡೆ ಶೇ.60 ರಷ್ಟು ಕನ್ನಡ ನಾಮಫಲಕ ಅಳವಡಿಕೆ, ಕೆಲವೆಡೆ ಎಚ್ಚೆತ್ತುಕೊಳ್ಳದ ವ್ಯಾಪಾರಿಗಳು
ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗದ ವಿಚಾರದಲ್ಲಿ ಸರ್ಕಾರ ನಿಲುವು ಹೇಳಬೇಕು. ನಮ್ಮ ಜನರ ಭೂಮಿ ಕೊಡುತ್ತಾರೆ, ಉದ್ಯೋಗ ಕೊಟ್ಟಿಲ್ಲ. ರಾಜ್ಯದಲ್ಲಿ ಈ ಬಗ್ಗೆ ಯಾರಿಗೆ ಉದ್ಯೋಗ ಕೊಡಲಾಗಿದೆ. ಸಮೀಕ್ಷೆ ನಡೆಯಲಿ ಆಗ ಯಾವ ಯಾವ ರಾಜ್ಯದ ಜನರು ಎಷ್ಟು ಇದಾರೆ ಎಂದು ಗೊತ್ತಾಗುತ್ತೆ. ಪಕ್ಷಾಂತರ ಕಾಯಿದೆಗೆ ಸಮಗ್ರ ತಿದ್ದುಪಡಿ ಆಗಬೇಕು. ಇಲ್ಲವಾದರೆ ಚುನಾವಣೆ ವ್ಯವಸ್ಥೆ ಮೇಲೆ ನಂಬಿಕೆ ಹೋಗುತ್ತೆ. ಪಕ್ಷಾಂತರ ನಿಲ್ಲದಿದ್ದರೆ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ ಎಂದಿದ್ದಾರೆ.
ನಮ್ಮ ಸರ್ಕಾರ ಕನ್ನಡಪರ ಹೋರಾಟಗಾರರ ಕೇಸ್ ವಾಪಸ್ ತಗೊಳ್ಳುತ್ತೇವೆ ಅಂತಾರೆ. ಆದರೆ ಈವರೆಗೆ ಯಾವುದೇ ಹೋರಾಟಗಾರರ ಮೇಲಿನ ಕೇಸ್ ವಾಪಸ್ ಪಡೆದಿಲ್ಲ. ರಾಜಕೀಯ ಪಕ್ಷಗಳ ಮೇಲಿನ ಕೇಸ್ ವಾಪಸ್ ತಗೊಂಡಿದಾರೆ ಎಂದರು.
ವರದಿ: ಶಾಂತಮೂರ್ತಿ ಎಂ
ರಾಜ್ಯದ ಮತ್ತಷ್ಟ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:51 pm, Wed, 28 February 24