ಕನ್ನಡ ನಾಮಫಲಕ ಕಡ್ಡಾಯಕ್ಕೆ ಇಂದೇ ಡೆಡ್ಲೈನ್! ಬಹುತೇಕ ಕಡೆ ಬದಲಾದ ಚಿತ್ರಣ, ಖಡಕ್ ಎಚ್ಚರಿಕೆ ಕೊಟ್ಟ ಕರವೇ
ಕನ್ನಡ ಕಡ್ಡಾಯ ನಾಮಫಲಕ ಅಳವಡಿಕೆಗೆ ನೀಡಿದ್ದ ಡೆಡ್ ಲೈನ್ ಇಂದು ಅಂತ್ಯಗೊಳ್ಳಲಿದೆ. ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಹಲವು ಕಡೆಗಳಲ್ಲಿ 60% ಕನ್ನಡ ಬಳಕೆಯ ನಾಮಫಲಕ ಹಾಕಲಾಗಿದೆ. ಆದ್ರೆ ಕೆಲವೆಡೆ ಈ ಆದೇಶವನ್ನು ಪಾಲಿಸಿಲ್ಲ. ಹಾಗಾಗಿ ಕರವೇ ಕಾರ್ಯಕರ್ತರು ನಾಳೆಯಿಂದ ಕನ್ನಡ ಬಳಕೆಯಾಗದ ಬೋರ್ಡ್ಗಳನ್ನು ತೆರವುಗೊಳಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು, ಫೆ.28: ಕನ್ನಡ ಕಡ್ಡಾಯ ನಾಮಫಲಕ (Kannada Name Plate) ಅಳವಡಿಕೆಗೆ ನೀಡಿದ್ದ ಡೆಡ್ ಲೈನ್ ಇವತ್ತು ಮುಗಿಯುತ್ತೆ. ಸದ್ಯ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಎಚ್ಚೆತ್ತಿರುವ ವ್ಯಾಪಾರಿಗಳು ಹಳೇ ನಾಮಫಲಕ ತೆಗೆದು ಹೊಸ ನಾಮಫಲಕ ಹಾಕಿದ್ದಾರೆ. ದೊಡ್ಡ ಅಕ್ಷರದಲ್ಲಿ ಕನ್ನಡ ನಾಮಫಲಕ ಹಾಕಿರುವುದು ಹಲವೆಡೆ ಕಂಡು ಬಂದಿದೆ. ಆದರೆ ಮತ್ತೊಂದಷ್ಟು ಕಡೆ ಕನ್ನಡವನ್ನು ನಿರ್ಲಕ್ಷಿಸಲಾಗಿದೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ, ಆಡಳಿತ ಭಾಷೆಯಾಗಿದೆ. ಕರ್ನಾಟಕದಲ್ಲಿ ಕನ್ನಡದಲ್ಲೇ ವ್ಯವಹಾರ ನಡೆಸಬೇಕೆಂದು ರಾಜ್ಯ ಸರ್ಕಾರಕ್ಕೆ (Karnataka Government) ಕನ್ನಡ ಪರ ಸಂಘಟನೆಗಳು ಒತ್ತಾಯಿಸಿದ್ದವು. ಅದರಂತೆ ಕನ್ನಡ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ರಾಜಧಾನಿಯಲ್ಲಿ ಕಡ್ಡಾಯ ಕನ್ನಡ ನಾಮಫಲಕ ಅಳವಡಿಕೆಗಾಗಿ ಕನ್ನಡ ಪರ ಸಂಘಟನೆಗಳು ರಣಕಹಳೆ ಮೊಳಗಿಸಿದ್ವು. ಬೇರೆ ಬಾಷೆಯ ನಾಮಫಲಕಗಳ ವಿರುದ್ಧ ಧ್ವನಿ ಎತ್ತಿದ್ದರು. ಸರ್ಕಾರವೂ ಸಹ ಎಚ್ಚೆತ್ತುಕೊಂಡು ಫೆಬ್ರವರಿ 28 ರೊಳಗೆ ಕಡ್ಡಾಯ ಕನ್ನಡ ನಾಮಫಲಕ ಅಳವಡಿಕೆಗೆ ಗಡುವು ನೀಡಿತ್ತು. ಅದರಂತೆ ಅಂಗಡಿಗಳ ಮುಂದೆ ಶೇಕಡಾ 60 ರಷ್ಟು ಕನ್ನಡ ಭಾಷೆಯಲ್ಲೇ ನಾಮಫಲಕ ಇರಬೇಕು. ಇಂದು ಸರ್ಕಾರದ ಡೆಡ್ಲೈನ್ ಮುಗಿಯುತ್ತೆ. ಬೆಂಗಳೂರಿನಲ್ಲಿ ಒಂದಷ್ಟು ಪ್ರಮುಖ ರಸ್ತೆಗಳ ಅಂಗಡಿ-ಮುಂಗಟ್ಟುಗಳ ನಾಮಫಲಕ ಬದಲಾಗಿಲ್ಲ. ಆದರೆ ಬೆಂಗಳೂರಿನ ಬಹುತೇಕ ಕಡೆ ನಾಮಫಲಕ ಬದಲಾಗಿದೆ.
ಬೆಂಗಳೂರಿನ ಅವೆನ್ಯೂ ರೋಡ್, ಚಿಕ್ಕಪೇಟೆಯಲ್ಲಿ ವ್ಯಾಪಾರಿಗಳು ಕನ್ನಡ ನಾಮಫಲಕ ಹಾಕಿದ್ದಾರೆ. ಈ ಹಿಂದೆ ಚಿಕ್ಕದಾಗಿದ್ದ ಕನ್ನಡ ಬೋರ್ಡ್ಗಳನ್ನು ಬದಲಾವಣೆ ಮಾಡಿ ಈಗ ದೊಡ್ಡ ದೊಡ್ಡ ಅಕ್ಷರಗಳಲ್ಲೇ ಕನ್ನಡ ನಾಮಫಲಕ ಅಳವಡಿಸಲಾಗಿದೆ. ಕೆಲ ಅಂಗಡಿ-ಮುಂಗಟ್ಟುಗಳಲ್ಲಿ ಮಾತ್ರ ಚಿಕ್ಕದಾಗಿ ಕನ್ನಡ ಬರಹ ಹಾಕಲಾಗಿದೆ. ಕನ್ನಡ ನಮ್ಮ ಮಾತೃಭಾಷೆ, ಅದನ್ನ ಬಳಸಬೇಕು. ಬೇರೆ ಭಾಷೆಗಳಿಗೆ ಅವರವರ ರಾಜ್ಯದಲ್ಲಿ ಬೆಲೆ ಕೊಡ್ತಾರೆ. ನಮ್ಮ ರಾಜ್ಯದಲ್ಲಿ ಕನ್ನಡ ಬೆಳಿಯ ಬೇಕು ಎಂದ ಕನ್ನಡಿಗರೊಬ್ಬರು ತಿಳಿಸಿದರು. ಇನ್ನು ಕನ್ನಡ ನಾಮಫಲಕ ಅಷ್ಟೇ ಅಲ್ಲ, ಕನ್ನಡದಲ್ಲೇ ವ್ಯವಹರಿಸಬೇಕು ಎಂದ ವ್ಯಾಪಾರಿಗಳು ಹೇಳಿದರು. ಶೇಕಡ 60 ರಷ್ಟು ಕನ್ನಡ ನಾಮಫಲಕ ಅಳವಡಿಕೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಇದನ್ನೂ ಓದಿ: ತಮಿಳುನಾಡು: 67 ಕೆಜಿ ತೂಕದ ಅರಿಶಿನ ಮಾಲೆ, ಕೈಯಲ್ಲೇ ನೇಯ್ದ ಶಾಲು, ಈರೋಡ್ನ ಜನತೆ ಮೋದಿಯನ್ನು ಸ್ವಾಗತಿಸಿದ್ದು ಹೀಗೆ
60% ರಷ್ಟು ನಾಮಫಲಕ ಬದಲಾಗಿದೆ ಶೇ40% ಇನ್ನೂ ಬದಲಾಗಬೇಕಿದೆ
ಇನ್ನು ಬೆಂಗಳೂರಿನ ಹಲವೆಡೆ ಇನ್ನೂ ಕೂಡ ನಾಮಫಲಕ ಬದಲಾಯಿಸಿಲ್ಲ. 60% ರಷ್ಟು ನಾಮಫಲಕ ಬದಲಾಗಿದೆ ಶೇ40% ಇನ್ನೂ ಬದಲಾಗಬೇಕಿದೆ. ಸರ್ಕಾರ ಆದೇಶ ಮಾಡಿ ಕ್ರಮವಹಿಸದ ಹಿನ್ನಲೆ ಕರವೇ ಮತ್ತೆ ಹೋರಾಟದ ಎಚ್ಚರಿಕೆ ನೀಡಿದೆ. ನಾಮಪಲಕ ಬಳಕೆ ವಿರುದ್ಧ ಬೆಂಗಳೂರು ಸ್ಥಬ್ದ ಮಾಡುವ ಎಚ್ಚರಿಕೆ ನೀಡಿದೆ.
ಬೆಳಗಾವಿಯಲ್ಲಿ ಹಲವೆಡೆ ಚಿಕ್ಕದಾಗಿ ಕನ್ನಡ, ದೊಡ್ಡದಾಗಿ ಇಂಗ್ಲಿಷ್, ಮರಾಠಿ ಅಕ್ಷರ
ಬೆಂಗಳೂರು ಅಷ್ಟೇ ಅಲ್ಲ ಬೆಳಗಾವಿಯಲ್ಲೂ, ಸರ್ಕಾರದ ಆದೇಶವನ್ನ ಅಂಗಡಿ ಮಾಲೀಕರು ಕಾಲ ಕಸ ಮಾಡಿಕೊಂಡಂತೆ ಕಾಣ್ತಿದೆ. ಕೆಲ ಅಂಗಡಿಗಳ ನಾಮಫಲಕದಲ್ಲಿ ಕನ್ನಡದ ಅಕ್ಷರಗಳೆ ಮಾಯವಾಗಿದ್ದು, ಇಂಗ್ಲಿಷ್, ಮರಾಠಿ ಅಕ್ಷರಗಳೇ ಎದ್ದು ಕಾಣ್ತಿವೆ. ಇದ್ರಿಂದ ರೊಚ್ಚಿಗೆದ್ದಿರುವ ಕರವೇ ಶಿವರಾಮೇಗೌಡ ಬಣ ನಾಳೆ ಬೆಳಗಾವಿಯಲ್ಲಿ ದೊಡ್ಡ ಹೋರಾಟಕ್ಕೆ ಕರೆ ನೀಡಿದೆ.
ಕರವೇ ಖಡಕ್ ಎಚ್ಚರಿಕೆ
ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು, ಇವತ್ತು ರಾತ್ರಿಯೊಳಗೆ ಎಲ್ಲಾ ಅಂಗಡಿ ಮಾಲೀಕರು ನಾಮಫಲಕಗಳಲ್ಲಿ 60% ಕನ್ನಡ ಹಾಕಲೇಬೇಕು. ಇಲ್ಲಾಂದ್ರೆ ನಾಳೆಯಿಂದ ನಾವೇ ತೆಗೆಯುತ್ತೀವಿ. ಇವತ್ತು ರಾತ್ರಿಯೊಳಗೆ ಎಲ್ಲಾ ಬೋರ್ಡ್ ಗಳಲ್ಲಿ ಕಡ್ಡಾಯವಾಗಿ ಕನ್ನಡ ಬರಲಿಲ ಅಂದರೆ ಕರವೇ ಕಾರ್ಯಕರ್ತರು ಎಲ್ಲಾ ಇಳಿಸುತ್ತಾರೆ. ಸರ್ಕಾರ ಮತ್ತು ಬಿಬಿಎಂಪಿ ಅಧಿಕಾರಿಗಳು ಕನ್ನಡ ನೇಮ್ ಬೋರ್ಡ್ ಹಾಕದ ಅಂಗಡಿ ಮಾಲೀಕರ ವಿರುದ್ಧ ಕಠಿಣ ಕ್ರಮಗೊಳ್ಳಬೇಕು. ಕರವೇ ಕಾರ್ಯಕರ್ತರು ಬೆಳಗಾವಿಯ ಖಾನಪುರದಿಂದ ನಮ್ಮ ಹೋರಾಟ ಆರಂಭ ಮಾಡ್ತಿವಿ. ಅಲ್ಲಿ ಯಾವುದೇ ಬೋರ್ಡ್ ನಲ್ಲಿ ಕನ್ನಡ ಇಲ್ಲ. ಎಲ್ಲ ಮರಾಠಿಯಲ್ಲಿವೆ. ಅಲ್ಲಿಂದಲೇ ಕನ್ನಡ ಕಡ್ಡಾಯ ಆರಂಭ ಮಾಡ್ತಿವಿ ಎಂದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ