ಚಿತ್ರದುರ್ಗದಲ್ಲಿ ಕರಡಿ ಕಾಟ: ಆತಂಕಕ್ಕೊಳಗಾದ ಜನ
ಚಿತ್ರದುರ್ಗದಲ್ಲಿ ಕರಡಿ ಕಾಟದಿಂದಾಗಿ ಜನರು ಆತಂಕಕ್ಕೊಳಗಾಗಿದ್ದಾರೆ. ಈ ನಿಟ್ಟಿನಲ್ಲಿ, ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಅನಾಹುತಗಳು ಸಂಭವಿಸುವ ಮುನ್ನ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಚಿತ್ರದುರ್ಗ: ಜಿಲ್ಲೆಯ ಗ್ರಾಮ ಒಂದರ ಬಳಿ ಅಪರೂಪದ ಅತಿಥಿಗಳು ಬಂದು ನೆಲೆಸಿದ್ದಾರೆ. ನಿತ್ಯ ಒಂದಲ್ಲಾ ಒಂದು ಕಡೆ ಜನರೆದುರು ಪ್ರತ್ಯಕ್ಷವಾಗುತ್ತಿದ್ದಾರೆ. ಹೀಗಾಗಿ, ಕೋಟೆನಾಡಿನ ಗ್ರಾಮೀಣ ಭಾಗದ ಜನರು ಭೀತಿಯಲ್ಲೇ ಬದುಕು ನಡೆಸುತ್ತಿದ್ದಾರೆ.
ಜಿಲ್ಲೆ ಚಳ್ಳಕೆರೆ ತಾಲೂಕಿನ ಮೈಲನಹಳ್ಳಿಯಲ್ಲಿ ಜನರಿಗೆ ಕರಿ ಭೀತಿ ಹೆಚ್ಚಾಗಿದೆ. ಕಳೆದ ಅನೇಕ ದಿನಗಳಿಂದ ಗ್ರಾಮದ ಬಳಿ ಕರಡಿಗಳು ಬಿಡಾರ ಹೂಡಿವೆ. ಆಗಾಗ ಜನರೆದುರು ಪ್ರತ್ಯಕ್ಷ ಆಗುತ್ತಿದ್ದು ಜನರಲ್ಲಿ ಭೀತಿ ಸೃಷ್ಟಿಸಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಪ್ರಯೋಜನ ಆಗಿಲ್ಲ ಎಂದು ಗ್ರಾಮದ ಜನರು ಆರೋಪಿಸಿದ್ದಾರೆ.
ಕರಡಿಯ ಬೀತಿಗೆ ಹೆದರಿದ ಜನ:
ಇನ್ನು, ಕರಡಿಗಳ ಭೀತಿಯಿಂದಾಗಿ ಜನರು ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಜಮೀನುಗಳಿಗೆ ಕೂಲಿ ಕೆಲಸಕ್ಕೆ ಬರಲು ಕಾರ್ಮಿಕರು ಹೆದರುವ ಪರಿಸ್ಥಿತಿ ಎದುರಾಗಿದೆ. ಅಂತೆಯೇ, ಸಂಜೆಯಾದರೆ ಸಾಕು ಮಹಿಳೆಯರು, ಮಕ್ಕಳು ಹೊರ ಹೋಗಲಾಗದ ಸ್ಥಿತಿ ನಿರ್ಮಾಣ ಆಗಿದೆ. ಹೀಗಿದ್ರೂ, ಕರಡಿಗಳನ್ನು ಸೆರೆ ಹೊಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಸ್ಥಳಿಯ ನಿವಾಸಿ ಆಂಜನಪ್ಪ ಜನರ ನೋವನ್ನು ಹಂಚಿಕೊಂಡಿದ್ದಾರೆ.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಬೇಸಿಗೆಗೂ ಮುನ್ನವೇ ಕಾಡು ಪ್ರಾಣಿಗಳು ಆಹಾರ ಹುಡುಕಿಕೊಂಡು ನಾಡಿನತ್ತ ಹೆಜ್ಜೆ ಹಾಕುತ್ತಿವೆ. ಇನ್ನು, ಬೇಸಿಗೆಯಲ್ಲಿ ಕಾಡು ಬರಿದಾದಾಗ ಇನ್ನೇನು ಗತಿ ಎಂಬ ಭೀತಿ ಜನರಲ್ಲಿ ಮೂಡಿದೆ. ಹೀಗಾಗಿ, ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಅನಾಹುತಗಳು ಸಂಭವಿಸುವ ಮುನ್ನ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
Published On - 10:42 pm, Fri, 15 January 21