AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯಪುರ: ಕೊರೊನಾ ಸಂಕಷ್ಟದಲ್ಲಿ ಬಿಎಲ್​ಡಿಇ ಆಸ್ಪತ್ರೆಯಲ್ಲಿ ಹಾಸಿಗೆ ಸಂಖ್ಯೆ ಏರಿಕೆ, ಚಿಕಿತ್ಸಾ ಶುಲ್ಕ ಇಳಿಕೆ

ಬಿಎಲ್ಡಿಇ ಆಸ್ಪತ್ರೆಯಲ್ಲಿ 250 ಬೆಡ್‍ಗಳಿಗೆ ಮೀಸಲಾಗಿದ್ದ ಕೊರೊನಾ ಹಾಸಿಗೆಗಳ ಸಂಖ್ಯೆಯನ್ನು 500ಕ್ಕೆ ವಿಸ್ತರಣೆ ಮಾಡಲಾಗಿದ್ದು, ಇದರಲ್ಲಿ ಜನರಲ್ ವಾರ್ಡನಲ್ಲಿ 200, ಐ.ಸಿ.ಯು ನಲ್ಲಿ 50, ಮತ್ತು ಸ್ಪೆಷಲ್ ರೂಂಗಳಲ್ಲಿ 50. ಒಟ್ಟು 300 ಆಕ್ಸಿಜನ್ ಬೆಡ್‍ಗಳು ಲಭ್ಯವಿದೆ.

ವಿಜಯಪುರ: ಕೊರೊನಾ ಸಂಕಷ್ಟದಲ್ಲಿ ಬಿಎಲ್​ಡಿಇ ಆಸ್ಪತ್ರೆಯಲ್ಲಿ ಹಾಸಿಗೆ ಸಂಖ್ಯೆ ಏರಿಕೆ, ಚಿಕಿತ್ಸಾ ಶುಲ್ಕ ಇಳಿಕೆ
ಆಯೇಷಾ ಬಾನು
|

Updated on: Apr 23, 2021 | 3:11 PM

Share

ವಿಜಯಪುರ: ಕೊರೊನಾ ಎರಡನೇ ಅಲೆಗೆ ತುತ್ತಾಗಿರುವ ಸೋಂಕಿತರಿಗೆ ಉತ್ತಮ ಚಿಕಿತ್ಸೆ ಒದಗಿಸಲು ಹಾಸಿಗೆಗಳ ಸಂಖ್ಯೆ ಹೆಚ್ಚಿಸಿ ಹಾಗೂ ಚಿಕಿತ್ಸಾ ವೆಚ್ಚದಲ್ಲಿ ತೀವ್ರ ಕಡಿತಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿರ್ಣಯವನ್ನು ಬಿಎಲ್​ಡಿಇ ಸಂಸ್ಥೆ ಕೈಗೊಂಡಿದೆ.

ಕೊರೊನಾ ಹೆಚ್ಚುತ್ತಿದ್ದು ಆಸ್ಪತ್ರೆಗಳಲ್ಲಿ ಬೆಡ್‍ಗಳು ದೊರಕುತ್ತಿಲ್ಲ, ರೋಗಿಗಳಿಗೆ ಚಿಕಿತ್ಸೆ ಲಭ್ಯವಾಗುತ್ತಿಲ್ಲ ಎಂಬ ವ್ಯಾಪಕ ಕೂಗು ವಿಜಯಪುರ ಜಿಲ್ಲೆಯಲ್ಲಿ ಕೇಳಿಬರುತ್ತಿತ್ತು. ಬಿಎಲ್ಡಿಇ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಂ.ಬಿ ಪಾಟೀಲ್ ಆಸ್ಪತ್ರೆಯ ಹಿರಿಯ ವೈದ್ಯರ ಜೊತೆಗೆ ತುರ್ತು ಸಭೆ ನಡೆಸಿದರು.

ಬಿಎಲ್ಡಿಇ ಆಸ್ಪತ್ರೆಯಲ್ಲಿ 250 ಬೆಡ್‍ಗಳಿಗೆ ಮೀಸಲಾಗಿದ್ದ ಕೊರೊನಾ ಹಾಸಿಗೆಗಳ ಸಂಖ್ಯೆಯನ್ನು 500ಕ್ಕೆ ವಿಸ್ತರಣೆ ಮಾಡಲಾಗಿದ್ದು, ಇದರಲ್ಲಿ ಜನರಲ್ ವಾರ್ಡನಲ್ಲಿ 200, ಐ.ಸಿ.ಯು ನಲ್ಲಿ 50, ಮತ್ತು ಸ್ಪೆಷಲ್ ರೂಂಗಳಲ್ಲಿ 50. ಒಟ್ಟು 300 ಆಕ್ಸಿಜನ್ ಬೆಡ್‍ಗಳು ಲಭ್ಯವಿದೆ. ಅಲ್ಲದೇ 200 ಐಸೊಲೇಶನ್ ಬೆಡ್‍ಗಳು ಸೋಂಕಿತರಿಗೆ ಒದಗಿಸಲಾಗುತ್ತಿದೆ ಎಂದು ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ಅಲ್ಲದೇ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ನಿಗದಿಪಡಿಸಿದ ಚಿಕಿತ್ಸಾ ದರಕ್ಕಿಂತಲೂ ಬಿಎಲ್ಡಿಇ ಆಸ್ಪತ್ರೆಯಲ್ಲಿ ಶೇ 70 ಕಡಿಮೆ ಶುಲ್ಕವನ್ನು ಕಳೆದ 2 ತಿಂಗಳಿಂದಲೂ ಪಡೆಯಲಾಗುತ್ತಿದೆ. ಇದೀಗ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೂ, ಬಡವರಿಗೆ, ಜನಸಾಮಾನ್ಯರಿಗೆ ಅನಕೂಲವಾಗಲಿ ಎಂಬ ಕಾರಣದಿಂದ ರಿಯಾಯಿತಿ ಶುಲ್ಕವನ್ನು ಮುಂದುವರೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಎಂ.ಬಿ ಪಾಟೀಲ ಹೇಳಿದ್ದಾರೆ.

ರಾಜ್ಯ ಸರ್ಕಾರ ಜನರಲ್ ವಾರ್ಡ್‍ಗಳಲ್ಲಿ ಆಕ್ಸಿಜನ್ ರಹಿತ ಬೆಡ್‍ಗೆ ರೂಪಾಯಿ 10 ಸಾವಿರ ನಿಗದಿಪಡಿಸಿದ್ದಾರೆ ಬಿಎಲ್ಡಿಇಯಲ್ಲಿ 3 ಸಾವಿರ, ಆಕ್ಸಿಜನ್ ಸಹಿತ ಬೆಡ್‍ಗೆ ಸರ್ಕಾರ ನಿಗದಿಪಡಿಸಿದ ರೂ 12 ಸಾವಿರ ಬದಲಾಗಿ ಇಲ್ಲಿ ರೂ 5 ಸಾವಿರ ಹಾಗೂ ಐ.ಸಿ.ಯುನಲ್ಲಿ ವೆಂಟಿಲೆಟರ್ ಗೆ ರೂ 25 ಸಾವಿರ ನಿಗದಿತ ವೆಚ್ಚದ ಬದಲಾಗಿ ರೂ 8ಸಾವಿರ ಮಾತ್ರ ಪಡೆಯಲಾಗುತ್ತಿದೆ ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ.

ಸದ್ಯ ಆಸ್ಪತ್ರೆಯ 1,100 ಹಾಸಿಗೆಗಳಲ್ಲಿ 500 ಪ್ರತ್ಯೇಕ ಹಾಸಿಗೆಗಳನ್ನು ಕೊರೊನಾ ಸೋಂಕಿತರಿಗೆ ಒದಗಿಸಲಾಗುತ್ತಿದ್ದು, ಸಿ.ಟಿ ಸ್ಕ್ಯಾನ್ ಸೇರಿದಂತೆ ಎಲ್ಲ ಹೆಚ್ಚಿನ ತಪಾಸಣೆಗಳು ಹಾಗೂ ನಿರಂತರ ವೈದ್ಯರ ಸೇವೆಯನ್ನು ಒಂದೇ ಕಡೆ ಒದಗಿಸಲಾಗುತ್ತೆ. ರೆಮ್ಡಿಸಿವಿರ್ ಇಂಜೆಕ್ಷನ್ ಸೇರಿದಂತೆ ಎಲ್ಲ ತುರ್ತು ಔಷಧಗಳು ಇಲ್ಲಿನ ರೋಗಿಗಳಿಗೆ ಸದಾ ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ನಾನ್ ಕೋವಿಡ್ ರೋಗಿಗಳ ಚಿಕಿತ್ಸೆ ಮುಂದುವರಿಕೆ ಬಿಎಲ್ಡಿಇ ಆಸ್ಪತ್ರೆಯಲ್ಲಿ 1,100 ಹಾಸಿಗೆಗಳಲ್ಲಿ ಕೊವಿಡ್‍ಗೆ ಕಾಯ್ದಿರಿಸಿದ 500 ಹಾಸಿಗೆಗಳನ್ನು ಹೊರತುಪಡಿಸಿ ಉಳಿದ 600 ಹಾಸಿಗೆಗಳಲ್ಲಿ ನಾನ್ ಕೊವಿಡ್ ರೋಗಿಗಳಿಗೆ ಚಿಕಿತ್ಸೆ ಎಂದಿನಂತೆ ಮುಂದುವರೆದಿದ್ದು, ಡೆಲಿವರಿ, ಮಕ್ಕಳ ಚಿಕಿತ್ಸೆಗಳು, ಶಸ್ತ್ರ ಚಿಕಿತ್ಸೆಗಳು ಯಥಾಸ್ಥಿತಿಯಲ್ಲಿ ನಡೆಯಲಿದೆ. ಸಾಮಾನ್ಯ ವಾರ್ಡಗಳಿಗೆ ದಾಖಲಾಗುವ ಎಲ್ಲ ನಾನ್ ಕೊವಿಡ್ ರೋಗಿಗಳಿಗೆ ಹಾಸಿಗೆ ಶುಲ್ಕ, ಊಟ, ಔಷಧ, ಶಸ್ತ್ರ ಚಿಕಿತ್ಸೆಗಳು ಹಾಗೂ ಸಾಮಾನ್ಯ ತಪಾಸಣೆಗಳು ಸಂಪೂರ್ಣ ಉಚಿತವಾಗಿವೆ. ಇದು ಆಸ್ಪತ್ರೆಯ ಮಕ್ಕಳ ವಿಭಾಗದಿಂದ ಹಿಡಿದು ಎಲ್ಲ ವಿಭಾಗಗಳಲ್ಲಿ ದಾಖಲಾಗುವ ಎಲ್ಲ ಸಾಮಾನ್ಯ ವಿಭಾಗದ ರೋಗಿಗಳಿಗೆ ಅನ್ವಯಿಸುವುದು ಎಂದು ತಿಳಿಸಿದ್ದಾರೆ.

ಇನ್ನು ಏಪ್ರಿಲ್ 21ರಂದು ನಡೆದ ತುರ್ತು ಸಭೆಯಲ್ಲಿ ಉಪಕುಲಪತಿ ಡಾ ಎಂ ಎಸ್ ಬಿರಾದಾರ. ಸಮಕುಲಪತಿ ಡಾ.ಆರ್ ಎಸ್ ಮುಧೋಳ, ಬಿ ಎಂ ಪಾಟೀಲ ವೈದ್ಯಕೀಯ ಕಾಲೇಜು ಪ್ರಾಚಾರ್ಯ ಡಾ. ಅರವಿಂದ ಪಾಟೀಲ್ , ಆಸ್ಪತ್ರೆಯ ಅಧೀಕ್ಷಕ ಡಾ.ರಾಜೇಶ ಹೊನ್ನುಟಗಿ, ಸಂಸ್ಥೆ ಪ್ರಚಾರಾಧಿಕಾರಿ ಡಾ.ಮಹಾಂತೇಶ ಬಿರಾದಾರ ಉಪಸ್ಥಿತರಿದ್ದರು.

ಇದನ್ನೂ ಓದಿ: ಮುಖ್ಯ ನ್ಯಾಯಮೂರ್ತಿಗಳ ಅಧಿಕಾರಾವಧಿ ಮೂರು ವರ್ಷವಾದರೂ ಇರಬೇಕು: ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್