ಬಿಸಿಲ ಕಾವು: ಬೆಳಗಾವಿ, ಕಲಬುರ್ಗಿ ವಲಯದ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಯ ಕೆಲಸದ ಅವಧಿ ಬದಲಾವಣೆ
ಏಪ್ರಿಲ್ 12ರಿಂದ ಮೇ ತಿಂಗಳ ಅಂತ್ಯದವರೆಗೂ ಬೆಳಗ್ಗೆ 8ರಿಂದ ಮಧ್ಯಾಹ್ನ 1.30ರವರೆಗೆ ಮಾತ್ರ ಈ ಜಿಲ್ಲೆಗಳ ರಾಜ್ಯ ಸರ್ಕಾರದ ಕಚೇರಿಗಳು ಕಾರ್ಯನಿರ್ವಹಿಸಲಿವೆ.
ಬೆಳಗಾವಿ: ಬೇಸಿಗೆ ಕಾಲಿಟ್ಟಿರುವ ಕಾರಣ ಬೆಳಗಾವಿ ವಿಭಾಗದ ವಿಜಯಪುರ, ಬಾಗಲಕೋಟೆ, ಕಲಬುರಗಿ ವಿಭಾಗದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳ ರಾಜ್ಯ ಸರ್ಕಾರದ ಕಚೇರಿಗಳ ಕೆಲಸದ ಸಮಯ ಬದಲಾವಣೆ ಮಾಡಲಾಗಿದೆ. ಏಪ್ರಿಲ್ 12ರಿಂದ ಮೇ ತಿಂಗಳ ಅಂತ್ಯದವರೆಗೂ ಬೆಳಗ್ಗೆ 8ರಿಂದ ಮಧ್ಯಾಹ್ನ 1.30ರವರೆಗೆ ಮಾತ್ರ ಈ ಜಿಲ್ಲೆಗಳ ರಾಜ್ಯ ಸರ್ಕಾರದ ಕಚೇರಿಗಳು ಕಾರ್ಯನಿರ್ವಹಿಸಲಿವೆ. ಈ ಭಾಗದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾದ ಕಾರಣ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವುದು ಕಷ್ಟ, ಮತ್ತು ಸಾರ್ವಜನಿಕರಿಗೂ ಬಿಸಿಲಿನ ಬೇಗೆಯಿಂದ ತೊಂದರೆ ಉಂಟಾಗಲಿದೆ ಎಂಬ ಕಾರಣಕ್ಕೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಆದರೆ ತುರ್ತು ಕೆಲಸ ನಿರ್ವಹಿಸುವ ಕಚೇರಿಗಳು ಮತ್ತು ಕೊವಿಡ್ ಸಂಬಂಧಿತ ಕೆಲಸ ಮಾಡುವ ಕಚೇರಿಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಅತ್ತ ಬಿಸಿಲು ಇತ್ತ ಮಳೆ ಇಂದಿನಿಂದ ಏಪ್ರಿಲ್ 10ರ ತನಕ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ತಾಪಮಾನ ಗರಿಷ್ಠ ಮಟ್ಟವನ್ನು ತಲುಪಿದ್ದು, ಜನತೆ ಬೆವರಿ ಬಳಲಿದ್ದಾರೆ. ಸುಡು ಬಿಸಿಲಿಗೆ ಹಿಡಿಶಾಪ ಹಾಕುತ್ತಿರುವವರು ಒಂದು ಮಳೆ ಬರಲಿ ಎಂದು ಕಾಯುತ್ತಿದ್ದಾರೆ. ಹೀಗಾಗಿ ಈಗ ಹವಾಮಾನ ಇಲಾಖೆ ನುಡಿದಿರುವ ಭವಿಷ್ಯ ನಿಜವಾದಲ್ಲಿ ಜನರು ಕೊಂಚ ನಿರಾಳರಾಗಲಿದ್ದಾರೆ.
ಏಪ್ರಿಲ್ 6 ರಂದು ಚಾಮರಾಜನಗರ, ಮೈಸೂರು, ಹಾಸನ, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದ್ದು, ಏಪ್ರಿಲ್ 7 ಹಾಗೂ ಏಪ್ರಿಲ್ 8 ರಂದು ದಕ್ಷಿಣ ಕನ್ನಡ, ಉಡುಪಿ ಮತ್ತು ದಕ್ಷಿಣ ಒಳನಾಡು ಭಾಗದ ಚಾಮರಾಜನಗರ, ಹಾಸನ, ಮೈಸೂರು, ಕೊಡಗು ಭಾಗದಲ್ಲಿ ಮಳೆ ಬೀಳಲಿದೆ ಹಾಗೂ ಏಪ್ರಿಲ್ 9 ರಂದು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕಲಬುರಗಿ, ಬೆಳಗಾವಿ, ಶಿವಮೊಗ್ಗ, ಮೈಸೂರು, ಕೊಡಗು, ಧಾರವಾಡ, ರಾಯಚೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಾರ್ಚ್ ತಿಂಗಳು ಪೂರ್ತಿ ಭಾರತದಲ್ಲಿ ತಾಪಮಾನ ಏರುಗತಿಯಲ್ಲೇ ಸಾಗಿದ್ದು, ಕಳೆದ 121 ವರ್ಷಗಳಲ್ಲಿ ಮಾರ್ಚ್ ತಿಂಗಳಲ್ಲಿ ಮೂರನೇ ಬಾರಿಗೆ ಈ ಪ್ರಮಾಣದ ಉಷ್ಣಾಂಶ ದಾಖಲಾಗಿದೆ ಎಂದು ವರದಿಗಳು ತಿಳಿಸಿವೆ. ಅಂತೆಯೇ ಕಳೆದ 11 ವರ್ಷಗಳಲ್ಲಿ ಇದು ತಿಂಗಳ ಗರಿಷ್ಠ ತಾಪಮಾನವಾಗಿದ್ದು, ಈ ಬಾರಿಯ ಮಾರ್ಚ್ನಲ್ಲಿ ದೇಶದಲ್ಲಿ ಸರಾಸರಿ 32.65 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಇದನ್ನೂ ಓದಿ:ದೆಹಲಿಯಲ್ಲಿ ಕೊವಿಡ್ ಪರಿಸ್ಥಿತಿ ಗಂಭೀರ, ಲಾಕ್ಡೌನ್ ಇದಕ್ಕೆ ಪರಿಹಾರವಲ್ಲ: ಅರವಿಂದ್ ಕೇಜ್ರಿವಾಲ್
ಮೇ 2ನೇ ವಾರದ ವೇಳೆಗೆ ಕೊರೊನಾ ಸೋಂಕು ಹೆಚ್ಚಾಗುವ ಸಾಧ್ಯತೆ: ಆರೋಗ್ಯ ಸಚಿವ ಡಾ.ಕೆ ಸುಧಾಕರ್
(Belagavi and Kalaburagi zone Karnataka state govt office timings changed due to Summer effect)