ಶಿವಾನಂದ ನೀಲಣ್ಣನವರ್​​ ಕಳ್ಳಾಟ ಬಯಲು: ಶಿವಂ ಅಸೋಸಿಯೇಟ್ಸ್​ನಿಂದ 2,110 ಕೋಟಿ ವಂಚನೆ, ಇಡಿ ತನಿಖೆಯಲ್ಲಿ ಬಹಿರಂಗ

Shivanand Neelannavar Case: ಬೆಳಗಾವಿಯ ಶಿವಂ ಅಸೋಸಿಯೇಟ್ ಕಂಪನಿಯಿಂದ ಹೂಡಿಕೆದಾರರಿಗೆ ವಂಚನೆ ಪ್ರಕರಣ ಇಡೀ ಕರ್ನಾಟಕವನ್ನೇ ಬೆಚ್ಚಿಬೀಳಿಸಿದೆ. ಇದೀಗ ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಎಂಟ್ರಿ ಕೊಟ್ಟಿದ್ದು, ತನಿಖೆಯಲ್ಲಿ ಶಿವಂ ಅಸೋಸಿಯೇಟ್ಸ್​ನಿಂದ ಹೂಡಿಕೆದಾರರಿಗೆ 2,110 ಕೋಟಿ ರೂಪಾಯಿ ವಂಚನೆ ಮಾಡಿರುವುದು ಪತ್ತೆಯಾಗಿದೆ.

ಶಿವಾನಂದ ನೀಲಣ್ಣನವರ್​​ ಕಳ್ಳಾಟ ಬಯಲು: ಶಿವಂ ಅಸೋಸಿಯೇಟ್ಸ್​ನಿಂದ 2,110 ಕೋಟಿ ವಂಚನೆ, ಇಡಿ ತನಿಖೆಯಲ್ಲಿ ಬಹಿರಂಗ
ಶಿವಾನಂದ ಸಿದ್ದಪ್ಪ ನೀಲನ್ನವರ್

Updated on: Aug 11, 2026 | 10:12 PM

ಬೆಂಗಳೂರು/ಬೆಳಗಾವಿ, (ಆಗಸ್ಟ್ 11): ಬೆಳಗಾವಿ (Belagavi) ಶಿವಾನಂದ ಸಿದ್ದಪ್ಪ ನೀಲನ್ನವರ್ ಎನ್ನುವರಿಗೆ ಸೇರಿದ ಶಿವಂ ಅಸೋಸಿಯೇಟ್ಸ್ ನಿಂದ (Shivam Associates) ಜನರಿಗೆ ಸಾವಿರಾರು ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಇಡಿ (Enforcement Directorate) ಪ್ರವೇಶ ಮಾಡಿದ್ದು,  ಶಿವಂ ಅಸೋಸಿಯೇಟ್ಸ್ ನಡೆಸಿದ ಕಳ್ಳಾಟವನ್ನು ಪತ್ತೆ ಮಾಡಿದೆ. ಹೌದು…. ಮಂಗಳೂರು ವಲಯ ಇಡಿ ಅಧಿಕಾರಿಗಳು ಬೆಳಗಾವಿ, ಚಿಕ್ಕೋಡಿ ಮತ್ತು ನಿಪ್ಪಾಣಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಈ ವೇಳೆ ಶಿವಾನಂದ ಸಿದ್ಧಪ್ಪ ನೀಲಣ್ಣವರ ಹಾಗೂ ಅವರ ಸಹಚರರು ಸಾರ್ವಜನಿಕರಿಗೆ ತಿಂಗಳಿಗೆ ಶೇಕಡಾ 3ರಷ್ಟು ಬಡ್ಡಿ ನೀಡುವುದಾಗಿ ನಂಬಿಸಿ ಠೇವಣಿ ಸಂಗ್ರಹಿಸಿದ್ದರು ಎಂಬುದು ಇಡಿ ತನಿಖೆಯಿಂದ ಬೆಳಕಿಗೆ ಬಂದಿದೆ. ಅಲ್ಲದೇ ಹೂಡಿಕೆದಾರರಿಗೆ ಬರೋಬ್ಬರಿಗೆ 2,110 ಕೋಟಿ ರೂ. ವಂಚನೆ ಮಾಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.

ಪ್ರಕಟಣೆ ಮೂಲಕ ತಿಳಿಸಿದ ಇಡಿ

ಬೆಳಗಾವಿ ಜಿಲ್ಲೆಯ ಮಾಳಮಾರುತಿ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಆಧಾರದ ಮೇಲೆ ಇಡಿ ಅಧಿಕಾರಿಗಳು, ಶಿವಾನಂದ ಸಿದ್ದಪ್ಪ ನೀಲನ್ನವರ್ ಗೆ ಸೇರಿದ ಹಾಗೂ ಇತರ ಸಂಬಂಧಿತ ವ್ಯಕ್ತಿಗಳು, ಸಂಸ್ಥೆಗಳ ಮೇಲೆ ದಾಳಿ ಮಾಡಿ ತನಿಖೆ ಮಾಡಿದ್ದು, ಆರೋಪಿಗಳು ಹೆಚ್ಚಿನ ಸಂಖ್ಯೆಯ ಹೂಡಿಕೆದಾರರಿಂದ ದೊಡ್ಡ ಮೊತ್ತದ ಹಣ ಸಂಗ್ರಹಿಸಿದ್ದಾರೆ. ವ್ಯವಹಾರಿಕ, ವೈಯಕ್ತಿಕ ಮತ್ತು ಮಧ್ಯವರ್ತಿ ಖಾತೆಗಳ ಮೂಲಕ ಹಣದ ವ್ಯವಹಾರ ನಡೆದಿದೆ. ಷೇರು ದಲ್ಲಾಳಿಗಳು, FD ಖಾತೆಗಳು, ಸಂಬಂಧಿತ ವ್ಯಕ್ತಿಗಳು ಮತ್ತು ಇತರ ಫಲಾನುಭವಿಗಳಿಗೆ ಹಣ ವರ್ಗಾವಣೆ ಆಗಿರುವುದು ಕಂಡುಬಂದಿದೆ. ಈ ಬಗ್ಗೆ ಸ್ವತಃ ಇಡಿ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.

ಇದನ್ನೂ ಓದಿ: ಶಿವಾನಂದ ನೀಲಣ್ಣನವರ್​​ಗೆ ಇಡಿ ಶಾಕ್! ಬೆಳಗಾವಿಯಲ್ಲಿ ಮೂರು ಕಡೆಗಳಲ್ಲಿ ದಾಳಿ

ಶಿವಾನಂದ ಸಿದ್ಧಪ್ಪ ನೀಲಣ್ಣವರ ಹಾಗೂ ಅವರ ಸಹಚರರು ಸಾರ್ವಜನಿಕರಿಗೆ ತಿಂಗಳಿಗೆ ಶೇ.3ರಷ್ಟು ಬಡ್ಡಿ ನೀಡುವುದಾಗಿ ನಂಬಿಸಿ ಒಟ್ಟು 2,110.97 ಕೋಟಿ ಠೇವಣಿ ಸಂಗ್ರಹಿಸಿದ್ದರು. ಆದರೆ, ಸಂಗ್ರಹಿಸಿದ ಮೊತ್ತದಲ್ಲಿ ಹೂಡಿಕೆದಾರರಿಗೆ ಕೇವಲ 333.89 ಕೋಟಿ ರೂಪಾಯಿ ಮಾತ್ರವೇ ಹಿಂದುರಿಗಿಸಿದ್ದಾರೆ. ಇನ್ನುಳಿದ 1,777.08 ಕೋಟಿ ಅಕ್ರಮ ಹಣದ ಸುಳಿವು ಪತ್ತೆಯಾಗಬೇಕಿದೆ. ಆರೋಪಿಗಳು ಸಾರ್ವಜನಿಕರನ್ನು ಸೆಳೆಯಲು ಮಧ್ಯವರ್ತಿಗಳಿಗೆ ಶೇ.0.5ರಷ್ಟು ಕಮಿಷನ್ ನೀಡುತ್ತಿದ್ದರು ಎಂಬ ಅಂಶವನ್ನೂ ಸಹ ಇಡಿ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.

​ಹೂಡಿಕೆದಾರರಿಂದ ಸಂಗ್ರಹಿಸಿದ ಸಾರ್ವಜನಿಕರ ಹಣವನ್ನು ಷೇರು ಮಾರುಕಟ್ಟೆ, ಬ್ಯಾಂಕ್ ನಿಶ್ಚಿತ ಠೇವಣಿಗಳು, ರಿಯಲ್ ಎಸ್ಟೇಟ್ ಹಾಗೂ ನಿಕಟವರ್ತಿಗಳ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಲಾಗಿತ್ತು. ಈ ಜಾಲದಲ್ಲಿ ಶಿವಂ ಅಸೋಸಿಯೇಟ್ಸ್, ಶಿವಾನಂದ ಸಿದ್ಧಪ್ಪ ನೀಲಣ್ಣವರ, ಸುಭಾಷ್ ರಾಮಗೌಡ ನಂದರಗಿ, ಮಹೇಶ್ ಎಸ್.ನೀಲಣ್ಣವರ, ಶಿವಂ ಪ್ರೊಡಕ್ಷನ್ಸ್, ಶಿವಂ ಲೈಫ್‌ಲೈನ್ ಪ್ರೈವೇಟ್ ಲಿಮಿಟೆಡ್ ಮತ್ತು ಶಿವಂ ಸೇವಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳು ಹಾಗೂ ವ್ಯಕ್ತಿಗಳು ನೇರವಾಗಿ ಭಾಗಿಯಾಗಿರುವುದು ಕಂಡುಬಂದಿದೆ.​ ದಾಳಿಯ ಸಂದರ್ಭದಲ್ಲಿ ಅಕ್ರಮ ಹಣಕಾಸು ವಹಿವಾಟು, ಬೇನಾಮಿ ಆಸ್ತಿ ಹೂಡಿಕೆ ಹಾಗೂ ಡಿಜಿಟಲ್ ಸಾಕ್ಷ್ಯಗಳೂ ಸೇರಿದಂತೆ ಹಲವಾರು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us