ಬೆಳಗಾವಿ ಜಿಲ್ಲೆಯಲ್ಲಿ 3 ಮಕ್ಕಳ ಸಾವು ಪ್ರಕರಣ; ನರ್ಸ್ ಮತ್ತು ಫಾರ್ಮಸಿಸ್ಟ್ ಅಮಾನತು, ವೈದ್ಯಾಧಿಕಾರಿಗೆ ನೋಟಿಸ್
ತನಿಖೆಯಲ್ಲಿ ವೈದ್ಯಾಧಿಕಾರಿ ತಪ್ಪು ಕಂಡು ಬಂದರೆ ಅವರ ವಿರುದ್ಧ ಕೂಡ ಕ್ರಮ ಜರಗಿಸುತ್ತೇನೆ. ಮೃತರ ಮಕ್ಕಳ ಕುಟುಂಬಕ್ಕೆ ಪರಿಹಾರ ನೀಡಲು ಮೆಡಿಕಲ್ನಲ್ಲಿ ಪ್ರೋಸಿಜರ್ ಇಲ್ಲ ಎಂದು ಡಿಎಚ್‌ಒ ಶಶಿಕಾಂತ ಮುನ್ಯಾಳ ಹೇಳಿಕೆ ನೀಡಿದ್ದಾರೆ.
ಬೆಳಗಾವಿ: ಜಿಲ್ಲೆಯಲ್ಲಿ ಮೂವರು ಮಕ್ಕಳ ( ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಜವಾಬ್ದಾರಿ ತೋರಿದ್ದ ನರ್ಸ್ (Nurse) ಸಲೀಮಾ ಮಹಾತ್, ಫಾರ್ಮಸಿಸ್ಟ್ (pharmacist) ಜಯರಾಜ್ ಕುಂಬಾರ್ ಅವರನ್ನು ಅಮಾನತು ಮಾಡಲಾಗಿದೆ. ಜಿಲ್ಲಾಸ್ಪತ್ರೆ ಬಿಮ್ಸ್ನಲ್ಲಿ (BIMS) ಮೂರು ಮಕ್ಕಳು ನಿನ್ನೆ (ಜನವರಿ 17) ನಿಗೂಢವಾಗಿ ಮೃತಪಟ್ಟಿದೆ. 13 ತಿಂಗಳ ಮಗು ಪವಿತ್ರಾ ಹುಲಗುರ್, 14 ತಿಂಗಳ ಮಗು ಮಧು ಉಮೇಶ್ ಕುರಗುಂದಿ ಮತ್ತು ಒಂದೂವರೆ ವರ್ಷದ ಚೇತನ ಪೂಜಾರಿ ಎಂಬ ಮಗು ಸಾವನ್ನಪ್ಪಿದೆ. ಸದ್ಯ ಬೆಳಗಾವಿ ಡಿಹೆಚ್‌ಒ ಶಶಿಕಾಂತ ಮುನ್ಯಾಳ ಮಕ್ಕಳ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ವೈದ್ಯಾಧಿಕಾರಿ ತಪ್ಪು ಮಾಡಿದ್ರೆ ಅವರ ವಿರುದ್ಧವೂ ಕ್ರಮ: ಡಿಹೆಚ್‌ಒ ಶಶಿಕಾಂತ ಮುನ್ಯಾಳ
ಲಸಿಕಾಕರಣ ತನಿಖಾಧಿಕಾರಿ ಈಶ್ವರ್ ಗಡಾದ್ ಅವರು ಪ್ರಾಥಮಿಕ ತನಿಖೆ ನಡೆಸಿ ಇಂದು ವರದಿ ನೀಡಿದ್ದಾರೆ. ಈ ವರದಿಯಲ್ಲಿ ಸಿಬ್ಬಂದಿಯ ಬೇಜವಾಬ್ದಾರಿ ಕಂಡು ಬಂದಿದೆ. ಹಾಗಾಗಿ ನರ್ಸ್, ಫಾರ್ಮಸಿಸ್ಟ್ ಅಮಾನತು ಮಾಡಲಾಗಿದೆ. ಇನ್ನೂ ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗೂ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದೇನೆ. ಲಸಿಕಾಕರಣ ಸಂದರ್ಭದಲ್ಲಿ ಮೇಲ್ವಿಚಾರಣೆ ವಹಿಸಬೇಕಿತ್ತು. ಯಾಕೆ ಲಸಿಕಾಕರಣದಲ್ಲಿ ಭಾಗಿಯಾಗಿರಲಿಲ್ಲ ಎಂದು ನೋಟೀಸ್ ನೀಡಿದ್ದೇನೆ. ತನಿಖೆಯಲ್ಲಿ ವೈದ್ಯಾಧಿಕಾರಿ ತಪ್ಪು ಕಂಡು ಬಂದರೆ ಅವರ ವಿರುದ್ಧ ಕೂಡ ಕ್ರಮ ಜರಗಿಸುತ್ತೇನೆ. ಮೃತರ ಮಕ್ಕಳ ಕುಟುಂಬಕ್ಕೆ ಪರಿಹಾರ ನೀಡಲು ಮೆಡಿಕಲ್ನಲ್ಲಿ ಪ್ರೋಸಿಜರ್ ಇಲ್ಲ ಎಂದು ಡಿಎಚ್‌ಒ ಶಶಿಕಾಂತ ಮುನ್ಯಾಳ ಹೇಳಿಕೆ ನೀಡಿದ್ದಾರೆ.
ನರ್ಸ್ ಬೇಜವಾಬ್ದಾರಿ; ತಪ್ಪಿದ ಭಾರಿ ಅನಾಹುತ
ಬೆಳಗಾವಿಯಲ್ಲಿ ಜನವರಿ 12ರಂದು ಭಾರಿ ಅನಾಹುತವೊಂದು ತಪ್ಪಿದೆ. 23 ಕಂದಮ್ಮಗಳನ್ನ ಬೇಜವಾಬ್ದಾರಿಯುತವಾಗಿ ಸಾಲಹಳ್ಳಿ ನರ್ಸ್ ನೋಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಕೆಲಸ ಕಡಿಮೆ ಮಾಡಿಕೊಳ್ಳಲು ಆಸ್ಪತ್ರೆಗೆ ತಾನೂ ಹೋಗದ ನರ್ಸ್ ಆಶಾ ಕಾರ್ಯಕರ್ತೆಯನ್ನ ಕಳುಹಿಸಿದ್ದಾಳೆ. ಫ್ರಿಡ್ಜ್ನಲ್ಲಿ ಅಡುಗೆ ಸಾಮಾಗ್ರಿಗಳ ಪಕ್ಕದಲ್ಲೇ ವ್ಯಾಕ್ಸಿನ್ ಇಟ್ಟಿದ್ದಳು. ನಂತರ ಎರಡು ದಿನಗಳಲ್ಲಿ 23 ಜನ ಮಕ್ಕಳಿಗೆ ವ್ಯಾಕ್ಸಿನೇಷನ್ ಮಾಡಿಸಲಾಗಿದೆ. ಅದೃಷ್ಟವಶಾತ್ 20 ಮಕ್ಕಳು ಯಾವುದೇ ಗಂಭೀರ ಸಮಸ್ಯೆ ಎದುರಿಸಿಲ್ಲ. ಆದರೆ, ಸಿಬ್ಬಂದಿ ಬೇಜವಾಬ್ದಾರಿಗೆ ಮೂರು ಮಕ್ಕಳ ಸಾವು ಸಂಭವಿಸಿದೆ. ಮೂರು ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ರುಬೆಲ್ಲಾ ಲಸಿಕೆ ಪಡೆದ ಆರು ಮಕ್ಕಳಿಗೆ ಪರಿಣಾಮ ಆಗಿದ್ದು ಅದರಲ್ಲಿ ಮೂರು ಮಕ್ಕಳ ಸಾವು ಸಂಭವಿಸಿದೆ. ಸದ್ಯ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಒಂದು ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರಾಮದುರ್ಗ ತಾಲೂಕು ಆಸ್ಪತ್ರೆಯಲ್ಲಿ ಇನ್ನೊಂದು ಮಗು ಚಿಕಿತ್ಸೆ ಪಡೆಯುತ್ತಿದೆ. ಬೆಳಗಾವಿಯಲ್ಲಿ ನರ್ಸ್ ಬೇಜವಾಬ್ದಾರಿಯೇ ಮೂರು ಜೀವ ಬಲಿಪಡೆದಿದೆ ಎಂದು ತಿಳಿದುಬಂದಿದೆ.
ಬೆಳಗಾವಿ ಜಿಲ್ಲೆಯಲ್ಲಿ ಮೂವರು ಮಕ್ಕಳ ಸಾವು ಪ್ರಕರಣ; ತನಿಖೆಗೆ ಇಬ್ಬರು ಹಿರಿಯ ಅಧಿಕಾರಿಗಳ ನೇಮಕ
ಬೆಳಗಾವಿ ಜಿಲ್ಲೆಯಲ್ಲಿ ಮೂವರು ಮಕ್ಕಳ ಸಾವು ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ತನಿಖೆಗೆ ಇಬ್ಬರು ಹಿರಿಯ ಅಧಿಕಾರಿಗಳ ನೇಮಕ ಮಾಡಲಾಗಿದೆ. ಆರೋಗ್ಯ ಸಚಿವ ಡಾ.ಸುಧಾಕರ್ ಸೂಚನೆ ಮೇರೆಗೆ WHO ಅಧಿಕಾರಿ ಡಾ.ಸಿದ್ದಲಿಂಗಯ್ಯ, ಡಾ.ಪ್ರಭು ಬಿರಾದಾರ ನೇಮಕ ಮಾಡಲಾಗಿದೆ. ಇಬ್ಬರು ಅಧಿಕಾರಿಗಳ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯಲಿದೆ. ಬೆಳಗಾವಿ ಆರೋಗ್ಯ ಇಲಾಖೆ ವಿಭಾಗೀಯ ಜಂಟಿ ನಿರ್ದೇಶಕ ಡಾ.ಪ್ರಭು ಬಿರಾದಾರ ತನಿಖೆ ನಡೆಸಲಿದ್ದಾರೆ. ಮಕ್ಕಳಿಗೆ ಲಸಿಕೆ ನೀಡುವ ವೇಳೆ ಮಾರ್ಗಸೂಚಿ ಪಾಲನೆ ಬಗ್ಗೆ ತನಿಖೆ ನಡೆಸಲಿದ್ದಾರೆ. ಕೋಲ್ಡ್ ಚೈನ್ ಬ್ರೇಕ್ ಆದ ಬಗ್ಗೆಯೂ ಅಧಿಕಾರಿಗಳಿಂದ ತನಿಖೆ ನಡೆಯಲಿದೆ. ತನಿಖೆ ನಡೆಸಿ ಎರಡು ದಿನಗಳಲ್ಲಿ ವರದಿ ನೀಡುವಂತೆ ಸೂಚನೆ ಕೊಡಲಾಗಿದೆ.
ಇದನ್ನೂ ಓದಿ: ಬೆಳಗಾವಿಯಲ್ಲಿ 3 ಮಕ್ಕಳ ಸಾವು ಪ್ರಕರಣ: ಇಬ್ಬರು ಅಧಿಕಾರಿಗಳ ಸಸ್ಪೆಂಡ್ಗೆ ಆದೇಶಿಸಿದ ಸಚಿವ ಸುಧಾಕರ್
ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ 3 ಮಕ್ಕಳು ಸಾವು ಪ್ರಕರಣ; ಪ್ರಕರಣದ ಬಗ್ಗೆ ವರದಿ ಕೇಳಿದ ಆರೋಗ್ಯ ಸಚಿವ ಸುಧಾಕರ್
Published On - 6:25 pm, Mon, 17 January 22