ಬೆಳಗಾವಿ ವೈಭವನಗರದ ‘ಲಂಚ ವೈಭವ’ ಮನೆ ಮೇಲೆ ಎಸಿಬಿ ದಾಳಿ; ಡಾಲರ್ ನೋಟುಗಳು ಪತ್ತೆ- ಇದು ಗ್ರೂಪ್ ಸಿ ನೌಕರನ ಮನೆ
ಹೆಸ್ಕಾಂ ಡಿಪಾರ್ಟ್ಮೆಂಟ್ ನಲ್ಲಿ ಲೈನ್ ಮೆಕ್ಯಾನಿಕ್ ಗ್ರೇಡ್ ಕೆಲಸ ಮಾಡುತ್ತಿರುವ ನಾತಾಜಿ ಪಾಟೀಲ್ ಮನೆ, ಕಚೇರಿ ಮೇಲೆ ಎಸಿಬಿ ಎಸ್‌ಪಿ ಬಿಎಸ್ ನೇಮಗೌಡ ನೇತೃತ್ವದಲ್ಲಿ ದಾಳಿ ನಡೆದಿದೆ. ದಾಳಿ ವೇಳೆ ನಾತಾಜಿ ಪಾಟೀಲ್ ಮನೆಯಲ್ಲಿ ಡಾಲರ್ ನೋಟುಗಳು ಪತ್ತೆಯಾಗಿವೆ.
ಬೆಳಗಾವಿ: ರಾಜ್ಯದಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆಗೆ ಮುಂದಾಗಿದ್ದು, ಒಟ್ಟು 60 ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗಾವಿ ಹೆಸ್ಕಾಂ ವಿಭಾಗದ ಗ್ರೂಪ್ ಸಿ ನೌಕರ ನಾತಾಜಿ ಪಾಟೀಲ್ಗೂ ಎಸಿಬಿ ಶಾಕ್ ಕೊಟ್ಟಿದೆ. ಬೆಳಗಾವಿ ನಗರದ ಮನೆ, ಕಚೇರಿ ಸೇರಿ 3 ಕಡೆ ಎಸಿಬಿ ದಾಳಿ ನಡೆಸಿದೆ.
ಹೆಸ್ಕಾಂ ಡಿಪಾರ್ಟ್ಮೆಂಟ್ ನಲ್ಲಿ ಲೈನ್ ಮೆಕ್ಯಾನಿಕ್ ಗ್ರೇಡ್ ಕೆಲಸ ಮಾಡುತ್ತಿರುವ ನಾತಾಜಿ ಪಾಟೀಲ್ ಮನೆ ಕಚೇರಿ ಮೇಲೆ ಎಸಿಬಿ ಎಸ್‌ಪಿ ಬಿಎಸ್ ನೇಮಗೌಡ ನೇತೃತ್ವದಲ್ಲಿ ದಾಳಿ ನಡೆದಿದೆ. ದಾಳಿ ವೇಳೆ ನಾತಾಜಿ ಪಾಟೀಲ್ ಮನೆಯಲ್ಲಿ ಡಾಲರ್ ನೋಟುಗಳು ಪತ್ತೆಯಾಗಿವೆ. ಬೆಳಗಾವಿಯ ವೈಭವನಗರದ ಮನೆ ಮೇಲೆ ಎಸಿಬಿ ದಾಳಿ ನಡೆಸಿ ಪರಿಶೀಲನೆ ಮಾಡುವಾಗ ಅಪಾರ ಪ್ರಮಾಣದ ಆಸ್ತಿ ದಾಖಲೆ, ಹಣ ಪತ್ತೆಯಾಗಿದೆ. ನಾತಾಜಿ ಪಾಟೀಲ್ ಸದ್ಯ ಮನೆಯಲ್ಲೇ ಇದ್ದಾರೆ.
ನಾತಾಜಿ ಪಾಟೀಲ್ ಮನೆಯಲ್ಲಿ ಪ್ಲಾಟಿನಂ ಆಭರಣ ಪತ್ತೆ ನಾತಾಜಿ ಪಾಟೀಲ್ ಮನೆಯಲ್ಲಿ ಬೆಳ್ಳಿ ವಸ್ತು, ಚಿನ್ನದ ಒಡವೆಗಳ ಜತೆ ಪ್ಲಾಟಿನಂ ಆಭರಣಗಳು ಪತ್ತೆಯಾಗಿವೆ. ಹಾಗೂ ಹೆಸ್ಕಾಂ ಇಲಾಖೆಯ ಕೆಲವು ಕಡತಗಳು, ಜಮೀನು ಪತ್ರಗಳು ಸಹ ಪತ್ತೆಯಾಗಿವೆ. ನಾತಾಜಿ ಪಾಟೀಲ್ ವೈಭವ ನಗರದಲ್ಲಿರುವ ತನ್ನ 3 ಅಂತಸ್ತಿನ ಮನೆಗೆ ಲಿಫ್ಟ್ ಅಳವಡಿಸಿದ್ದು ಎಸಿಬಿ ಪ್ರತಿ ಕೋಣೆಗಳನ್ನೂ ಪರಿಶೀಲನೆ ನಡೆಸುತ್ತಿದೆ.
ಇನ್ನು ಬೆಳಗಾವಿ ಜಿಲ್ಲೆಯಲ್ಲಿ ಮೂವರು ಅಧಿಕಾರಿಗಳಿಗೆ ಎಸಿಬಿ ಶಾಕ್ ಕೊಟ್ಟಿದೆ. ನಾತಾಜಿ ಪಾಟೀಲ್ ಸೇರಿ ಮೂವರು ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ರೇಡ್ ನಡೆದಿದೆ. ಆರ್‌ಟಿಒ ಮೋಟಾರು ವೆಹಿಕಲ್ ಇನ್ಸ್‌ಪೆಕ್ಟರ್ ಸದಾಶಿವ ಮರಲಿಂಗಣ್ಣನವರ್ ಮನೆ ಮೇಲೆ ದಾಳಿ ನಡೆದಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿರುವ ಮನೆ ಸೇರಿ ಒಟ್ಟು 6 ಕಡೆ ದಾಳಿ ನಡೆದಿದೆ. ಜೊತೆಗೆ ಸಹಕಾರಿ ಅಭಿವೃದ್ಧಿ ಅಧಿಕಾರಿ ಎ.ಕೆ.ಮಾಸ್ತಿಗೆ ಅವರ ಬೈಲಹೊಂಗಲ ಪಟ್ಟಣದ ಮನೆ ಸೇರಿ 3 ಕಡೆ ದಾಳಿ ನಡೆದಿದೆ.
ಗದಗ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಚೇರಿ ಮೇಲೆ ದಾಳಿ ಗದಗ ಕೃಷಿ ಇಲಾಖೆ ಜಂಟಿ ನಿರ್ದೇಶಕ T.S.ರುದ್ರೇಶಪ್ಪ ಮನೆ, ಕಚೇರಿ ಸೇರಿ 5 ಕಡೆ ಎಸಿಬಿ ದಾಳಿ ನಡೆಸಿದೆ. ಎಸಿಬಿ ಡಿವೈಎಸ್ಪಿ ಲೋಕೇಶ್, ಸಿಪಿಐ ರವೀಂದ್ರ ಕುರಬಗಟ್ಟಿ ನೇತೃತ್ವದಲ್ಲಿ ಗದಗ ನಗರದ ಹುಡ್ಕೋ ಕಾಲೋನಿಯಲ್ಲಿರುವ ಮನೆ, ಕೃಷಿ ಇಲಾಖೆ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿ ಕಡತಗಳ ಪರಿಶೀಲನೆ ನಡೆಸಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ತಣಿಗೆರೆಯ ಮನೆ, ಶಿವಮೊಗ್ಗದಲ್ಲಿರುವ ರುದ್ರೇಶಪ್ಪಗೆ ಸೇರಿದ 2 ಮನೆ ಮೇಲೆ ದಾಳಿ ನಡೆದಿದೆ. 4 ಸೈಟ್, 2 ಮನೆ, 8 ಎಕರೆ ಜಮೀನು ಇರುವ ಬಗ್ಗೆ ಮಾಹಿತಿ ಪತ್ತೆಯಾಗಿದೆ.
ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕಣ್ಣೂರು ಗ್ರಾಮದ ಮನೆಯ ಮೇಲೂ ಎಸಿಬಿ ದಾಳಿ ನಡೆಸಿದೆ. ಸಿದ್ದೇಗೌಡ ಎಂಬುವರಿಗೆ ಸೇರಿದ ಮನೆಯ ಮೇಲೆ ದಾಳಿ ನಡೆದಿದ್ದು ಸಿದ್ದೇಗೌಡ ಹನೂರಿನ ಪಟ್ಟಣದಲ್ಲಿ ಗೌರಿ ಶಂಕರ ಸೇರಿದಂತೆ ಹಲವು ಪ್ರಾಪರ್ಟಿ ಹೊಂದಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲೂ ಎಸಿಬಿ ದಾಳಿ ನಡೆದಿದೆ.ಮಾಳಪ್ಪಲ್ಲಿಯಲ್ಲಿರುವ ಬೆಂಗಳೂರು ನಂದಿನಿ ಡೇರಿಯ ಜನರಲ್ ಮ್ಯಾನೇಜರ್ ಬಿ.ಕೃಷ್ಣಾರೆಡ್ಡಿ ಮನೆ ಮೇಲೆ ರೇಡ್ ಆಗಿದೆ.
ಕಂದಾಯ ನಿರೀಕ್ಷಕನ ಮನೆ ಮೇಲೂ ದಾಳಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಕಂದಾಯ ನಿರೀಕ್ಷಕ ಲಕ್ಷ್ಮೀನರಸಿಂಹಯ್ಯ ಮನೆಯಲ್ಲೂ ACB ದಾಳಿ ನಡೆದಿದೆ. ದೊಡ್ಡಬಳ್ಳಾಪುರದ ತೇರಿನ ಬೀದಿಯಲ್ಲಿನ ಮನೆಯಲ್ಲಿ ಪರಿಶೀಲನೆ ಮುಂದುವರೆದಿದೆ.
ಆಡಳಿತಾಧಿಕಾರಿ L.C.ನಾಗರಾಜ್ ಮನೆ ಮೇಲೆ ಎಸಿಬಿ ದಾಳಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದಲ್ಲಿ ಎಸಿಬಿ ಡಿವೈಎಸ್‌ಪಿ ಪ್ರಮೋದ್ ನೇತೃತ್ವದಲ್ಲಿ ಸಕಾಲ ಆಡಳಿತಾಧಿಕಾರಿ L.C.ನಾಗರಾಜ್ ಮನೆ ಮೇಲೆ ರೇಡ್ ಆಗಿದೆ. ಜೊತೆಗೆ L.C.ನಾಗರಾಜ್ ಆಪ್ತ ನಂದೀಶ್ ಮನೆಯಲ್ಲೂ ತಲಾಷ್ ನಡೆಯುತ್ತಿದೆ. 1 ಡಿವೈಎಸ್ಪಿ, 2 ಇನ್ಸ್‌ಪೆಕ್ಟರ್, ಸೇರಿದಂತೆ 8 ಸಿಬ್ಬಂದಿ ತಂಡ ಎರಡು ಜೀಪ್‌ನಲ್ಲಿ ಬಂದಿದ್ದು ಚಿನ್ನಾಭರಣ, ಹಣ ಅಸ್ತಿ ವಿವರ ಪಡೆಯುತ್ತಿದ್ದಾರೆ.
ಜಿ.ವಿ.ಗಿರಿಗೆ ಸೇರಿದ 3 ಸ್ಥಳಗಳಲ್ಲಿ 3 ತಂಡಗಳಿಂದ ದಾಳಿ ಬೆಂಗಳೂರಿನ ಮತ್ತೊಂದು ಮನೆಯ ಮೇಲೆ ಎಸಿಬಿ ದಾಳಿ ನಡೆದಿದೆ. ಬಿಬಿಎಂಪಿ ಗ್ರೂಪ್ ಡಿ ನೌಕರ ಜಿ.ವಿ.ಗಿರಿಗೆ ಸೇರಿದ 3 ಸ್ಥಳಗಳಲ್ಲಿ 3 ತಂಡಗಳಿಂದ ಒಟ್ಟು 21 ಅಧಿಕಾರಿಗಳಿಂದ ದಾಳಿ ನಡೆದಿದೆ. ಬಾಗಲಗುಂಟೆ ಬಳಿಯ ಬಿಟಿಎಸ್ ಲೇಔಟ್ ನಿವಾಸ, ಸೌಂದರ್ಯ ಲೇಔಟ್‌ನಲ್ಲಿರುವ ಸಂಬಂಧಿ ಮನೆ ಮೇಲೆ ರೇಡ್ ಮಾಡಲಾಗಿದೆ.
ಡಿ ಗ್ರೂಪ್ ನೌಕರ ಜಿ.ವಿ.ಗಿರಿ ನಿವಾಸಕ್ಕೆ ಖಾಸಗಿ ಆಸ್ಪತ್ರೆ ಸಿಬ್ಬಂದಿ ಆಗಮಿಸಿದ್ದು ಗಿರಿ ರಕ್ತ ಪರೀಕ್ಷೆಗೆ ಮುಂದಾಗಿದ್ದಾರೆ. ಇನ್ನು ರಾಜ್ಯದಲ್ಲಿ ಇಂದು ಎಸಿಬಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಬರೋಬ್ಬರಿ 6 ಕೆಜಿ ಚಿನ್ನದ ಬಿಸ್ಕೆಟ್ ಪತ್ತೆಯಾಗಿದೆ ಎಂದು ಟಿವಿ9ಗೆ ಎಸಿಬಿ ಮೂಲಗಳಿಂದ ಮಾಹಿತಿ ಸಿಕ್ಕಿದೆ.
Published On - 9:25 am, Wed, 24 November 21