ಅಪಘಾತ: ಲಕ್ಷ್ಮೀ ಹೆಬ್ಬಾಳ್ಕರ್​ ಸರ್ಕಾರಿ ಕಾರು ಚಾಲಕನ ವಿರುದ್ಧ ಕೇಸ್ ಬುಕ್

| Updated By: ರಮೇಶ್ ಬಿ. ಜವಳಗೇರಾ

Updated on: Jan 14, 2025 | 5:25 PM

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಕ್ಳರ್​ ಕಾರು ಅಪಘಾತಕ್ಕೀಡಾಗಿದ್ದು, ಈ ಸಂಬಂಧ ಹೆಬ್ಬಾಳ್ಕರ್​​ ಸರ್ಕಾರಿ ಕಾರು ಚಾಲಕನ ವಿರುದ್ಧ ದೂರು ದಾಖಲಾಗಿದೆ. ಜೀವಕ್ಕೆ ಕುತ್ತು ತುರುವ ಹಾಗೂ ನಿಷ್ಕಾಳಜಿ ವಾಹನ ಚಾಲನೆ, ಅಜಾಗರುತೆಯಿಂದ ವಾಹನ ಚಾಲನೆ ಕಲಂಗಳಲ್ಲಿ ಬೆಳಗಾವಿಯ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ: ಲಕ್ಷ್ಮೀ ಹೆಬ್ಬಾಳ್ಕರ್​ ಸರ್ಕಾರಿ ಕಾರು ಚಾಲಕನ ವಿರುದ್ಧ ಕೇಸ್ ಬುಕ್
ಹೆಬ್ಬಾಳ್ಕರ್​ ಸರ್ಕಾರಿ ಕಾರು ಚಾಲಕನ ವಿರುದ್ಧ ಕೇಸ್ ಬುಕ್
Follow us on

ಬೆಳಗಾವಿ, (ಜನವರಿ 14): ಸಚಿವೆ ಲಕ್ಷ್ಮೀ ಹೆಬ್ಬಾಕ್ಳರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಇಂದು (ಜನವರಿ 14) ಸಂಕ್ರಾಂತಿ ಹಬ್ಬದ ದಿನವೇ ಬೆಳಗಾವಿಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದ ಬಳಿ ನಾಯಿಗಳು ಅಡ್ಡಬಂದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದು, ಹೆಬ್ಬಾಳ್ಕರ್​ ಗಾಯಗಳಾಗಿವೆ. ಇನ್ನು ಈ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​​ ಸರ್ಕಾರಿ ಕಾರು ಚಾಲಕನ ವಿರುದ್ಧ ದೂರು ದಾಖಲಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್​ ಗನ್​ಮ್ಯಾನ್ ಈರಪ್ಪ ಹುಣಶಿಕಟ್ಟಿ ದೂರಿನ ಮೇರೆಗೆ ಕಾರು ಚಾಲಕ ಜಿ.ಶಿವಪ್ರಸಾದ್ ವಿರುದ್ಧ ಕಿತ್ತೂರು ಠಾಣೆಯಲ್ಲಿ 281, 125ಎ, 125ಬಿ ಅಡಿ ಪ್ರಕರಣ ದಾಖಲಾಗಿದೆ.

ಜೀವಕ್ಕೆ ಕುತ್ತು ತುರುವ ಹಾಗೂ ನಿಷ್ಕಾಳಜಿ ವಾಹನ ಚಾಲನೆ, ಅಜಾಗರುತೆಯಿಂದ ವಾಹನ ಚಾಲನೆ ಕಲಂಗಳಲ್ಲಿ ಬೆಳಗಾವಿಯ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಪಘಾತ ಸ್ಥಳಕ್ಕೆ ಕಿತ್ತೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಕಾರು ಚಾಲಕನ ಹೇಳಿಕೆ ದಾಖಲಿಸಿಕೊಂಡು ಬಿಟ್ಟು ಕಳುಹಿಸಿದ್ದಾರೆ.

ಇದನ್ನೂ ಓದಿ: ಚಿತ್ರಗಳು: ಕಾರಿನ ಸ್ಥಿತಿ ನೋಡಿದ್ರೆ ಲಕ್ಷ್ಮೀ ಹೆಬ್ಬಾಳ್ಕರ್​ ಬದುಕುಳಿದಿದ್ದೇ ಪವಾಡ..!

ಕಿತ್ತೂರು ಠಾಣೆ ಸಿಪಿಐ ಮತ್ತು ಪಿಎಸ್ಐ ಅಪಘಾತ ನಡೆದ ಸ್ಥಳಕ್ಕೆ ಸ್ಥಳಕ್ಕೆ ಭೇಟಿ ನೀಡಿದ್ದು, ನಾಯಿ ಅಡ್ಡ ಬಂದಿದ್ದಕ್ಕೆ ಸಚಿವೆ ಹೆಬ್ಬಾಳ್ಕರ್ ಕಾರು ಅಪಘಾತ ಆಯ್ತಾ? ಅಥವಾ ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದ್ಯಾ ಎನ್ನುವ ಪರಿಶೀಲನೆ ನಡೆಸಿದ್ದಾರೆ.

ಇನ್ನು ಮರಕ್ಕೆ ಗುದ್ದಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿರುವ ಇನ್ನೋವಾ ಕಾರನ್ನು ಸದ್ಯ ಶೋರೂಮ್​ಗೆ ಶಿಫ್ಟ್ ಮಾಡಲಾಗಿದೆ. ಪೊಲೀಸರು ಸ್ಥಳ ಮಹಜರಿಗೂ ಮೊದಲೇ ಕಾರನ್ನು ಬೆಳಗಾವಿ ಹೊರ ವಲಯದಲ್ಲಿರುವ ಶೋರೂಮ್​ಗೆ ಶಿಫ್ಟ್ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಮೊದ್ಲೇ ಭವಿಷ್ಯ ಹೇಳಿದ್ರು: ಕಾರು ಅಪಘಾತದ ಸತ್ಯ ಬಿಚ್ಚಿಟ್ಟ ಸಹೋದರ ಚನ್ನರಾಜ

ಕೇಸ್ ದಾಖಲಾಗಿ ಬಳಿಕ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಮಹಜರು ಮಾಡುವುದು ಪ್ರಕ್ರಿಯೆ. ಬಳಿಕ ಕಾರನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಬೇಕು. ಬಳಿಕ ತನಿಖೆ ಪೂರ್ಣಗೊಂಡ ನಂತರ ಮಾಲೀಕರಿಂದ ಮಾಹಿತಿ ಹಾಗೂ ದಾಖಲೆಗಳನ್ನು ಪಡೆದುಕೊಂಡ ಬಳಿಕ ಕಾರನ್ನು ಪೊಲೀಸರು ಹಸ್ತಾಂತರಿಸಬೇಕು. ಆದ್ರೆ, ಕೇಸ್ ದಾಖಲಾಗುವುದಕ್ಕೂ ಮೊದಲೇ ಕಾರನ್ನು ಶೋರಮ್​ಗೆ ಶಿಫ್ಟ್ ಮಾಡಲಾಗಿದೆ.

ಇನ್ನು ಅಪಘಾತದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​​ಗೆ ಗಂಭೀರ ಗಾಯಗಳಾಗಿವೆ. ಆದ್ರೆ, ಪ್ರಾಣಾಪಯಾದಿಂದ ಪಾರಾಗಿದ್ದಾರೆ. ಅವರ ಬೆನ್ನು ಮೂಳೆಗಳಿಗೆ ಏಟು ಬಿದ್ದಿದ್ದು, ಸದ್ಯ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ