ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ ಘಟನೆ: ಟ್ರಕ್ ಚಾಲಕನ ವಿರುದ್ಧ ಹಿಟ್ ಅಂಡ್ ರನ್ ಕೇಸ್ ದಾಖಲು
Lakshmi Hebbalkar car accident case updates: ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸರ್ಕಾರಿ ಕಾರು ಅಪಘಾತ ಘಟನೆ ಸಂಬಂಧ ಟ್ರಕ್ ಚಾಲಕನೊಬ್ಬನ ವಿರುದ್ಧ ದೂರು ದಾಖಲಾಗಿದೆ. ಸಚಿವೆಯ ಕಾರನ್ನು ಚಲಾಯಿಸುತ್ತಿದ್ದ ಚಾಲಕ ಶಿವಪ್ರಸಾದ್ ಅವರು ಕಿತ್ತೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮುಂದೆ ಸಾಗುತ್ತಿದ್ದ ಟ್ರಕ್ ಏಕಾಏಕಿ ಎಡಬದಿಗೆ ಬಂದು ಕಾರನ್ನು ತಾಗಿಸಿದ ಪರಿಣಾಮ ಈ ಅಪಘಾತವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬೆಳಗಾವಿ, ಜನವರಿ 15: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾದ ಘಟನೆ ಸಂಬಂಧ ನಿನ್ನೆ ಕಾರು ಚಾಲಕನ ವಿರುದ್ಧ ದೂರು ದಾಖಲಾಗಿತ್ತು. ಅದರ ಬೆನ್ನಲ್ಲೇ ಇದೇ ಸರ್ಕಾರಿ ಚಾಲಕನು ಟ್ರಕ್ ವಾಹನ ಚಾಲಕನ ವಿರುದ್ಧ ದೂರು ನೀಡಿದ್ದಾರೆ. ಟ್ರಕ್ ಚಾಲಕ ತಮ್ಮನ್ನು ಓವರ್ಟೇಕ್ ಮಾಡುವ ಪ್ರಯತ್ನದಲ್ಲಿ ಕಾರಿಗೆ ಗುದ್ದಿದ ಪರಿಣಾಮ ಈ ಅಪಘಾತವಾಗಿದೆ ಎಂದು ಕಾರಿನ ಚಾಲಕ ಜಿ. ಶಿವಪ್ರಸಾದ್ ಅವರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಬಿಎನ್ಎಸ್ ಕಾಯ್ದೆ ಅಡಿ 281, 125ಎ, 125 ಬಿ, ಹಾಗೂ ಭಾರತೀಯ ಮೋಟಾರು ವಾಹನ ಕಾಯ್ದೆಯಡಿ 134, 187 ಅಡಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ದೂರಿನಲ್ಲಿರುವ ಮಾಹಿತಿ ಪ್ರಕಾರ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪ್ರಯಾಣಿಸುತ್ತಿದ್ದ ಕಾರಿನ ಮುಂದಿದ್ದ ಟ್ರಕ್ ಚಾಲಕನ ಅಜಾಗರೂಕ ಚಾಲನೆ ಈ ಘಟನೆಗೆ ಕಾರಣವಾಗಿದೆ. ಯಾವುದೇ ಸೂಚನೆ ಇಲ್ಲದೇ ಟ್ರಕ್ ಎಡಬದಿಗೆ ಬಂದಿದ್ದರಿಂದ ಅದು ಇನ್ನೋವಾ ಹೈಕ್ರಾಸ್ ಕಾರಿಗೆ ತಾಗಿಸಿದೆ. ಇದರಿಂದ ಈ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರವೊಂದಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಇದನ್ನೂ ಓದಿ: ಲಕ್ಷ್ಮೀ ಹೆಬ್ಬಾಳ್ಕರ್ ಸರ್ಕಾರಿ ಕಾರು ಚಾಲಕನ ವಿರುದ್ಧ ಕೇಸ್ ಬುಕ್
‘ನಾನು ಸಚಿವರ ಸರ್ಕಾರಿ ಕಾರು ಚಲಾಯಿಸುತ್ತಿದ್ದೆ. ಬೆಂಗಳೂರಿನಿಂದ ಬೆಳಗಾವಿಗೆ ಹೋಗುತ್ತಿದ್ದೆವು. ಕಾರಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ, ಸಚಿವರ ಅಂಗರಕ್ಷಕ ಈರಪ್ಪ ಹುಣಶಿಕಟ್ಟಿ ಇದ್ದರು. ಕಿತ್ತೂರು ತಾಲೂಕಿನ ಅಂಬಡಗಟ್ಟಿ ಕ್ರಾಸ್ ಬಳಿಯ ಧಾರವಾಡ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿ 48ರ ಮೇಲಿದ್ದೆವು. ನಮ್ಮ ಮುಂದೆ ಲೇನ್ 1ರಲ್ಲಿ ಕಂಟೇನರ್ ಟ್ರಕ್ ಹೋಗುತ್ತಿತ್ತು. ಅದರ ಚಾಲಕ ಯಾವುದೇ ಮುನ್ಸೂಚನೆ ಕೊಡದೆ ಎಡಬದಿಗೆ ಬಂದನು. ಕಾರನ್ನು ಎಡಬದಿಗೆ ತೆಗೆದುಕೊಂಡರೂ ಅದರ ಬಲಬದಿಗೆ ಟ್ರಕ್ ತಾಗಿದೆ. ಕಾರು ನಿಯಂತ್ರಣ ತಪ್ಪಿ ಸರ್ವಿಸ್ ರಸ್ತೆಯಲ್ಲಿದ್ದ ಮರಕ್ಕೆ ಢಿಕ್ಕಿ ಹೊಡೆದಿದೆ’ ಎಂದು ಎಫ್ಐಆರ್ನಲ್ಲಿ ಕಾರು ಚಾಲಕ ಆರೋಪಿಸಿದ್ದಾರೆ.
ಟ್ರಕ್ ಚಾಲಕ ಅಪಘಾತ ಮಾಡಿದರೂ ವಾಹನ ನಿಲ್ಲಿಸದೇ ಹೋಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಿನ್ನೆ ಬಂದ ವರದಿಗಳ ಪ್ರಕಾರ ಕಾರಿಗೆ ನಾಯಿ ಅಡ್ಡ ಬಂದು, ಅದನ್ನು ತಪ್ಪಿಸಲು ಹೋಗಿ ಅಪಘಾತವಾಯಿತು ಎಂಬ ಮಾಹಿತಿ ಇತ್ತು. ಆದರೆ, ಎಫ್ಐಆರ್ನಲ್ಲಿ ಕಾರಿನ ಚಾಲಕ ನಾಯಿ ಅಡ್ಡ ಬಂದದ್ದರ ಬಗ್ಗೆ ಏನೂ ಉಲ್ಲೇಖಿಸಿಲ್ಲ.
ಇದನ್ನೂ ಓದಿ: ಮೊದ್ಲೇ ಭವಿಷ್ಯ ಹೇಳಿದ್ರು: ಕಾರು ಅಪಘಾತದ ಸತ್ಯ ಬಿಚ್ಚಿಟ್ಟ ಸಹೋದರ ಚನ್ನರಾಜ
ಬೆಳಗ್ಗೆ 5 ಗಂಟೆಗೆ ಅಪಘಾತ
ಕಿತ್ತೂರಿನ ಅಂಬಡಗಟ್ಟಿ ಗ್ರಾಮದ ಬಳಿ ರಾ.ಹೆ. 48ರಲ್ಲಿ ನಿನ್ನೆ ಸಂಕ್ರಾಂತಿ ಹಬ್ಬದ ದಿನದಂದು ಬೆಳ್ಳಂಬೆಳಗ್ಗೆಯೇ ಭೀಕರ ಕಾರು ಅಪಘಾತವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗಂಭೀರವಾಗಿ ಗಾಯಗೊಂಡ ದುರ್ಘಟನೆಯ ಸುದ್ದಿ ಬಂದಿತ್ತು. ಸಚಿವೆಗೆ ಗಾಯಗಳಾದರೂ ಅದೃಷ್ಟಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದರು. ಅವರ ಬೆನ್ನುಮೂಳೆ ಮುರಿದಿದೆ.
ಲಕ್ಷ್ಮೀ ಹೆಬ್ಬಾಳ್ಕರ್ ಅವರ ಗನ್ಮ್ಯಾನ್ ಆದ ಈರಪ್ಪ ಹುಣಶಿಕಟ್ಟಿ ಅವರು ಕಾರು ಚಾಲಕ ಜಿ. ಶಿವಪ್ರಸಾದ್ ವಿರುದ್ಧ ಇದೇ ಕಿತ್ತೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅಜಾಗರೂಕ ಮತ್ತು ನಿಷ್ಕಾಳಜಿ ವಾಹನ ಚಾಲನೆ ಮಾಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ