ಮಗಳಿಗೆ ಸಂಕ್ರಾಂತಿ ಹಬ್ಬದ ಬುತ್ತಿ ಕೊಡಲು ಬಂದ ಅತ್ತೆಯನ್ನೇ ಕೊಂದ ಅಳಿಯ, ಕಾರಣವೇನು?
ಸಂಕ್ರಾಂತಿ ಹಬ್ಬ ಹಿನ್ನೆಲೆಯಲ್ಲಿ ಮಹಿಳೆ ತನ್ನ ಮಗಳಿಗೆ ಬುತ್ತಿ ಕೊಡಲು ಬಂದಿದ್ದಾಳೆ. ಆದ್ರೆ, ಈ ವೇಳೆ ಅಳಿಯ ಅತ್ತೆಯನ್ನೇ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ. ಮಗಳಿಗೆ ಎಣ್ಣು ಬೆಲ್ಲದ ಜೊತೆಗೆ ಹಬ್ಬದ ಊಟ ತೆಗೆದುಕೊಂಡು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಹಬ್ಬದ ಸಂಭ್ರಮದ ಬದಲು ಮನೆಯಲ್ಲಿ ಸೂತಕದ ವಾತಾವರಣ ಆವರಿಸಿದೆ. ಎಳ್ಳು ಬೆಲ್ಲ ಕೊಡಲು ಬಂದಿದ್ದ ಅತ್ತೆಯನ್ನು ಅಳಿಯ ಕೊಂದಿದ್ಯಾಕೆ? ಎನ್ನುವ ವಿವರ ಇಲ್ಲಿದೆ.
ಬೆಳಗಾವಿ, (ಜನವರಿ 14): ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ತರಹೇವಾರಿ ಅಡುಗೆ ಮಾಡಿಕೊಂಡು ಬುತ್ತಿ ಕಟ್ಟಿಕೊಂಡು ಮಗಳಿಗೆ ಕೊಡಲು ಬಂದಿದ್ದ ಅತ್ತೆಯನ್ನು ಅಳಿಯನೇ (ಮಗಳ ಗಂಡ) ಕೊಲೆ ಮಾಡಿದ್ದಾನೆ. ಸುಗ್ಗಿ ಕಾಲದ ಹಬ್ಬದಲ್ಲಿ ಮನೆಯಲ್ಲಿ ಸಂಭ್ರಮದ ಬದಲು ಸೂತಕ ಆವರಿಸಿದೆ. ಬೆಳಗಾವಿ ನಗರದ ಖಾಸಬಾಗ್ನಲ್ಲಿ ಈ ದುರ್ಘಟನೆ ನಡೆದಿದೆ. ಬೆಳಗಾವಿ ಕಲ್ಯಾಣ ನಗರದ ನಿವಾಸಿ ರೇಣುಕಾ ಶ್ರೀಧರ ಪದಮುಕಿ(43) ಕೊಲೆಯಾದ ಮಹಿಳೆ. ಮಲ್ಲಪ್ರಭಾ ನಗರದ ಶುಭಂ ದತ್ತಾ ಬಿರ್ಜೆ(24) ಕೊಲೆ ಮಾಡಿದ ಆರೋಪಿ.
ರೈತ ಗಲ್ಲಿಯಲ್ಲಿ ಬಾಡಿಗೆ ಮನೆಯಲ್ಲಿ ಮಗಳು ಛಾಯಾ, ಅಳಿಯ ಶುಭಂ ಜೊತೆ ವಾಸವಾಗಿದ್ದರು. ಕಳೆದ 7 ತಿಂಗಳ ಹಿಂದೆ ಅಷ್ಟೇ ಇವರ ಮದುವೆ ಆಗಿತ್ತು. ಇಂದು(ಜನವರಿ 14) ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಮಗಳಿಗೆ ಎಳ್ಳು ಬೆಲ್ಲದ ಜೊತೆ ಸಂಕ್ರಾಂತಿ ಹಬ್ಬದೂಟ ಕೊಡುವುದಕ್ಕೆ ಅವರ ತಾಯಿ ಮನೆಗೆ ಬಂದಿದ್ದರು. ಆದ್ರೆ, ಈ ವೇಳೆ ಹಣ ಕೊಡಲಿಲ್ಲವೆಂದು ಮಗಳ ಗಂಡನೇ ಅತ್ತೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಇದನ್ನೂ ಓದಿ: ಚಿತ್ರಗಳು: ಕಾರಿನ ಸ್ಥಿತಿ ನೋಡಿದ್ರೆ ಲಕ್ಷ್ಮೀ ಹೆಬ್ಬಾಳ್ಕರ್ ಬದುಕುಳಿದಿದ್ದೇ ಪವಾಡ..!
ತನ್ನ ಹೆಂಡತಿ ಚಿಕಿತ್ಸೆಗೆ ಖರ್ಚಾಗಿದ್ದ ಹಣ ನೀಡು ಎಂದು ಪೀಡಿಸುತ್ತಿದ್ದ. ಅದರಂತೆ ಇಂದು ಮನೆಗೆ ಬಂದಿದ್ದ ಅತ್ತೆಗೆ ಹಣ ನೀಡುವಂತೆ ಕೇಳಿದ್ದಾನೆ. ಈ ವೇಳೆ ಹಣ ಕೊಡುವುದಿಲ್ಲ ಅಂದಿದ್ದಕ್ಕೆ ಗಲಾಟೆ ಮಾಡಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಗಲಾಟೆ ವಿಕೋಪಕ್ಕೆ ಹೋಗಿದ್ದು, ಮೊದಲೇ ಮಧ್ಯ ಸೇವಿಸಿದ್ದ ಶುಭಂ ಬಿರ್ಜೆ ಏಕಾಏಕಿ ಅತ್ತೆಗೆ ಚಾಕುವಿನಿಂದ ಇರಿದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ರೇಣುಕಾ ತೀವ್ರ ರಕ್ತ ಸ್ರಾವವಾಗಿ ಮನೆಯಲ್ಲೇ ಪ್ರಾಣ ಬಿಟ್ಟಿದ್ದಾಳೆ.
ಘಟನಾ ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್ ಭೇಟಿ ನೀಡಿದ್ದು, ಪರಿಶೀಲಿಸಿದ್ದಾರೆ. ಮರಣೋತ್ತರ ಪರೀಕ್ಷೆಗೆ ಬೆಳಗಾವಿ ಬಿಮ್ಸ್ ಶವಾಗಾರಕ್ಕೆ ಮೃತದೇಹವನ್ನು ರವಾನಿಸಲಾಗಿದೆ. ಶಹಾಪುರ ಪೊಲೀಸ್ ಠಾಣೆ ಪೊಲೀಸರು ಆರೋಪಿ ಶುಭಂ ಬಿರ್ಜೆ ಹಾಗೂ ಅವರ ತಂದೆ-ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.
ಡಿಸಿಪಿ ರೋಹಣ ಜಗದೀಶ್ ಹೇಳಿದ್ದೇನು?
ಘಟನೆ ಸಂಬಂಧ ಡಿಸಿಪಿ ರೋಹಣ ಜಗದೀಶ್ ಪ್ರತಿಕ್ರಿಯಿಸಿದ್ದು, ಛಾಯಾ ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ರೇಣುಕಾ ಪದೇ ಪದೆ ತಕರಾರು ಮಾಡುತ್ತಿದ್ದರು. ಸಂಕ್ರಾಂತಿ ಹಬ್ಬದ ಕಾರಣ ರೇಣುಕಾ ಅವರು ಮಗಳಿಗೆ ಬುತ್ತಿ ಕೊಡಲು ಬಂದಿದ್ದರು. ಈ ವೇಳೆ ಅತ್ತೆ ಮತ್ತು ಅಳಿಯನ ನಡುವೆ ಮಾತಿಗೆ ಮಾತು ಬೆಳೆದು, ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಬಳಿಕ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ರೇಣುಕಾ ಅವರ ತೊಡೆಗೆ ಚುಚ್ಚಿದ್ದಾನೆ ಎಂದು ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ