IPL ಹೆಸರಿನಲ್ಲಿ ಬೆಳಗಾವಿಯ ಕ್ರಿಕೆಟ್ ಪಟುವಿಗೆ ಪಂಗನಾಮ: ರಾಜಸ್ಥಾನ ರಾಯಲ್ಸ್​ಗೆ ಆಯ್ಕೆ ಮಾಡುವುದಾಗಿ 23 ಲಕ್ಷ ರೂ. ವಂಚನೆ

ಬೆಳಗಾವಿಯ ಯುವ ಕ್ರಿಕೆಟ್ ಪಟುವಿಗೆ ಐಪಿಎಲ್ ಹೆಸರಿನಲ್ಲಿ ವಂಚನೆ ಎಸಗಲಾಗಿದೆ. ರಾಜಸ್ಥಾನ ರಾಯಲ್ಸ್ ತಂಡಕ್ಕೆ ಆಯ್ಕೆ ಮಾಡುವುದಾಗಿ 23 ಲಕ್ಷ ರೂ. ಪಂಗನಾಮ ಹಾಕಲಾಗಿದೆ. ಸದ್ಯ IPL ಹೆಸರಿನಲ್ಲಿ ವಂಚನೆ ಮಾಡಿದ ಸೈಬರ್ ವಂಚಕರ ಪತ್ತೆಗೆ ಬೆಳಗಾವಿ ಜಿಲ್ಲಾ ಸಿಇಎನ್ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಸರ್ಕಾರ, ಪೊಲೀಸ್ ಇಲಾಖೆ ಎಷ್ಟೇ ಜನಜಾಗೃತಿ ಮೂಡಿಸಿದರೂ ಸೈಬರ್ ವಂಚನೆಗೆ ಬಲಿಯಾಗುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ.

IPL ಹೆಸರಿನಲ್ಲಿ ಬೆಳಗಾವಿಯ ಕ್ರಿಕೆಟ್ ಪಟುವಿಗೆ ಪಂಗನಾಮ: ರಾಜಸ್ಥಾನ ರಾಯಲ್ಸ್​ಗೆ ಆಯ್ಕೆ ಮಾಡುವುದಾಗಿ 23 ಲಕ್ಷ ರೂ. ವಂಚನೆ
ಸಾಂದರ್ಭಿಕ ಚಿತ್ರ
Updated By: Ganapathi Sharma

Updated on: May 23, 2025 | 10:38 AM

ಬೆಳಗಾವಿ, ಮೇ 23: ಐಪಿಎಲ್ (IPL) ಟೂರ್ನಿಯಲ್ಲಿ ಕ್ರಿಕೆಟ್ ಆಡಬೇಕೆಂದು ಆಸೆ ಹೊತ್ತ ಯುವ ಕ್ರಿಕೆಟರ್ ಈಗ ಇನಸ್ಟಾಗ್ರಾಮ್​​ನಲ್ಲಿ ಬಂದ ಒಂದೇ ಒಂದು ಮೆಸೇಜ್​ನಿಂದಾಗಿ 23ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದಾನೆ. ಬೆಳಗಾವಿ (Belagavi) ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದ ರಾಕೇಶ್ ಯಡುರೆ (19) ಹಣ ಕಳೆದುಕೊಂಡ ಕ್ರಿಕೆಟಿಗ. ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಡುತ್ತಿದ್ದ ರಾಕೇಶಗೂ ಎಲ್ಲರಂತೆ ಐಪಿಎಲ್ ಆಡಬೇಕೆಂಬ ಮಹದಾಸೆಯಿತ್ತು. ಜತೆಗೆ ಆತನಲ್ಲಿ ಪ್ರತಿಭೆ ಕೂಡ ಇತ್ತು. ಆತ 2024ರ ಮೇ ತಿಂಗಳಲ್ಲಿ ಹೈದರಾಬಾದ್​​ನಲ್ಲಿ ನಡೆದಿದ್ದ ರಾಜ್ಯ‌ ಮಟ್ಟದ ಕ್ರಿಕೆಟ್ ಪಂದ್ಯವೊಂದರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಬಂದಿದ್ದ. ಬಳಿಕ ರೈಸಿಂಗ್ ಭಾರತ್ ಕ್ರಿಕೆಟ್ ಲಿಗ್ ಟೂರ್ನಿಯ ಆಯ್ಕೆಯ ಟ್ರೈಯಲ್​​ನಲ್ಲಿ ಭಾಗಿಯಾಗಿದ್ದ. ಆಗ ನಡೆದ ಪಂದ್ಯಾವಳಿ ಸಂದರ್ಭದಲ್ಲಿ ಕ್ರಿಕೆಟ್ ಸಮಿತಿ ಆಯ್ಕೆಗಾರರು ಬಂದಿದ್ದರು ಎನ್ನಲಾಗಿದೆ. ಚೆನ್ನಾಗಿಯೇ ಆಡಿ ಮನೆಗೆ ಬಂದಿದ್ದ ರಾಕೇಶನಿಗೆ ನಾಲ್ಕು ತಿಂಗಳ ಬಳಿಕ ಇನ್​ಸ್ಟಾಗ್ರಾಂನಲ್ಲಿ ಬಂದ ಸಂದೇಶವೇ ಮುಳುವಾಗಿದೆ.

ಇನ್​ಸ್ಟಾಗ್ರಾಂನಲ್ಲಿ (Sushant_srivastava1) ಎಂಬ ಹೆಸರಿನ ಅಕೌಂಟ್​​ನಿಂದ ಒಂದು ಸಂದೇಶ ಬಂದಿರುತ್ತದೆ. ಅದರಲ್ಲಿ, ‘‘ನಿಮ್ಮನ್ನು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸೇರಿಸಿಕೊಳ್ಳುತ್ತೇವೆ. ಇದೊಂದು ಅಪ್ಲಿಕೇಶನ್ ಫಾರ್ಮ್ ತುಂಬಿ 2 ಸಾವಿರ ರೂಪಾಯಿ ಕಳುಹಿಸಿ’’ ಎಂದು ಉಲ್ಲೇಖಿಸಿರುತ್ತದೆ. ಇನ್​ಸ್ಟಾದಲ್ಲಿ ಬಂದಿರುವ ಮೆಸೇಜ್ ನಂಬಿದ್ದ ರಾಕೇಶ್ ಆರಂಭದಲ್ಲಿ ಹಣ ವರ್ಗಾವಣೆ ಮಾಡಿದ್ದಾರೆ. ಬಳಿಕ ಕ್ರಮೇಣವಾಗಿ ಆರೋಪಿಗಳು ಹಂತ ಹಂತವಾಗಿ 23 ಲಕ್ಷ ರೂಪಾಯಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಪ್ರತಿ ಮ್ಯಾಚ್​ಗೆ 10 ಲಕ್ಷ ರೂ. ಹಣ ಕೊಡಿಸುತ್ತೇವೆ ಎಂದು ನಂಬಿಸಿ 2024ರ ಡಿಸೆಂಬರ್ 22 ರಿಂದ 2025ರ ಏಪ್ರಿಲ್ 19 ರ ವರೆಗೆ 23,53,550 ರೂಪಾಯಿ ಹಣ ಆನ್ಲೈನ್ ಮೂಲಕ ವರ್ಗಾವಣೆ ಮಾಡಿಕೊಂಡಿದ್ದಾರೆ.

ಇಷ್ಟೆಲ್ಲಾ ಹಣ ಪಡೆದರೂ ತಂಡ ಸೇರ್ಪಡೆ ಸುಳಿವೇ ಇಲ್ಲದಿದ್ದಾಗ ಆತ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಈ ಕುರಿತು ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ ಗುಳೇದ್ ಪ್ರತಿಕ್ರಿಯಿಸಿದ್ದು, ಸೈಬರ್ ವಂಚಕರ ಜಾಲಕ್ಕೆ ಮುಗ್ಧ ಯುವಕರೇ ಹೆಚ್ಚು ಬಲಿಯಾಗುತ್ತಿದ್ದಾರೆ. ಮೋಸಕ್ಕೆ ಬಲಿಯಾದ ರಾಕೇಶ್ ತಂದೆ ಕೆಎಸ್ಆರ್ಟಿಸಿ ಬಸ್ ಘಟಕದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ತೀರಾ ಬಡತನವಿದ್ದರೂ ಮಗನಿಗೆ ಒಳ್ಳೆಯದು ಆಗುತ್ತದೆ ಎಂದು ಹಣ ಹೊಂದಿಸಿ ಹಣ ತುಂಬಿದ್ದಾರೆ. ಆನ್ಲೈನ್​​ನಲ್ಲಿ ಬರುವಂತಹ ಮೋಸದ ಸಂದೇಶಗಳ ಜಾಲಕ್ಕೆ ಯಾರೂಬಲಿಯಾಗಬಾರದು. ಪ್ರಕರಣವನ್ನು ಗಂಭೀರ ಪರಿಗಣಿಸಿದ್ದು, ಆರೋಪಿಗಳ ಸುಳಿವು ಸಿಕ್ಕ ತಕ್ಷಣವೇ ರಾಜಸ್ಥಾನಕ್ಕೆ ವಿಶೇಷ ತನಿಖಾ ಪೊಲೀಸ್ ತಂಡ ಕಳುಹಿಸಿ ಕೊಡುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ
ದೇವಾಲಯ ಕಾರ್ಯಪಡೆ ರಚನೆಗೆ ಶಿಫಾರಸು: ಏನಿದು ಹೊಸ ವ್ಯವಸ್ಥೆ? ಇಲ್ಲಿದೆ ವಿವರ
ರಾಯಚೂರು: ಭತ್ತ ಅಡಮಾನ ಹೆಸರಿನಲ್ಲಿ 3 ಕೋಟಿ ರೂ. ಗುಳುಂ
ಕರ್ನಾಟಕದಲ್ಲಿ ಮತ್ತೆ ಹೆಚ್ಚುತ್ತಿದೆ ಕೊರೊನಾ ವೈರಸ್ ಸೋಂಕು
ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನ ಔಷಧ ಕೇಂದ್ರ ನಿರ್ಬಂಧಕ್ಕೆ ತೀವ್ರ ವಿರೋಧ

ಇದನ್ನೂ ಓದಿ: ಐಪಿಎಲ್​ನಲ್ಲಿಂದು ಆರ್​ಸಿಬಿ-ಎಸ್ಆರ್​ಹೆಚ್ ಮುಖಾಮುಖಿ: ಹೈವೋಲ್ಟೇಜ್ ಪಂದ್ಯಕ್ಕೆ ಮಳೆಯ ಕಾಟ ಇದೆಯೇ?

ಒಟ್ಟಿನಲ್ಲಿ ವಂಚನೆಗೆ ಒಳಗಾದ ಉದಯೋನ್ಮುಖ ಕ್ರಿಕೆಟಿಗನ ಕುಟುಂಬ ಬೀದಿಗೆ ಬಂದಿದ್ದು, ಹಣವೂ ಇಲ್ಲ ಅವಕಾಶವೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ‌. ಕೇಸ್ ದಾಖಲಿಸಿಕೊಂಡ ಸೈಬರ್ ಕ್ರೈಂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಆನ್​​​ಲೈನ್​​ನಲ್ಲಿ ಬರುವ ಯಾವ ಮೆಸೇಜ್ ನಂಬಿ ಹಣ ನೀಡಬೇಡಿ ಎಂದು ಪೊಲೀಸರು ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಮತ್ತೆ ಮತ್ತೆ ಈ ರೀತಿಯ ಪ್ರಕರಣಗಳು ವರದಿಯಾಗುತ್ತಿರುವುದು ಕಳವಳಕಾರಿಯಾಗಿದೆ.

ಕರ್ನಾಟಕದ ಇನ್ನಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:36 am, Fri, 23 May 25