
ಬೆಳಗಾವಿ, ನವೆಂಬರ್ 20: ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಯ ಹಣಕ್ಕಾಗಿ ಮೊಮ್ಮಗನೇ ಅಜ್ಜಿಯನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮದಲ್ಲಿ ನಡೆದಿದೆ. ಅಜ್ಜಿ ಹಮ್ಮವ್ವ ಸನದಿ (78) ಅವರನ್ನು ಕೊಲೆ ಮಾಡಿದ ಆರೋಪಿ ಭೀಮಪ್ಪ ಸನದಿ, ಬಳಿಕ ಅವರ ಶವವನ್ನು ಗೋಣಿಚೀಲದಲ್ಲಿ ತುಂಬಿ ಬೈಕ್‌ಗೆ ಕಟ್ಟಿಕೊಂಡು ಸುಮಾರು 15 ಕಿಲೋಮೀಟರ್ ದೂರ ಸಾಗಿಸಿದ್ದಾನೆ. ನವೆಂಬರ್ 10ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸದ್ಯ ಯಮಕನಮರಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಅರಳಿಕಟ್ಟಿ ಗ್ರಾಮದ ಹಮ್ಮವ್ವ ಸನದಿ ಅವರು ನವೆಂಬರ್ 10ರಂದು ಪಾಶ್ಚಾಪುರ ಸಂತೆಗೆ ಹೋಗಿದ್ದವರು ನಾಪತ್ತೆಯಾಗಿದ್ದರು. ಈ ನಡುವೆ ಅಜ್ಜಿ ಹಮ್ಮವ್ವ ಅವರೊಂದಿಗೆ ಗೃಹಲಕ್ಷ್ಮೀ ಯೋಜನೆಯ ಹಣದ ವಿಚಾರವಾಗಿ ಮೊಮ್ಮಗ ಭೀಮಪ್ಪ ಜಗಳವಾಡಿದ್ದ ಎನ್ನಲಾಗಿದೆ. ಬೆಳ್ಳಿ ಆಭರಣಗಳನ್ನು ತರುವುದಾಗಿ ಹೇಳಿ ಅಜ್ಜಿಯನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದ ಭೀಮಪ್ಪ, ಕುಂದರಗಿ ಗ್ರಾಮದ ಸೊಸೈಟಿಯಲ್ಲಿ ಅವರಿಂದ ಹಣ ತೆಗೆಸಿಕೊಂಡಿದ್ದಾನೆ.
ನಂತರ ಗವಿಸಿದ್ದೇಶ್ವರ ಗುಡ್ಡಕ್ಕೆ ಕರೆದೊಯ್ದು ಅಜ್ಜಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಅವರ ಬಳಿ ಇದ್ದ 2,300 ರೂಪಾಯಿ ನಗದು ಹಾಗೂ ಚಿನ್ನದ ಸರವನ್ನು ಕದ್ದಿದ್ದಾನೆ ಎಂದು ತಿಳಿದುಬಂದಿದೆ.
ಕೊಲೆ ಮಾಡಿದ ಬಳಿಕ ಹಮ್ಮವ್ವ ಅವರ ಶವವನ್ನು ಗೋಣಿಚೀಲದಲ್ಲಿ ತುಂಬಿ, ಕಲ್ಲು ಕಟ್ಟಿ ಬೈಕ್‌ಗೆ ಕಟ್ಟಿಕೊಂಡು ಭೀಮಪ್ಪ ಸುಮಾರು 15 ಕಿಲೋಮೀಟರ್ ದೂರ ಸಂಚರಿಸಿದ್ದಾನೆ. ಬಳಿಕ ಹಿಡಕಲ್ ಡ್ಯಾಂ ಹಿನ್ನೀರಿನಲ್ಲಿ ಶವವನ್ನು ಎಸೆದು ಮನೆಗೆ ಮರಳಿದ್ದಾನೆ. ನವೆಂಬರ್ 15ರಂದು ಡ್ಯಾಂ ಹಿನ್ನೀರಿನಲ್ಲಿ ಹಮ್ಮವ್ವ ಅವರ ಶವ ಪತ್ತೆಯಾಗಿತ್ತು.
ಕೊಲೆ ಮಾಡಿದ ಬಳಿಕ, ಅಜ್ಜಿ ಕಾಣೆಯಾಗಿದ್ದಾರೆ ಎಂದು ಭೀಮಪ್ಪನೇ ತಂದೆ ರಾಮಪ್ಪನಿಗೆ ತಿಳಿಸಿದ್ದ. ಅಜ್ಜಿ ನಾಪತ್ತೆಯಾಗಿರುವುದಾಗಿ ಹೇಳಿ ಹುಡುಕಾಟ ನಡೆಸುವ ನಾಟಕವಾಡಿದ್ದ. ಘಟನೆ ನಡೆದ ಎರಡು ದಿನಗಳ ಬಳಿಕ ರಾಮಪ್ಪ ಅವರು ಮಗಳಿಗೆ ತಾಯಿ ಕಾಣೆಯಾಗಿರುವ ವಿಷಯ ತಿಳಿಸಿದ್ದಾರೆ. ಬಳಿಕ ತಂದೆ ಮತ್ತು ಮಗ ಸೇರಿ ಹುಡುಕಾಟ ನಡೆಸಿದ್ದಾರೆ.
ಹಿಡಕಲ್ ಡ್ಯಾಂ ಹಿನ್ನೀರಿಗೆ ತೆರಳಿದ್ದ ತಂದೆ-ಮಗ, ಗೋಣಿಚೀಲದಲ್ಲಿದ್ದ ಶವವನ್ನು ತಾವೇ ಹೊರತೆಗೆದಿದ್ದಾರೆ. ನಂತರ ರಾಮಪ್ಪ ಅವರ ಮಗಳ ಮೂಲಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಹಮ್ಮವ್ವ ಅವರೊಂದಿಗೆ ಕೊನೆಯದಾಗಿ ಯಾರೆಲ್ಲ ಇದ್ದರು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಈ ವೇಳೆ ನಾಪತ್ತೆಯಾಗುವ ದಿನ ಅಜ್ಜಿಯೊಂದಿಗೆ ಮೊಮ್ಮಗ ಭೀಮಪ್ಪ ಇದ್ದಿದ್ದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ವಿಚಾರಣೆ ವೇಳೆ ಕೊಲೆ ಪ್ರಕರಣದಲ್ಲಿ ಭೀಮಪ್ಪನ ಪಾತ್ರ ಬಯಲಾಗಿದ್ದು, ಯಮಕನಮರಡಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:59 am, Fri, 20 November 26