ಒಂದೆಡೆ ಅತಿವೃಷ್ಟಿ, ಮತ್ತೊಂದೆಡೆ ಅನಾವೃಷ್ಟಿ: ಬೆಳಗಾವಿ ಜಿಲ್ಲೆಯಲ್ಲಿ 70 ಸಾವಿರ ಹೆಕ್ಟೇರ್ ಬೆಳೆ ನಾಶ, ಸಂಕಷ್ಟದಲ್ಲಿ ರೈತರು

ಬೆಳಗಾವಿ ಜಿಲ್ಲೆಯಲ್ಲಿ ರೈತರು ಅತಿವೃಷ್ಟಿ ಹಾಗೂ ಅನಾವೃಷ್ಟಿ ಎರಡರ ಸಂಕಷ್ಟವನ್ನೂ ಎದುರಿಸುತ್ತಿದ್ದಾರೆ. ನದಿ ಪಾತ್ರದಲ್ಲಿ ಪ್ರವಾಹದಿಂದ ಬೆಳೆ ಕೊಳೆತರೆ, ರಾಮದುರ್ಗ, ಯರಗಟ್ಟಿ, ಸವದತ್ತಿ ತಾಲೂಕುಗಳಲ್ಲಿ ತೀವ್ರ ಬರದಿಂದ ಬಿತ್ತನೆ ಮಾಡಿದ 22 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿದೆ. ಪರಿಹಾರ ಮತ್ತು ಸಮೀಕ್ಷೆಗಾಗಿ ರೈತರು ಆಗ್ರಹಿಸಿದ್ದಾರೆ. ಜಿಲ್ಲಾಡಳಿತ ಮೇವು ಬ್ಯಾಂಕ್ ತೆರೆಯುವ ಭರವಸೆ ನೀಡಿದೆ.

ಒಂದೆಡೆ ಅತಿವೃಷ್ಟಿ, ಮತ್ತೊಂದೆಡೆ ಅನಾವೃಷ್ಟಿ: ಬೆಳಗಾವಿ ಜಿಲ್ಲೆಯಲ್ಲಿ 70 ಸಾವಿರ ಹೆಕ್ಟೇರ್ ಬೆಳೆ ನಾಶ, ಸಂಕಷ್ಟದಲ್ಲಿ ರೈತರು
Bgm Bara Special Reporter
Edited By:

Updated on: Aug 18, 2026 | 5:33 PM

ಬೆಳಗಾವಿ, ಆ.18: ಜಿಲ್ಲೆಯ ರೈತರು ಪ್ರಕೃತಿಯ ವಿಚಿತ್ರ ಆಟಕ್ಕೆ ಸಿಲುಕಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಒಂದೆಡೆ ಅತಿವೃಷ್ಟಿಯಿಂದ ಬೆಳೆಗಳು ನಾಶವಾಗಿದ್ದರೆ, ಮತ್ತೊಂದೆಡೆ ಬರಗಾಲದಿಂದಾಗಿ ಬಿತ್ತನೆ ಮಾಡಿದ ಬೆಳೆಗಳು ಒಣಗುತ್ತಿವೆ. ಇದು ಜಿಲ್ಲೆಯ ರೈತ ಸಮುದಾಯವನ್ನು ಆತಂಕಕ್ಕೆ ದೂಡಿದೆ.

ಜಿಲ್ಲೆಯ ನದಿ ಪಾತ್ರಗಳಲ್ಲಿ ಭಾರಿ ಮಳೆಯಾದ ಕಾರಣ ನದಿಗಳು ಉಕ್ಕಿ ಹರಿದು, ನದಿ ದಡದ ಜಮೀನುಗಳು ಸಂಪೂರ್ಣ ಜಲಾವೃತವಾಗಿವೆ. ತಿಂಗಳುಗಟ್ಟಲೆ ನೀರು ನಿಂತ ಕಾರಣ ಬಿತ್ತನೆ ಮಾಡಿದ್ದ ಬೆಳೆಗಳು ಕೊಳೆತು ನಷ್ಟಕ್ಕೀಡಾಗಿವೆ. ನೂರಾರು ರೈತರು ತಮ್ಮ ಜಮೀನುಗಳಲ್ಲಿ ಹಾಕಿದ ಬಂಡವಾಳ ಮತ್ತು ಶ್ರಮವನ್ನು ಕಳೆದುಕೊಂಡಿದ್ದಾರೆ. ಈ ಜಮೀನುಗಳಲ್ಲಿನ ಬೆಳೆ ಹಾನಿಯಿಂದಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದಕ್ಕೆ ವ್ಯತಿರಿಕ್ತವಾಗಿ, ಬೆಳಗಾವಿ ಜಿಲ್ಲೆಯ ರಾಮದುರ್ಗ, ಯರಗಟ್ಟಿ ಮತ್ತು ಸವದತ್ತಿ ತಾಲೂಕುಗಳು ಭೀಕರ ಬರಗಾಲದ ಛಾಯೆಗೆ ಒಳಗಾಗಿವೆ. ಈ ಪ್ರದೇಶಗಳಲ್ಲಿ ವಾಡಿಕೆಯಂತೆ ಮಳೆಯಾಗದೆ ಬಿತ್ತನೆ ಮಾಡಿದ ಬೆಳೆಗಳು ಒಣಗಿ ಹೋಗುತ್ತಿವೆ. ಸಚಿವ ಸತೀಶ್ ಜಾರ್ಕಿಹೊಳಿ ಅವರ ನೇತೃತ್ವದಲ್ಲಿ ಇಡೀ ಜಿಲ್ಲಾಡಳಿತವು ಪ್ರತಿಯೊಂದು ಗ್ರಾಮಕ್ಕೂ ತೆರಳಿ ಬರ ವೀಕ್ಷಣೆ ನಡೆಸಿದೆ. ಮೆಕ್ಕೆಜೋಳ, ಹೆಸರು, ಉದ್ದು, ಮತ್ತು ಇನ್ನಿತರ ಬೆಳೆಗಳು ಮಳೆಯ ಕೊರತೆಯಿಂದ ಕಂಪ್ಲೀಟ್ ಆಗಿ ಹಾಳಾಗಿವೆ. ಬಿತ್ತನೆ ಪೂರ್ವದಲ್ಲಿ ಸುರಿದ ಅಲ್ಪ ಮಳೆಯನ್ನು ನಂಬಿ ಶೇಕಡ 97ರಷ್ಟು ಬಿತ್ತನೆ ಮಾಡಲಾಗಿದ್ದರೂ, ಇದುವರೆಗೂ ಸುಮಾರು 22 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ಕೇವಲ ಈ ಮೂರು ತಾಲೂಕುಗಳಲ್ಲೇ ಇಷ್ಟು ದೊಡ್ಡ ಪ್ರಮಾಣದ ಬೆಳೆ ಹಾನಿಯಾಗಿದೆ. ಇನ್ನು ಒಂದು ವಾರ ಮಳೆಯಾಗದಿದ್ದರೆ ಮೆಕ್ಕೆಜೋಳವೂ ಸಂಪೂರ್ಣ ಹಾಳಾಗಿ ಬೆಳೆ ಹಾನಿಯ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಒಟ್ಟಾರೆ, ಜಿಲ್ಲೆಯಲ್ಲಿ ಸುಮಾರು 60 ರಿಂದ 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ ಬೆಳೆಗಳು ಸಂಪೂರ್ಣ ನಾಶವಾಗಿವೆ.

ಸಚಿವ ಸತೀಶ್ ಜಾರಕಿಹೊಳಿ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿ ರೈತರಿಗೆ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಆದರೆ, ಪ್ರಸ್ತುತ ನೀಡಲಾಗುವ ಪರಿಹಾರವು ಸಾಕಾಗುತ್ತಿಲ್ಲ, ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ. ಸಪ್ತ ನದಿಗಳು ತುಂಬಿ ಹರಿಯುತ್ತಿದ್ದರೂ, ಅವುಗಳ ಪಾತ್ರದ ಹೊರಗಿನ ಪ್ರದೇಶಗಳಲ್ಲಿ ಸರಿಯಾದ ಮಳೆಯಾಗದೆ ಬಹುತೇಕ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದನ್ನೂ ಓದಿ: ಸಂತೆಯಲ್ಲಿ ಬೈಕ್ ಎಗರಿಸಿ ಜಮೀನಿನಲ್ಲಿ ಬಚಿಟ್ಟು ಕಮ್ಮಿ ಬೆಲೆಗೆ ಮಾರುತ್ತಿದ್ದ ಖದೀಮ: 43 ಬೈಕ್ ಕದ್ದ ಕಳ್ಳ ಸಿಕ್ಕಿಬಿದ್ದಿದ್ದು ಹೇಗೆ?

ಈ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತ ರೈತರ ನೆರವಿಗೆ ಧಾವಿಸಿದೆ. ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್ ಅವರು, ಯಾರೂ ತಮ್ಮ ಜಾನುವಾರುಗಳನ್ನು ಮಾರಾಟ ಮಾಡಬಾರದು ಎಂದು ಮನವಿ ಮಾಡಿದ್ದಾರೆ. ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಮೇವು ಬ್ಯಾಂಕ್‌ಗಳನ್ನು ತೆರೆಯುವ ಮತ್ತು ರೈತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ. ತಕ್ಷಣವೇ ಬೆಳೆ ಹಾನಿ ಸಮೀಕ್ಷೆ ಕಾರ್ಯ ಆರಂಭಿಸಿ ಪ್ರಾಥಮಿಕ ಹಂತದಲ್ಲಿ ಪರಿಹಾರ ಒದಗಿಸುವಂತೆ ರೈತರು ಜಿಲ್ಲಾಡಳಿತ ಮತ್ತು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬೆಳಗಾವಿ ಜಿಲ್ಲೆಯ ರೈತರು ಅತಿವೃಷ್ಟಿ ಮತ್ತು ಅನಾವೃಷ್ಟಿ ಎಂಬ ಎರಡು ವಿಭಿನ್ನ ವಿಪತ್ತುಗಳಿಂದ ಏಕಕಾಲದಲ್ಲಿ ತತ್ತರಿಸಿದ್ದು, ಇದು ಅವರ ಜೀವನೋಪಾಯದ ಮೇಲೆ ಗಂಭೀರ ಪರಿಣಾಮ ಬೀರಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More
Loading...
Unable to load recommendations.
Follow Us