AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂತೆಯಲ್ಲಿ ಬೈಕ್ ಎಗರಿಸಿ ಜಮೀನಿನಲ್ಲಿ ಬಚಿಟ್ಟು ಕಮ್ಮಿ ಬೆಲೆಗೆ ಮಾರುತ್ತಿದ್ದ ಖದೀಮ: 43 ಬೈಕ್ ಕದ್ದ ಕಳ್ಳ ಸಿಕ್ಕಿಬಿದ್ದಿದ್ದು ಹೇಗೆ?

ಬೆಳಗಾವಿಯಲ್ಲಿ ಸರಣಿ ಬೈಕ್‌ ಕಳ್ಳತನ ಮಾಡುತ್ತಿದ್ದ ನಾರಾಯಣ್ ಕದಂ ಎಂಬಾತನನ್ನು ಕಿತ್ತೂರು ಪೊಲೀಸರು ಬಂಧಿಸಿದ್ದಾರೆ. ಎರಡು ತಿಂಗಳ ಕಾರ್ಯಾಚರಣೆ ಬಳಿಕ ಸೆರೆಸಿಕ್ಕ ಆರೋಪಿಯಿಂದ ಬರೋಬ್ಬರಿ 43 ಕಳವು ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಕದ್ದ ಬೈಕ್‌ಗಳ ಚಾಸಿಸ್ ನಂಬರ್ ಬದಲಾಯಿಸಿ ಹಳ್ಳಿಗಳಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. ಸದ್ಯ ಪೊಲೀಸರು ಆರೋಪಿಯನ್ನು ಹಿಂಡಲಗಾ ಜೈಲಿಗೆ ಕಳುಹಿಸಿದ್ದು, ಕದ್ದ ಬೈಕ್ ಮಾಲೀಕರಿಗೆ ಸಂತಸ ತಂದಿದೆ.

ಸಂತೆಯಲ್ಲಿ ಬೈಕ್ ಎಗರಿಸಿ ಜಮೀನಿನಲ್ಲಿ ಬಚಿಟ್ಟು ಕಮ್ಮಿ ಬೆಲೆಗೆ ಮಾರುತ್ತಿದ್ದ ಖದೀಮ: 43 ಬೈಕ್ ಕದ್ದ ಕಳ್ಳ ಸಿಕ್ಕಿಬಿದ್ದಿದ್ದು ಹೇಗೆ?
Bgm Bike Kalla Spl Report
ಸಹದೇವ್​ ಮಾನೆ
| Edited By: |

Updated on: Aug 18, 2026 | 3:39 PM

Share

ಬೆಳಗಾವಿ, ಆ.18: ಜಿಲ್ಲೆಯ ಕಿತ್ತೂರು ಪೊಲೀಸರು ದೊಡ್ಡ ಯಶಸ್ಸನ್ನು ಸಾಧಿಸಿದ್ದಾರೆ. ಬೆಳಗಾವಿ ಜಿಲ್ಲಾದ್ಯಂತ, ವಿಶೇಷವಾಗಿ ಕಿತ್ತೂರು ಮತ್ತು ಖಾನಾಪುರ ಪ್ರದೇಶಗಳಲ್ಲಿ, ಹೀರೋ ಹೋಂಡಾ ಸ್ಪ್ಲೆಂಡರ್ ಮತ್ತು ಡಿಲಕ್ಸ್ ಬೈಕ್‌ಗಳ ಸರಣಿ ಕಳ್ಳತನದಿಂದ ಜನರಲ್ಲಿ ಆತಂಕ ಮನೆಮಾಡಿತ್ತು. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ, ಪೊಲೀಸರಿಗೆ ತೀವ್ರ ತಲೆನೋವಾಗಿ ಮಾರ್ಪಟ್ಟಿದ್ದ ಓರ್ವ ಕುಖ್ಯಾತ ಬೈಕ್ ಕಳ್ಳನನ್ನು ಕಿತ್ತೂರು ಟಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಬರೋಬ್ಬರಿ 43 ಕಳವು ಮಾಡಿದ್ದ ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಬೆಳಗಾವಿಯ ಎಸ್ಪಿ ಕೆ ರಾಮರಾಜನ್ ಅವರು ಈ ಬೈಕ್ ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಕಿತ್ತೂರು ಟಾಣೆಯ ಇನ್ಸ್‌ಪೆಕ್ಟರ್ ಶಿವಾನಂದ್ ಅವರಿಗೆ ವಿಶೇಷ ಕಾರ್ಯಾಚರಣೆಗೆ ನಿರ್ದೇಶನ ನೀಡಿದ್ದರು. ಈ ನಿರ್ದೇಶನದ ಹಿನ್ನೆಲೆಯಲ್ಲಿ, ಇನ್ಸ್‌ಪೆಕ್ಟರ್ ಶಿವಾನಂದ್, ಪಿಎಸ್‌ಐ ಸೇರಿದಂತೆ ಅವರ ಇಡೀ ಸಿಬ್ಬಂದಿ ತಂಡವು ಕಳೆದ ಎರಡು ತಿಂಗಳಿಂದ ನಿರಂತರವಾಗಿ ಬೈಕ್ ಕಳ್ಳನ ಬೆನ್ನು ಹತ್ತಿದ್ದರು. ಹಗಲು-ರಾತ್ರಿ ಎನ್ನದೇ ಪರಿಶ್ರಮದಿಂದ ಕಾರ್ಯಾಚರಣೆ ನಡೆಸಿದ ಪೊಲೀಸರು ಅಂತಿಮವಾಗಿ ಯಶಸ್ಸು ಕಂಡಿದ್ದಾರೆ.

ಬಂಧಿತ ಆರೋಪಿ ಖಾನಾಪುರ ತಾಲೂಕಿನ ನಿಡಗಲ್ ಗ್ರಾಮದ ನಾರಾಯಣ್ ಕದಂ ಎಂದು ಗುರುತಿಸಲಾಗಿದೆ. ಈತ ಬೈಕ್ ಕಳ್ಳತನವನ್ನೇ ತನ್ನ ವೃತ್ತಿಯನ್ನಾಗಿ ಮಾಡಿಕೊಂಡಿದ್ದ. ಕಳೆದ ಎರಡು-ಮೂರು ವರ್ಷಗಳ ಅವಧಿಯಲ್ಲಿ ಈತ ಇಷ್ಟೆಲ್ಲಾ ಬೈಕ್‌ಗಳನ್ನು ಕಳ್ಳತನ ಮಾಡಿದ್ದಾನೆ. ನಾರಾಯಣ್ ಕದಂ ಕದ್ದ ಬೈಕ್‌ಗಳನ್ನು ಮಾರಾಟ ಮಾಡುವಲ್ಲಿ ತನ್ನದೇ ಆದ ವಿಶಿಷ್ಟ ವಿಧಾನವನ್ನು ಅನುಸರಿಸುತ್ತಿದ್ದ. ಪೊಲೀಸರ ತಪಾಸಣೆಯಿಂದ ತಪ್ಪಿಸಿಕೊಳ್ಳಲು, ಈತ ಕದ್ದ ಬೈಕ್‌ಗಳ ನಂಬರ್ ಪ್ಲೇಟ್‌ಗಳನ್ನು ಬದಲಾಯಿಸುತ್ತಿದ್ದ. ಅಷ್ಟೇ ಅಲ್ಲದೆ, ಬೈಕ್‌ಗಳ ಚಾಸಿಸ್ ನಂಬರ್‌ಗಳನ್ನು ಸಹ ಕೌಶಲ್ಯದಿಂದ ಬದಲಾಯಿಸುತ್ತಿದ್ದ. ಹೀಗೆ ಮಾರ್ಪಾಡು ಮಾಡಿದ ಬೈಕ್‌ಗಳನ್ನು ಗ್ರಾಮೀಣ ಭಾಗದಲ್ಲಿ, ವಿಶೇಷವಾಗಿ ನಗರಕ್ಕೆ ಬಾರದ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು, ಅತ್ಯಂತ ಕಡಿಮೆ ಬೆಲೆಗೆ, ಅಂದರೆ 10 ರಿಂದ 15 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದ. ಬೈಕ್ ಖರೀದಿಸುವವರು ಆತನ ಸಂಪರ್ಕದಲ್ಲಿರುವವರೇ ಆಗಿರಬೇಕು ಎಂಬ ನಿಯಮವನ್ನೂ ಆತ ಹೊಂದಿದ್ದ. ಕದ್ದ ಬೈಕ್‌ಗಳನ್ನು ಕೂಡಲೇ ಮಾರಾಟ ಮಾಡದೆ, ಕೆಲವು ತಿಂಗಳುಗಳ ಕಾಲ, ಕೆಲವೊಮ್ಮೆ ಆರು ತಿಂಗಳವರೆಗೂ ನಿರ್ಜನ ಪ್ರದೇಶಗಳಲ್ಲಿ, ಗುಡ್ಡಗಾಡು ಪ್ರದೇಶಗಳಲ್ಲಿ ಬಚ್ಚಿಡುತ್ತಿದ್ದ. ಬೈಕ್ ಮಾಲೀಕರು ಕಳುವಾದ ಬೈಕ್ ಬಗ್ಗೆ ಭರವಸೆ ಕಳೆದುಕೊಂಡ ನಂತರವಷ್ಟೇ ಇವುಗಳನ್ನು ಮಾರಾಟ ಮಾಡುತ್ತಿದ್ದ.

ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾದಾಗ ಕಿತ್ತೂರು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಮುಂದಾದರು. ಕಿತ್ತೂರು ಬಸ್ ನಿಲ್ದಾಣ ಮತ್ತು ಮುಖ್ಯ ರಸ್ತೆಗಳ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ಒಬ್ಬ ವ್ಯಕ್ತಿ ಬಸ್‌ನಿಂದ ಇಳಿದು ನಡೆದುಕೊಂಡು ಹೋಗುವುದು, ನಂತರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್‌ನಲ್ಲಿ ವಾಪಸ್ ಹೋಗುವುದು ದಾಖಲಾಗಿತ್ತು. ಆರೋಪಿ ಧರಿಸಿದ್ದ ಟಿ-ಶರ್ಟ್ ಆಧಾರದ ಮೇಲೆ ಪೊಲೀಸರು ಆತನನ್ನು ಗುರುತಿಸಲು ಆರಂಭಿಸಿದರು. ಇದಲ್ಲದೆ,  ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನವನ್ನು ಕೂಡ ಬಳಸಿಕೊಂಡು ಆರೋಪಿಯ ಗುರುತು ಮತ್ತು ಚಲನವಲನಗಳನ್ನು ಪತ್ತೆ ಹಚ್ಚಲಾಯಿತು. ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ, ಪೊಲೀಸರು ನಾರಾಯಣ್ ಕದಂನನ್ನು ಪತ್ತೆ ಹಚ್ಚಿ, ಆತ ಬೈಕ್‌ಗಳನ್ನು ಬಚ್ಚಿಟ್ಟಿದ್ದ ಸ್ಥಳಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ನಂತರ ಬಂಧಿಸಿದರು.

ವಿಡಿಯೋ ಇಲ್ಲಿದೆ ನೋಡಿ:

ಬಂಧನದ ನಂತರದ ವಿಚಾರಣೆಯಲ್ಲಿ, ನಾರಾಯಣ್ ಕದಂ ತಾನು ಬೈಕ್‌ಗಳನ್ನು ಹೇಗೆ ಕಳ್ಳತನ ಮಾಡುತ್ತಿದ್ದ ಎಂಬುದನ್ನು ಬಾಯಿಬಿಟ್ಟಿದ್ದಾನೆ. ಪಾರ್ಕಿಂಗ್ ಸ್ಥಳಗಳಲ್ಲಿ ಅಥವಾ ಹೆಚ್ಚು ಜನನಿಬಿಡ ಪ್ರದೇಶಗಳಲ್ಲಿ ಬೈಕ್ ನಿಲ್ಲಿಸಿ ಹೋಗುವವರನ್ನು ಸುಮಾರು ಅರ್ಧ ಗಂಟೆಗಳ ಕಾಲ ಗಮನಿಸುತ್ತಿದ್ದ. ನಂತರ, ತನ್ನ ಬಳಿಯಿದ್ದ ನಕಲಿ ಕೀಲಿಗಳನ್ನು ಬಳಸಿ, ಯಾವ ಬೈಕ್ ಸ್ಟಾರ್ಟ್ ಆಗುತ್ತದೋ ಅದನ್ನು ಕ್ಷಣಾರ್ಧದಲ್ಲಿ ಕದ್ದು ಪರಾರಿಯಾಗುತ್ತಿದ್ದ. 43 ಕಳವು ಬೈಕ್‌ಗಳ ಪೈಕಿ 20ಕ್ಕೂ ಹೆಚ್ಚು ಬೈಕ್‌ಗಳನ್ನು ಈತ ನಿರ್ಜನ ಪ್ರದೇಶಗಳಲ್ಲಿ ಬಚ್ಚಿಟ್ಟಿದ್ದ. ಉಳಿದ ಬೈಕ್‌ಗಳನ್ನು ಈಗಾಗಲೇ ಮಾರಾಟ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ನೀರಿನ ಸೆಳೆತಕ್ಕೆ ಸಿಲುಕಿದ್ದ ಪ್ರವಾಸಿಗ ಪಾರು: ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ

ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ, ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ. ಜಪ್ತಿ ಮಾಡಲಾದ 43 ಬೈಕ್‌ಗಳನ್ನು ನ್ಯಾಯಾಲಯದ ಪ್ರಕ್ರಿಯೆಗಳ ಮೂಲಕ ಅವುಗಳ ನಿಜವಾದ ಮಾಲೀಕರಿಗೆ ತಲುಪಿಸಲಾಗುವುದು ಎಂದು ತಿಳಿಸಿದ್ದಾರೆ. ಎರಡು-ಮೂರು ವರ್ಷಗಳ ಹಿಂದೆ ತಮ್ಮ ಬೈಕ್‌ಗಳನ್ನು ಕಳೆದುಕೊಂಡಿದ್ದ ಮಾಲೀಕರಿಗೆ ಈಗ ತಮ್ಮ ವಾಹನಗಳು ಮರಳಿ ಸಿಗಲಿವೆ ಎಂಬ ಸಂತಸ ಮೂಡಿದೆ. ಈ ದೊಡ್ಡ ಕಾರ್ಯಾಚರಣೆಯನ್ನು ಒಬ್ಬನೇ ವ್ಯಕ್ತಿ ನಡೆಸಿದ್ದಾನೆ ಎಂಬುದು ಮತ್ತೊಂದು ಆಸಕ್ತಿದಾಯಕ ಅಂಶವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us