ಬೆಳಗಾವಿ: ಭೀಕರ ಬರ ಇದ್ದರೂ ಶಾಸಕರ ನಿರ್ಲಕ್ಷ್ಯ: ರೈತರು ಆಕ್ರೋಶ

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಪಂಚನದಿಗಳು ಹರಿದರೂ ಆ ನೀರು ಬಹುತೇಕ ರೈತರಿಗೆ ತಲುಪುತ್ತಿಲ್ಲ. ಬಹುತೇಕ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿದ್ದು ಜಲಸಂಪನ್ಮೂಲ ಸಚಿವರು, ಡಿಸಿಎಂ ಡಿಕೆ ಶಿವಕುಮಾರ್​ ಬೆಳಗಾವಿಯಲ್ಲಿ ನೀರಾವರಿ ಇಲಾಖೆ ಸಭೆ ನಡೆಸಿದರು. ಆದರೆ ರೈತರ ಸಮಸ್ಯೆ ಗಮನ ಸೆಳೆಯಬೇಕಿದ್ದ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬೆಳಗಾವಿ: ಭೀಕರ ಬರ ಇದ್ದರೂ ಶಾಸಕರ ನಿರ್ಲಕ್ಷ್ಯ: ರೈತರು ಆಕ್ರೋಶ
ಬರದಿಂದಾಗಿ ಒಣಗಿದ ಜಮೀನು
Follow us
ಮಹಾಂತೇಶ ಕುರಬೇಟ, ಟಿವಿ9 ಚಿಕ್ಕೋಡಿ
| Updated By: ಗಂಗಾಧರ​ ಬ. ಸಾಬೋಜಿ

Updated on: Oct 19, 2023 | 9:52 PM

ಬೆಳಗಾವಿ, ಅಕ್ಟೋಬರ್​​​ 19: ಜಿಲ್ಲೆಯಲ್ಲಿ ಹಿಂದೆಂದೂ ಕಂಡು ಕೇಳರಿಯದಂತಹ ಬರಗಾಲ (drought) ಇದ್ದು ರೈತರು ಕಂಗಾಲಾಗಿದ್ದಾರೆ. ಅದರಲ್ಲೂ ಜಿಲ್ಲೆಯ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಪಂಚನದಿಗಳು ಹರಿದರೂ ಆ ನೀರು ಬಹುತೇಕ ರೈತರಿಗೆ ತಲುಪುತ್ತಿಲ್ಲ. ಬಹುತೇಕ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿದ್ದು ಜಲಸಂಪನ್ಮೂಲ ಸಚಿವರು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಬೆಳಗಾವಿಯಲ್ಲಿ ನೀರಾವರಿ ಇಲಾಖೆ ಸಭೆ ನಡೆಸಿದರು. ಆದರೆ ರೈತರ ಸಮಸ್ಯೆ ಗಮನ ಸೆಳೆಯಬೇಕಿದ್ದ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯದ ಅತಿದೊಡ್ಡ ಜಿಲ್ಲೆಗಳಲ್ಲೊಂದಾದ ಬೆಳಗಾವಿಯಲ್ಲಿ ಸಪ್ತ ನದಿಗಳು ಹರಿದಿವೆ. ಅದರಲ್ಲೂ ಚಿಕ್ಕೋಡಿ ಉಪವಿಭಾಗದಲ್ಲಿ ದೂಧ್​ಗಂಗಾ, ವೇದಗಂಗಾ, ಕೃಷ್ಣಾ, ಘಟಪ್ರಭಾ, ಹಿರಣ್ಯಕೇಶಿ ನದಿಗಳು ಹರಿಯುತ್ತವೆ. ಚಿಕ್ಕೋಡಿ, ಹುಕ್ಕೇರಿ, ನಿಪ್ಪಾಣಿ, ರಾಯಬಾಗ, ಕಾಗವಾಡ, ಅಥಣಿ ತಾಲೂಕು ವ್ಯಾಪ್ತಿಯಲ್ಲಿ ನದಿ ದಡದಲ್ಲಿರುವ ಸುಮಾರು 63 ಗ್ರಾಮಗಳನ್ನು ಹೊರತುಪಡಿಸಿ ಉಳಿದೆಡೆ ನೀರಾವರಿ ಸೌಲಭ್ಯ ಪಡೆಯುವ ನಿಟ್ಟಿನಲ್ಲಿ ಹಲವು ಏತನೀರಾವರಿ ಯೋಜನೆಗಳನ್ನು ರೂಪಿಸಲಾಗಿದೆ. ಆದರೆ ಈ ಭಾಗದ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಸರ್ಕಾರದ ನಿರ್ಲಕ್ಷ್ಯದಿಂದ ಎಲ್ಲಾ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಇಂತಹ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಗೆ ನಿನ್ನೆ ಜಲಸಂಪನ್ಮೂಲ ಸಚಿವರು, ಡಿಸಿಎಂ ಡಿಕೆ ಶಿವಕುಮಾರ್​​ ಭೇಟಿ ನೀಡಿ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ್ದರು.

ಇದನ್ನೂ ಓದಿ: ಡಿಕೆ ಶಿವಕುಮಾರ್ ಬೆಳಗಾವಿಗೆ ಬಂದಿದ್ದರೂ ಜಿಲ್ಲಾ ಉಸ್ತುವಾರಿ ಗೈರು: ಕೊನೆಗೂ ಕಾರಣ ಕೊಟ್ಟ ಸತೀಶ್ ಜಾರಕಿಹೊಳಿ

ಈ ವೇಳೆ ಸಭೆಗೆ ತೆರಳಿ ರೈತರ ಸಮಸ್ಯೆ ಬಗೆ ಹರಿಸಬೇಕಿದ್ದ ಶಾಸಕರು ಗೈರಾಗಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕುಡಚಿ ಕಾಂಗ್ರೆಸ್ ಶಾಸಕ ಮಹೇಂದ್ರ ತಮ್ಮಣ್ಣವರ್, ಎಂಎಲ್​ಸಿ ಪ್ರಕಾಶ್ ಹುಕ್ಕೇರಿ ಹೊರತು ಪಡಿಸಿ ಯಾವೊಬ್ಬ ಜನಪ್ರತಿನಿಧಿಯೂ ರೈತರ ಸಮಸ್ಯೆ ಬಗ್ಗೆ ಗಮನ ಸೆಳೆಯುವ ಕೆಲಸ ಮಾಡಲಿಲ್ಲ. ಇತ್ತ ಬರಗಾಲವಿದ್ದರೂ ರೈತರ ಭೇಟಿ ಮಾಡುವ ಕಾರ್ಯಕ್ಕೂ ಮುಂದಾಗುತ್ತಿಲ್ಲ. ಡಿಸಿಎಂ ಸಭೆ ನಡೆಸಿದರೂ ಅವರ ಗಮನ ಸೆಳೆಯುತ್ತಿಲ್ಲ. ಅಧಿಕಾರ ನಡೆಸಲು ಆಗದಿದ್ದರೆ ಸರ್ಕಾರ ವಿಸರ್ಜನೆ ಮಾಡಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಲಿ ಅಂತಾ ರೈತರು ಆಗ್ರಹಿಸಿದ್ದಾರೆ.

ಚಿಕ್ಕೋಡಿ ತಾಲೂಕಿನ 18 ಗ್ರಾಮಗಳ 8500 ಹೆಕ್ಟೇರ್ ಪ್ರದೇಶಕ್ಕೂ ಹೆಚ್ಚು ಕೃಷಿಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಕರಗಾಂವ ಏತನೀರಾವರಿ ಯೋಜನೆಗೆ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಚಾಲನೆ ನೀಡಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಅದು ನೆನೆಗುದಿಗೆ ಬಿದ್ದಿದೆ. ಕಾಗವಾಡ ಮತಕ್ಷೇತ್ರದ 23 ಗ್ರಾಮಗಳ 23 ಸಾವಿರ ಹೆಕ್ಟೇರ್ ಪ್ರದೇಶ ಕೃಷಿಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಖಿಳೇಗಾಂವ ಬಸವೇಶ್ವರ ಏತನೀರಾವರಿ ಯೋಜನೆ, ಅಥಣಿ ತಾಲೂಕಿನ ಅಮ್ಮಾಜೇಶ್ವರಿ ಏತನೀರಾವರಿ ಯೋಜನೆ ಹೀಗೆ ಸಾಲು ಸಾಲು ಯೋಜನೆಗಳು ನೆನೆಗುದಿಗೆ ಬಿದ್ದಿವೆ.

ನದಿಯಲ್ಲಿ ನೀರಿದ್ದರೂ ಅದನ್ನ ಬಳಸಲಾರದ ಸ್ಥಿತಿ ರೈತನದ್ದಾಗಿದೆ. ಬೆಳಗಾವಿಗೆ ಭೇಟಿ ನೀಡಿದ ವೇಳೆ ಜಲಸಂಪನ್ಮೂಲ ಸಚಿವರು, ಡಿಸಿಎಂ ಡಿಕೆಶಿರನ್ನು ನೆನೆಗುದಿಗೆ ಬಿದ್ದ ಏತನೀರಾವರಿ ಯೋಜನೆಗಳ ಬಗ್ಗೆ ಪ್ರಶ್ನಿಸಿದ್ರೆ ಅವನ್ನೆಲ್ಲ ಸಭೆಯಲ್ಲಿ ಹೇಳಿದ್ದಾರೆ ನೋಡ್ತೀನಿ ಚರ್ಚೆ ಮಾಡ್ತೀನಿ ಎಂದಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರ ಪತನ ಬೆಳಗಾವಿಯಿಂದ ಶುರು: ಮುನಿರತ್ನ, ಬಿಜೆಪಿ ಶಾಸಕ

ಕೆಲ ಪ್ರಭಾವಿ ರಾಜಕಾರಣಿಗಳು ಜಲಾಶಯಗಳಿಂದ ತಮ್ಮ ಕ್ಷೇತ್ರಗಳಿಗೆ ಮಾತ್ರ ನೀರು ಹರಿಸುತ್ತಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್ ನಾನು ಅದನ್ನ ನೋಡ್ತೀನಿ, ಅನೇಕ ವಿಚಾರ ಚರ್ಚೆ ಆಗಿದೆ. ನೀರಾವರಿ ಸಹಕಾರ ಸಂಘಗಳನ್ನು ವಾಪಸ್ ಕಾರ್ಯ ಮುಕ್ತರಾಗಬೇಕು. ನೂರು ದಿನಗಳಲ್ಲಿ ಎಲ್ಲ ಚಾಲನೆ ಆಗಬೇಕು. ರೈತರಿಗೆ ನೀರು ಹರಿಸಲು ಜವಾಬ್ದಾರಿ ತಗೆದುಕೊಳ್ಳಬೇಕು ಮಧ್ಯದಲ್ಲಿ ನೀರು ಕಳ್ಳತನ ಮಾಡೋದಕ್ಕೆ ಕಡಿವಾಣ ಹಾಕಿ ಕೊನೆಯವರೆಗೆ ನೀರು ತಲುಪಬೇಕು ರೈತರೇ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಕ್ಷೇತ್ರದಲ್ಲಿ ರೈತರು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ಸಚಿವರಿಗೆ, ಡಿಸಿಎಂಗೆ ಮನವರಿಕೆ ಮಾಡಿಕೊಳ್ಳಲು ಆಗಲ್ಲ ಅಂದ್ರೆ ಜನಪ್ರತಿನಿಧಿಗಳನ್ನು ತಗೆದುಕೊಂಡು ನಾವೇನು ಮಾಡೋಣ ಅಂತಾ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ರೈತರ ಕಷ್ಟ ಆಲಿಸಲಿ, ನೆನೆಗುದಿಗೆ ಬಿದ್ದ ನೀರಾವರಿ ಯೋಜನೆಗಳ ಜಾರಿ ಮಾಡುವಲ್ಲಿ ಕಾರ್ಯಪ್ರವೃತ್ತರಾಗಲಿ ಎಂಬುದು ಸಾರ್ವಜನಿಕರ ಹಕ್ಕೊತ್ತಾಯ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.