ಬೆಳಗಾವಿಯಲ್ಲಿನ 30 ಬ್ಯೂಟಿ ಪಾರ್ಲರ್ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳ ದಾಳಿ
ಉತ್ತರ ಕರ್ನಾಟಕದಲ್ಲಿ ಬೆಳಗಾವಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ನಗರದಲ್ಲಿ ಗಲ್ಲಿಗೊಂದು ಪಾರ್ಲರ್ ಹುಟ್ಟಿಕೊಂಡಿವೆ. ಇಲ್ಲಿನ ಪಾರ್ಲರ್ ಸಿಬ್ಬಂದಿ ಈಗ ಮಾಡಬಾರದ ಕೆಲಸ ಮಾಡಿ ತಗಲಾಕಿಕೊಂಡಿದ್ದಾರೆ. ಬೆಳಗಾವಿ ಆರೋಗ್ಯ ಇಲಾಖೆ ದಿಢೀರ್ ದಾಳಿ ನಡೆಸಿ ಪಾರ್ಲರ್ ಮಾಲೀಕರಿಗೆ ಶಾಕ್ ಕೊಟ್ಟಿದೆ. ಈ ಕುರಿತಾದ ವರದಿ ಇಲ್ಲಿದೆ.

ಬೆಳಗಾವಿ, ಆಗಸ್ಟ್ 15: ಬೆಳಗಾವಿಯ (Belagavi) ಆರೋಗ್ಯ ಇಲಾಖೆ (Health Department) ಅಧಿಕಾರಿಗಳು ಶುಕ್ರವಾರ (ಆ.15) ನಗರದಲ್ಲಿನ 30 ಬ್ಯೂಟಿ ಪಾರ್ಲರ್‌ಗಳ (Beauty Parlour) ಮೇಲೆ ಏಕಾಏಕಿ ದಾಳಿ ನಡೆಸಿದರು. ಮೇಕಪ್, ಟ್ರೆಡಿಂಗ್, ವ್ಯಾಕ್ಸಿಂಗ್ ಮಾಡಬೇಕಿದ್ದ ಇಲ್ಲಿನ ಪಾರ್ಲರ್ ಸಿಬ್ಬಂದಿ ಮಾಡುತ್ತಿದ್ದದ್ದೇ ಬೇರೆಯಾಗಿತ್ತು. ಕೂದಲಿನ ಕಸಿ, ಚರ್ಮರೋಗ ಚಿಕಿತ್ಸೆ, ಮುಖದ ಕಾಂತಿ ಹೆಚ್ಚಿಸಲು ಕೆಮಿಕಲ್, ಸಿರೈಡ್ ಸೇರಿದಂತೆ ಚರ್ಮದ ಮೇಲೆ ದುಷ್ಪರಿಣಾಮ ಬೀರುವಂತಹ ವಸ್ತುಗಳನ್ನು ಬಳಸುತ್ತಿದ್ದರು.
ಈ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಸಾರ್ವಜನಿಕರು ಲಿಖಿತರೂಪದಲ್ಲಿ ದೂರು ನೀಡಿದ್ದರು. ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಡಿಸಿ ಮೊಹಮ್ಮದ್ ರೋಷನ್ ಅವರು ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಅಲ್ಲದೆ, ಎಲ್ಲ ಪಾರ್ಲರ್‌ಗಳ ಮೇಲೆ ದಾಳಿ ನಡೆಸುವಂತೆ ಸೂಚಿಸಿದ್ದರು. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಡಿಎಚ್‌ಒ ಡಾ. ಈಶ್ವರ ಗಡಾದಿ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಇಂದು 30 ಪಾರ್ಲರ್‌ಗಳ ಮೇಲೆ ದಾಳಿ ನಡೆಸಿದರು. ದಾಳಿ ವೇಳೆ ಸಾಕಷ್ಟು ಕೆಮಿಕಲ್ ವಸ್ತುಗಳು, ಸಿರೈಡ್‌ನಂತಹ ಔಷಧಿಗಳು ಪತ್ತೆಯಾದವು. ಈ ಸಂಬಂಧ ಆರೋಗ್ಯ ಇಲಾಖೆ ಅಧಿಕಾರಿಗಳು 10 ಬ್ಯೂಟಿ ಪಾರ್ಲರ್ಗಳನ್ನು ಜಪ್ತಿ ಮಾಡಿದ್ದು, 20 ಬ್ಯೂಟಿ ಪಾರ್ಲರ್ಗಳಿಗೆ ನೋಟಿಸ್ ನೀಡಿದ್ದಾರೆ.
“ನುರಿತ ತಜ್ಞ ವೈದ್ಯರು ಮಾತ್ರ ಕೂದಲು ಕಸಿ ಮಾಡಬೇಕು ಎಂಬ ನಿಯಮ ಇದೆ. ಅಲ್ಲದೇ, ಮುಖದ ಕಾಂತಿ ಹೆಚ್ಚಿಸಲು ಚರ್ಮದ ಮೇಲೆ ಪರಿಣಾಮ ಬೀರದಂತಹ ವಸ್ತುಗಳನ್ನು ಮಾತ್ರ ಬಳಸಬೇಕು ಎಂಬ ನಿಯಮಗಳಿವೆ. ಆದರೆ, ಬೆಳಗಾವಿಯಲ್ಲಿನ ಬಹುತೇಕ ಪಾರ್ಲರ್‌ಗಳು ಈ ನಿಯಮ ಪಾಲಿಸುತ್ತಿಲ್ಲ. ಬದಲಾಗಿ ಅರ್ಹತೆ ಇಲ್ಲದವರು ಕೂದಲು ಕಸಿ ಮಾಡುವ ಮೂಲಕ ಜನರ ಆರೋಗ್ಯದ ಜೊತೆಗೆ ಚೆಲ್ಲಾಟವಾಡುತ್ತಿವೆ” ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
“ಅಮಾಯಕ ಯುವತಿಯರು, ಮಹಿಳೆಯರಿಗೆ ಬಹುತೇಕ ಪಾರ್ಲರ್ ಸಿಬ್ಬಂದಿ ಮೋಸ ಮಾಡುತ್ತಿದ್ದಾರೆ. ಮೇಕಪ್, ಬ್ಲೀಚಿಂಗ್, ಫೇಸ್‌ವಾಶ್ ಮಾಡಲು ಕೆಮಿಕಲ್ ವಸ್ತುಗಳನ್ನು ಬಳಸುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಚರ್ಮರೋಗ ಬರುವ ಸಾಧ್ಯತೆ ಇದೆ. ಇಂತಹ ಪಾರ್ಲರ್‌ಗಳ ಮೇಲೆ ನಿರಂತರವಾಗಿ ಅಧಿಕಾರಿಗಳು ನಿಗಾ ಇಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
ಇದನ್ನೂ ಓದಿ: ಐಬ್ರೋ ಶೇಪ್ ಮಾಡುವ ಮುನ್ನ ಹುಷಾರು; ಸೌಂದರ್ಯ ಹೆಚ್ಚಿಸಲು ಹೋಗಿ ಅಪಾಯ ತಂದುಕೊಳ್ಳಬೇಡಿ
ಸದ್ಯ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತೆಗೆದುಕೊಂಡ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬ್ಯೂಟಿ ಪಾರ್ಲರ್ ನಡೆಸುತ್ತೇವೆ ಅಂತ ಜನರ ಆರೋಗ್ಯದ ಜೊತೆಗೆ ಚೆಲ್ಲಾಟವಾಡುವ ಎಲ್ಲರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ. ಸದ್ಯ ಸೀಜ್ ಮಾಡಿರುವ ಅಂಗಡಿಗಳ ಮಾಲೀಕರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಅದೇನೆ ಇರಲಿ ನಿಯಮಗಳನ್ನು ಮೀರಿ ಕಾರ್ಯನಿರ್ವಹಿಸುತ್ತಿದ್ದ ಪಾರ್ಲರ್‌ಗಳ ವಿರುದ್ಧ ಜಿಲ್ಲಾಡಳಿತ ಸಮರ ಸಾರಿದೆ. ಸಾರ್ವಜನಿಕರೂ ಪಾರ್ಲರ್‌ಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಇಲ್ಲವಾದರೆ ಹಣ ಕಳೆದುಕೊಳ್ಳುವ ಜೊತೆಗೆ ಸೌಂದರ್ಯ ಕಳೆದುಕೊಂಡು ಅನಾರೋಗ್ಯ ಪೀಡಿತರಾಗಬೇಕಾಗುತ್ತದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:51 pm, Fri, 15 August 25



