ಬೆಳಗಾವಿಯಲ್ಲಿ ಮರ್ಯಾದಾ ಹತ್ಯೆ; ಪ್ರೀತಿಸಿದವನ ಜೊತೆ ಹೋಗಿದ್ದಕ್ಕೆ ವಿಷ ಹಾಕಿದ ಅಣ್ಣ!

ಬೆಳಗಾವಿ ಜಿಲ್ಲೆಯಲ್ಲಿ ನಡೆದ ಮರ್ಯಾದೆ ಹತ್ಯೆ ಪ್ರಕರಣ ರಾಜ್ಯಾದ್ಯಂತ ಆತಂಕ ಮೂಡಿಸಿದೆ. ಪ್ರೀತಿಸಿದವನ ಜೊತೆ ಓಡಿ ಹೋದ ಕಾರಣಕ್ಕೆ 25 ವರ್ಷದ ಯುವತಿಯನ್ನು ಕುಟುಂಬಸ್ಥರೇ ವಿಷ ನೀಡಿ ಕೊಂದಿದ್ದಲ್ಲದೆ ಸಾಕ್ಷಿ ನಾಶಪಡಿಸಲು ಶವವನ್ನು ಸುಟ್ಟು ಹಾಕಿದ್ದಾರೆ. ಪ್ರಿಯಕರನ ದೂರಿನ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ಬೆಳಗಾವಿಯಲ್ಲಿ ಮರ್ಯಾದಾ ಹತ್ಯೆ; ಪ್ರೀತಿಸಿದವನ ಜೊತೆ ಹೋಗಿದ್ದಕ್ಕೆ ವಿಷ ಹಾಕಿದ ಅಣ್ಣ!
ಪ್ರೀತಿಸಿದವನ ಜೊತೆ ಹೋಗಿದ್ದಕ್ಕೆ ವಿಷ ಹಾಕಿದ ಅಣ್ಣ!
Image Credit source: google
Edited By:

Updated on: Apr 15, 2026 | 10:06 AM

ಬೆಳಗಾವಿ, ಏಪ್ರಿಲ್ 15: ಜಿಲ್ಲೆಯ ಹುಕ್ಕೇರಿ ತಾಲೂಕಿನ ನದಿಗುಡಿ ಪ್ರದೇಶದಲ್ಲಿ ನಡೆದ ಮರ್ಯಾದೆ ಹತ್ಯೆ (Honor Killing) ಪ್ರಕರಣವು ರಾಜ್ಯದಾದ್ಯಂತ ಆತಂಕ ಮೂಡಿಸಿದೆ. ಸತ್ತೆವ್ವಾ ಹೆಳವರ್ (25) ಎಂಬ ಯುವತಿಯನ್ನು ಕುಟುಂಬಸ್ಥರೇ ವಿಷ ನೀಡಿ ಹತ್ಯೆ ಮಾಡಿ, ಬಳಿಕ ಸಾಕ್ಷಿ ನಾಶಪಡಿಸಲು ಶವವನ್ನು ಸುಟ್ಟು ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ಮದುವೆಯ ಬಳಿಕವೂ ಪ್ರಿಯಕರನ ಜೊತೆ ಸಂಪರ್ಕ

ಸತ್ತೆವ್ವಾ ನದಿಗುಡಿ ಗ್ರಾಮದ ಕೃಷ್ಣಾ ಪಾಟೀಲ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಈ ಸಂಬಂಧ ಕುಟುಂಬಕ್ಕೆ ತಿಳಿದ ನಂತರ, ನಾಲ್ಕು ವರ್ಷಗಳ ಹಿಂದೆ ರಾಯಬಾಗ ತಾಲೂಕಿನ ಹನಬರಟ್ಟಿ ಗ್ರಾಮದ ಸಂತೋಷ ಹೆಳವಿ ಜೊತೆ ವಿವಾಹ ಮಾಡಲಾಗಿತ್ತು. ಆದಾಗ್ಯೂ, ಮದುವೆಯಾದ ಬಳಿಕವೂ ಸತ್ತೆವ್ವಾ ತನ್ನ ಪ್ರಿಯಕರ ಕೃಷ್ಣಾ ಜೊತೆ ಸಂಪರ್ಕದಲ್ಲಿದ್ದು, 17 ಫೆಬ್ರವರಿ 2026ರಂದು ಇಬ್ಬರೂ ಮನೆ ಬಿಟ್ಟು ಓಡಿ ಹೋಗಿ, ಸವದತ್ತಿ ತಾಲೂಕಿನ ಬೆಳವಡಿ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ಮನೆಗೆ ಕರೆಸಿ ವಿಷ ಹಾಕಿದ ಸಂಬಂಧಿಕರು

ಸುಮಾರು ಹದಿನೈದು ದಿನಗಳ ಹಿಂದೆ ಕುಟುಂಬಸ್ಥರು ಅವರನ್ನು ಪತ್ತೆಹಚ್ಚಿ ಮನೆಗೆ ಕರೆತಂದಿದ್ದರು. ಬಳಿಕ ಎರಡು ಕುಟುಂಬಗಳ ನಡುವೆ ರಾಜಿ ಸಂಧಾನವೂ ನಡೆದಿತ್ತು. ಕೃಷ್ಣನನ್ನು ಮರೆಯುವಂತೆ ಸತ್ತೆವ್ವಾಳ ಮೇಲೆ ಒತ್ತಡ ಹಾಕಲಾಗಿತ್ತು. ಆಕೆ ಒಪ್ಪದ ಹಿನ್ನೆಲೆಯಲ್ಲಿ, ಮೊದಲಿಗೆ ಮಹಾರಾಷ್ಟ್ರದ ಶಿರೋಳದಲ್ಲಿರುವ ಅಕ್ಕನ ಮನೆಗೆ ಕಳುಹಿಸಲಾಯಿತು. ಅಲ್ಲಿಯೂ ಒತ್ತಡ ಮುಂದುವರೆದ ಹಿನ್ನೆಲೆಯಲ್ಲಿ, ಸಾಂಗ್ಲಿ ಜಿಲ್ಲೆಯ ಅರಗ ಗ್ರಾಮಕ್ಕೆ ಕರೆದುಕೊಂಡು ಹೋಗಿ ಮಾರ್ಚ್ 21ರಂದು ವಿಷ ನೀಡಿ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ.

ಸತ್ತೆವ್ವಾಳ ಅಣ್ಣ ಶಾನೂರ ಹೆಳವರ್, ಚಿಕ್ಕಪ್ಪ ಪ್ರಕಾಶ್ ಹೆಳವರ್ ಮತ್ತು ಸಂಬಂಧಿ ಮಾಯಪ್ಪ ಹೆಳವಿ ಈ ಕೃತ್ಯವನ್ನೆಸಗಿದ್ದು, ಬಳಿಕ ಶವವನ್ನು ಸ್ಮಶಾನದಲ್ಲಿ ಸುಟ್ಟು ಹಾಕಿ, ಹಾಸಿಗೆ ಬಟ್ಟೆ ಸೇರಿಸಿ ಸಾಕ್ಷಿ ನಾಶಪಡಿಸಲಾಗಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ ಛತ್ತೀಸ್‌ಗಢದ ವಿದ್ಯುತ್ ಸ್ಥಾವರದಲ್ಲಿ ಬಾಯ್ಲರ್ ಸ್ಫೋಟ; 9 ಕಾರ್ಮಿಕರು ಸಾವು, 15 ಜನರಿಗೆ ಗಾಯ

ಆರೋಪಿಗಳು ಅರೆಸ್ಟ್

ಸತ್ತೆವ್ವಾ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಅನುಮಾನಗೊಂಡ ಪ್ರಿಯಕರ ಕೃಷ್ಣಾ, ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಈ ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಅವರು ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಸತ್ತೆವ್ವಾಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕೃಷ್ಣಾ ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Published On - 9:54 am, Wed, 15 April 26

ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More
Loading...
Unable to load recommendations.
Follow Us