AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಂಇಎಸ್‌ ಮುಖಂಡನಿಗೆ ಮಸಿ ಬಳಿದ ಕನ್ನಡ ಹೋರಾಟಗಾರರಿಗೆ ರೌಡಿಶೀಟರ್‌ ಪಟ್ಟ; ನಾಡವಿರೋಧಿ ಸರ್ಕಾರ ಎಂದು ಎಲ್ಲೆಡೆ ಆಕ್ರೋಶ

ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ರೌಡಿ ಚಟುವಟಿಕೆ ಮಾಡುವವರ ಮೇಲೆ ನಿಗಾ ಇಡುವುದಕ್ಕಾಗಿ ಪೊಲೀಸರು ಪಟ್ಟಿ ತಯಾರಿಸಿದ್ದು ಅದರಲ್ಲಿ ಕನ್ನಡಪರ ಹೋರಾಟಗಾರ ಸಂಪತ್‌ ಮತ್ತು ಅನಿಲ್ ಹೆಸರು ಇರುವುದು ಸಿಟ್ಟಿಗೆ ಕಾರಣವಾಗಿದೆ.

ಎಂಇಎಸ್‌ ಮುಖಂಡನಿಗೆ ಮಸಿ ಬಳಿದ ಕನ್ನಡ ಹೋರಾಟಗಾರರಿಗೆ ರೌಡಿಶೀಟರ್‌ ಪಟ್ಟ;  ನಾಡವಿರೋಧಿ ಸರ್ಕಾರ ಎಂದು ಎಲ್ಲೆಡೆ ಆಕ್ರೋಶ
ಅನಿಲ್ ದಡ್ಡಿಮನಿ, ಸಂಪತ್‌ ಕುಮಾರ್ ದೇಸಾಯಿ
TV9 Web
| Edited By: |

Updated on: Feb 11, 2023 | 11:13 AM

Share

ಬೆಳಗಾವಿ: MES ಮುಖಂಡ ದೀಪಕ್ ದಳವಿ ಮುಖಕ್ಕೆ ಮಸಿ ಬಳಿದಿದ್ದ ಪ್ರಕರಣದಲ್ಲಿ ಭಾಗಿಯಾದ ಕಾರಣ ಬೆಳಗಾವಿಯಲ್ಲಿ ಕನ್ನಡಪರ ಹೋರಾಟಗಾರ ಸಂಪತ್‌ ಕುಮಾರ್ ದೇಸಾಯಿ, ಅನಿಲ್ ದಡ್ಡಿಮನಿ ವಿರುದ್ಧ ರೌಡಿಶೀಟ್​ ಓಪನ್​ ಮಾಡಲಾಗಿದೆ. ರೌಡಿಶೀಟ್ ನೋಟಿಸ್ ನೋಡಿ ಕನ್ನಡಪರ ಹೋರಾಟಗಾರರು ಶಾಕ್ ಆಗಿದ್ದು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

2021ರ ಡಿಸೆಂಬರ್‌ನಲ್ಲಿ ಬೆಳಗಾವಿ ಅಧಿವೇಶನಕ್ಕೆ ಪ್ರತಿಯಾಗಿ ಎಂಇಎಸ್ ಆಯೋಜಿಸಿದ್ದ ಮಹಾಮೇಳಾವ್‌ಗೆ ನುಗ್ಗಿದ ಕೆಲವರು ಎಂಇಎಸ್ ಮುಖಂಡ ದೀಪಕ್ ದಳವಿಗೆ ಮಸಿ ಬಳಿದಿದ್ದರು. ಆ ಘಟನೆಯಲ್ಲಿ ಭಾಗಿಯಾಗಿದಕ್ಕೆ ಸಂಪತ್‌ ಕುಮಾರ್‌ ದೇಸಾಯಿ ಮತ್ತು ಅನಿಲ್‌ ದಡ್ಡಿ ಮನಿ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಬಳಿಕ ಅವರು ಜಾಮೀನಿನಲ್ಲಿ ಬಿಡುಗಡೆಯಾಗಿದ್ದರು. ಸದ್ಯ ಈಗ ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ರೌಡಿ ಚಟುವಟಿಕೆ ಮಾಡುವವರ ಮೇಲೆ ನಿಗಾ ಇಡುವುದಕ್ಕಾಗಿ ಪೊಲೀಸರು ಪಟ್ಟಿ ತಯಾರಿಸಿದ್ದು ಅದರಲ್ಲಿ ಕನ್ನಡಪರ ಹೋರಾಟಗಾರ ಸಂಪತ್‌ ಮತ್ತು ಅನಿಲ್ ಹೆಸರು ಇರುವುದು ಸಿಟ್ಟಿಗೆ ಕಾರಣವಾಗಿದೆ.

ಅನಿಲ್ ದಡ್ಡಿಮನಿ ವಿರುದ್ಧ ​​ಟಿಳಕವಾಡಿ ಠಾಣೆಯಲ್ಲಿ, ಸಂಪತ್‌ ಕುಮಾರ್ ವಿರುದ್ಧ ಎಪಿಎಂಸಿ ಠಾಣೆಯಲ್ಲಿ ರೌಡಿಶೀಟ್​ ಓಪನ್ ಆಗಿದೆ. ಪೊಲೀಸರು ಇಬ್ಬರಿಗೂ ನೋಟಿಸ್​ ನೀಡಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆ ಕಾರಣ ಕೇಳಿ ನೋಟಿಸ್​ ಜಾರಿ ಮಾಡಿದ್ದಾರೆ. ಶಾಂತಿ ಸುವ್ಯವಸ್ಥೆಗೆ ಭಂಗ ಉಂಟು ಮಾಡುವ ಸಾಧ್ಯತೆ ಹಿನ್ನೆಲೆ 50 ಸಾವಿರ ರೂ. ಮೊತ್ತದ ಸ್ವಯಂ ಮುಚ್ಚಳಿಕೆ ನೀಡುವಂತೆ ಹಾಗೂ ಹಾಗೂ ಇಬ್ಬರೂ ಜಾಮೀನುದಾರರಿಂದ ಮುಚ್ಚಳಿಕೆ ಪಡೆಯುವಂತೆ ನೋಟಿಸ್​ನಲ್ಲಿ ಸೂಚಿಸಲಾಗಿದೆ.

ಕನ್ನಡಪರ ಹೋರಾಟಗಾರರ ಆಕ್ರೋಶ

ಸಂಪತ್‌ಕುಮಾರ್, ಅನಿಲ್‌ ವಿರುದ್ಧದ ರೌಡಿಶೀಟ್ ಕೈಬಿಡಲು ಆಗ್ರಹಿಸಿ ಸರ್ಕಾರ, ಪೊಲೀಸರ ಕ್ರಮಕ್ಕೆ ಕನ್ನಡಪರ ಹೋರಾಟಗಾರರು ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಅಭಿಯಾನ ಶುರುವಾಗಿದೆ. ಹ್ಯಾಷ್​ಟ್ಯಾಗ್​​ ನಾಡವಿರೋಧಿ ಸರ್ಕಾರ ಎಂಬ ಹೆಸರಿನಲ್ಲಿ ಅಭಿಯಾನ ಮಾಡಲಾಗುತ್ತಿದ್ದು ರಾಜ್ಯ ಸರ್ಕಾರದ ವಿರುದ್ಧ ಕನ್ನಡಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.