ಬೆಳಗಾವಿ, ಡಿಸೆಂಬರ್ 06: ತೆಲಂಗಾಣ ಚುನಾವಣಾ ಪ್ರಚಾರದ ವೇಳೆ ಸಚಿವ ಜಮೀರ್ ಅಹ್ಮದ್ ಖಾನ್ (zameer ahmed khan) ಬಿಜೆಪಿ ಶಾಸಕರು ಕೂಡ ನಮಸ್ಕಾರ ಸ್ಪೀಕರ್ ಸಾಬ್ ಎನ್ನುತ್ತಾರೆ ಎಂದು ಹೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಸದ್ಯ ಈ ವಿಚಾರ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಗದ್ದಲಕ್ಕೆ ಕಾರಣವಾಗಿದೆ. ಸ್ವಲ್ಪ ಸಚಿವ ಜಮಿರ್ ಅಹ್ಮದ್ ಖಾನ್ಗೆ ಮುಖ ತೋರಿಸಲು ಹೇಳಿ. ಕಲಾಪಕ್ಕೆ ಬರುತ್ತಿಲ್ಲ ಎಂದು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರಶ್ನಿಸಿದ್ದಾರೆ. ಜಮೀರ್ ಹೆಸರು ಪ್ರಸ್ತಾಪ ಆಗುತ್ತಿದ್ದಂತೆ ಬಿಜೆಪಿ ಸದಸ್ಯರು ಗದ್ದಲ ಸೃಷ್ಟಿಸಿದ್ದಾರೆ.
ಸಚಿವ ಜಮೀರ್ಗೆ ಸ್ಪೀಕರ್ ಸ್ಥಾನದ ಮೇಲೆ ವಿಶ್ವಾಸ ಇಲ್ಲ ಎಂದು ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ಜಮೀರ್ ಸ್ಪೀಕರ್ ಸ್ಥಾನಕ್ಕೆ ಧರ್ಮದ ಲೇಪನ ಮಾಡಿ ಮಾತನಾಡಿದ್ದಾರೆ. ಸ್ಪೀಕರ್, ಸಭಾಪತಿ ಸ್ಥಾನಕ್ಕೆ ಗೌರವ ಇಲ್ಲ ಅಂತಾ ಅವರು ಬಂದಿಲ್ವಾ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಜಮೀರ್ ಅಹ್ಮದ್ ಖಾನ್ ವಿವಾದಾತ್ಮಕ ಹೇಳಿಕೆ: ಡಿಸೆಂಬರ್ 4 ರಂದು ಬೆಳಗಾವಿಯಲ್ಲಿ ಬಿಜೆಪಿ ಪ್ರತಿಭಟನೆ
ಈ ವೇಳೆ ಜಮೀರ್ ವೈಯಕ್ತಿಕ ಕೆಲಸಕ್ಕೆ ಹೋಗಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ. ಸಚಿವರು ಸದನಕ್ಕೆ ಗೈರಾಗುವುದು ಸರಿಯಲ್ಲ ಎಂದು ಸಭಾಪತಿ ಹೊರಟ್ಟಿ ಹೇಳಿದ್ದಾರೆ. ನಾರಾಯಣಸ್ವಾಮಿ ಮಾತನಾಡಿ, ಸರ್ಕಾರಕ್ಕೆ ಸಭಾಪತಿ ಛಾಟಿ ಬೀಸಬೇಕು, ಮುಖ ತೋರಿಸಿ ಅಂತ ಮಾತ್ರ ಹೇಳಿದರೆ ಹೇಗೆ ಎಂದಿದ್ದಾರೆ.
ಇದನ್ನೂ ಓದಿ: Belagavi session: ಬಿಜೆಪಿ ಕಾಂಗ್ರೆಸ್ಗೆ ರೆಬೆಲ್ ಸ್ಟಾರ್ಗಳ ತಲೆನೋವು: ಸ್ವಪಕ್ಷದ ವಿರುದ್ಧವೇ ಈ ನಾಯಕರ ಆಕ್ರೋಶ!
ರಘುನಾಥ್ ರಾವ್ ಮಲ್ಕಾಪುರೆ ಮಾತನಾಡಿ, ಜಮೀರ್ ಅಹ್ಮದ್ ಖಾನ್ ಯಾವ ಕಾರಣಕ್ಕೆ ತಮ್ಮ ಅನುಮತಿ ಕೇಳಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಸದನ ನಡೆಯುವ ಸಂದರ್ಭದಲ್ಲಿ ಯಾರಿಗಾದರೂ ಅಪ್ಪಣೆ ಪಡೆಯುವಾಗ ಸೂಕ್ತ ಕಾರಣ ಬೇಕು. ಅವರ ಹೇಳಿಕೆ, ನಡವಳಿಕೆ ನೋಡಿದರೆ ಉದ್ದೇಶಪೂರ್ವಕವಾಗಿ ಸದನದಿಂದ ದೂರ ಉಳಿಯುತ್ತಿದ್ದಾರೆ. ತಮಗೆ ಜಮೀರ್ ಅಹ್ಮದ್ ಖಾನ್ ಕೊಟ್ಟ ಪತ್ರ ಸಭಾಪತಿಗಳು ಬಹಿರಂಗವಾಗಿ ಓದಲಿ ಎಂದು ಹೇಳಿದ್ದಾರೆ.
ಸಚಿವ ಜಮೀರ್ ಮಾತಿಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ನಾವು ಸ್ಪೀಕರ್ ಸ್ಥಾನಕ್ಕೆ ಗೌರವ ಕೊಡುತ್ತೇವೆ ಅಂತ ಅಶೋಕ್ ಹೇಳಿದ್ದರು. ಸಿಟಿ ರವಿಯಂತೂ ಸ್ಪೀಕರ್ ಸ್ಥಾನ ಮಸೀದಿ ಮೌಲ್ವಿಯ ಹುದ್ದೆ ಅಲ್ಲ ಅಂದಿದ್ದರು. ಇನ್ನು ಅಶ್ವತ್ಥ್ ನಾರಾಯಣ ಆ ವಿಕೆಟ್ ಉದುರಲೇಬೇಕು ಅಂತ ಖಾರವಾಗಿ ಕುಟುಕಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.