Belagavi News Live Updates: ಕರವೇ ಅಧ್ಯಕ್ಷ ನಾರಾಯಣಗೌಡ ಪೊಲೀಸರ ವಶಕ್ಕೆ; ಕ್ಷಣ ಕ್ಷಣದ ಅಪ್ಡೇಟ್ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Belagavi Violence Live Updates: ಕರವೇ ನಡೆ ಬೆಳಗಾವಿ ಕಡೆ ಸ್ಲೋಗನ್ ಅಡಿಯಲ್ಲಿ ಕಾರ್ಯಕರ್ತರು ಧರಣಿ ನಡೆಸುತ್ತಿದ್ದಾರೆ. ಸದ್ಯ ಹೋರಾಟಕ್ಕಿಳಿದಿದ್ದ ಕರವೇ ಪ್ರವಿಣ್ ಶೆಟ್ಟಿ ಬಣದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
LIVE NEWS & UPDATES
-
ಹೂಡಾಗೆ ವಿಕೆಟ್
ಏಕದಿನದಲ್ಲಿ ಮೊದಲ ಓವರ್ ಬೌಲಿಂಗ್ ಮಾಡಿದ ದೀಪಕ್ ಹೂಡಾ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 31ನೇ ಓವರ್‌ನ ಐದನೇ ಎಸೆತದಲ್ಲಿ ಬ್ರೂಕ್ಸ್ ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸಿದರು ಆದರೆ ಸೂರ್ಯಕುಮಾರ್ ಯಾದವ್‌ಗೆ ಕ್ಯಾಚ್ ನೀಡಿದರು. ಬ್ರೂಕ್ಸ್ 44 ರನ್ ಗಳಿಸಿದರು.
-
ಪೊಲೀಸ್ ವ್ಯವಸ್ಥೆ ಹದಗೆಡ್ತಾ: ಡಿಕೆಶಿ ಪ್ರಶ್ನೆ
ಬೆಳಗಾವಿ: ಭಾರತದ ದೊಡ್ಡ ಆಸ್ತಿ ನಮ್ಮ ಸಂಸ್ಕೃತಿ. ಮಹಾನ್ ನಾಯಕರ ಪ್ರತಿಮೆ ವಿರೂಪಗೊಳಿಸುವುದು ಹಾಗೂ ಕನ್ನಡ ಬಾವುಟವನ್ನು ಸುಡುವ ಕೆಲಸ ಅಲ್ಲಲ್ಲಿ ನಡೆದಿದೆ. ಇದೆಲ್ಲಾ ಹೇಗಾಯಿತು? ಮೊದಲು ಈ ಬಗ್ಗೆ ವಿಮರ್ಶೆಯಾಗಬೇಕಾಗಿದೆ. ಹಳಶಿ ಗ್ರಾಮದಲ್ಲಿ ಬಸವಣ್ಣ ಪ್ರತಿಮೆಗೂ ಮಸಿ ಬಳಿದಿದ್ದಾರೆ. ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಹದಗೆಟ್ಟಿದೆಯೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.
-
ಕನ್ನಡಿಗರ ವಿರುದ್ಧ ಮೊಕದ್ದಮೆ ಬೇಡ: ಪುಟ್ಟಣ್ಣ
ಬೆಳಗಾವಿ: ರಾಯಣ್ಣ ಹಾಗೂ ಶಿವಾಜಿ ಪ್ರತಿಮೆಗಳಿಗೆ ಅವಮಾನ ಮಾಡಿರುವುದನ್ನು ನಾನು ಖಂಡಿಸುತ್ತೇನೆ. ಕನ್ನಡಿಗರ ವಿರುದ್ಧ ಮೊಕದ್ದಮೆ ಹಾಕಬೇಡಿ. ಎಂಇಎಸ್ ಪುಂಡರನ್ನ ಗಡಿಪಾರು ಮಾಡಿದರೆ ಸಾಲದು, ಅವರ ವಿರುದ್ಧ ಕೋಕಾ ಆ್ಯಕ್ಟ್ ಹಾಕಬೇಕು ಎಂದು ಸರ್ಕಾರಕ್ಕೆ ವಿಧಾನ ಪರಿಷತ್ನಲ್ಲಿ ಸದಸ್ಯ ಪುಟ್ಟಣ್ಣ ಆಗ್ರಹಿಸಿದರು.
ನಮ್ಮದು ಒಂದು ದಿನದ ಹೋರಾಟವಲ್ಲ: ಕರವೇ ನಾಯಕ ಪ್ರವೀಣ್ ಶೆಟ್ಟಿ
ಬೆಳಗಾವಿ: ಪೊಲೀಸ್ ವಶದಿಂದ ಬಿಡುಗಡೆಯಾದ ಬಳಿಕ ಕರ್ನಾಟಕ ರಕ್ಷಣಾ ವೇದಿಕೆಯ ಒಂದು ಬಣದ ನಾಯಕ ಪ್ರವೀಣ್ ಶೆಟ್ಟಿ, ನಮ್ಮ ಹೋರಾಟ ಒಂದು ದಿನಕ್ಕೆ ಸೀಮಿತವಲ್ಲ. ಎಂಇಎಸ್ ಪುಂಡಾಟ ಹಾಗೂ ಅಟ್ಟಹಾಸ ಕೊನೆಯಾಗುವವರೆಗೂ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ. ಸರ್ಕಾರಕ್ಕೆ ಎರಡು ದಿನಗಳ ಕಾಲಾವಕಾಶ ಕೊಟ್ಟಿದ್ದೇವೆ. ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ ಕರ್ನಾಟಕ ಬಂದ್ಗೆ ಕರೆ ನೀಡಲು ಎಲ್ಲಾ ಹೋರಾಟಗಾರರು ತೀರ್ಮಾನಿಸಿದ್ದೇವೆ ಎಂದರು.
ಬಸವಣ್ಣನ ಚಿತ್ರಕ್ಕೆ ಮಸಿ ಬಳಿದ ಕಿಡಿಗೇಡಿಗಳು
ಬೆಳಗಾವಿ: ಖಾನಾಪುರ ತಾಲ್ಲೂಕಿನ ಹಲಶಿ ಗ್ರಾಮದಲ್ಲಿ ಬಸವಣ್ಣನ ಚಿತ್ರಪಟಕ್ಕೆ ಕಿಡಿಗೇಡಿಗಳು ಮಸಿ ಬಳಿದಿದ್ದಾರೆ. ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ವರದಿಯಾಗಿದೆ.
ಚಾಮರಾಜನಗರ: ರಾಯಣ್ಣ ಭಾವಚಿತ್ರಕ್ಕೆ ಕ್ಷೀರಾಭಿಷೇಕ
ಚಾಮರಾಜನಗರ: ಬೆಳಗಾವಿಯಲ್ಲಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿರುವುದನ್ನು ಖಂಡಿಸಿರುವ ಚಾಮರಾಜನಗರದ ನಾಗರಿಕರು ನಗರದ ಭುವನೇಶ್ವರಿ ವೃತ್ತದಲ್ಲಿ ರಾಯಣ್ಣ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಮಹಾರಾಷ್ಟ್ರ ಸರ್ಕಾರ, ಎಂಇಎಸ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ಗೋಕಾಕ್ ನಗರದಲ್ಲೂ ಕರವೇ ಕಾರ್ಯಕರ್ತರಿಂದ ಪ್ರತಿಭಟನೆ
ಗೋಕಾಕ್ ನಗರದಲ್ಲೂ ಕರವೇ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯುತ್ತಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಎಂಇಎಸ್ ವಿರುದ್ಧ ಧಿಕ್ಕಾರ ಕೂಗಿ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಪ್ಪತ್ತಕ್ಕೂ ಅಧಿಕ ಹೋರಾಟಗಾರರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
MES, ಶಿವಸೇನೆ ಬ್ಯಾನ್ ಆಗುವವರೆಗೂ ಸುಮ್ಮನಿರುವುದಿಲ್ಲ; ಅಶ್ವಿನಿ ಗೌಡ ವಾಗ್ದಾಳಿ
MES, ಶಿವಸೇನೆ ಬ್ಯಾನ್ ಆಗುವವರೆಗೂ ಸುಮ್ಮನಿರುವುದಿಲ್ಲ. ಹೇಡಿಗಳಂತೆ ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ಮಾಡುತ್ತಿದ್ದೀರಿ. ಮಹಿಳೆಯರು ಬೀದಿಗಿಳಿಯುತ್ತೇವೆಂದು ಎಂಇಎಸ್‌ಗೆ ಎಚ್ಚರಿಕೆ ನೀಡಿದ ಕರವೇ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಅಶ್ವಿನಿ ಗೌಡ, ಕನ್ನಡಿಗರ ಪರ ಇನ್ನಾದರೂ ಬೆಳಗಾವಿ ಶಾಸಕರು ಮಾತನಾಡಲಿ. ನಿಮ್ಮ ರಾಜಕೀಯ ಲಾಭಕ್ಕೆ MESಗೆ ಹಿಂಬಾಗಿಲಿನಿಂದ ಬೆಂಬಲ ಮಾಡುತ್ತಿದ್ದೀರಿ. ಎಂಇಎಸ್ ಪುಂಡರನ್ನ ಜೈಲಿನಿಂದ ಬಿಡಿಸಿಕೊಂಡು ಬರ್ತೀರಿ ಅಂತ ಬೆಳಗಾವಿ ಶಾಸಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮುಲಾಜಿಲ್ಲದೆ ಎಂಇಎಸ್ ಮತ್ತು ಶಿವಸೇನೆ ನಿಷೇಧಿಸುವ ಕೆಲಸ ಸರ್ಕಾರ ಮಾಡಬೇಕು; ನಾರಾಯಣಗೌಡ
ಕರ್ನಾಟಕದಲ್ಲಿ ಭಯೋತ್ಪಾದಕರು ಮಾಡುವ ಕೆಲಸ ಎಂಇಎಸ್ ಮತ್ತು ಶಿವಸೇನೆ ಮಾಡುತ್ತಿದೆ. ಕರ್ನಾಟಕದಲ್ಲಿ ಇವತ್ತು ಎಂಇಎಸ್, ಶಿವಸೇನೆ ಪುಂಡಾಟಿಕೆ ಗಮನಿಸುತ್ತಿದ್ದೇವೆ. ಪಾಕಿಸ್ತಾನ ಭಾರತದ ಗಡಿಯಲ್ಲಿ ಭಯೋತ್ಪಾದನೆ ಮಾಡಿದ್ತೆ. ಕರ್ನಾಟಕದಲ್ಲಿ ಎಂಇಎಸ್ ಶಿವಸೇನೆ ಭಯೋತ್ಪಾದನೆ ಮಾಡುತ್ತಿದೆ. ಮುಲಾಜಿಲ್ಲದೆ ಎಂಇಎಸ್ ಮತ್ತು ಶಿವಸೇನೆ ನಿಷೇಧಿಸುವ ಕೆಲಸ ಸರ್ಕಾರ ಮಾಡಬೇಕು. ಬೆಳಗಾವಿ ಜಿಲ್ಲೆಯಿಂದ ಏಳು ಜನ ಗೆದ್ದು ಬರುತ್ತಿದ್ದರು, ಪಾಲಿಕೆ ಕೂಡ ಎಂಇಎಸ್ ಕೈಯಲ್ಲಿತ್ತು. ಬೆಳಗಾವಿಯಲ್ಲಿ ಈಗ ಎಂಇಎಸ್ ರಾಜಕೀಯವಾಗಿ ನೆಲ ಕಚ್ಚಿದೆ. ಇದಕ್ಕೆ ಕಾರಣ ಕರವೇ ಮತ್ತು ಕನ್ನಡಪರ ಸಂಘಟನೆಗಳು. ವಾಟಾಳ್ ನಾಗರಾಜ ಬುಧವಾರ ಸಭೆ ಕರೆಯುವ ವಿಚಾರ ನನಗೆ ಗೊತ್ತಿಲ್ಲ. ನೋಡೋಣ ನನಗೆ ಅವರು ಹೇಳಿದ ಮೇಲೆ ಚರ್ಚೆ ಮಾಡುತ್ತೇನೆ. ಬೆಳಗಾವಿಯಲ್ಲಿ ಮರಾಠಿಗರ ಮೇಲೆ ದಬ್ಬಾಳಿಕೆ ಮಾಡ್ತಾರೆ ಅಂತಾ ಮಹಾರಾಷ್ಟ್ರ ಸಿಎಂ ಹೇಳ್ತಾರೆ. ಕೇಂದ್ರ ಸರ್ಕಾರಕ್ಕೆ ನಾವು ಪತ್ರ ಬರೆದಿದ್ದೇವೆ ಅಂತಾ ಹೇಳ್ತಾರೆ. ಅವರಿಗೆ ಒಕ್ಕೂಟ ವ್ಯವಸ್ಥೆ ಮೇಲೆ ಕಳಕಳಿ ಇರೋದಾದ್ರೇ ಪುಂಡರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಬಾವುಟ ಸುಡಬೇಕು ಅಂದ್ರೇ ನೂರು ಬಾವುಟ ಸುಡ್ತೇವಿ. ಎನೂ ಬೇಕಾದರೂ ಮಾಡಬೇಕು ಅಂದ್ರೇ ನಮಗೆ ಧೈರ್ಯ ಇದೆ. ಮಹಾರಾಷ್ಟ್ರ ಸರ್ಕಾರ ರಾಜಕಾರಣಿಗಳು ನಮಗೆ ಪಾಠ ಹೇಳುವ ಅವಶ್ಯಕತೆ ಇಲ್ಲ. ಇದು ಒಂದು ದಿನ ಹೋರಾಟ ಅಲ್ಲಾ ರಾಜ್ಯ ಸರ್ಕಾರ ಸರಿಯಾದ ತೀರ್ಮಾನ ತೆಗೆದುಕೊಳ್ಳುವವರೆಗೂ ಹೋರಾಟ ಮುಂದುವರೆತ್ತೆ ಅಂತ ಟಿವಿ9ಗೆ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಹೇಳಿಕೆ ನೀಡಿದ್ದಾರೆ
ಸುವರ್ಣ ಸೌಧದ ಕಡೆ ನುಗ್ಗಲು ಮಹಿಳೆಯರಿಂದ ಯತ್ನ
ಸದನದಲ್ಲಿ ರಮೇಶ್ ಕುಮಾರ್ ಅವಹೇಳನಕಾರಿ ಹೇಳಿಕೆ ಖಂಡಿಸಿ ಬಿಜೆಪಿ ಮಹಿಳಾ ಘಟಕದಿಂದ ಪ್ರತಿಭಟನೆ ನಡೆಯುತ್ತಿದೆ. ಬೆಳಗಾವಿ ಸುವರ್ಣ ಗಾರ್ಡನ್ ಮುಂದೆ ಪ್ರತಿಭಟನೆ ನಡೆಸುತ್ತಿದ್ದು, ಸುವರ್ಣ ಸೌಧದ ಕಡೆ ನುಗ್ಗಲು ಮಹಿಳೆಯರು ಯತ್ನಿಸಿದ್ದಾರೆ.
ಸುವರ್ಣ ಸೌಧಕ್ಕೆ ಕರವೇ ಕಾರ್ಯಕರ್ತರಿಂದ ಮುತ್ತಿಗೆ ಸಾಧ್ಯತೆ
ಸುವರ್ಣ ಸೌಧಕ್ಕೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕುವ ಸಾಧ್ಯತೆಯಿದೆ. ಬೆಳಗಾವಿಯ ಸುವರ್ಣ ಸೌಧ ಮುಂದೆ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿದೆ.
ಚಿತ್ರದುರ್ಗ ಡಿಸಿ ಕಚೇರಿ ಮೂಲಕ ಸಿಎಂ ಬೊಮ್ಮಾಯಿಗೆ ಮನವಿ ಪತ್ರ
ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ ವಿರೋಧಿಸಿ ಚಿತ್ರದುರ್ಗದಲ್ಲಿ ಕರವೇಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಡಿಸಿ ಕಚೇರಿ ಮೂಲಕ ಸಿಎಂ ಬೊಮ್ಮಾಯಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಬೆಳಗಾವಿ ಮಹಾಂತ ಭವನದಲ್ಲೂ ಕರವೇ ಪ್ರತಿಭಟನೆ
ಬೆಳಗಾವಿ ಮಹಾಂತ ಭವನದಲ್ಲೂ ಕರವೇ ಪ್ರತಿಭಟನೆ ನಡೆಸುತ್ತಿದ್ದಾರೆ. ಪೊಲೀಸರ ವಶದಲ್ಲಿರುವ ಕರವೇ ಕಾರ್ಯಕರ್ತರು ಧರಣಿ ನಡೆಸುತ್ತಿದ್ದಾರೆ.
ಮಹಾರಾಷ್ಟ್ರದ ಲಾರಿ ತಡೆದು ಕರವೇ ಕಾರ್ಯಕರ್ತರ ಆಕ್ರೋಶ
ಬೆಳಗಾವಿಯಲ್ಲಿ ಮಹಾರಾಷ್ಟ್ರದ ಲಾರಿ ತಡೆದು ಕರವೇ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಲಾರಿ ಮೇಲೆ ಹತ್ತಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಿರೇಬಾಗೇವಾಡಿ ಬಳಿ ರಾ.ಹೆ.4ರಲ್ಲಿ ಘಟನೆ ನಡೆದಿದೆ.
ಎಂಇಎಸ್ ಕೃತ್ಯ ಹೇಯ ಕೃತ್ಯ, ಹೇಡಿಗಳು ಮಾಡುವ ಕೆಲಸ ಇದು;
ಎಂಇಎಸ್ ಕೃತ್ಯ ಹೇಯ ಕೃತ್ಯ, ಹೇಡಿಗಳು ಮಾಡುವ ಕೆಲಸ ಇದು. ಮಧ್ಯರಾತ್ರಿ ರಾಯಣ್ಣ ಪ್ರತಿಮೆ ವಿಕೃತ ಮಾಡುವಂತಹ ವಿಕೃತ ಮನೋಭಾವ ಇದು ದೊಡ್ಡ ಸಾಧನೆ ಅಲ್ಲ. ಯಾರೇ ಮಾಡಿದ್ರು ಇದು ಮರಾಠಿಗರಿಗೆ ಮಾಡಿದ ದ್ರೋಹ. ದೇಶ ಭಕ್ತಿನ, ಸ್ವಾತಂತ್ರ ವೀರ ಯೋಧನ ಬಗ್ಗೆ ಅಪಚಾರವಾಗೋದು ಎಲ್ಲರೂ ತಲೆ ತಗ್ಗಿಸೋ ವಿಚಾರ. ಇದರಲ್ಲಿ ಯಾವುದೇ ಸಂಘಟನೆ ಪಾಲ್ಗೊಂಡಿರಲಿ ಅಂತಹ ಸಂಘಟನೆಗಳನ್ನ ಬ್ಯಾನ್ ಮಾಡುವ ಜೊತೆ ಗಡಿಪಾರು ಮಾಡಬೇಕು. ಯಾರು ಕೃತ್ಯದ ಹಿಂದೆ ಇರೋ ಮೂಲ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ನಮ್ಮ ನಾಡಿನ ನೆಲದಲ್ಲಿ ಬದುಕುವ ವ್ಯಕ್ತಿಗಳು ಇಂತಹ ಕೃತ್ಯ ಮಾಡಿರೋದು ಘೋರ ಅಪರಾಧ. ನಮ್ಮ ನೀರು, ನಮ್ಮ ಅನ್ನ ಬಳಸಿಕೊಳ್ಳೊರು ಇಂತಹ ಕೆಲಸ ಮಾಡೋದು ಹೇಡಿತನದ ಕೆಲಸ. ಘೋರ ಕೆಲಸ. ಕಾನೂನು ವ್ಯಾಪ್ತಿಯಲ್ಲಿ ಇರೋದು ಈ ಬಗ್ಗೆ ಸರ್ಕಾರ ತೀರ್ಮಾನ ಮಾಡಬೇಕು. ನಾವು ಹೊರ ನೋಟದಲ್ಲಿ ಬ್ಯಾನ್ ಮಾಡಿ ಅಂತ ಹೇಳೋದು ಬೇರೆ. ಆದ್ರೆ ಕಾನೂನಾತ್ಮಕವಾಗಿ ಹೇಗೆ ಇದನ್ನ ಬ್ಯಾನ್ ಮಾಡಬೇಕು ಅಂತ ಸರ್ಕಾರ ತೀರ್ಮಾನ ಮಾಡಬೇಕು ಅಂತ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರ ಕಾರು ತಡೆಯಲು ಮುಂದಾದ ಕಾರ್ಯಕರ್ತರು
ಮಹಾರಾಷ್ಟ್ರ ಕಾರು ತಡೆಯಲು ಕಾರ್ಯಕರ್ತರು ಮುಂದಾಗಿದ್ದಾರೆ. ಮಹಾರಾಷ್ಟ್ರ ಕಾರು ಬರುತ್ತಿದ್ದಂತೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಬಳಿಕ ಕಾರು ಮುಂದೆ ಹೋಗಲು ಪೊಲೀಸರುಅನುವು ಮಾಡಿ ಕೊಟ್ಟಿದ್ದಾರೆ. ಕಾರಿನ ಮುಂದೆ ಗುದ್ದಿ ನಂಬರ್ ಪ್ಲೇಟ್ ಕಿತ್ತು ಕಾರ್ಯಕರ್ತರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
MES ಪುಂಡಾಟಿಕೆ ಖಂಡಿಸಿ ಆನೇಕಲ್ನಲ್ಲಿ ಧರಣಿ
MES ಪುಂಡಾಟಿಕೆ ಖಂಡಿಸಿ ಆನೇಕಲ್ ಪಟ್ಟಣದ ದೇವರಕೊಂಡಪ್ಪ ವೃತ್ತದಿಂದ ತಾಲೂಕು ಕಚೇರಿವರೆಗೆ ಕರವೇ ಸಂಘಟನೆ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ಮಾಡಿದ್ದಾರೆ. ಕರವೇ ಶಿವರಾಮೇಗೌಡರ ಬಣದಿಂದ ಪ್ರತಿಭಟನೆ ನಡೆಯುತ್ತಿದ್ದು, ರಾಯಣ್ಣನ ಪ್ರತಿಮೆ ಧ್ವಂಸ ಮಾಡಿದ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಎಂಇಎಸ್ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಅಂತ ಎಂಇಎಸ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರವೇ ಮಹಿಳಾ ಕಾರ್ಯಕರ್ತರಯನ್ನ ಏಳೆದುಕೊಂಡು ಹೋಗುತ್ತಿರುವ ಪೊಲೀಸರು
ಮಹಿಳಾ ಪೊಲೀಸರ ಜೊತೆ ಕಾರ್ಯಕರ್ತೆಯರು ವಾಗ್ವಾದ ನಡೆಸುತ್ತಿದ್ದಾರೆ. ಒತ್ತಾಯ ಪೂರ್ವಕವಾಗಿ ಗಾಡಿಯಿಂದ ಕೆಳಗಿಳಿಸಿದಕ್ಕೆ ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾಹನದಿಂದ ಕೆಳಗಿಳಿಸಲು ಹರಸಹಾಸ
ಧರಣಿ ನಿರತರನ್ನು ಕೆಎಸ್ಆರ್ಪಿ ವಾಹನದಿಂದ ಕೆಳಗಿಳಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ
ಬೆಳಗಾವಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಪೊಲೀಸ್ ವಾಹನವೇರಿ ಕರವೇ ಕಾರ್ಯಕರ್ತೆಯರ ಧರಣಿ
ಹಿರೇಬಾಗೇವಾಡಿ ಬಳಿ ಪೊಲೀಸ್ ವಾಹನವೇರಿ ಕರವೇ ಕಾರ್ಯಕರ್ತೆಯರು ಧರಣಿ ನಡೆಸುತ್ತಿದ್ದಾರೆ.
ಮಾಹಾರಷ್ಟ್ರ ಸಿಎಂ ಉದ್ಧವ್ ಠಾಕ್ರೆ ಪ್ರತಿಕೃತಿಗೆ ಚಪ್ಪಲಿ ಏಟು!
ಬಾಗಲಕೋಟೆ ನಗರದಲ್ಲಿ ಕರವೇ ಶಿವರಾಮೇಗೌಡರ ಬಣದಿಂದ ಪ್ರತಿಭಟನೆ ನಡೆಯುತ್ತಿದೆ. ಮಹಾರಷ್ಟ್ರ ಸಿಎಂ ಉದ್ಧವ್ ಠಾಕ್ರೆ ಪ್ರತಿಕೃತಿಗೆ ಚಪ್ಪಲಿ ಸೇವೆ ಮಾಡಿ, ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದ್ದಾರೆ.
ಟೋಲ್ ಬಳಿ ಕರವೇ ಹಾಗೂ ಪೊಲೀಸರ ಮಧ್ಯೆ ನೂಕಾಟ, ತಳ್ಳಾಟ
ಟೋಲ್ ಬಳಿ ಕರವೇ ಹಾಗೂ ಪೊಲೀಸರ ಮಧ್ಯೆ ನೂಕಾಟ, ತಳ್ಳಾಟ ಏರ್ಪಟ್ಟಿದೆ. ಕರವೇ ಕಾರ್ಯಕರ್ತರನ್ನ ಅರಸ್ಟ್ ಮಾಡುತ್ತಿದ್ದ ಬಸ್ಗೆ ಕರವೇ ಕಾರ್ಯಕರ್ತರು ಅಡ್ಡಲಾಗಿ ಕುಳಿತಿದ್ದಾರೆ. ರಸ್ತೆ ಮಧ್ಯೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಡಿಸಿ ಕಚೇರಿ ಎದುರು ಮಹಿಳಾ ಸಂಘಟನೆಗಳಿಂದ ಪ್ರತಿಭಟನೆ
ಶಿವಮೊಗ್ಗ ಡಿಸಿ ಕಚೇರಿ ಎದುರು ಮಹಿಳಾ ಸಂಘಟನೆಗಳಿಂದ ಪ್ರತಿಭಟನೆ ನಡೆಯುತ್ತಿದೆ. ಶಾಶ್ವತಿ ಮಹಿಳಾ ವೇದಿಕೆಯಿಂದ ಬೆಳಗಾವಿ ಗಲಾಟೆ ಘಟನೆ ಖಂಡಿಸಿ ಧರಣಿ ನಡೆಸುತ್ತಿದೆ. ಕನ್ನಡ ಧ್ವಜ ಮತ್ತು ಆಸ್ತಿ ಪಾಸ್ತಿ ನಷ್ಟ ಮಾಡುತ್ತಿರುವ ಎಂಇಎಸ್ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಯಿಸಿದ್ದಾರೆ.
ಎಂಇಎಸ್ ಸಂಘಟನೆ ನಿಷೇಧಕ್ಕೆ ವಾಟಾಳ್ ಒತ್ತಾಯ
ಎಂಇಎಸ್ ಸಂಘಟನೆ ನಿಷೇಧಕ್ಕೆ ವಾಟಾಳ್ ನಾಗಾರಾಜ್ ಒತ್ತಾಯಿಸಿದ್ದಾರೆ. ಇವತ್ತು ಸದನದಲ್ಲಿ ನಿರ್ಣಯ ಕೈಗೊಳ್ಳದಿದ್ದರೆ ರಾಜ್ಯ ಬಂದ್ಗೆ ಕರೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಬುಧವಾರ ಎಲ್ಲಾ ಸಂಘಟನೆಗಳೊಂದಿಗೆ ವಾಟಾಳ್ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ರಾಜ್ಯ ಬಂದ್ ಸಂಬಂಧ ಅಂತಿಮ ತೀರ್ಮಾನ ಕೈಗೊಳ್ಳಲಾವುದು ಅಂತ ವಾಟಾಳ್ ಹೇಳಿಕೆ ನೀಡಿದ್ದಾರೆ. ಎಂಇಎಸ್ ನಿಷೇಧ ಆಗಲೇಬೇಕು. ಬೊಮ್ಮಯಿ ಬಗ್ಗೆ ಗೌರವ ಇದೆ ಧೈರ್ಯ ತಗೋಬೇಕು. ಬಿಜೆಪಿ, ಆರ್ಎಸ್ಎಸ್ ಗೆ ಮಾರಾಠಿಗರನ್ನ ಕಂಡರೆ ಪ್ರೀತಿ. ನಮ್ಮ ಶಾಸಕರು ಮಂತ್ರಿಗಳು ಎಂಇಎಸ್ ಪರ ಮಾತನಾಡುತ್ತಿದ್ದಾರೆ. ಇದು ರಾಜ್ಯದ ಜನರ ವಿಚಾರವಾಗಿ ಗೌರವ ಅಲ್ಲ. ಬಾವುಟ ಸುಟ್ಟಿರುವುದು ಘೋರ ಅನ್ಯಾಯ. ಉದ್ದವ್ ಠಾಕ್ರೆ ದೇಶದಲ್ಲಿ ಅಶಾಂತಿ ವಾತವರಣ ಸೃಷ್ಟಿಸುತ್ತಿದ್ದಾರೆ. ಪ್ರಧಾನಿಗಳು ತಕ್ಷಣ ಅವರ ಸರ್ಕಾರವನ್ನ ತೆಗೆಯಬೇಕು. ಕನ್ನಡ ಒಕ್ಕೂಟ ಸುಮ್ಮನೆ ಕೂರುವುದಿಲ್ಲ. ಸಂಸತ್ ಸದಸ್ಯರು ಎಲ್ಲಿ ಹೋಗಿದ್ದಾರೆ. ಈ ಬಗ್ಗೆ ಪ್ರಧಾನಿ ರಾಷ್ಟ್ರಪತಿಗಳನ್ನ ಭೇಟಿ ಮಾಡಬೇಕಿತ್ತು. ಸಂಸತ್ ಸದಸ್ಯರು ಕನ್ನಡ ವಿರೋಧಿಗಳು ದ್ರೋಹಿಗಳು. ಬೆಳಗಾವಿ ರಾಜಕಾರಣಿಗಳು ಕನ್ನಡ ದ್ರೋಹಿಗಳು. ಸಂಸತ್ ಸದಸ್ಯರು ಬಾಯಿಬಿಡದೆ ಇರುವುದರಿಂದ ಮೂರು ಕಾಸಿಗೂ ಬೆಲೆ ಇಲ್ಲ. ನಾಳೆ ಮೈಸೂರಿನಲ್ಲಿ ಸಂಸತ್ ಸದಸ್ಯರನ್ನ ಹರಾಜು ಹಾಕುತ್ತೇವೆ. ನಾಡಿದ್ದು ಒಕ್ಕೂಟ ಬೆಂಗಳೂರಿನಲ್ಲಿ ಎಲ್ಲಾ ಸಂಘಟನೆ, ಕಾರ್ಮಿಕರು, ವಕೀಲರು ಎಲ್ಲರನ್ನೂ ಕರೆದು ಸಭೆ ಮಾಡ್ತೇವೆ. ಇವತ್ತು ಎಂಇಎಸ್ ನಿಷೇಧ ಆಗಲಿಲ್ಲ ಅಂದರೆ ನಾವೆಲ್ಲ ಸೇರಿ ಕರ್ನಾಟಕ ಬಂದ್ಗೆ ಕರೆ ನೀಡುತ್ತೇವೆ. ಆ ದಿನ ಟೌನ್ ಹಾಲ್ ನಿಂದ 1 ಲಕ್ಷ ಜನ ಸೇರುತ್ತೇವೆ. ತೀವ್ರವಾದ ಹೋರಾಟಕ್ಕೆ ಕರೆ ಕೊಡುತ್ತೇವೆ ಅಂತ ವಾಟಾಳೆ ತಿಳಿಸಿದ್ದಾರೆ.
ಕರವೇ ಅಧ್ಯಕ್ಷ ನಾರಾಯಣಗೌಡ ಪೊಲೀಸರ ವಶಕ್ಕೆ
ಬೆಳಗಾವಿಯ ಹಿರೇಬಾಗೇವಾಡಿ ಟೋಲ್ ಬಳಿ ಕರವೇ ಅಧ್ಯಕ್ಷ ನಾರಾಯಣಗೌಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎಂಇಎಸ್ ಪುಂಡರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಯಾದಗಿರಿಯಲ್ಲಿ ಪ್ರತಿಭಟನೆ
ಎಂಇಎಸ್ ಪುಂಡರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಎಂಇಎಸ್ ನಿಷೇಧ ಮಾಡುವಂತೆ ಒತ್ತಾಯಿಸಿದ್ದಾರೆ.
ಎಂಇಎಸ್ ಕಾರ್ಯಕರ್ತರ ಪುಂಡಾಟ ಖಂಡಿಸಿ ಶಿವಮೊಗ್ಗದಲ್ಲಿ ಪ್ರತಿಭಟನೆ
ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರ ಪುಂಡಾಟ ಖಂಡಿಸಿ ಶಿವಮೊಗ್ಗದಲ್ಲಿ ಕರವೇ ಪ್ರತಿಭಟನೆ ನಡೆಸುತ್ತಿದೆ. ಮಹಾವೀರ ವೃತ್ತದಲ್ಲಿ ಕರವೇ ಕಾರ್ಯಕರ್ತರು ಧರಣಿ ನಡೆಸುತ್ತಿದ್ದಾರೆ. ಎಂಇಎಸ್ ಮುಖಂಡರ ಪ್ರತಿಕೃತಿ ದಹಿಸಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.
ಟಿ.ನರಸೀಪುರದಲ್ಲಿ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘಟನೆಯಿಂದ ಬೃಹತ್ ಮೆರವಣಿಗೆ
ಬೆಳಗಾವಿಯಲ್ಲಿ ಕನ್ನಡ ಧ್ವಜ, ರಾಯಣ್ಣ ಪ್ರತಿಮೆ ಧ್ವಂಸ ಖಂಡಿಸಿ ಮೈಸೂರಿನ ಟಿ.ನರಸೀಪುರದಲ್ಲಿ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘಟನೆ ಬೃಹತ್ ಮೆರವಣಿಗೆ ನಡೆಸುತ್ತಿದೆ. ವಿವಿಧ ಸಂಘಟನೆಗಳು ಬೃಹತ್ ಪ್ರತಿಭಟನೆ ಮೆರವಣಿಗೆಗೆ ಸಾಥ್ ನೀಡಿವೆ. ವಿದ್ಯೋದಯ ಕಾಲೇಜು ಅವರಣದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿದೆ. ಎಂಇಎಸ್ ಹಾಗೂ ಶಿವಸೇನೆ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರ ಪುಂಡಟಿಕೆ ಹೆಚ್ಚಾಗಿದೆ. ಕನ್ನಡ ವಾಹನಗಳು, ಹೋಟೆಲ್‌ಗಳಿಗೆ ಬೆಂಕಿ ಹಾಕಿದ್ದಾರೆ. ಇಂತಹ ಕೃತ್ಯಗಳು ನಡೆಯುತ್ತಿದ್ದರು ಸರ್ಕಾರ ಮೌನ ವಹಿಸಿದ್ದ ಖಂಡನೀಯ. ಎಂಇಎಸ್ ಕಾರ್ಯಕರ್ತರನ್ನ ಕೂಡಲೇ ಬಂಧಿಸಿ ಗಡಿಪಾರು ಮಾಡಿ. ಸರ್ಕಾರ ಇಬ್ಬಂದಿತನ ನೀತಿ ಬಿಡಬೇಕು. ರಾಜ್ಯದ ಎಲ್ಲೆಡೆಯಿಂದ ಕನ್ನಡಿಗರು ಮುತ್ತಿಗೆ ಹಾಕುತ್ತೇವೆ ಸರ್ಕಾರಕ್ಕೆ ಪ್ರತಿಭಟನಾನಿರತರು ಎಚ್ಚರಿಕೆ ನೀಡಿದ್ದಾರೆ.
ಎಂಇಎಸ್ ಪುಂಡಾಟ ಖಂಡಿಸಿ ಭಾರತೀಯ ಯುವ ಸೈನ್ಯದಿಂದ ಪ್ರತಿಭಟನೆ
ಎಂಇಎಸ್ ಪುಂಡಾಟ ಖಂಡಿಸಿ ಕಲಬುರಗಿ ನಗರದಲ್ಲಿ ಭಾರತೀಯ ಯುವ ಸೈನ್ಯದಿಂದ ಪ್ರತಿಭಟನೆ ನಡೆಯುತ್ತಿದೆ. ಕಲಬುರಗಿ ನಗರದ ಸಂಗೋಳ್ಳಿ ರಾಯಣ್ಣ ಪ್ರತಿಮೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಸಂಗೋಳ್ಳಿ ರಾಯಣ್ಣ ಮೂರ್ತಿ ಧ್ವಂಸಗೊಳಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಎಂಇಎಸ್ ಪುಂಡಾಟ ವಿರೋಧಿಸಿ ಕರವೇಯಿಂದ ಪಾದಯಾತ್ರೆ
ಹಿರೇಬಾಗೇವಾಡಿಯಿಂದ ಕರವೇ ಕಾರ್ಯಕರ್ತರ ಪಾದಯಾತ್ರೆ ಆರಂಭವಾಗಿದೆ. ಕಾರ್ಯಕರ್ತರು ಹಿರೇಬಾಗೇವಾಡಿಯಿಂದ ಬೆಳಗಾವಿಗೆ ತೆರಳುತ್ತಿದ್ದಾರೆ.
ರಾಯಣ್ಣ ಪ್ರತಿಮೆ ಮುಂದೆ ಕುರುಬರ ಸಂಘದಿಂದ ಪ್ರತಿಭಟನೆ
ಬೆಂಗಳೂರಿನಲ್ಲಿ ರೋಡ್ ಮೇಲೆ ಕುಳಿತು ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ಇತ್ತ ರಾಯಣ್ಣ ಪ್ರತಿಮೆ ಮುಂದೆ ಕುರುಬರ ಸಂಘದ ಕಾರ್ಯಕರ್ತರು ಧರಣಿ ನಡೆಸುತ್ತಿದ್ದಾರೆ.
ನಾರಾಯಣಗೌಡಗೆ ಕರವೇ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ
ಬೆಳಗಾವಿ ತಾಲೂಕಿನ ಮುತ್ನಾಳ ಗ್ರಾಮಕ್ಕೆ ನಾರಾಯಣಗೌಡ ಆಗಮಿಸಿದ್ದಾರೆ. ಸ್ಥಳೀಯ ಕರವೇ ಕಾರ್ಯಕರ್ತರು ನಾರಾಯಣಗೌಡಗೆ ಅದ್ದೂರಿ ಸ್ವಾಗತ ಕೋರಿದ್ದಾರೆ. ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮೇಲೆ ಕಾರ್ಯಕರ್ತರು ಧರಣಿ ಕುಳಿತಿದ್ದಾರೆ. ಸುವರ್ಣ ಸೌಧ ಮುತ್ತಿಗೆ ಹಾಕಲು ಪಾದಯಾತ್ರೆ ಆರಂಭವಾಗಿದೆ.
ಹಲಶಿ ಗ್ರಾಮದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟ ಪುಂಡರು
ಬೆಳಗಾವಿಯ ಖಾನಾಪುರ ತಾಲೂಕಿನ ಹಲಶಿ ಗ್ರಾಮದಲ್ಲಿ ಪುಂಡರು ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟಿದ್ದಾರೆ. ಗ್ರಾಮ ಪಂಚಾಯಿತಿ ಕಟ್ಟಡದಲ್ಲಿದ್ದ ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟಿದ್ದಾರೆ. ದುಷ್ಕರ್ಮಿಗಳು ರಾತ್ರಿ ಬೆಂಕಿ ಹಚ್ಚಿ ಪುಂಡಾಟ ಮೆರೆದಿದ್ದಾರೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
MES ಪುಂಡಾಟ ಹೆಚ್ಚಾಗಿದೆ, ಸರ್ಕಾರ ಕ್ರಮಕೈಗೊಳ್ಳಬೇಕು- ಎಸ್ ಆರ್ ಪಾಟೀಲ್
MES ಪುಂಡಾಟ ಹೆಚ್ಚಾಗಿದೆ, ಸರ್ಕಾರ ಕ್ರಮಕೈಗೊಳ್ಳಬೇಕು ಅಂತ ವಿಧಾನಪರಿಷತ್‌ನಲ್ಲಿ ಎಸ್ ಆರ್ ಪಾಟೀಲ್ ಆಗ್ರಹಿಸಿದ್ದಾರೆ. ಸರ್ಕಾರದ ವೈಫಲ್ಯದಿಂದಲೇ ಈ ಘಟನೆ ನಡೆದಿದೆ. ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಭಗ್ನ ಮಾಡಿದ್ದಾರೆ. ಹೀಗೆ ಆಗಲು ಸರ್ಕಾರ ಬಿಡಬಾರದು ಅಂತ ಒತ್ತಾಯಿಸಿದ್ದಾರೆ.
ಕನ್ನಡ ಧ್ವಜ ಬಣ್ಣದ ಶಾಲು ಧರಿಸಿದ ಶಾಸಕ ಡಾ. ಅನ್ನದಾನಿ
ಕನ್ನಡ ಧ್ವಜ ಬಣ್ಣದ ಶಾಲು ಧರಿಸಿ ಜೆಡಿಎಸ್ ಶಾಸಕ ಡಾ. ಅನ್ನದಾನಿ ಸದನದಲ್ಲಿ ಭಾಗಿಯಾಗಿದ್ದಾರೆ.
ಎಂಇಎಸ್ ಸಂಘಟನೆ ನಿಷೇಧ ಮಾಡುವಂತೆ ಆಗ್ರಹ
ಎಂಇಎಸ್ ಸಂಘಟನೆ ನಿಷೇಧ ಮಾಡುವಂತೆ ಆಗ್ರಹಿಸಿ ಕೋಲಾರ ನಗರದ ಗಾಂಧಿ ವನದಲ್ಲಿ ಭುವನೇಶ್ವರಿ ಕನ್ನಡ ಸಂಘಟನೆ ಪ್ರತಿಭಟನೆ ನಡೆಸುತ್ತಿದೆ.
ಶಿವಸೇನೆಯ ಧ್ವಜಕ್ಕೆ ಬೆಂಕಿಯಿಟ್ಟು ತೀವ್ರ ಆಕ್ರೋಶ
ಬೆಂಗಳೂರಿನ ಮೆಜೆಸ್ಟಿಕ್ ಬಳಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಶಿವಸೇನೆಯ ಧ್ವಜಕ್ಕೆ ಬೆಂಕಿಯಿಟ್ಟು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಕಿ ಹಚ್ಚುವುದಕ್ಕೆ ಅಡ್ಡಿಪಡಿಸಿದ ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ. ಕರವೇ ಕಾರ್ಯಕರ್ತರು, ಪೊಲೀಸರ ಮಧ್ಯೆ ವಾಗ್ವಾದ ನಡೆದಿದೆ.
ಕಾಂಗ್ರೆಸ್ ಚೇಲಾಗಳು ಈ ರೀತಿಯ ಕೆಲಸ ಮಾಡ್ತಿದ್ದಾರೆ; ಬಿ ಶ್ರೀರಾಮುಲು ಹೇಳಿಕೆ
ಎಂಇಎಸ್ ಪುಂಡಾಟ, ರಾಯಣ್ಣ ಪ್ರತಿಮೆ ಭಗ್ನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ಬಿ ಶ್ರೀರಾಮುಲು, ಇದನ್ನ ಯಾರು ಮಾಡಿಸ್ತಿದ್ದಾರೆಂಬುದು ಸ್ಪಷ್ಟವಾಗಿ ಕಾಣ್ತಿದೆ. ಕಾಂಗ್ರೆಸ್ ಚೇಲಾಗಳು ಈ ರೀತಿಯ ಕೆಲಸ ಮಾಡ್ತಿದ್ದಾರೆ. ಎಮ್ಇಎಸ್ ಮೊದಲಿನಿಂದ ಪುಂಡಾಟಿಕೆ ಮಾಡುತ್ತಾ ಬಂದಿದೆ. ಅವರಿಗೆ ಕುಮ್ಮಕ್ಕು ಕೊಡುವವರನ್ನೂ ಬಂಧಿಸುತ್ತೇವೆ. ಎಮ್ಇಎಸ್ ಕೆಲಸಕ್ಕೆ ಮಹಾರಾಷ್ಟ್ರ ಸಿಎಂ ಪ್ರಚೋದಿಸ್ತಿದ್ದಾರೆ ಅಂತ ಹೇಳಿದರು.
ಎಮ್ಇಎಸ್ ಖಂಡಿಸಿ ಬೆಂಗಳೂರಿನಲ್ಲಿ ಧರಣಿ
ಎಮ್ಇಎಸ್ ಪುಂಡಾಟಿಕೆ ಖಂಡಿಸಿ ಬೆಂಗಳೂರಿನಲ್ಲಿ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಮೆಜೆಸ್ಟಿಕ್ ಬಳಿ ಇರುವ ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿ ಧರಣಿ ನಡೆಸುತ್ತಿದ್ದಾರೆ.
ಸಾಯಿ ಅರಣ್ಯ ರೆಸಾರ್ಟ್ನಿಂದ ಸಾಗಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು
ಸಾಯಿ ಅರಣ್ಯ ರೆಸಾರ್ಟ್ನಿಂದ ಕರವೇ ಕಾರ್ಯಕರ್ತರು ಸಾಗಿದ್ದಾರೆ. ಸಾವಿರಾರು ಕಾರ್ಯಕರ್ತರೊಂದಿಗೆ ರಾಜ್ಯಾಧ್ಯಕ್ಷ ನಾರಾಯಣಗೌಡ ಪಯಣ ಬೆಳೆಸಿದ್ದಾರೆ. ನೂರಾರು ಕಾರುಗಳಲ್ಲಿ ಬೆಳಗಾವಿಯತ್ತ ಪ್ರಯಾಣ ಬೆಳೆಸುತ್ತಿದ್ದಾರೆ.
ನಾರಾಯಣಗೌಡ ಬಣದಿಂದ ಕೆಲವೇ ಕ್ಷಣಗಳಲ್ಲಿ ಪ್ರತಿಭಟನೆ ಆರಂಭ
ಕೆಲವೇ ಕ್ಷಣಗಳಲ್ಲಿ ನಾರಾಯಣಗೌಡ ಬಣದಿಂದ ಪ್ರತಿಭಟನೆ ಆರಂಭವಾಗಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರತಿಭಟನೆ ನಡೆಸಲು ಕಾರ್ಯಕರ್ತರು ಆಗಮಿಸುತ್ತಿದ್ದಾರೆ.
ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರ ಸ್ವಾಗತಕ್ಕೆ ನಿಂತ ಸ್ಥಳೀಯ ಕನ್ನಡಪರ ಹೋರಾಟಗಾರರು
ಕೆಲವೇ ನಿಮಿಷಗಳಲ್ಲಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಬೆಳಗಾವಿ ಆಗಮಿಸಲಿದ್ದಾರೆ. ಹೀಗಾಗಿ ನಾರಾಯಣಗೌಡಗೆ ಸ್ವಾಗತ ಕೋರಲು ಸ್ಥಳೀಯ ಕನ್ನಡಪರ ಹೋರಾಟಗಾರರು ನಿಂತಿದ್ದಾರೆ.
ಬೆಳಗಾವಿ ಶಾಂತವಾಗಿದೆ-ಗೃಹ ಸಚಿವ ಆರಗ ಜ್ಞಾನೇಂದ್ರ
ಬೆಳಗಾವಿ ಶಾಂತವಾಗಿದೆ ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಕನ್ನಡಿಗರು, ಮರಾಠಿಗರು ಸೌಹಾರ್ದಯುತವಾಗಿದ್ದಾರೆ. ಕನ್ನಡ ಸಂಘಟನೆಗಳು ಶಾಂತಿಯುತವಾಗಿ ಪ್ರತಿಭಟನೆ ನಡೆಸಲಿ. ಎಂಇಎಸ್ ನಿಷೇಧ ಮಾಡುವ ಬಗ್ಗೆ ಸಿಎಂ ಜತೆ ಚರ್ಚಿಸಬೇಕು ಅಂತ ಸುವರ್ಣಸೌಧದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ನಾನು ಯಾವುದೇ ಸಂಘಟನೆ ವಿರುದ್ಧ ದೂರಲು ಹೋಗಲ್ಲ; ಡಿಕೆ ಶಿವಕುಮಾರ್
ಕಿಡಿಗೇಡಿಗಳು ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಸರ್ಕಾರ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಅಂತ ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ನಾನು ಯಾವುದೇ ಸಂಘಟನೆ ವಿರುದ್ಧ ದೂರಲು ಹೋಗಲ್ಲ. ಎಂಇಎಸ್ ಪುಂಡಾಟಿಕೆ ಮಾಡುತ್ತಿದೆ ಎಂದು ಕೂಡ ಹೇಳಲ್ಲ. ಶಾಂತಿ ಕದಡುವ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ನೈತಿಕ ಪೊಲೀಸ್‌ಗಿರಿಗೆ ಅವಕಾಶ ನೀಡಿದ್ದೇ ಇದಕ್ಕೆಲ್ಲಾ ಕಾರಣ. ಇಡೀ ರಾಜ್ಯದಲ್ಲಿಯೇ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಪೊಲೀಸರು ಖಾಕಿಯನ್ನು ಬಿಟ್ಟು ಕಾವಿ ಧರಿಸುತ್ತಿದ್ದಾರೆ. ಪೊಲೀಸರು ರಾಜಕಾರಣಿಗಳ ಮಾತು ಬಿಟ್ಟು, ಕೆಲಸ ಮಾಡಲಿ ಅಂತ ಡಿಕೆಶಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಎಂಇಎಸ್ ಪುಂಡಾಟಿಕೆಯನ್ನು ಕಟ್ಟಿ ಹಾಕಬೇಕು; ಸಚಿವ ಬಿಸಿ ಪಾಟೀಲ್
ರಾಜ್ಯದಲ್ಲಿ ಎಂಇಎಸ್‌ನವರ ಪುಂಡಾಟಿಕೆಯನ್ನು ಕಟ್ಟಿ ಹಾಕಬೇಕು ಅಂತ ಬೆಳಗಾವಿಯ ಸುವರ್ಣಸೌಧದಲ್ಲಿ ಸಚಿವ ಬಿಸಿ ಪಾಟೀಲ್ ಹೇಳಿಕೆ ನೀಡಿದ್ದಾರೆ. ಶಿವಾಜಿಗಿಂತಲೂ ಸಂಗೊಳ್ಳಿ ರಾಯಣ್ಣ ಅಪ್ರತಿಮ ವೀರ. ಏಕೀಕರಣ ಬೇಕಾದರೆ ಮಹಾರಾಷ್ಟ್ರದಲ್ಲಿ ಮಾಡಿಕೊಳ್ಳಲಿ. ಕಾಂಗ್ರೆಸ್, ಶಿವಸೇನೆಯ ಜೊತೆ ಕೈಜೋಡಿಸಿದೆ ಅಂತ ಬಿಸಿ ಪಾಟೀಲ್ ಆರೋಪಿಸಿದ್ದಾರೆ.
ಹಿರೇಬಾಗೇವಾಡಿ ಟೋಲ್ ಬಳಿ ಹೋರಾಟಗಾರನಿಗೆ ಉಸಿರಾಟದ ತೊಂದರೆ
ಹಿರೇಬಾಗೇವಾಡಿ ಟೋಲ್ ಬಳಿ ಹೋರಾಟಗಾರನಿಗೆ ಉಸಿರಾಟದ ತೊಂದರೆಯಾಗಿದೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಕರ್ನಾಟಕ ಬಂದ್ ಬಗ್ಗೆ ಬುಧವಾರ ನಿರ್ಧಾರ
ಎಮ್ಇಎಸ್ ಪುಂಡಾಟಿಕೆ ಖಂಡಿಸಿ ಇಂದು ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನು ಕರ್ನಾಟಕ ಬಂದ್ ಮಾಡುವ ಬಗ್ಗೆ ಬುಧವಾರ ನಿರ್ಧರಿಸುತ್ತೇವೆ ಅಂತ ಪ್ರವಿಣ್ ಶೆಟ್ಟಿ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಟ್ರಾಫಿಕ್ ಜಾಮ್
ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಟ್ರಾಫಿಕ್ ಜಾಮ್ ಆಗಿದೆ.
ಎರಡು ಬಸ್ನಲ್ಲಿ ಹೋರಾಟಗಾರರನ್ನು ಕರೆದೊಯ್ದ ಪೊಲೀಸರು
ಹಿರೇಬಾಗೇವಾಡಿ ಬಳಿ ಹೋರಾಟಗಾರರನ್ನ ವಶಕ್ಕೆ ಪಡೆದ ಪೋಲಿಸರು ಎರಡು ಬಸ್ನಲ್ಲಿ ಕರೆದೊಯ್ದಿದ್ದಾರೆ.
ಪ್ರವೀಶ್ ಶೆಟ್ಟಿ ಬಣ ಪೊಲೀಸರ ವಶಕ್ಕೆ
ಪ್ರತಿಭಟನೆ ನಡೆಸುತ್ತಿದ್ದ ಕರವೇ ಪ್ರವೀಶ್ ಶೆಟ್ಟಿ ಮತ್ತು ಅವರ ಬಣದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಿಂದಿನ ಸರ್ಕಾರಗಳು ಏನು ಮಾಡುತ್ತಿರಲಿಲ್ಲ; ಬೊಮ್ಮಾಯಿ
ಎಂಇಎಸ್ ನವರಿಂದ ಪುಂಡಾಟಿಕೆ ಪ್ರಕರಣದ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಕರ್ನಾಟಕದಲ್ಲಿ ಯಾರ್ಯಾರು ಪುಂಡಾಟಿಕೆ ಮಾಡಿದ್ದಾರೋ ಅವರನ್ನ ಅರೆಸ್ಟ್ ಮಾಡಿದ್ದೇವೆ. ಹಿಂದಿನ ಸರ್ಕಾರಗಳು ಏನು ಮಾಡುತ್ತಿರಲಿಲ್ಲ. ಯಾರ್ಯಾರನ್ನೋ ಅರೆಸ್ಟ್ ಮಾಡ್ತಿದ್ರು. ನಾವೂ ಇವತ್ತು ಪ್ರಮುಖರನ್ನ ಅರೆಸ್ಟ್ ಮಾಡಿ ನಿಯಂತ್ರಣ ಮಾಡ್ತಿದ್ವಿ. ಮಹಾರಾಷ್ಟ್ರದ ಸರ್ಕಾರದ ಕೊತೆ ಹೋಂ ಸೆಕ್ರೇಟ್ರಿ ಮಾತಾಡುತ್ತಿದ್ದಾರೆ. ಕನ್ನಡ ಆಸ್ತಿ ಪಾಸ್ತಿಗಳಿಗೆ ನಷ್ಟವಾಗಬಾರದು. ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದ್ರೆ ಕಠಿಣ ಕ್ರಮ ಜರುಗಿಸಲಾಗುತ್ತೆ. ನಮ್ಮ ಮಹಾನಗರಗಳ ರಕ್ಷಣೆ ಮಾಡಬೇಕು. ಆ ಕೆಲಸ ಮಾಡಲಾಗುತ್ತಿದೆ ಅಂತ ಹೇಳಿದರು.
ಪ್ರವೀಣ್ ಶೆಟ್ಟಿ ಬಣದ ಕರವೇ ಕಾರ್ಯಕರ್ತರಿಗೆ ಪೊಲೀಸರ ತಡೆ
ಹಿರೇಬಾಗೇವಾಡಿ ಟೋಲ್ ಬಳಿ ಪ್ರವೀಣ್ ಶೆಟ್ಟಿ ಬಣದ ಕರವೇ ಕಾರ್ಯಕರ್ತರನ್ನ ತಡೆ ಪೊಲೀಸರು ತಡೆಹಿಡಿದಿದ್ದಾರೆ.
ಕರ್ನಾಟಕ ಬಂದ್ ಬಗ್ಗೆ ನಾಳೆ ನಿರ್ಧಾರ- ಪ್ರವೀಣ್ ಶೆಟ್ಟಿ
ಕರ್ನಾಟಕ ಬಂದ್ ಬಗ್ಗೆ ನಾಳಿನ ಸಭೆಯಲ್ಲಿ ಚರ್ಚಿಸುತ್ತೇವೆ ಅಂತ ಹಿರೇಬಾಗೇವಾಡಿ ಬಳಿ ಕರವೇ ಪ್ರವೀಣ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.
ನಕಲಿ ಪಾಸ್ ತೋರಿಸಿ ಸುವರ್ಣಸೌಧ ಪ್ರವೇಶಕ್ಕೆ ಯತ್ನ
ಇಬ್ಬರು ನಕಲಿ ಪಾಸ್ ತೋರಿಸಿ ಸುವರ್ಣಸೌಧ ಪ್ರವೇಶಕ್ಕೆ ಯತ್ನಿಸಿದ್ದಾರೆ. ನಕಲಿ ಪಾಸ್ ತಂದಿದ್ದ ಇಬ್ಬರನ್ನು ಪೊಲೀಸರು ವಾಪಸ್ ಕಳಿಸಿದ್ದಾರೆ.
ಪೊಲೀಸರ ಬಗ್ಗೆ ಭಯವಿಲ್ಲ, ಕಾನೂನು ಸುವ್ಯವಸ್ಥೆ ಸರಿಯಿಲ್ಲ; ಸಿದ್ದರಾಮಯ್ಯ
ಕೆಲ ಪುಂಡರು ಪ್ರತಿಮೆ ವಿರೂಪಗೊಳಿಸುವ ಕೆಲಸ ಮಾಡಿದ್ದಾರೆ. ಇದು ಅತ್ಯಂತ ಖಂಡನೀಯ ಕೆಲಸ. ರಾಯಣ್ಣ ಯಾವುದೇ ಒಂದು ಜಾತಿಗೆ ಸೇರಿದ ವ್ಯಕ್ತಿಯಲ್ಲ. ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸುವವರಿಂದ ಈ ಕೃತ್ಯ. ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕು. ಎಮ್ಇಎಸ್ ನಿಷೇಧ ಮಾಡಲು ಒತ್ತಾಯ ಇದೆ. ಸರ್ಕಾರದ ಗಮನ ಸೆಳೆಯುವ ಕೆಲಸವನ್ನು ಮಾಡುತ್ತೇವೆ. ಪ್ರಜಾಪ್ರಭುತ್ವದಲ್ಲಿ ಧರಣಿ ಮಾಡಲು ಅವಕಾಶ ಇರಬೇಕು. ಕನ್ನಡಪರ ಸಂಘಟನೆಗಳಿಗೆ ಅವಕಾಶ ಮಾಡಿಕೊಡಬೇಕು. ಎಂಇಎಸ್‌ನವರು ಪುಂಡರು, ಅವರ ವಿರುದ್ಧ ಕ್ರಮಕೈಗೊಳ್ಳಲಿ. ಪೊಲೀಸರ ಬಗ್ಗೆ ಭಯವಿಲ್ಲ, ಕಾನೂನು ಸುವ್ಯವಸ್ಥೆ ಸರಿಯಿಲ್ಲ ಅಂತ ಅನಗೋಳದಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
‘ನಾನು ನಾಲ್ಕು ದಿನಗಳ ಹಿಂದೆಯೇ ಸತ್ತು ಹೋಗಿದ್ದೇನೆ’ – ರಮೇಶ್‌ಕುಮಾರ್ ಹೇಳಿಕೆ
ಎಂಇಎಸ್ ಕಿಡಿಗೇಡಿತನ ವಿಚಾರದ ಬಗ್ಗೆ ಮಾತನಾಡದ ಕಾಂಗ್ರೆಸ್ ಶಾಸಕ ರಮೇಶ್‌ಕುಮಾರ್, ನಾನು ನಾಲ್ಕು ದಿನಗಳ ಹಿಂದೆಯೇ ಸತ್ತು ಹೋಗಿದ್ದೇನೆ. ಜೀವಂತವಾಗಿರುವವರನ್ನು ಮಾತಾಡಿಸಿ ಅಂತ ಮಾಧ್ಯಮಗಳಿಗೆ ಕೈಮುಗಿದು ತೆರಳಿದ್ದಾರೆ.
ಪ್ರತಿಕ್ರಿಯೆ ನೀಡದೇ ತೆರಳುತ್ತಿರುವ ಸಚಿವರು
ಸಚಿವರು ಜಾಣ ಮೌನ ಕಾಯ್ದುಕೊಳ್ಳುತ್ತಿದ್ದಾರೆ. ಸಚಿವರಾದ ಉಮೇಶ್ ಕತ್ತಿ, ಸುನೀಲ್ ಕುಮಾರ್, ಬಿ.ಸಿ. ನಾಗೇಶ್ ಮತ್ತು ವಿ. ಸೋಮಣ್ಣ ಪ್ರತಿಕ್ರಿಯೆ ನೀಡದೆ ತೆರಳುತ್ತಿದ್ದಾರೆ.
ಸಚಿವರ ಕಾರು ತಡೆದು ಎಂಇಎಸ್ ವಿರುದ್ಧ ಧಿಕ್ಕಾರ
ಸಚಿವರ ಕಾರು ತಡೆದು ಎಂಇಎಸ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡ ಪರವಾಗಿ ಕೆಲಸ ಮಾಡಿ, ಎಂಇಎಸ್ ಬ್ಯಾನ್ ಮಾಡಿ ಅಂತಾ ಸಚಿವರಿಗೆ ಧರಣಿ ನಿರತು ಮನವಿ ಮಾಡುತ್ತಿದ್ದಾರೆ. ಈ ಕುರಿತು ಚರ್ಚೆ ಮಾಡುವುದಾಗಿ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.
ಹಿರೇಬಾಗೇವಾಡಿ ಟೋಲ್ ಬಳಿ ಖಾಕಿ ಪಡೆ ಅಲರ್ಟ್
ಹಿರೇಬಾಗೇವಾಡಿ ಟೋಲ್ ಬಳಿ ಖಾಕಿ ಪಡೆ ಅಲರ್ಟ್ ಆಗಿದೆ. ಪೊಲೀಸರು ಪ್ರತಿ ವಾಹನ ತಪಾಸಣೆ ಮಾಡುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಹೈಡ್ರಾಮಾ! ಸಭಾಪತಿ ಕಾರು ಅಡ್ಡಗಟ್ಟಿ ಪ್ರವೀಣ್ ಶೆಟ್ಟಿ ನೇತೃತ್ವದಲ್ಲಿ ಪ್ರತಿಭಟನೆ
ರಾಷ್ಟ್ರೀಯ ಹೆದ್ದಾರಿಯಲ್ಲಿ ಹೈಡ್ರಾಮಾ ನಡೆಯುತ್ತಿದೆ. ಸಭಾಪತಿ ಬಸವರಾಜ ಹೊರಟ್ಟಿ ಕಾರು ಅಡ್ಡಗಟ್ಟಿ ಪ್ರವೀಣ್ ಶೆಟ್ಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಎಂಇಎಸ್ ಸಂಘಟನೆ ಬ್ಯಾನ್ ಮಾಡುವಂತೆ ಸ್ಪೀಕರ್‌ಗೆ ಪ್ರವೀಣ್ ಶೆಟ್ಟಿ ಮನವಿ ಮಾಡಿದರು.
ಅನಗೋಳದ ರಾಯಣ್ಣ ಪ್ರತಿಮೆ ಸ್ಥಳಕ್ಕೆ ಸಿದ್ದರಾಮಯ್ಯ ಭೇಟಿ
ಅನಗೋಳದ ರಾಯಣ್ಣ ಪ್ರತಿಮೆ ಸ್ಥಳಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಈ ವೇಳೆ ರಾಯಣ್ಣ ಪ್ರತಿಮೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಮಾಲಾರ್ಪಣೆ ಮಾಡಿದರು.
ಯಾವುದೇ ಪ್ರತಿಭಟನೆ, ಮೆರವಣಿಗೆ ಅವಕಾಶ ನೀಡಲ್ಲ; ಟಿವಿ9ಗೆ ಡಿಸಿಪಿ ವಿಕ್ರಮ್ ಆಮಟೆ ಹೇಳಿಕೆ
ಬೆಳಗಾವಿ ನಗರ, ತಾಲೂಕಿನಲ್ಲಿ ಸೆಕ್ಷನ್ 144 ಜಾರಿಯಲ್ಲಿದೆ. ಹೀಗಾಗಿ ಯಾವುದೇ ಪ್ರತಿಭಟನೆ, ಮೆರವಣಿಗೆ ಅವಕಾಶ ನೀಡಲ್ಲ ಅಂತ ಟಿವಿ9ಗೆ ಡಿಸಿಪಿ ವಿಕ್ರಮ್ ಆಮಟೆ ಹೇಳಿಕೆ ನೀಡಿದ್ದಾರೆ. ಹಿರೇಬಾಗೇವಾಡಿ ಟೋಲ್ ಗೇಟ್ ಬಳಿಯೇ ತಡೆಯುತ್ತೇವೆ. ಪ್ರತಿಭಟನಾ ನಿರತರನ್ನ ಮನವೊಲಿಸಿ ವಾಪಸ್ ಕಳಿಸುತ್ತೇವೆ ಅಂತ ಟಿವಿ9ಗೆ ಡಿಸಿಪಿ ವಿಕ್ರಮ್ ಆಮಟೆ ಹೇಳಿಕೆ ನೀಡಿದ್ದಾರೆ.
ಕಿತ್ತೂರಿಗೆ ಆಗಮಿಸಿದ ಪ್ರವೀಣ್ ಶೆಟ್ಟಿ
ಬೆಳಗಾವಿ ಜಿಲ್ಲೆಯ ಕಿತ್ತೂರಿಗೆ ಪ್ರವೀಣ್ ಶೆಟ್ಟಿ ಆಗಮಿಸಿದ್ದಾರೆ. ಕಿತ್ತೂರ ಚನ್ನಮ್ಮ ಪುತ್ಥಳಿಗೆ ಪ್ರವೀಣ್ ಶೆಟ್ಟಿ ಮಾಲಾರ್ಪಣೆ ಮಾಡಲಿದ್ದಾರೆ. ಪ್ರವೀಣ್ ಶೆಟ್ಟಿ ಜೊತೆ ಸಾವಿರಾರು ಕಾರ್ಯಕರ್ತರು ಆಗಮಿಸಿದ್ದಾರೆ. ಕಿತ್ತೂರು ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಚನ್ನಮ್ಮ, ರಾಯಣ್ಣ ಪರ ಜೈಕಾರ ಕೂಗುತ್ತಿದ್ದಾರೆ. ಕನ್ನಡ ಬನ್ನಿ ನಮ್ಮ ಸಂಗಡ ಅಂತಾ ಕಾರ್ಯಕರ್ತರು ಘೋಷಣೆ ಕೂಗುತ್ತಿದ್ದಾರೆ.
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕಟ್ಟಡ ಕಾಮಗಾರಿಗೆ ತಡೆ
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕಟ್ಟಡ ಕಾಮಗಾರಿಗೆ ತಡೆ ಒಡ್ಡಿದ್ದಾರೆ. ಶಿವಸೇನೆ ಕಾರ್ಯಕರ್ತರಿಂದ ಕಾಮಗಾರಿ ತಡೆದು ಪುಂಡಾಟ ಮೆರೆದಿದ್ದಾರೆ. ಸಚಿವೆ ಶಶಿಕಲಾ ಜೊಲ್ಲೆ ಸಂಬಂಧಿಕರದ್ದು ಎನ್ನಲಾದ ಕಟ್ಟಡ ಕಾಮಗಾರಿಗೆ ತಡೆ ಹಿಡಿದಿದ್ದಾರೆ. ಇಲ್ಲಿ ಯಾವುದೇ ಕಾಮಗಾರಿ ಮಾಡಬಾರದೆಂದು ಅಡ್ಡಿಪಡಿಸುತ್ತಿದ್ದಾರೆ.
ಪರಿಸ್ಥಿತಿ ನಿಭಾಯಿಸುವುದು ಗೃಹ ಇಲಾಖೆಗೆ ಸವಾಲ್
ಇಂದಿನ ಪರಿಸ್ಥಿತಿ ನಿಭಾಯಿಸುವುದು ಗೃಹ ಇಲಾಖೆಗೆ ಸವಾಲ್ ಆಗಿದೆ. ಒಂದೆಡೆ ಸಿಎಂ, ಸಚಿವರು, ವಿಪಕ್ಷ ನಾಯಕರು ಬೆಳಗಾವಿಯಲ್ಲಿದ್ದಾರೆ. ಎಲ್ಲರಿಗೂ ಭದ್ರತೆ ಒದಗಿಸಬೇಕು, ಸುವರ್ಣಸೌಧಕ್ಕೂ ಭದ್ರತೆ ಅಗತ್ಯ. ಇದರ ನಡುವೆ ಕನ್ನಡಪರ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಬೇಕಾದ ದೊಡ್ಡ ಸವಾಲ್ ಆಗಿದೆ. ನಿನ್ನೆ ಸಂಜೆಯೇ ಗೃಹ ಸಚಿವ ಆರಗ ಜ್ಞಾನೇಂದ್ರ ಸಭೆ ನಡೆಸಿದ್ದಾರೆ. ಭದ್ರತೆಗಾಗಿ ವಿವಿಧ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸರು ಆಗಮಿಸುತ್ತಿದ್ದಾರೆ.
ಆನಗೋಳ ಗ್ರಾಮಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ
ಕೆಲವೇ ಕ್ಷಣಗಳಲ್ಲಿ ಅನಗೋಳ ಗ್ರಾಮಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಎಂಇಎಸ್ ಕಿಡಗೇಡಿಗಳು ಭಗ್ನಗೊಳಿಸಿದ ರಾಯಣ್ಣ ಮೂರ್ತಿಯನ್ನು ನಿನ್ನೆ ಮತ್ತೆ ಪ್ರತಿಷ್ಟಾಪನೆ ಮಾಡಲಾಗಿದೆ. ಸ್ಥಳೀಯರ ಒತ್ತಾಯದ ಮೇಲೆ ನಿನ್ನೆ ಮತ್ತೆ ಮೂರ್ತಿ ಪ್ರತಿಷ್ಟಾಪನೆ ಮಾಡಲಾಗಿತ್ತು. ಇಂದು ರಾಯಣ್ಣ ಮೂರ್ತಿ ಪ್ರತಿಷ್ಟಾಪನೆ ಸ್ಥಳಕ್ಕೆ ಸಿದ್ದರಾಮಯ್ಯ ಆಗಮಿಸಲಿದ್ದಾರೆ.
ಭದ್ರತೆಗಾಗಿ 3 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ
ವಿವಿಧ ಕನ್ನಡ ಪರ ಸಂಘಟನೆಗಳಿಂದ ಇಂದು ಪ್ರತಿಭಟನೆ ನಡೆಯಲಿದೆ. ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧಾರ ಹಿನ್ನೆಲೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಭದ್ರತೆಗಾಗಿ 3 ಸಾವಿರಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಬೆಳಗಾವಿಯ ಚೆನ್ನಮ್ಮ ವೃತ್ತ, ಸುವರ್ಣಸೌಧ ಸುತ್ತಮುತ್ತ, ರಾಷ್ಟ್ರೀಯ ಹೆದ್ದಾರಿ, ಹಿರೇಬಾಗೇವಾಡಿ ಟೋಲ್ ಸೇರಿದಂತೆ ಬೆಳಗಾವಿ ನಗರದ ಪ್ರಮುಖ ವೃತ್ತ, ಸ್ಥಳಗಳಲ್ಲಿ ಖಾಕಿ ಕಟ್ಟೆಚ್ಚರ ವಹಿಸಿದೆ. ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರಿಂದ ಸಿದ್ಧತೆ ನಡೆದಿದೆ.
ಬೆಳಗಾವಿಯ ನಾಲ್ಕು ದಿಕ್ಕುಗಳಿಂದ ಬೃಹತ್ ಪ್ರತಿಭಟನಾ ಮೆರವಣಿಗೆ
ಬೆಳಗಾವಿಯ ನಾಲ್ಕು ದಿಕ್ಕುಗಳಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ. ಹಿರೇಬಾಗೇವಾಡಿ ಟೋಲ್ ಗೇಟ್‌ನಿಂದ ಒಂದು ಮೆರವಣಿಗೆ, ಬಾಗಲಕೋಟೆ ಮಾರ್ಗದಿಂದ ಮತ್ತೊಂದು ಪ್ರತಿಭಟನಾ ಮೆರವಣಿಗೆ, ಚೆನ್ನಮ್ಮ ವೃತ್ತದಿಂದ ಸುವರ್ಣ ಚಲೋ, ಪೀರನವಾಡಿಯಿಂದ ಬೈಕ್, ಕಾರುಗಳ ಮೂಲಕ ಮತ್ತೊಂದು ಮೆರವಣಿಗೆ ನಡೆಸಲಿದ್ದಾರೆ.
ಬೆಳಗಾವಿ ನಗರದಾದ್ಯಂತ ಅಲರ್ಟ್ ಆಗಿರುವಂತೆ ಸಿಎಂ ಸೂಚನೆ
ಬೆಳಗಾವಿಯಲ್ಲಿಂದು ವಿವಿಧ ಸಂಘಟನೆಗಳಿಂದ ಮೆರವಣಿಗೆ, ಧರಣಿ ಹಿನ್ನೆಲೆ ನಗರದಾದ್ಯಂತ ಅಲರ್ಟ್ ಆಗಿರುವಂತೆ ಸಿಎಂ ಸೂಚನೆ ನೀಡಿದ್ದಾರೆ. ಗೃಹ ಇಲಾಖೆಗೆ ಸಿಎಂ ಬಸವರಾಜ ಬೊಮ್ಮಾಯಿ ಖಡಕ್ ಸೂಚನೆ ನೀಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಲು ಸೂಚಿಸಿದ್ದಾರೆ. ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡುವಂತೆಯೂ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
11 ಗಂಟೆಗೆ ಪ್ರತಿಭಟನೆ ಆರಂಭ
ಇಂದು 11 ಗಂಟೆ ಸುಮಾರಿಗೆ ಪ್ರತಿಭಟನೆ ಆರಂಭವಾಗಲಿದೆ. ಬೃಹತ್ ಪ್ರತಿಭಟನೆಯಲ್ಲಿ ಸಾವಿರಾರು ಹೋರಾಟಗಾರರು ಭಾಗಿಯಾಗಲಿದ್ದಾರೆ. ಹುಬ್ಬಳ್ಳಿ ಮತ್ತು ಧಾರವಾಡದಿಂದ ನಾರಾಯಣಗೌಡ ಮತ್ತು ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಆಗಮಿಸುತ್ತಿದ್ದಾರೆ.
ಹೊರ ಜಿಲ್ಲೆಯಿಂದ ಆಗಮಿಸುತ್ತಿರುವ ಟಿಟಿ, ಕಾರುಗಳ ತಪಾಸಣೆ
MES ಪುಂಡಾಟ ಖಂಡಿಸಿ ಬೆಳಗಾವಿಯಲ್ಲಿಂದು ಧರಣಿ ನಡೆಸುತ್ತಿರುವ ಹಿನ್ನೆಲೆ ರಾಜ್ಯದ ಹಲವು ಜಿಲ್ಲೆಗಳಿಂದ ಜನ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಹೀಗಾಗಿ ಹಿರೇಬಾಗೇವಾಡಿ ಟೋಲ್‌ಗೇಟ್ ಬಳಿ ಪೊಲೀಸರಿಂದ ತಪಾಸಣೆ ನಡೆಯುತ್ತಿದೆ. ಹೊರ ಜಿಲ್ಲೆಯಿಂದ ಆಗಮಿಸುತ್ತಿರುವ ಟಿಟಿ, ಕಾರುಗಳ ತಪಾಸಣೆ ಮಾಡುತ್ತಿದ್ದಾರೆ. ಗುರುತಿನ ಚೀಟಿಗಳನ್ನು ಪರಿಶೀಲಿಸಿ ಪೊಲೀಸರು ಕಳಿಸುತ್ತಿದ್ದಾರೆ.
ಡಿಸೆಂಬರ್ 22ರ ಮುಂಜಾನೆ 6 ಗಂಟೆಯವರೆಗೂ ನಿಷೇಧಾಜ್ಞೆ; ಪೊಲೀಸ್ ಆಯುಕ್ತ ಕೆ ತ್ಯಾಗರಾಜನ್ ಆದೇಶ
ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಅಟ್ಟಹಾಸವನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ಇಂದು ಧರಣಿ ನಡೆಸಲಿವೆ. ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಆಯುಕ್ತ ಕೆ ತ್ಯಾಗರಾಜನ್ ಆದೇಶ ಹೊರಡಿಸಲಿದ್ದಾರೆ. ಡಿಸೆಂಬರ್ 22ರ ಮುಂಜಾನೆ 6 ಗಂಟೆಯವರೆಗೂ ನಿಷೇಧಾಜ್ಞೆ ಇರಲಿದೆ.
ಬೆಳಗಾವಿಯಲ್ಲಿ ಪೊಲೀಸರ ಬಿಗಿ ಬಂದೋಬಸ್ತ್
ಬೆಳಗಾವಿಯಲ್ಲಿ ಈಗಾಗಲೇ 14 4ಸೆಕ್ಷನ್ ಜಾರಿ ಮಾಡಿದ್ದು, ಎಲ್ಲಿಯೂ ಗುಂಪು ಗುಂಪಾಗಿ ಸೇರಿದಂತೆ ನೋಡಿಕೊಳ್ಳಲಾಗುತ್ತದೆ. ಬೆಳಗಾವಿಗೆ ನಗರಕ್ಕೆ ಕನೆಕ್ಟ್ ಆಗುವ ಮುಖ್ಯ ರಸ್ತೆಗಳಲ್ಲಿ ನಾಕಾ ಬಂದಿ ಹಾಕುತ್ತಾರೆ. ಹಿರೇಬಾಗೇವಾಡಿ ಮತ್ತು ಸುವರ್ಣ ಸೌಧದ ಮುಂದೆ ಹೆಚ್ಚಿನ ಪೊಲೀಸ್ ನಿಯೋಜನೆ ಮಾಡಲಾಗಿದೆ.
ಬೆಳಗಾವಿಯಲ್ಲಿಂದು ಸರಣಿ ಪ್ರತಿಭಟನೆ! ಈ ಸ್ಥಳಗಳಲ್ಲಿ ಧರಣಿ ನಡೆಸಲಿರುವ ಕನ್ನಡ ಪರ ಸಂಘಟನೆಗಳು
ಬೆಳಗಾವಿಯಲ್ಲಿಂದು ಸರಣಿ ಪ್ರತಿಭಟನೆ ನಡೆಯಲಿವೆ. ಬೆಳಗಾವಿಯ ಹಿರೇಬಾಗೇವಾಡಿ ಬಳಿ ಟೋಲ್ ನಾಕಾ ಬಳಿ, ಚನ್ನಮ್ಮ ವೃತ್ತ, ಸುವರ್ಣ ಸೌಧದ ಮುಂಭಾಗದಲ್ಲಿ ಇಂದು ಪ್ರತಿಭಟನೆ ನಡೆಸಲಿದ್ದಾರೆ. ಹತ್ತಕ್ಕೂ ಅಧಿಕ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಲಿವೆ. ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ, ಪ್ರವೀಣ್ ಶೆಟ್ಟಿ ಮತ್ತು ಸಾ.ರಾ ಗೋವಿಂದ್ ಹಾಗೂ ವಿವಿಧ ಜಿಲ್ಲೆಯಿಂದ ಕಾರ್ಯಕರ್ತರು ಆಗಮಿಸುತ್ತಿದ್ದಾರೆ. ಹಿರೇಬಾಗೇವಾಡಿ ಗ್ರಾಮದಿಂದ ಪ್ರತಿಭಟನೆ ಆರಂಭಿಸಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ನಾಲ್ಕು ಬೆಂಗಳೂರು ಮುಂಬೈ ರಸ್ತೆ ಮೇಲೆ ಪಾದಯಾತ್ರೆ ನಡೆಸಲಿದ್ದಾರೆ. ಬೆಳಗಾವಿಯ ಚನ್ನಮ್ಮ ವೃತ್ತದಿಂದ ಕೆಲವು ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಲಿವೆ.
ಎಮ್ಇಎಸ್ ಪುಂಡರ ಪುಂಡಾಟಿಕೆ ಪ್ರಕರಣ; ಬೆಳಗಾವಿಯತ್ತ ಹೊರಟ ಕನ್ನಡ ಪರ ಸಂಘಟನೆಗಳು
ಎಮ್ಇಎಸ್ ಪುಂಡರ ಪುಂಡಾಟಿಕೆ ವಿರುದ್ಧ ಪ್ರತಿಭಟನೆ ನಡೆಸಲು ಕನ್ನಡ ಪರ ಸಂಘಟನೆಗಳು ಬೆಳಗಾವಿಯತ್ತ ಹೊರಟಿವೆ.ಕಾರು, ಟಿಟಿ ವಾಹನಗಳಲ್ಲಿ ನೂರಾರು ಜನ ಕರವೇ ಕಾರ್ಯಕರ್ತರು ತುಮಕೂರಿನಿಂದ ಬೆಳಗಾವಿಯತ್ತ ಹೊರಟಿದ್ದಾರೆ. ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ನೇತೃತ್ವದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಕರವೇ ನಡೆ ಬೆಳಗಾವಿ ಕಡೆ ಸ್ಲೋಗನ್ ಅಡಿಯಲ್ಲಿ ಕಾರ್ಯಕರ್ತರು ಹೊರಟ ನಡೆಸಲಿದ್ದಾರೆ. ಎಮ್ಇಎಸ್ ಮತ್ತು ಶಿವಸೇನೆ ವಿರುದ್ಧ ಬೃಹತ್ ರ್ಯಾಲಿ ಹಾಗೂ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಕರೆ ನೀಡಲಾಗಿದೆ. ಕನ್ನಡ ಬಾವುಟ ಸುಡುವುದು, ರಾಯಣ್ಣ ಪ್ರತಿಮೆಯನ್ನು ಭಗ್ನಗೊಳಿಸುವುದು ಮಾಡುತ್ತಾ ಬಂದಿದ್ದಾರೆ. ಎಮ್ಇಎಸ್ನ ನಿಷೇಧಿಸುವಂತೆ ಇದುವರೆಗೂ ಬಂದಂತ ಸರ್ಕಾರಗಳಿಗೆ ಹಕ್ಕನ್ನ ಮಂಡಿಸಿದ್ದೇವೆ. ಆದರೆ ಯಾವ ಸರ್ಕಾರಗಳು, ಎಮ್ಸಿಎಸ್ ಪುಂಡಾಟಿಕೆಯನ್ನ ಬಗ್ಗುಬಡಿಯಲಿಲ್ಲ. ಪಾದಯಾತ್ರೆ ಮೂಲಕ ಸುವರ್ಣ ಸೌದಕ್ಕೆ ಮುತ್ತಿಗೆ ಹಾಕಲು ನಿರ್ಧಾರ ಮಾಡಲಾಗಿದೆ ಅಂತ ತುಮಕೂರಿನಲ್ಲಿ ಟಿವಿ9ಗೆ ಕರವೇ ನಾರಾಯಣ ಗೌಡ ಹೇಳಿಕೆ ನೀಡಿದ್ದಾರೆ.
ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಧ್ವಂಸಗೊಳಿಸಿದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮತ್ತು ಶಿವಸೇನೆ ಕಾರ್ಯಕರ್ತರ ಕೃತ್ಯ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಇಂದು (ಡಿ.20) ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಎಂಇಎಸ್ ಮತ್ತು ಶಿವಸೇನೆಯನ್ನು ಭಯೋತ್ಪಾದಕ ಗುಂಪುಗಳು ಎಂದು ಕರೆದಿರುವ ಕರವೇ ಹೋರಾಟ ನಡೆಸುತ್ತಿದೆ. ಕರವೇ ನಡೆ ಬೆಳಗಾವಿ ಕಡೆ ಸ್ಲೋಗನ್ ಅಡಿಯಲ್ಲಿ ಕಾರ್ಯಕರ್ತರು ಧರಣಿ ನಡೆಸುತ್ತಿದ್ದಾರೆ. ಸದ್ಯ ಹೋರಾಟಕ್ಕಿಳಿದಿದ್ದ ಕರವೇ ಪ್ರವಿಣ್ ಶೆಟ್ಟಿ ಬಣದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಟಿವಿ9ಗೆ ಹೇಳಿಕೆ ನೀಡಿದ ಪ್ರವೀಣ್ ಶೆಟ್ಟಿ, ಕರ್ನಾಟಕ ಬಂದ್ ಮಾಡುವ ಬಗ್ಗೆ ಬುಧವಾರ ತೀರ್ಮಾನ ಮಾಡುತ್ತೇವೆ ಅಂತ ತಿಳಿಸಿದ್ದಾರೆ.
Published On - Dec 20,2021 8:45 AM