ಬೆಳಗಾವಿ ಅಧಿವೇಶನ: ಪರಿಷತ್​​ನಲ್ಲಿ ಪ್ರಶ್ನೆ ಕೇಳಿದ್ದ BJP ಎಂಎಲ್ಸಿಗೆ ಕೊಟ್ಟಿದ್ದು ಖಾಲಿ ಪೆನ್​ಡ್ರೈವ್​!

ಗೃಹಲಕ್ಷ್ಮೀ ಯೋಜನೆ ವಿಚಾರವಾಗಿ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ವಿಪಕ್ಷಗಳು ಆಕ್ರೋಶ ವಕ್ತಪಡಿಸುತ್ತಿರುವ ನಡುವೆ ರಾಜ್ಯ ಸರ್ಕಾರ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ. ಪರಿಷತ್​​ ಬಿಜೆಪಿ ಸದಸ್ಯರ ಪ್ರಶ್ನೆಗೆ ಉತ್ತರಿಸುವ ವೇಳೆ ಅಧಿಕಾರಿಗಳು ಬೇಜವಾಬ್ದಾರಿ ತೋರಿರೋದು ಆಡಳಿತ ಪಕ್ಷಕ್ಕೆ ಇರುಸುಮುರುಸು ಉಂಟುಮಾಡಿದೆ.

ಬೆಳಗಾವಿ ಅಧಿವೇಶನ: ಪರಿಷತ್​​ನಲ್ಲಿ ಪ್ರಶ್ನೆ ಕೇಳಿದ್ದ BJP ಎಂಎಲ್ಸಿಗೆ ಕೊಟ್ಟಿದ್ದು ಖಾಲಿ ಪೆನ್​ಡ್ರೈವ್​!
ವಿಧಾನ ಪರಿಷತ್​​
Edited By:

Updated on: Dec 17, 2025 | 4:00 PM

ಬೆಳಗಾವಿ, ಡಿಸೆಂಬರ್​​ 17: ಗೃಹಲಕ್ಷ್ಮೀ ಯೊಜನೆ ವಿಚಾರವಾಗಿ ಸದನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ್ದ ಮಾಹಿತಿ ತಪ್ಪು ಎಂಬ ಕಾರಣಕ್ಕೆ ವಿಪಕ್ಷಗಳು ಕೋಲಾಹಲವನ್ನೇ ಎಬ್ಬಿಸಿವೆ. ವಾಗ್ಯುದ್ಧ, ಸಭಾತ್ಯಾಗದಂತಹ ಘಟನೆಗಳು ನಡೆದು ಸಚಿವರು ವಿಷಾದ ವ್ಯಕ್ತಪಡಿಸಿದ ಪ್ರಸಂಗವೂ ನಡೆದಿದೆ. ಹೀಗಿದ್ದರೂ ಪ್ರತಿಪಕ್ಷಗಳ ಆಕ್ರೋಶ ಮಾತ್ರ ಕಡಿಮೆಯಾಗಿಲ್ಲ. ಈ ನಡುವೆ ರಾಜ್ಯ ಸರ್ಕಾರದ ಮತ್ತೊಂದು ಬೇಜವಾಬ್ದಾರಿ ಸದನದಲ್ಲಿ ಬಟಾ ಬಯಲಾಗಿದೆ. ಪರಿಷತ್​​ ಸದಸ್ಯರಿಗೆ ಉತ್ತರ ನೀಡುವ ವಿಚಾರದಲ್ಲೂ ಎಡವಟ್ಟು ನಡೆದಿರೋದೀಗ ಬಹಿರಂಗಗೊಂಡಿದೆ.

ಉತ್ತರ ಇದೆ ಎಂದು ನೀಡಿದ್ದು ಖಾಲಿ ಪೆನ್​ಡ್ರೈವ್​ !

ವಿಧಾನ ಪರಿಷತ್​​ನ ಬಿಜೆಪಿ ಸದಸ್ಯ ನವೀನ್​​ ಕಲಾಪದಲ್ಲಿ ಪ್ರಶ್ನೆಯೊಂದನ್ನು ಕೇಳಿದ್ದು, ಇದಕ್ಕೆ ಉತ್ತರ ಇದೆ ಎಂದು ನೀಡಿದ್ಧ ಪೆನ್​ಡ್ರೈವ್​ ಖಾಲಿಯಾಗಿತ್ತು ಎಂಬ ಆರೊಪ ಕೇಳಿಬಂದಿದೆ. ಪರಿಷತ್​ ಪ್ರಶ್ನೋತ್ತರ ಕಲಾಪದಲ್ಲಿ ನೀಡಿದ್ದ ಉತ್ತರದ ಬಗ್ಗೆಸದಸ್ಯ ನವೀನ್ ತೀವ್ರ​​ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ನೀಡಿದ್ದ ಪೆನ್​ಡ್ರೈವ್​​ನಲ್ಲಿ ಏನೂ ಇರಲಿಲ್ಲ ಎಂದು ಅವರು ಬೇಸರ ಹೊರಹಾಕಿದ ಪ್ರಸಂಗ ನಡೆದಿದೆ.

ಇದನ್ನೂ ಓದಿ: ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ, ಸದನದಲ್ಲಿ ವಿಷಾದ ವ್ಯಕ್ತಪಡಿಸಿದ ಲಕ್ಷ್ಮಿ ಹೆಬ್ಬಾಳ್ಕರ್

ಸರ್ಕಾರಕ್ಕೆ ಉಪಸಭಾಪತಿ ಸೂಚನೆ

ಸದಸ್ಯರ ಆರೋಪದ ಮೇರೆಗೆ ಈ ರೀತಿಯ ಲೋಪ ಆಗದಂತೆ ನೋಡಿಕೊಳ್ಳಿ ಎಂದು ರಾಜ್ಯ ಸರ್ಕಾರಕ್ಕೆ  ಸಭಾಪತಿ ಪೀಠ ಖಡಕ್​​ ಸೂಚನೆ ನೀಡಿದೆ. ಇಂತಹ ವಿಚಾರಗಳು ಮುಂದೆ ಮುರುಕಳಿಸಬಾರದು ಎಂದು ಸಭಾಪತಿ ಪೀಠದಲ್ಲಿದ್ದ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ತಾಕೀತು ಮಾಡಿದ್ದಾರೆ. ಅಲ್ಲದೆ, ನಿಮಗೆ ಸೂಕ್ತ ಉತ್ತರ ಪೆನ್​ಡ್ರೈವ್​ನಲ್ಲೇ ಸಿಗುತ್ತೆಂದು ಬಿಜೆಪಿ ಸದಸ್ಯ ನವೀನ್​ಗೆ ಉಪಸಭಾಪತಿ ಅವರು ಭರವಸೆ ನೀಡಿದ ಹಿನ್ನೆಲೆ ವಿಷಯ ಸುಖಾಂತ್ಯ ಕಂಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 3:56 pm, Wed, 17 December 25