ಸಚಿವ ಕೃಷ್ಣಭೈರೇಗೌಡ ವಿರುದ್ಧ 21 ಎಕರೆ ಜಮೀನು ಕಬಳಿಕೆ ಆರೋಪ: ಬಿಜೆಪಿಯಿಂದ ದಾಖಲೆ ಬಿಡುಗಡೆ
ಕಂದಾಯ ಸಚಿವ ಕೃಷ್ಣಭೈರೇಗೌಡ ಒಂದ ರೀತಿಯ ವೈಟ್ ಕಾಲರ್ ರಾಜಕಾರಣಿ. ಅವರ ವಿರುದ್ಧ ಯಾವುದೇ ಭ್ರಷ್ಟಾಚಾರ ಆರೋಪಗಳು ಇಲ್ಲ. ಹೀಗಾಗಿ ಅವರ ಕಾರ್ಯ ವೈಖರಿ ಬಗ್ಗೆ ಸಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ. ಹಾಸನಾಂಬೆ ಉತ್ಸದಲ್ಲಿ ಖುದ್ದು ಮೈಕ್ ಹಿಡಿದು ಓಡಾಡಿದ್ದು, ಅಭಿವೃದ್ಧಿ ಕೆಲಸ, ಇಲಾಖೆ ಕಾರ್ಯದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ಬಗ್ಗೆ ಶ್ಲಾಘನೆಗಳು ವ್ಯಕ್ತವಾಗಿವೆ. ಆದ್ರೆ, ಇದೀಗ ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ ಕೇಳಿಬಂದಿದದೆ. ಇನ್ನು ಇದಕ್ಕೆ ಸಚಿವರು ಸಹ ಸ್ಪಷ್ಟನೆ ನೀಡಿದ್ದಾರೆ.

ಬೆಳಗಾವಿ, ಡಿಸೆಂಬರ್ 17): ತಾವು ಆಯ್ತು ತಮ್ಮ ಇಲಾಖೆ ಕಾರ್ಯ ಕೆಲಸಗಳಾಯ್ತು ಎಂದು ಇರುವ ಕಂದಾಯ ಸಚಿವ ಕೃಷ್ಣಭೈರೇಗೌಡ (Krishna Byre Gowda) ವಿರುದ್ಧ 21 ಎಕರೆ ಜಮೀನು ಕಬಳಿಕೆ ಆರೋಪ ಕೇಳಿಬಂದಿದೆ. ಕೋಲಾರ (Kolar) ಜಿಲ್ಲೆಯ ನರಸಪುರ ಹೋಬಳಿ ಗರುಡನಪಾಳ್ಯದಲ್ಲಿ 21 ಎಕರೆ ಜಮೀನು ಕಬಳಿಸಿದ್ದಾರೆ. ನಕಲಿ ದಾಖಲೆ ಸೃಷ್ಟಿ ಮಾಡಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆಂದು ವಿಪಕ್ಷ ನಾಯಕರು ಗಂಭೀರ ಆರೋಪ ಮಾಡಿದ್ದು, ಈ ಸಂಬಂಧ ಬೆಳಗಾವಿಯಲ್ಲಿಂದು ಬಿಜೆಪಿ ಮುಖಂಡ ತಮ್ಮೇಶ ಗೌಡ, ಕೃಷ್ಣಭೈರೇಗೌಡರು ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಸಿವುದಕ್ಕೆ ಕೆಲ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ಬಿಜೆಪಿ ಮುಖಂಡ ತಮ್ಮೇಶ ಗೌಡ ಅವರು ಇಂದು (ಡಿಸೆಂಬರ್ 17) ಬೆಳಗಾವಿಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿ ಬಳಿಕ ಮಾತನಾಡಿ, ವೈಟ್ ಕಾಲರ್ ರಾಜಕಾರಣಿ ಭ್ರಷ್ಟಾಚಾರ ಇಲ್ಲ ಎನ್ನುವ ಮಂತ್ರಿ ಕೃಷ್ಣ ಭೈರೇಗೌಡ. ಆದ್ರೆ, ನಕಲಿ ದಾಖಲೆ ಸೃಷ್ಟಿಸಿ ಕಂದಾಯ ಸಚಿವರು ಖರಾಬ್ ಜಮೀನನ್ನು ಅವರ ಹೆಸರಿಗೆ ಮಾಡಿಕೊಂಡಿದ್ದಾರೆ.ಸರ್ಕಾರಿ ಜಮೀನು ಉಳಿಸಲು ಹೋರಾಟ ಮಾಡುತ್ತೇವೆ ಎಂದು ಹೇಳುವ ಅವರ ನಿಯತ್ತು ಏನು ಎಂಬುದು ಈಗ ಹೊರಗೆ ಬಂದಿದೆ. ಮೂಲ ದಾಖಲೆಗಳೇ ಫೋರ್ಜರಿ ಮಾಡಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಕಂದಾಯ ಸಚಿವರು ಯಾವ ರೀತಿ ಪ್ರಭಾವ ಬಳಸಿದರು? ಕಂದಾಯ ಸಚಿವರು ಆ ಸ್ಥಾನದಲ್ಲಿ ಇರಲು ಯೋಗ್ಯತೆ, ಅರ್ಹತೆ ಇದೆಯಾ? ಸ್ವಜನಪಕ್ಷಪಾತದಲ್ಲಿ ಇರಬೇಕಾದರೆ ಅವರು ಆ ಸ್ಥಾನದಲ್ಲಿ ಮುಂದುವರಿಯಲು ಅರ್ಹರಾ? ಹೀಗಾಗಿ ಕೃಷ್ಣ ಭೈರೇಗೌಡ ಕುಡಲೇ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.
ಇದನ್ನೂ ಓದಿ: Krishna Byre Gowda Profile: ಅಮೇರಿಕದ ರಾಜತಾಂತ್ರಿಕ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೃಷ್ಣಭೈರೇಗೌಡ ರಾಜ್ಯ ವಿಧಾನಸಭೆ ಪ್ರವೇಶಿಸಿದ್ದು ಹೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ
ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಕೋಲಾರ ಜಿಲ್ಲೆಯ ನರಸುಪುರ ಹೋಬಳಿ ಗರುಡನಪಾಳ್ಯದಲ್ಲಿ 21 ಎಕರೆ ಜಮೀನು ನುಂಗಿದ್ದಾರೆ. ನಕಲಿ ಸೃಷ್ಟಿ ಮಾಡಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಇನ್ನು ಇದೇ ವೇಳೆ ಎನ್ ರವಿಕುಮಾರ್ ಮಾತನಾಡಿ, ಸಿದ್ದರಾಮಯ್ಯನವರು ಹ್ಯುಬ್ಲೊಟ್ ವಾಚ್ ಹಾಗೂ 14 ಸೈಟು ವಾಪಸ್ ಕೊಟ್ಟರು. ಈಗ ಕೃಷ್ಣ ಭೈರೇಗೌಡ ಸರದಿ. ಕೆರೆಯ ಜಮೀನನ್ನು ಸ್ಮಶಾನದ ಜಮೀನನ್ನು ಕೃಷ್ಣ ಭೈರೇಗೌಡ ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ಕೆರೆ ಹಾಗೂ ಸ್ಮಶಾನ ಖಾಸಗಿ ವ್ಯಕ್ತಿ ಗಳ ಹೆಸರಿಗೆ ಮಾಡಿಕೊಳ್ಳಲು ಆಗುವುದಿಲ್ಲ. ಕೆರೆಗೆ ಮಾರ್ಕ್ ಮಾಡಿ ಖರಾಬು ಅಂತ ಹೇಗೆ ಮಾಡಿದ್ರು? ಇದನ್ನು ತನಿಖೆಗೆ ಒಳಪಡಿಸಬೇಕು. ಈ ಬಗ್ಗೆ ಸಿಎಂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಆರೋಪಕ್ಕೆ ಕೃಷ್ಣ ಭೈರೇಗೌಡ ಸ್ಪಷ್ಟನೆ
ಇನ್ನು ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕೃಷ್ಣ ಭೈರೇಗೌಡ, ಅದು ನಮ್ಮ ಪಿತ್ರಾರ್ಜಿತ ಆಸ್ತಿ. ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ಆಗಲಿ. ನಾನೇ ತನಿಖೆಗೆ ಸಹಕಾರ ಮಾಡುತ್ತೇನೆ. ಲೋಕಾಯುಕ್ತಕ್ಕೆ ದೂರು ಕೊಡಲಿ. ಸರ್ಕಾರವೇ ತನಿಖೆ ಮಾಡಿದರೆ ನೀವೇ ಮಂತ್ರಿ ನೀವೇ ತನಿಖೆ ಮಾಡುವುದು ಸರಿಯಾ ಎನ್ನುತ್ತೀರಾ. ಅದು ನಮ್ಮ ತಾತನವರ ಜಾಗ, ಅವರಿಂದ ನಮ್ಮ ತಂದೆಯವರಿಗೆ ಬಂದಿರುವುದು. ಆಗ ನಾನು ಐದು ವರ್ಷದ ಮಗು. ನಮ್ಮ ತಾತನಿಗೆ ಮೂರು ಜನ ಮಕ್ಕಳು . ಅವರಿಗೆ ಭಾಗ ಆಗಿ ನಮಗೆ ಬಂದಿದೆ ಎಂದು ಸ್ಪಷ್ಟಪಿಸಿದರು.
ಏನಿದೆಯೋ ಅದು ಕಾನೂನು ಪ್ರಕಾರವೇ ತನಿಖೆ ಆಗಲಿ. ರಾಜಕೀಯ ಕೆಸರೆರಚಾಟಕ್ಕೆ ಅವರು ಆರೋಪ ಮಾಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಅಷ್ಟೋ ಇಷ್ಟೋ ತಲೆ ಎತ್ತಿಕೊಂಡು ಇದ್ದೇವೆ. ಅದಕ್ಕಾಗಿ ಆರೋಪ ಮಾಡ್ತಿದ್ದಾರೆ. ಅವರು ಕಳೆದುಕೊಳ್ಳೋದು ಏನಿದೆ? ನಮಗೆ ಪಿತ್ರಾರ್ಜಿತ ಆಸ್ತಿಯಾಗಿ ಬಂದಿದ್ದು ನಾನ್ಯಾಕೆ ದೂರು ನೀಡಲಿ. ನಾನ್ಯಾಕೆ ಮೈ ಪರಚಿಕೊಳ್ಳಲಿ. ಸ್ವತಂತ್ರ ತನಿಖೆ ಆಗಲಿ. ಕಾನೂನು ಪ್ರಕಾರ ರಾಜಕೀಯದಲ್ಲಿ ಘನತೆ ಗೌರವದಿಂದ ಇದ್ದೇವೆ. ಆರೋಪ ಮಾಡಿರುವವರು ಘನತೆ ಗೌರವಕ್ಕೆ ಕೆಳಗೆ ಹೋಗ್ತೀವಿ ಅಂದ್ರೆ ನಾವೇನು ಮಾಡೋಣ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:18 pm, Wed, 17 December 25




