ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಎಂಇಎಸ್ ಯುಗಾಂತ್ಯ, ಕಮಲ ದರ್ಬಾರ್ ಶುರು
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ನಡೆದು 17 ತಿಂಗಳ ಬಳಿಕ ಮೇಯರ್ ಉಪಮೇಯರ್ ಆಯ್ಕೆಯಾಗಿದೆ. ಈ ಮುಂಚೆ ಭಾಷಾ ಆಧಾರಿತವಾಗಿ ನಡೆಯುತ್ತಿದ್ದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಇದೇ ಮೊದಲ ಬಾರಿ ಪಕ್ಷದ ಚಿಹ್ನೆ ಮೇಲೆ ನಡೆದು ಬಿಜೆಪಿ ಗೆದ್ದುಬಿಗಿದೆ.
ಬೆಳಗಾವಿ: ಮಹಾನಗರ ಪಾಲಿಕೆಯಲ್ಲಿ ಎಂಇಎಸ್ ಯುಗಾಂತ್ಯವಾಗಿದೆ. ಇಷ್ಟು ದಿನ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಭಾಷಾ ಆಧಾರಿತವಾಗಿ ನಡೆದು ಎಂಇಎಸ್ ಪುಂಡಾಟಿಕೆ ಮಾಡುತ್ತ ಬಂದಿತ್ತು. ಇದೇ ಮೊದಲ ಬಾರಿಗೆ ಪಕ್ಷದ ಚಿಹ್ನೆ ಮೇಲೆ ಚುನಾವಣೆ ನಡೆದಿತ್ತು. ಸೆಪ್ಟೆಂಬರ್ 3ರಂದು ನಡೆದ ಚುನಾವಣೆಯಲ್ಲಿ 58 ವಾರ್ಡ್‌ಗಳ ಪೈಕಿ 35 ವಾರ್ಡ್‌ಗಳಲ್ಲಿ ಜಯ ಸಾಧಿಸುವ ಮೂಲಕ ಬಿಜೆಪಿ ಸ್ಪಷ್ಟ ಬಹುಮತ ಪಡೆದಿತ್ತು. 2021ರ ಸೆಪ್ಟೆಂಬರ್ 6ರಂದು ಫಲಿತಾಂಶ ಬಂದರೂ ಕಳೆದ 17 ತಿಂಗಳಿಂದ ಮೇಯರ್, ಉಪಮೇಯರ್ ಚುನಾವಣೆ ನಡೆದಿರಲಿಲ್ಲ. ಬೆಳಗಾವಿ ಮಹಾನಗರ ಪಾಲಿಕೆಯ 21ನೇ ಅವಧಿಯ ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಮೇಯರ್ ಹಿಂದುಳಿದ ವರ್ಗ ಬ ಮಹಿಳೆಗೆ ಮೀಸಲಾಗಿತ್ತು. ಈ ಮಧ್ಯೆ ಮೇಯರ್ ಸ್ಥಾನಕ್ಕೆ ಮರಾಠಾ ಲಿಂಗಾಯತ ಸಮುದಾಯದ ಮಧ್ಯೆ ಪೈಪೋಟಿ ನಡೆದಿತ್ತು.
ನಿನ್ನೆ ರಾತ್ರಿ ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ, ಬೆಳಗಾವಿ ವಿಭಾಗ ಬಿಜೆಪಿ ಉಸ್ತುವಾರಿ ನಿರ್ಮಲಕುಮಾರ್ ಸುರಾನಾ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆಯಲ್ಲಿ ಮೇಯರ್ ಆಕಾಂಕ್ಷಿಗಳ ಸಂದರ್ಶನ ನಡೆದಿತ್ತು. ಇಂದು ಬೆಳಗ್ಗೆ ಮತ್ತೆ ಸಭೆ ಸೇರಿದ ಬಿಜೆಪಿ ನಾಯಕರು ಬೆಳಗಾವಿ ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕನಾಗಿ ವಾರ್ಡ್ ನಂಬರ್ 36ರ ಸದಸ್ಯ, ಲಿಂಗಾಯತ ಪಂಚಮಸಾಲಿ ಸಮುದಾಯದ ಹಾಗೂ ಕನ್ನಡ ಭಾಷಿಕ ರಾಜಶೇಖರ್ ಡೋಣಿ ಆಯ್ಕೆ ಮಾಡಲಾಯಿತು. ಮೇಯರ್, ಉಪಮೇಯರ್ ಮರಾಠಾ ಸಮುದಾಯಕ್ಕೆ ನೀಡಿದ್ದು, ಬೆಳಗಾವಿ ದಕ್ಷಿಣ ಮತಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂಬರ್ 57ರ ಸದಸ್ಯೆ ಶೋಭಾ ಸೋಮನಾಚೆ ಅವಿರೋಧವಾಗಿ ಆಯ್ಕೆಯಾದರು.
ಇನ್ನು ಇದೇ ವೇಳೆ ಮರಾಠಾ ಭಾಷಿಕ ಸದಸ್ಯರಿಗೆ ಮೇಯರ್, ಉಪಮೇಯರ್ ಸ್ಥಾನ ನೀಡಿದ್ದಕ್ಕೆ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಕರವೇ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕೂಡಿ ಪಾಲಿಕೆ ನುಗ್ಗಲು ಯತ್ನಿಸಿದಾಗ ಪೊಲೀಸರು ವಶಕ್ಕೆ ಪಡೆದರು. ಇನ್ನು ಬೆಳಗಾವಿ ಉಪಮೇಯರ್ ಆಗಿ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂಬರ್ 33ರ ಸದಸ್ಯೆ ರೇಷ್ಮಾ ಪಾಟೀಲ್ ಆಯ್ಕೆ ಮಾಡಿದ್ದಾಗಿ ರಾಜ್ಯ ಬಿಜೆಪಿ ವಕ್ತಾರ ಎಂ.ಬಿ.ಜಿರಲಿ ಘೋಷಿಸಿದರು. ಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದ ಮೇಯರ್ ಶೋಭಾ ಸೋಮನಾಚೆ ಕನ್ನಡದಲ್ಲಿಯೇ ಮಾತನಾಡಿ ಎಲ್ಲರ ಮನಗೆದ್ದರು. ಈ ವೇಳೆ ಎಲ್ಲಾ ಬಿಜೆಪಿ ಕಾರ್ಪೊರೇಟರ್ಗಳು, ಶಾಸಕರು, ಸಂಸದರು ಮೇಜು ತಟ್ಟಿ ಸ್ವಾಗತಿಸಿದರು. ಮೇಯರ್, ಉಪಮೇಯರ್ ಚುನಾವಣೆ ಪ್ರಕ್ರಿಯೆಗೆ ಕಾಂಗ್ರೆಸ್ ಕಾರ್ಪೊರೇಟರ್ಗಳು ಬಹಿಷ್ಕಾರ ಹಾಕಿದ್ರು. ಇದಕ್ಕೆ ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು. ನೂತನ ಮೇಯರ್ ಉಪಮೇಯರ್‌ಗೆ ಅಭಿನಂದನೆ ಸಲ್ಲಿಸುವ ಸೌಜನ್ಯವೂ ಇಲ್ಲ. ಬೆಳಗಾವಿ ಅಭಿವೃದ್ಧಿಗೆ ಸಾಥ್ ನೀಡಲ್ಲವೆಂದು ಮೊದಲ ದಿನವೇ ತೋರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ನೂತನ ಮೇಯರ್ ಉಪಮೇಯರ್‌ಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ, ಬೆಳಗಾವಿ ವಿಭಾಗ ಬಿಜೆಪಿ ಉಸ್ತುವಾರಿ ನಿರ್ಮಲಕುಮಾರ್ ಸುರಾನಾ ಪುಷ್ಟಗುಚ್ಛ ನೀಡಿ ಅಭಿನಂದಿಸಿದರು. ಈ ವೇಳೆ ಮಾತನಾಡಿದ ನಿರ್ಮಲಕುಮಾರ್ ಸುರಾನಾ, ಬೆಳಗಾವಿ ಇತಿಹಾಸದಲ್ಲಿ ಮೊದಲ ಬಾರಿಗೆ ಬೆಳಗಾವಿ ಮೇಯರ್, ಉಪಮೇಯರ್ ಬಿಜೆಪಿಯವರು ಆಗಿದ್ದಾರೆ. ಶೋಭಾ ಸೋಮನಾಚೆ ಅವಿರೋಧವಾಗಿ ಮೇಯರ್ ಆಗಿ ಹಾಗೂ ರೇಷ್ಮಾ ಪಾಟೀಲ್ ಉಪಮೇಯರ್ ಆಗಿ ಆಯ್ಕೆ ಆಗಿದ್ದು ಅವರಿಗೆ ಅಭಿನಂದನೆ. ನಮ್ಮಲ್ಲಿ ಇದ್ದ 39 ಮತ ಹಾಗೂ ಪಕ್ಷೇತರ ಸದಸ್ಯರು ಸೇರಿ 42 ಮತ ಉಪಮೇಯರ್‌ಗೆ ಬಂದಿವೆ. ಮುಂದಿನ ದಿನಗಳಲ್ಲಿ ಬೆಳಗಾವಿ ಅಭಿವೃದ್ಧಿಗೆ ಇದೊಂದು ಒಳ್ಳೆಯ ಅವಕಾಶ. ಮಾನ್ಯ ಸಿಎಂ ನೆರವಾಗಿ ಚುನಾವಣೆ ಗಮನಿಸುತ್ತಿದ್ದರು. ಬಿಜೆಪಿ ರಾಜ್ಯಾಧ್ಯಕ್ಷರು ಯಾವುದೇ ಕಾರಣಕ್ಕೂ ಬಿಜೆಪಿ ಗೆಲ್ಲಬೇಕು ಅಂತಾ ಕೆಲಸ ಮಾಡಿದ್ದು ಬೆಂಗಳೂರಿನ ಶಾಸಕ ಸತೀಶ್ ಸೈಲ್ ಸೇರಿ ನಮ್ಮ ಬೆಳಗಾವಿಯ ಶಾಸಕರು ಸಂಸದರು ಸೇರಿ ಕೆಲಸ ಮಾಡಿ ಪಾಲಿಕೆ ಚುನಾವಣೆಯಲ್ಲಿ 35 ಸೀಟ್ ಗೆದ್ದಾಗ ನಮಗೆ ಖುಷಿಯಾಯ್ತು. ಜನರು ನಮ್ಮ ಜೊತೆಯಲ್ಲಿರೋದು ಮುಂದಿನ ದಿನಗಳಲ್ಲಿ ಜನರ ಆಪೇಕ್ಷೆಯಂತೆ ಕೆಲಸ ಮಾಡ್ತೀವಿ ಎಂದಿದ್ದಾರೆ.
ಇನ್ನು ಚುನಾವಣಾ ಪ್ರಕ್ರಿಯೆ ಎಲ್ಲವೂ ಮುಗಿದ ಬಳಿಕ ಮಹಾನಗರ ಪಾಲಿಕೆ ಕಚೇರಿ ಎದುರು ಪಟಾಕಿ ಸಿಡಿಸಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ಮೇಯರ್ ಉಪಮೇಯರ್ ಸ್ಥಾನಕ್ಕೆ ಲಿಂಗಾಯತ ಮರಾಠಾ ಸಮುದಾಯ ಮಧ್ಯೆ ಫೈಟ್ ಒಂದೆಡೆ ಆದ್ರೆ ಕನ್ನಡ ಭಾಷಿಕರಿಗೆ ಮೇಯರ್ ಸ್ಥಾನ ನೀಡುವ ಒತ್ತಾಯ ಇತ್ತು. ಈ ಮಧ್ಯೆ ಲಿಂಗಾಯತ ಸಮುದಾಯಕ್ಕೆ ಸಭಾನಾಯಕ ಸ್ಥಾನ ನೀಡಿ, ಮರಾಠಾ ಸಮುದಾಯಕ್ಕೆ ಮೇಯರ್ ಉಪಮೇಯರ್ ಸ್ಥಾನ ನೀಡಿ ಅವರ ಬಳಿ ಕನ್ನಡ ಹೇಳಿಕೆ ನೀಡಿಸುವ ಮೂಲಕ ಬಿಜೆಪಿ ಮಾಸ್ಟರ್‌ಸ್ಟ್ರೋಕ್ ಹೊಡೆದಿದೆ.
ವರದಿ: ಸಹದೇವ ಮಾನೆ ಟಿವಿ9 ಬೆಳಗಾವಿ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ