ಬೆಳಗಾವಿ: ಮಂಗಳೂರು ಮಳಲಿ ಮಸೀದಿ (Malali Masjid) ಬಳಿ ಮಂದಿರವಿದೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಜಿಲ್ಲೆಗೂ ಮಸೀದಿ ವರ್ಸಸ್ ಮಂದಿರ ವಿವಾದ ಕಾಲಿಟ್ಟಿದೆ. ರಾಮದೇವ ಗಲ್ಲಿಯ ಶಾಹಿ ಮಸೀದಿ ಈ ಹಿಂದೆ ಮಂದಿರವಾಗಿತ್ತು ಎಂದು ಬಿಜೆಪಿ ಶಾಸಕ ಅಭಯ್ ಪಾಟೀಲ್ (MLA Abhay Patil) ಹೇಳಿಕೆ ನೀಡಿದ್ದಾರೆ. ಶಾಹಿ ಮಸೀದಿಯಲ್ಲಿ ದೇಗುಲದ ಗರ್ಭಗುಡಿಯ ಬಾಗಿಲು ಇದೆ. ಸಣ್ಣ ಬಾಗಿಲು ದೇವಸ್ಥಾನಗಳ ಹೊರತು ಬೇರೆ ಕಡೆ ಇರುವುದಿಲ್ಲ. ದೇವಾಲಯವನ್ನು ಶಾಹಿ ಮಸೀದಿಯಾಗಿ ಪರಿವರ್ತಿಸಲಾಗಿದೆ. ಶಾಹಿ ಮಸೀದಿ ಬಗ್ಗೆ ಹಿರಿಯರು ನನ್ನ ಗಮನಕ್ಕೆ ತಂದಿದ್ದಾರೆ ಎಂದು ತಿಳಿಸಿದ್ದಾರೆ.
ಶಾಹಿ ಮಸೀದಿ ಬಗ್ಗೆ ಕಲೆ ಹಾಕುತ್ತಿದ್ದೇನೆ ಎಂದು ತಿಳಿಸಿದ ಶಾಸಕ ಅಭಯ್ ಪಾಟೀಲ್, ಶಾಹಿ ಮಸೀದಿ ಸರ್ವೆ ಮಾಡುವಂತೆ ಬೆಳಗಾವಿ ಡಿಸಿಗೆ ಹೇಳಿದ್ದೇನೆ. ಶಾಹಿ ಮಸೀದಿ ಪಕ್ಕದಲ್ಲಿ ಹನುಮಾನ್ ಮಂದಿರವಿದೆ. ಹನುಮಾನ್ ಮಂದಿರದ ಪಕ್ಕದಲ್ಲಿದ್ದ ದೇಗುಲದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇನೆ. ಸೋಮವಾರ ಬೆಳಗಾವಿ ಜಿಲ್ಲಾಧಿಕಾರಿಗಳನ್ನ ಭೇಟಿ ಮಾಡುತ್ತೇನೆ. ಶಾಹಿ ಮಸೀದಿ ಸರ್ವೆ ಮಾಡಿ ವರದಿ ನೀಡುವಂತೆ ಹೇಳುತ್ತೇನೆ. ಶಾಹಿ ಮಸೀದಿ ಬಗ್ಗೆ ಎಲ್ಲಾ ಸಂಘಟನೆಗಳ ಗಮನಕ್ಕೂ ತರುತ್ತೇನೆ ಎಂದು ಹೇಳಿದ್ದಾರೆ.
ಎಲ್ಲಾ ಪ್ರಮುಖರ ಜತೆ ಜಿಲ್ಲಾಧಿಕಾರಿಗಳನ್ನ ಭೇಟಿ ಮಾಡುತ್ತೇನೆ. ಸತ್ಯ ಹೊರಬಂದು ನ್ಯಾಯ ಸಿಗುವವರೆಗೂ ಸುಮ್ಮನೆ ಕೂರಲ್ಲ ಅಂತನೂ ಬೆಳಗಾವಿಯಲ್ಲಿ ಬಿಜೆಪಿ ಶಾಸಕ ಅಭಯ್ ಪಾಟೀಲ್ ಹೇಳಿಕೆ ನೀಡಿದ್ದಾರೆ.
ಹಿಂದೂ ಸಂಘಟನೆಗಳ ಗಮನಕ್ಕೆ ತಂದು ಮಾಡಬೇಕಾಗುತ್ತೆ ಒಬ್ಬ ವ್ಯಕ್ತಿಯಿಂದ ಇದನ್ನ ಮಾಡುವುದಕ್ಕೆ ಆಗಲ್ಲ. ನಾನೊಬ್ಬನೆ ಡಿಸಿ ಬಳಿ ಹೋಗಲ್ಲ. ಜಿಲ್ಲಾಡಳಿತ ನಾವು ಸರ್ವೇ ಮಾಡುವುದಿಲ್ಲ ಅಂದರೆ ಆ ನಂತರ ಉಳಿದ ಪ್ರಶ್ನೆಗಳಿಗೆ ಉತ್ತರ ಬರುತ್ತದೆ ಎಂದು ಅಭಯ್ ಪಾಟೀಲ್ ಹೇಳಿದ್ದಾರೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:34 am, Sun, 29 May 22