ಕೈ ಹಿಡಿದ ಕೆಂಪು ಸುಂದ್ರಿ, 20 ಗುಂಟೆ ಜಮೀನಿನಲ್ಲಿ 11 ಲಕ್ಷ ರೂ. ಸಂಪಾದಿಸಿದ ಯುವ ರೈತ
ಬಿಎ ಪದವೀಧರ ಕೇವಲ 20 ಗುಂಟೆ ಜಮೀನಿನಲ್ಲಿ ಟೊಮೆಟೊ ಬೆಳೆದು ಲಕ್ಷ ಲಕ್ಷ ಹಣ ಸಂಪಾದಿಸಿದ್ದಾನೆ. ಅಷ್ಟಕ್ಕೂ ಯಾರಾತ? ಎಷ್ಟು ಸಸಿ ನಾಟಿ ಮಾಡಿ ಎಷ್ಟು ಇಳುವರಿ ತಗೆದಿದ್ದಾನೆ? ಖರ್ಚು ಮಾಡಿದ್ದೆಷ್ಟು? ಗಳಿಸಿದ ಆದಾಯ ಎಷ್ಟು? ಸಂಪೂರ್ಣ ವಿವರ ಈ ಕೆಳಗಿನಂತಿದೆ ನೊಡಿ.
ಬೆಳಗಾವಿ, (ಜುಲೈ 15): ಕಳೆದ ಒಂದು ತಿಂಗಳಿಂದೀಚೆಗೆ ಎಲ್ಲಿ ನೋಡಿದ್ದಲ್ಲಿ ಟೊಮೆಟೊದ್ದೇ ಹವಾ. ಟೊಮೆಟೊಗೆ ಬಂಗಾರ ಬೆಲೆ ಬರುತ್ತಿದ್ದಂತೆ ಗ್ರಾಹಕರು ಕಂಗಾಲಾಗಿದ್ರೆ, ಬೆಳೆದ ಅನ್ನದಾತರು ಭರ್ಜರಿ ಜಾಕ್‌ಪಾಟ್ ಹೊಡೆದಿದ್ದಾರೆ. ಇಲ್ಲೋರ್ವ ಬಿಎ ಪದವೀಧರ ಕೇವಲ 20 ಗುಂಟೆ ಜಮೀನಿನಲ್ಲಿ ಟೊಮೆಟೊ ಬೆಳೆದು ಲಕ್ಷ ಲಕ್ಷ ಹಣ ಸಂಪಾದಿಸಿದ್ದಾನೆ. ಹೌದು..ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದ ಬಿ.ಎ. ಪದವೀಧರ ಆಗಿರುವ ಮಹೇಶ್ ಹಿರೇಮಠ ಎನ್ನುವರು ಕೇವಲ 20 ಗುಂಟೆಯಲ್ಲಿ 45 ದಿನಗಳಲ್ಲಿ 20 ಟನ್ 400 ಕೆಜಿಯಷ್ಟು ಟೊಮೆಟೊ ಬೆಳೆದು ಲಕ್ಷಾಂತರ ರೂಪಾಯಿ ಲಾಭ ಗಳಿಸಿದ್ದಾರೆ.
ಇದನ್ನೂ ಓದಿ: ಪೊಲೀಸ್ ಕೆಲಸದೊಂದಿಗೆ ಟೊಮೆಟೊ ಬೆಳೆದ, ಒಂದೇ ಎಕರೆಯಲ್ಲಿ 20 ಲಕ್ಷ ರೂ. ಲಾಭ ತೆಗೆದ!
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದ ಮಹೇಶ್ ಹಿರೇಮಠ ಬಿ.ಎ. ಪದವೀಧರ. ಇವರು ಕಳೆದ ನಾಲ್ಕು ವರ್ಷಗಳಿಂದ ಪಿತ್ರಾರ್ಜಿತವಾಗಿ ಬಂದಿರುವ ಜಮೀನಿನಲ್ಲಿ ಕೃಷಿ ಕಾಯಕ ಮಾಡುತ್ತಾ ಬಂದಿದ್ದಾರೆ. ನಾಲ್ಕು ಎಕರೆ ಜಮೀನು ಹೊಂದಿರುವ ಇವರು ಎರಡು ಎಕರೆಯಲ್ಲಿ ಕಬ್ಬು ಬೆಳೆದಿದ್ರೆ ಇನ್ನೆರಡು ಎಕರೆಯಲ್ಲಿ ತರಕಾರಿ ಬೆಳೆದಿದ್ದಾರೆ. ಅದರಲ್ಲಿ ಕೇವಲ 20 ಗುಂಟೆಯಲ್ಲಿ ಮಾರ್ಚ್ ಮೊದಲ ವಾರದಲ್ಲಿ ಟೊಮೆಟೊ ಬೆಳೆದಿದ್ದಾರೆ. ವೈಜ್ಞಾನಿಕ ಕೃಷಿ ಹಾಗೂ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು 20 ಗುಂಟೆ ಜಮೀನಿನಲ್ಲಿ 3700 ಟೊಮೆಟೊ ಸಸಿ ನಾಟಿ ಮಾಡಿದ್ದರು. ಕಳೆದ 45 ದಿನಗಳಿಂದ ಟೊಮೆಟೊ ಕೋಯ್ಲು ಆರಂಭಿಸುತ್ತಿದ್ದಂತೆ ಈ ಕೆಂಪು ಸುಂದರಿಗೆ ಬಂಗಾರದ ಬೆಲೆ ಬಂದಿದೆ.
20 ಗುಂಟೆಯಲ್ಲಿ 45 ದಿನಗಳಲ್ಲಿ 20 ಟನ್ 400 ಕೆಜಿಯಷ್ಟು ಟೊಮೆಟೊ ಇಳುವರಿ ತಗೆದಿದ್ದಾನೆ. ಕೋಯ್ಲು ಮಾಡಿದ ಟೊಮೆಟೊವನ್ನು ಸಂಕೇಶ್ವರ ಪಟ್ಟಣದಲ್ಲಿರುವ ಎಪಿಎಂಸಿ ವರ್ತಕನೋರ್ವನಿಗೆ ರೆಗ್ಯುಲರ್ ಆಗಿ ಸರಬರಾಜು ಮಾಡಲು ಶುರು ಮಾಡಿದ್ದಾರೆ. ದಿನಕ್ಕೆ 20 ಕೆಜಿ ತೂಕದ ನೂರು ನೂರಿಪ್ಪತ್ತು ಕ್ಯಾರಿಬ್ಯಾಗ್ ಸರಬರಾಜು ಮಾಡುತ್ತ ಈವರೆಗೂ 11 ಲಕ್ಷ ರೂಪಾಯಿ ಆದಾಯ ಬಂದಿದೆ. ಟೊಮೆಟೊ ಬೆಳೆದು ಕಟಾವು ಸಾಗಾಟ ವೆಚ್ಚಕ್ಕೆ ಅಂತಾ ಎರಡು ಲಕ್ಷ ರೂಪಾಯಿ ಖರ್ಚಾಗಿದ್ದು ಬರೋಬ್ಬರಿ ಒಂಬತ್ತು ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಕೃಷಿ ಮಾಡುತ್ತಿದ್ದು ಇಷ್ಟು ಆದಾಯ ಹಾಗೂ ಇಷ್ಟೊಂದು ಇಳುವರಿ ಯಾವತ್ತೂ ಬಂದಿಲ್ಲ ಅಂತಾರೆ ಯುವ ರೈತ ಮಹೇಶ್ ಹಿರೇಮಠ. ಅಷ್ಟೇ ಅಲ್ಲದೇ ಭೂಮಿ ತಾಯಿಯನ್ನು ನಂಬಿದ್ರೆ ಆಕೆ ನಮ್ಮ ಕೈ ಬಿಡಲ್ಲ ಎಂದು ಸಂತಸ ವ್ಯಕ್ತಡಿಸಿದ್ದಾರೆ.
ಇನ್ನು 20 ಗುಂಟೆಯಲ್ಲೇ ತರಕಾರಿ ಬೆಳೆದು ಲಾಭದಾಯಕ ಕೃಷಿ ಹೇಗೆ ಮಾಡುವುದು ಅಂತಾ ಪಕ್ಕದ ಗೋರೂರು ಗ್ರಾಮದ ನಿವಾಸಿಯಾಗಿರುವ ಸುರೇಶ್ ಅಸೋದೆ ಮಾರ್ಗದರ್ಶನ ನೀಡಿದ್ರಂತೆ. ಇನ್ನು ಈ ಯುವ ರೈತ ಮಹೇಶ್ ಹಿರೇಮಠಗೆ ಮಾರ್ಗದರ್ಶನ ನೀಡಿರುವ ಸುರೇಶ್ ಅಸೋದೆ ಮಾತನಾಡಿ, ‘ಮಾರ್ಚ್ ತಿಂಗಳಲ್ಲಿ 20 ಗುಂಟೆ ಪ್ಲ್ಯಾಂಟ್‌ನಲ್ಲಿ 3700 ಟೊಮೆಟೊ ಸಸಿ ನಾಟಿ ಮಾಡಿಸಿದ್ದೆ. ಅದಕ್ಕೆ ಪೂರ್ವಭಾವಿಯಾಗಿ ಮಣ್ಣು ಪರೀಕ್ಷೆ ಮಾಡಿ ಅದಕ್ಕೆ ಬೇಕಾದಂತಹ ಗೊಬ್ಬರ, ಕೀಟನಾಶಕ ನೀಡಿದ್ವಿ. ಸಸಿಗಳಿಗೆ ಬರಬಹುದಾಂತ ವಿವಿಧ ರೋಗಗಳ ತಡೆಗೆ ಕ್ರಮ ಕೈಗೊಂಡಿದ್ವಿ. ಮಾರ್ಗದರ್ಶನ ಪ್ರಕಾರ ಮಹೇಶ್ ಹಿರೇಮಠ ಕೃಷಿ ಮಾಡಿದ್ದರಿಂದ ಒಂದು ಟೊಮೆಟೊ ಗಿಡಕ್ಕೆ 6 ರಿಂದ 7 ಕೆಜಿ ಇಳುವರಿ ಬಂದಿದೆ. ಈಗಾಗಲೇ 20 ಗುಂಟೆಯಲ್ಲಿ 20 ಟನ್‌ಗೂ ಹೆಚ್ಚು ಟೊಮೆಟೊ ಕೋಯ್ಲು ಮಾಡಿದ್ದು ಇನ್ನೂ ಎರಡು ಟನ್ ಇಳುವರಿ ಆಗುತ್ತೆ. ಈ ಬಾರಿ ಟೊಮೆಟೊ ದರವೂ ಚೆನ್ನಾಗಿ ಇರುವುದರಿಂದ 9 ರಿಂದ 10 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಳುವರಿ ಟೈಮ್‌ಗೆ ಸರಿಯಾಗಿ ಟೊಮೆಟೊಗೆ ಬಂಗಾರ ಬೆಲೆ ಬಂದಿರುವುದರಿಂದ ಯುವ ರೈತ ಮಹೇಶ್ ಲಕ್ ಖುಲಾಯಿಸಿದೆ. ಸ್ವಂತ ಜಮೀನು ಇದ್ದರೂ ನಾನು ಪದವೀಧರ ಕೃಷಿ ಏಕೆ ಮಾಡಲಿ ಅಂತಾ ಮೂಗು ಮುರಿಯುತ್ತಾ, ತಮಗೆ ಕೆಲಸ ಸಿಗುತ್ತಿಲ್ಲ ಎಂದು ಅಲೆದಾಡುವ ನಿರುದ್ಯೋಗಿಗಳಿಗೆ ಯುವ ರೈತ ಮಹೇಶ್ ಹಿರೇಮಠ ಮಾದರಿಯಾಗಿದ್ದಾನೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ