ಸರ್ಕಾರಿ ಶಾಲೆ ಉಳಿಸಬೇಕು ಎಂದ ಶಿಕ್ಷಕನ ಮೇಲೆ ಶಿಸ್ತುಕ್ರಮಕ್ಕೆ ಮುಂದಾದ ಅಧಿಕಾರಿಗಳು: ಫೇಸ್​ಬುಕ್​ನಲ್ಲಿ ಆಕ್ರೋಶ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 24, 2022 | 3:04 PM

ನೊಟೀಸ್​ನ ಪ್ರತಿಯನ್ನೂ ಶಿಕ್ಷಕ ವೀರಣ್ಣ ಮಡಿವಾಳರ ತಮ್ಮ ಫೇಸ್​ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸರ್ಕಾರದ ನಿಲುವು ಖಂಡಿಸಿ ಹಲವರು ಕಾಮೆಂಟ್ ಮಾಡಿದ್ದಾರೆ.

ಸರ್ಕಾರಿ ಶಾಲೆ ಉಳಿಸಬೇಕು ಎಂದ ಶಿಕ್ಷಕನ ಮೇಲೆ ಶಿಸ್ತುಕ್ರಮಕ್ಕೆ ಮುಂದಾದ ಅಧಿಕಾರಿಗಳು: ಫೇಸ್​ಬುಕ್​ನಲ್ಲಿ ಆಕ್ರೋಶ
ಶಿಕ್ಷಕ ವೀರಣ್ಣಮಡಿವಾಳರ
Follow us on

ಬೆಂಗಳೂರು: ಸರ್ಕಾರಿ ಶಾಲೆಗಳ ವಿಲೀನ ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಶಿಕ್ಷಕನ ವಿರುದ್ಧ ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ ಬೆಳಗಾವಿ ಜಿಲ್ಲೆ ರಾಯಬಾಗ ತಾಲ್ಲೂಕಿನ ನಿಡಗುಂದಿ ಗ್ರಾಮದ ಸರ್ಕಾರಿ ಶಿಕ್ಷಕ ವೀರಣ್ಣ ತಿಪ್ಪಣ್ಣ ಮಡಿವಾಳರ ಎನ್ನುವವರಿಗೆ ಡಿಡಿಪಿಐ ಎಂ.ಎಲ್.ಪಂಚಾಟೆ ‘ಕಾರಣ ಕೇಳಿ ನೊಟೀಸ್’ (ಶೋಕಾಸ್) ಜಾರಿ ಮಾಡಿದ್ದಾರೆ. ‘ಮೂರು ದಿನಗಳೊಳಗೆ ಪ್ರತಿಕ್ರಿಯಿಸದಿದ್ದರೆ ನಿಮ್ಮ ಹೇಳಿಕೆ ಏನೂ ಇಲ್ಲವೆಂದು ಭಾವಿಸಿ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ನೊಟೀಸ್​ನಲ್ಲಿ ಎಚ್ಚರಿಸಲಾಗಿದೆ. ನೊಟೀಸ್​ನ ಪ್ರತಿಯನ್ನೂ ಶಿಕ್ಷಕ ವೀರಣ್ಣ ಮಡಿವಾಳರ ತಮ್ಮ ಫೇಸ್​ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸರ್ಕಾರದ ನಿಲುವು ಖಂಡಿಸಿ ಹಲವರು ಕಾಮೆಂಟ್ ಮಾಡಿದ್ದಾರೆ.

‘ನನ್ನ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳುತ್ತಾರಂತೆ. ಕಾರಣ ಸರಕಾರಿ ಶಾಲೆಗಳ ವಿಲೀನದ ಬಗೆಗೆ ನಾನು ಹಾಕಿದ ಎರಡು ಸಾಲಿನ ಪೋಸ್ಟ್. ಯಾವುದೇ ಶಾಲೆಯನ್ನ ಮುಚ್ಚಿದಾಗ ಒಬ್ಬ ಪ್ರಾಮಾಣಿಕ ಶಿಕ್ಷಕನಿಗೆ ಸಂತೋಷವಾಗುವುದಿಲ್ಲ, ಬೇಸರವಾಗುತ್ತದೆ, ದುಃಖವಾಗುತ್ತದೆ. ಹದಿಮೂರು ಸಾವಿರದ ಎಂಟುನೂರು ಶಾಲೆಗಳನ್ನ ವಿಲೀನ ಮಾಡುತ್ತೇವೆ ಎಂದಾಗ ನಾನೂ ಕೂಡ ವ್ಯಥೆ ಪಟ್ಟೆ, ಆಳದಿಂದ ನೊಂದೆ, ಎರಡು ಸಾಲು ಬರೆದೆ. ಅದೀಗ ಅಪರಾಧವಾಗಿದೆ. ನನಗೆ ಕಾರಣ ಕೇಳಿ ನೋಟೀಸ್ ನೀಡಿದ್ದಾರೆ’ ಎಂದು ವೀರಣ್ಣ ಹೇಳಿಕೊಂಡಿದ್ದಾರೆ.

‘ಕಳೆದ ಹದಿನೈದು ವರ್ಷಗಳಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಸಾಹಿತ್ಯಿಕವಾಗಿ ಆತ್ಮಪೂರ್ವಕ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವೆ. ಫೇಸ್‌ಬುಕ್‌, ವಾಟ್ಸಪ್ ಮುಂತಾದ ಸಾಮಾಜಿಕ ಜಾಲತಾಣದಿಂದ ಶಿಕ್ಷಣ ಪ್ರೇಮಿಗಳನ್ನು ಸಂಪರ್ಕಿಸಿ ಹಲವಾರು ಮಕ್ಕಳಿಗೆ, ನೊಂದವರಿಗೆ ಸಹಾಯ ಮಾಡಿದ್ದೇವೆ. ಅನೇಕ ಸಾರ್ಥಕ ಕೆಲಸ ಮಾಡಿದ್ದೇವೆ. ಸಮಯದ ಹಂಗಿಲ್ಲದೆ ಕನಸಿನ ಶಾಲೆ ರೂಪಿಸಲು ಶ್ರಮಿಸಿದ್ದೇವೆ, ಇಂದು ನನಸಾಗಿಸಿಕೊಂಡಿದ್ದೇವೆ. ನಮ್ಮ ಅಂಬೇಡ್ಕರ್ ನಗರಕ್ಕೆ ಶಾಲೆಯ ಅಭಿವೃದ್ಧಿ ಮನಗಂಡ ನಂತರವೇ ಮೊದಲ ಬಾರಿಗೆ ಬೀದಿದೀಪಗಳು ಬೆಳಗಿದವು, ಮನೆಮನೆಗೂ ನಲ್ಲಿ ನೀರು ಬಂತು, ನಿಡಗುಂದಿಯಿಂದ ನಮ್ಮ ಶಾಲೆವರೆಗೂ ಪಕ್ಕಾ ರಸ್ತೆ ಬಂತು, ಕಳೆದ ಐದು ವರ್ಷಗಳಲ್ಲಿ ಮಕ್ಕಳ ಸಂಖ್ಯೆ ದುಪ್ಪಟ್ಟಾಯಿತು. ಒಬ್ಬ ಮಾಸ್ತರನಿಗೆ ಇದಕ್ಕಿಂತ ಸಂತೋಷ ಸಾರ್ಥಕತೆ ಸಂಭ್ರಮ ಬೇರೆಲ್ಲಿತಾನೆ ಸಿಕ್ಕೀತು’ ಎಂದು ಅವರು ಕೇಳಿದ್ದಾರೆ.

‘ಶಿಕ್ಷಣ ಸಚಿವರಾಗಿದ್ದ ಮಾನ್ಯ ಸುರೇಶ್ ಕುಮಾರ್ ರವರೂ ಕರೆ ಮಾಡಿ ನಮ್ಮ ಕೆಲಸ ಶ್ಲಾಘಿಸಿದ್ದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ನಮ್ಮ ಬೆಳವಣಿಗೆ ಗಮನಿಸಿ ಅಭಿನಂದಿಸಿ ಹೃದ್ಯ ಪತ್ರ ಬರೆದಿದ್ದರು. ಶಿಕ್ಷಣ ಇಲಾಖೆಯ ಆಯುಕ್ತರು ನಮ್ಮ ಕೆಲಸ ಕಾರ್ಯ ಬೆಂಬಲಿಸಿ ಅಭಿನಂದಿಸಿ ಪತ್ರ ಬರೆದು ಬೆನ್ನು ತಟ್ಟಿದ್ದರು’ ಎಂದು ನೆನಪಿಸಿಕೊಂಡಿದ್ದಾರೆ.

‘ಈಗ ಮಾನ್ಯ ಡಿಡಿಪಿಐ ಸಾಹೇಬರು ಕಾರಣ ಕೇಳಿ ನನಗೆ ನೋಟೀಸ್ ನೀಡಿದ್ದಾರೆ. ಶಿಸ್ತು ಕ್ರಮ ತೆಗೆದುಕೊಳ್ಳುವ ಬಗ್ಗೆಯೂ ಎಚ್ಚರಿಕೆ ನೀಡಿದ್ದಾರೆ. ಸರಕಾರಿ ಶಾಲೆಯೊಂದರ ಶಿಸ್ತು ಸೌಂದರ್ಯ ಮತ್ತು ಅರ್ಥವಂತಿಕೆ ಹೇಗಿರುತ್ತದೆ ಎಂದು ತೋರಿಸಿಕೊಟ್ಟವರು ನಾವು. ಈಗ ನನ್ನ ಮೇಲೆಯೇ ಶಿಸ್ತುಕ್ರಮ ಜರುಗಿಸುವುದಾದರೆ… ಅದೂ ಕೂಡ ನಡೆಯಲಿ. ಬರವಣಿಗೆ ನನ್ನ ಉಸಿರು, ಬರವಣಿಗೆ ಮತ್ತು ಕೃತಿ ನನ್ನ ಜೀವಂತಿಕೆ’ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.

‘ನನ್ನೊಳಗಿರುವುದು ಆತ್ಮಪೂರ್ವಕ ಶ್ರದ್ಧೆ, ಶುದ್ಧ ಪ್ರಾಮಾಣಿಕತೆ. ಶಿಸ್ತುಕ್ರಮ ಜರುಗಿದರೆ ಜರುಗಲಿ. ಈಗಾಗಲೇ ಒಂದು ಪೂರ್ಣ ಬದುಕಿನ ಅನುಭವ ನನ್ನ ಜೀವರಕ್ತದ ಕಣಕಣದಲ್ಲಿದೆ. ಇನ್ನೆಷ್ಟು ದಿನ ಬದುಕೇನು? ಬದುಕಿರುವವರೆಗೆ ಇಸ್ತ್ರಿ ಅಂಗಡಿ ಇಟ್ಟುಕೊಂಡು ಬದುಕುವೆ, ಬರವಣಿಗೆ ಬಿಡಲಾರೆ’ ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.

ಕಾಮೆಂಟ್​ಗಳಲ್ಲಿ ಪರ-ವಿರೋಧ ಚರ್ಚೆ

ಸರ್ಕಾರದ ಅಧಿಕಾರಿ ಕೊಟ್ಟ ನೊಟೀಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸುವುದು ಸರಿಯೇ? ತಪ್ಪೇ ಎನ್ನುವ ಬಗ್ಗೆ ಚರ್ಚೆಯನ್ನೂ ಈ ಪೋಸ್ಟ್ ಹುಟ್ಟುಹಾಕಿದೆ.

‘ಇಂಥ ವಿಚಾರಗಳನ್ನು ಬಹಿರಂಗ ಚರ್ಚೆಗೆ ತರಬಾರದು. ಹಲವರು ನಾವು ನಿಮ್ಮೊಂದಿಗಿದ್ದೇವೆ ಎನ್ನುತ್ತಾರೆ. ಹೇಗೆ? ಸರ್ಕಾರಿ ನಿಯಮಾವಳಿ ಪ್ರಕಾರ ಕ್ರಮ ಕೈಗೊಂಡಾಗ ಈ ಹಿತೈಷಿಗಳು ಏನು ಮಾಡಲು ಸಾಧ್ಯ’ ಎಂದು ಹಿರಿಯ ಪತ್ರಕರ್ತ ಶಿವಾಜಿ ಗಣೇಶನ್ ಪ್ರಶ್ನಿಸಿದ್ದಾರೆ. ‘ನೀವು ಒಬ್ಬ ಜವಾಬ್ದಾರಿಯುತ ಸರ್ಕಾರಿ ನೌಕರರು. ಸರ್ಕಾರದ ಒಳಗಿರುವವರು ಸರ್ಕಾರದ ನಡತೆ ನಿಯಮಗಳಿಗೆ ಬದ್ಧರಾಗಿರಬೇಕು’ ಎಂದು ಆರೋಗ್ಯ ಇಲಾಖೆಯ ನೌಕರ ಮತ್ತು ಕಥೆಗಾರ ಆನಂದ ಋಗ್ವೇದಿ ಸಲಹೆ ಮಾಡಿದ್ದಾರೆ.

‘ಆಡಳಿತಕ್ಕೆ ನಿಮ್ಮ ಪ್ರಶ್ನೆಗಳು ಮುಟ್ಟಿವೆ ಮತ್ತು ಸರಿಯಾಗಿಯೇ ಕಂಪನವಾಗಿವೆ. ಈ ಮೂಲಕ ಇನ್ಯಾರೂ ಪ್ರಶ್ನಿಸದ ಹಾದಿ ಹಿಡಿದ ಪ್ರಭುತ್ವ ನಿಮ್ಮನ್ನು ಗುರಿಯಾಗಿಸಿಕೊಂಡಿದೆ. ನಿಮ್ಮ ದಾರಿ ಸರಿಯಾಗಿದೆ. ಅವರಿಗೆ ಸರಿಯಾಗಿಯೇ ಉತ್ತರಿಸುತ್ತೀರಿ ಎಂದು ನಂಬುತ್ತೇವೆ. ನಿಮ್ಮ ನ್ಯಾಯದ ಜೊತೆ ನಾವೂ ಇದ್ದೇವೆ’ ಎಂದು ಗಾಯಕ ಮತ್ತು ಸಾಮಾಜಿಕ ಹೋರಾಟಗಾರ ನಾದ ಮಣಿನಾಲ್ಕೂರು ಪ್ರತಿಕ್ರಿಯಿಸಿದ್ದಾರೆ.

Published On - 3:03 pm, Sun, 24 July 22