400 ಕೋಟಿ ದರೋಡೆಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್: ಹಣ ಆ ಪವರ್ಫುಲ್ ರಾಜಕಾರಣಿಗೆ ಸೇರಿದ್ದಾ?
ಚೋರ್ಲಾ ಘಾಟ್ ಬಳಿಯ 400 ಕೋಟಿ ದರೋಡೆ ಪ್ರಕರಣ ಬಗೆದಷ್ಟು ಬಯಲಾಗ್ತಿದೆ. ಹಣ ಪ್ರಭಾವಿ ರಾಜಕಾರಣಿಗೆ ಸೇರಿದ್ದಾಗಿರಬಹುದು ಎಂಬ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಎರಡು ಸಾವಿರ ರೂಪಾಯಿ ನೋಟುಗಳನ್ನು ಬದಲಾಯಿಸಲು ಸಾಗಿಸುವಾಗ ಕಂಟೇನರ್ ನಾಪತ್ತೆಯಾಗಿದೆ ಎನ್ನಲಾಗಿದ್ದರೂ ಆಗಿದ್ದೆಲ್ಲಿ, ಘಟನೆ ನಡೆದಿದ್ದೇಗೆ ಎಂಬ ಬಗ್ಗೆ ಮಾತ್ರ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಈ ನಡುವೆ ಬಿಜೆಪಿ-ಕಾಂಗ್ರೆಸ್ ನಡುವೆ ರಾಜಕೀಯ ಕೆಸರೆರೆಚಾಟಗಳೂ ಶುರುವಾಗಿದ್ದು, ಆರೋಪ-ಪ್ರತ್ಯಾರೋಪಗಳು ಕೇಳಿಬಂದಿವೆ.

ಬೆಳಗಾವಿ, ಜನವರಿ 26: ಕರ್ನಾಟಕ-ಗೋವಾ ಗಡಿಯ ಚೋರ್ಲಾ ಘಾಟ್ ಬಳಿ 400 ಕೋಟಿ ರಾಬರಿ ಪ್ರಕರಣ ವಿಚಾರವಾಗಿ ಬಗೆದಷ್ಟು ಶಾಕಿಂಗ್ ವಿಚಾರಗಳು ಬಯಲಾಗ್ತಿವೆ. ಹಣ ತುಂಬಿದ್ದ ಕಂಟೇನರ್ಗಳ ಹೈಜಾಕ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಸರ್ಕಾರ, ಎಸ್‌ಐಟಿಯಿಂದ ತನಿಖೆ ಚುರುಕುಗೊಳಿಸಿದೆ. ಈ ನಡುವೆ ಕೆಲ ಪ್ರಮುಖ ಅಂಶಗಳು ಹುಬ್ಬೇರುವಂತೆ ಮಾಡಿದ್ದು, ಎರಡು ಸಾವಿರ ಮುಖ ಬೆಲೆಯ ನೋಟುಗಳು ಗುಜರಾತ್ನ ಪವರ್ ಫುಲ್ ರಾಜಕಾರಣಿಗೆ ಸೇರಿದ್ದು ಎಂಬ ಸುದ್ದಿ ಹರಿದಾಡತೊಡಗಿದೆ.
ಕಿಶೋರ್ ಸಾಳ್ವೆ ಅಲಿಯಾಸ್ ಸೇಠ್ ಬರೀ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ, ನೋಟು ಬದಲಾವಣೆಗಾಗಿ ಗೋವಾದಿಂದ ಹಣ ಸಾಗಿಸಲಾಗುತ್ತಿತ್ತು. ಇದರ ಜವಾಬ್ದಾರಿ ಆರೋಪಿ ವಿರಾಟ್ಗೆ ಕಿಶೋರ್ ನೀಡಿದ್ದ. ವಿರಾಟ್ ಹುಡುಗರಿಂದ ಹಣ ಸಾಗಾಟದ ವೇಳೆ ಕಂಟೇನರ್ ಮಿಸ್ಸಿಂಗ್ ಆಗಿದೆ. ಹಣದ ಸಮೇತ ಹುಡುಗರು ನಾಪತ್ತೆ ಆಗಿದ್ದಾರೆ ಎನ್ನಲಾಗಿದೆ. ಇನ್ನು ಕಿಶೋರ್ ಮತ್ತು ಜಯೇಶ್ ಮಾತನಾಡಿರುವ ಸಂಭಾಷಣೆಯಲ್ಲಿ ಹಣ ಗುಜರಾತ್ನ ರಾಜಕಾರಣಿಗೆ ಸೇರಿದ್ದು ಎಂಬ ವಿಚಾರ ಕೂಡ ಬೆಳಕಿಗೆ ಬಂದಿದೆ. ಹೀಗಾಗಿ ಆಡಿಯೋ ಸಂಭಾಷಣೆ ಹಾಗೂ ವಾಟ್ಸ್ಯಾಪ್ ಕಾಲ್ ಸಂಭಾಷಣೆ ಆಧಾರದ ಮೇಲೆ ಮಹಾರಾಷ್ಟ್ರದ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಸದ್ಯ ವಿರಾಟ್ನ ಬಂಧಿಸಿ ವಿಚಾರಣೆ ನಡೆಸಲಾಗ್ತಿದೆ.
ಇದನ್ನೂ ಓದಿ: 400 ಕೋಟಿ ರೂ ರಾಬರಿ; ಚೋರ್ಲಾ ಘಾಟ್ನಲ್ಲೇ ದರೋಡೆ ನಡೆದಿದ್ದೇಕೆ? ಎಸ್ಪಿ ಹೇಳಿದ್ದಿಷ್ಟು
ತನಿಖೆಗೆ ಸಹಕರಿಸದ ಮಹಾರಾಷ್ಟ್ರ ಪೊಲೀಸರು
ಇನ್ನು ರಾಬರಿ ಪ್ರಕರಣ ಸಂಬಂಧ ಕರ್ನಾಟಕ ಪೊಲೀಸರಿಗೆ ಮಹಾರಾಷ್ಟ್ರ ಪೊಲೀಸರು ಸಹಕರಿಸುತ್ತಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ. ಘಟನೆ ಬಗ್ಗೆ ಯಾರಾದ್ರು ಬಂದು ದೂರು ಕೊಟ್ಟರೆ ನಮ್ಮ ಪೊಲೀಸರು ತನಿಖೆ ಮಾಡ್ತಾರೆ. ಚೋರ್ಲಾ ಘಾಟ್ ಬಹಳ ದೊಡ್ಡದಿದ್ದು ಘಟನೆ ನಡೆದ ಸ್ಥಳ ಮಹಾರಾಷ್ಟ್ರ, ಗೋವಾ ಅಥವಾ ಕರ್ನಾಟಕಕ್ಕೆ ಸೇರಿದ್ದಾ ಎಂಬ ಬಗ್ಗೆ ಗೊಂದಲ ಇದೆ ಎಂದಿದ್ದಾರೆ. 400 ಕೋಟಿ ಕಾಂಗ್ರೆಸ್ಗೆ ಸೇರಿದ ಹಣ ಎಂಬ ಮಹಾರಾಷ್ಟ್ರ ಸಿಎಂ ಆರೋಪ ವಿಚಾರಕ್ಕೂ ಪ್ರತಿಕ್ರಿಯಿಸಿದ ಅವರು, ಹಣ ಎಣಿಸಿದವರು ಯಾರು ಎಂದು ಪ್ರಶ್ನಿಸಿದ್ದಾರೆ. ಎಲ್ಲಿ ಘಟನೆ ನಡೆದಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ, ಅಲ್ಲಿ ನಿಜವಾಗಿ ಏನಾಗಿದೆ ಎಂಬುದು ಗೊತ್ತಿಲ್ಲ ಎಂದಿದ್ದಾರೆ.
ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ
ದರೋಡೆಯಾಗಿರುವ 400 ಕೋಟಿ ಹಣ ಯಾರದ್ದು ಏನು ಅಂತಾ ಗೊತ್ತಿಲ್ಲ. ಗೋವಾ, ಗುಜರಾತ್, ಮಹಾರಾಷ್ಟ್ರ ಲಿಂಕ್ ಇದೆ ಅಂತಿದ್ದಾರೆ. ಯಾರದ್ದೇ ಇರಲಿ, ಆ ಬಗ್ಗೆ ತನಿಖೆಯಾಗಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ. ಇಲ್ಲಿನ ಬಿಜೆಪಿ ಎಂಎಲ್ಸಿ ಹಣ ತಿರುಪತಿಗೆ ಹೋಗುತ್ತಿತ್ತು ಎಂದಿದ್ದಾರೆ. ಬಿಜೆಪಿಯವರಿಗೆ ಹಣದ ಬಗ್ಗೆ ಹೇಗೆ ಗೊತ್ತಾಯಿತು? ಚುನಾವಣೆ ವೇಳೆ ಬರುವ ಅಮಿತ್ ಶಾ ಇವಾಗ ಎಲ್ಲಿ ಹೋದರು? ಕಲಬುರಗಿಯಲ್ಲಿ ರೊಟ್ಟಿ ಮಾಡುವುದು ಮೋದಿಗೆ ಗೊತ್ತಾಗುತ್ತದೆ. ಈ ಹಣದ ಬಗ್ಗೆ ಯಾಕೆ ಗೊತ್ತಾಗಿಲ್ಲ ಎಂದೂ ಪ್ರಿಯಾಂಕ್ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಇದು ಲೀಗಲ್ ಹಣ ಆಗುವುದಕ್ಕೆ ಸಾಧ್ಯವೇ ಇಲ್ಲ. ತನಿಖೆಯಾಗಲಿ, ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಹೇಳಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.