ಬೆಳಗಾವಿಯ ಶಿವಾನಂದ ನೀಲಣ್ಣವರನ ಸಾವಿರಾರು ಕೋಟಿ ರೂ. ರಹಸ್ಯ ಬಯಲು: ಎಳೆ ಎಳೆಯಾಗಿ ಬಿಚ್ಚಿಟ್ಟ ಸಿಐಡಿ

ಬೆಳಗಾವಿಯ ಶಿವಂ ಅಸೋಸಿಯೇಟ್ ಕಂಪನಿಯು ಸಾವಿರಾರು ಕೋಟಿ ರೂಪಾಯಿ ವಂಚನೆ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಮಹತ್ವದ ಮಾಹಿತಿ ಬಹಿರಂಗಪಡಿಸಿದೆ. ಹೆಚ್ಚಿನ ಲಾಭದ ಆಮಿಷವೊಡ್ಡಿ 2,400 ಕೋಟಿ ಸಂಗ್ರಹಿಸಿ, ಹೊಸಬರ ಹಣವನ್ನು ಹಳಬರಿಗೆ ಬಡ್ಡಿಯಾಗಿ ನೀಡುತ್ತಿದ್ದ ವಂಚನೆಯ ರಹಸ್ಯವನ್ನು ಸಿಐಡಿ ಡಿಐಜಿಪಿ ಭೀಮಾಶಂಕರ್ ಗುಳೇದ್ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಬೆಳಗಾವಿಯ ಶಿವಾನಂದ ನೀಲಣ್ಣವರನ ಸಾವಿರಾರು ಕೋಟಿ ರೂ. ರಹಸ್ಯ ಬಯಲು: ಎಳೆ ಎಳೆಯಾಗಿ ಬಿಚ್ಚಿಟ್ಟ ಸಿಐಡಿ
Shivanand Neelannavar
Edited By:

Updated on: Jun 07, 2026 | 3:30 PM

ಬೆಳಗಾವಿ, (ಜೂನ್.07): ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ ಬರೋಬ್ಬರಿ 4500 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಶಿವಂ ಅಸೋಸಿಯೇಟ್ ಸಂಸ್ಥೆ (Shivam associates) ಮಾಲೀಕ ಶಿವಾನಂದ ನೀಲಣ್ಣನವರ್‌ (shivanand neelannavar) ಅವರನ್ನು ಈಗಾಗಲೇ ಸಿಐಡಿ ಪೊಲೀಸರು ಬಂಧಿಸಿದ್ದು, ತನಿಖೆಯಲ್ಲಿ ಶಿವಾನಂದ ನೀಲಣ್ಣವರ್ ವಂಚನೆ ಮಾಡಿರುವುದು ಸಾಬೀತಾಗಿದೆ. ಈ ಬಗ್ಗೆ ಬೆಳಗಾವಿಯಲ್ಲಿ ಸಿಐಡಿ ಡಿಐಜಿಪಿ ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದು, ಈವರೆಗೂ ಸಾರ್ವಜನಿಕರಿಂದ 2,400 ಕೋಟಿ ರೂ. ಸಂಗ್ರಹಿಸಿದ್ದಾರೆ. ಇದರಲ್ಲಿ ಸುಮಾರು ದುಡ್ಡು ಸಾರ್ವಜನಿಕರಿಗೆ ಹಿಂದಿರುಗಿಸಿದ್ದಾನೆ. ಹೊಸದಾಗಿ ಹೂಡಿಕೆಯಾದ ಹಣವನ್ನು ಹಳಬರಿಗೆ ಬಡ್ಡಿ ರೂಪದಲ್ಲಿ ಕೊಡುತ್ತಿದ್ದ. ಸಂಗ್ರಹದ ಹಣಕ್ಕಿಂತ ಬಡ್ಡಿ ಕೊಡುವ ಹಣ ಹೆಚ್ಚಾದರೆ ಸಮಸ್ಯೆ ಆಗುತ್ತಿತ್ತು ಎಂದು ವಂಚನೆಯ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ಮುಖ್ಯಾಂಶಗಳು

  • ಬೆಳಗಾವಿಯಲ್ಲಿ ಸಾವಿರಾರು ಕೋಟಿ ರೂಪಾಯಿ ವಂಚನೆ ಪ್ರಕರಣ
  • ಶಿವಾನಂದ ನೀಲಣ್ಣವರ್ ವಂಚನೆ ಮಾಡಿರುವುದು ಸಾಬೀತಾಗಿದೆ
  • ಶಿವಂ ಅಸೋಸಿಯೇಟ್‌ನ ಮಾಲೀಕ ಶಿವಾನಂದ ನೀಲಣ್ಣವರ್
  • ಈವರೆಗೂ ಸಾರ್ವಜನಿಕರಿಂದ 2,400 ಕೋಟಿ ರೂ. ಸಂಗ್ರಹಿಸಿದ್ದಾನೆ
  • ಬೆಳಗಾವಿಯಲ್ಲಿ ಸಿಐಡಿ ಡಿಐಜಿಪಿ ಭೀಮಾಶಂಕರ್ ಗುಳೇದ್ ಹೇಳಿಕೆ

ಶಿವಂ ಅಸೋಶಿಯೇಟ್ ಕಂಪನಿಯಿಂದ ಸಾವಿರಾರು ಕೋಟಿ ವಂಚನೆ ಪ್ರಕರಣ ಸಂಬಂಧ ಬೆಳಗಾವಿಯಲ್ಲಿ ಸಿಐಡಿ ಡಿಐಜಿ ಡಾ. ಭೀಮಾಶಂಕರ್ ಗುಳೇದ್ ಮಹತ್ವದ ಸುದ್ಧಿಗೋಷ್ಠಿ ನಡೆಸಿ ಕೆಲವು ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ದಾಳಿ ನಡೆದಿದ್ದು, ಇದೀಗ ಪ್ರಕರಣ ಸಿಐಡಿಗೆ ಹಸ್ತಾಂತರ ಆಗಿತ್ತು. ಸಾಮಾನ್ಯವಾಗಿ ತನಿಖೆ ನಡೆಯುವಾಗ ಸುದ್ಧಿಗೋಷ್ಠಿ ಮಾಡಲ್ಲ. ಇವತ್ತಿಗೂ ಶಿವಂ ಅಸೋಸಿಯೇಟ್ ಕಂಪನಿಗೆ ಜನರು ಹಣ ಹಾಕ್ತಿದಾರೆ. ಎಫ್ಐಆರ್ ಆದ ಬಳಿಕ ಈವರೆಗೆ ಐದು ಕೋಟಿ ಮತ್ತೇ ಹೂಡಿಕೆ ಆಗಿದೆ. ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸುದ್ದಿಗೋಷ್ಠಿ ಮಾಡ್ತಿದ್ದೇವೆ ಎಂದರು.

ಇದನ್ನೂ ಓದಿ: ನಾನು ಸಿಎಂ ಆಗ್ಲಾ? ಎಂದವನ ಬಂಡವಾಳ ಬಯಲು: 4500 ಕೋಟಿ ವಂಚಿಸಿದ ಶಿವಂ ಅಸೋಸಿಯೇಟ್ಸ್ ಮಾಲೀಕನ ಮನೆ, ಕಚೇರಿ ಸೀಜ್

ಹಣದ ರಹಸ್ಯ ಬಿಚ್ಚಿಟ್ಟ ಸಿಐಡಿ ಡಿಐಜಿಪಿ

ಶಿವಂ ಅಸೋಸಿಯೇಟ್‌ನ ಮಾಲೀಕ ಶಿವಾನಂದ ನೀಲಣ್ಣವರ್ ಈವರೆಗೂ ಸಾರ್ವಜನಿಕರಿಂದ 2,400 ಕೋಟಿ ರೂ. ಸಂಗ್ರಹಿಸಿದ್ದಾನೆ. ಇದರಲ್ಲಿ ಸುಮಾರು ದುಡ್ಡು ಸಾರ್ವಜನಿಕರಿಗೆ ಹಿಂದಿರುಗಿಸಿದ್ದಾನೆ. ಹೊಸದಾಗಿ ಹೂಡಿಕೆಯಾದ ಹಣವನ್ನು ಹಳಬರಿಗೆ ಬಡ್ಡಿ ಕೊಡುತ್ತಿದ್ದ. ಆದ್ರೆ, ಸಂಗ್ರಹದ ಹಣಕ್ಕಿಂತ ಬಡ್ಡಿ ಕೊಡುವ ಹಣ ಹೆಚ್ಚಾದರೆ ಸಮಸ್ಯೆ ಆಗುತ್ತಿತ್ತು. 540 ಕೋಟಿ ರೂಪಾಯಿಯನ್ನು ಸ್ಟಾಕ್ ಮಾರ್ಕೆಟ್‌ನಲ್ಲಿ ಹಾಕಿದ್ದು, ಈ ಪೈಕಿ ಸ್ಟಾಕ್ ಮಾರ್ಕೆಟ್‌ನಲ್ಲಿ 170 ಕೋಟಿ ರೂ. ಕಳೆದುಕೊಂಡಿದ್ದಾನೆ. ಈವರೆಗಿನ ತನಿಖೆಯಲ್ಲಿ 660 ಕೋಟಿ ರೂ. ಶಾರ್ಟೇಜ್‌ ಕಂಡುಬಂದಿದ್ದು, 330 ಕೋಟಿ ರೂಪಾಯಿ ರಿಕವರಿ ಆಗುತ್ತೆ ಎಂದು ಮಾಹಿತಿ ನೀಡಿದರು.

ಶಿವಾನಂದ ನೀಲಣ್ಣವರ್ 40,700 ಜನರಿಂದ ಹೂಡಿಕೆ ಮಾಡಿಕೊಂಡಿದ್ದು, ಈತನೊಟ್ಟಿಗೆ ಇನ್ನೊಬ್ಬ ಪಾಲುದಾರ ಸಹ ಇದ್ದಾನೆ. ಕಂಪನಿಯಿಂದ ಅಕ್ರಮವಾಗಿ ನೀಲಣ್ಣವರ್ 55 ಕೋಟಿ ರೂ. ಹಾಕಿಕೊಂಡಿದ್ದಾನೆ. ಈಗಾಗಲೇ ಐದು ಐಷಾರಾಮಿ ಕಾರು ಜಪ್ತಿ ಮಾಡಿಕೊಂಡಿದ್ದೇವೆ.ಇನ್ನೂ 11 ವೋಲ್ವೋ ಎಕ್‌ಸಿ90 ಕಾರು ಖರೀದಿ ಮಾಡಿದ್ದು, ಅವುಗಳನ್ನೂ ಶೀಘ್ರದಲ್ಲಿ ಜಪ್ತಿ ಮಾಡುತ್ತೇವೆ. ಈವರೆಗೂ 400 ಕೋಟಿ ರೂ. ಹೆಚ್ಚುವರಿಯಾಗಿ ಹೂಡಿಕೆದಾರರಿಗೆ ಹೋಗಿದೆ. ಆ ಹಣವನ್ನೂ ವಾಪಸ್ ಪಡೆದು ಇನ್ನುಳಿದ ಹೂಡಿಕೆದಾರರಿಗೆ ನೀಡುತ್ತೇವೆ ಎಂದು ಹೇಳಿದರು.

ಎಫ್ಐಆರ್ ಆದ ಮೇಲೆ ನಾಲ್ಕೈದು ಕೋಟಿ ರೂ.ಡೆಪಾಸಿಟ್ ಆಗಿದ್ದು, 30 ಅಕೌಂಟ್ ಸಿಕ್ಕಿದ್ದು ಇದರಲ್ಲಿ 7 ಅಕೌಂಟ್‌ಗಳಲ್ಲಿ ಹೆಚ್ಚಿನ ಹಣ ವರ್ಗಾವಣೆ. 36,200 ಪೇಜ್ ಒಂದೇ ಅಕೌಂಟ್‌ನಲ್ಲಿ ಆಗಿದ್ದು ತನಿಖೆ ನಡೆಯುತ್ತಿದೆ. ಸಿನಿಮಾ ಸ್ಟಾರ್‌ಗಳಿಗೆ ಶಿವಂ ಅಸೋಸಿಯೇಟ್‌ನಿಂದ ಹಣ ಹೋಗಿದ್ದರೆ ಅವರಿಗೂ ನೋಟಿಸ್ ಜಾರಿಗೊಳಿಸಿ ವಿಚಾರಣೆಗೆ ಕರೆಯುತ್ತೇವೆ. ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಹೂಡಿಕೆ ಮಾಡಲಾಗಿದ್ದು,ಮಹಾರಾಷ್ಟ್ರದ ಪೊಲೀಸರ ಸಹಕಾರ ಪಡೆದು ತನಿಖೆ ಕೈಗೊಳ್ಳಲಾಗಿದೆ. ಹಣ ರಿಕವರಿ ಬಳಿಕ ಬಡ್ಸ್ ಕಾಯ್ದೆ ಮುಖ್ಯಸ್ಥ ಆದಿತ್ಯ ಆಮ್ಲಾನ್ ಬಿಸ್ವಾಸ್ ಅವರಿಗೆ ಕೊಡುತ್ತೇವೆ. ಬಳಿಕ ಅವರು ಸಾರ್ವಜನಿಕರಿಗೆ ಹಣ ವಾಪಸ್ ಕೊಡುತ್ತಾರೆ. ಕಂಪನಿ ಮುಳುಗುವ ಮುನ್ನ ದಾಳಿ ಮಾಡಿ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Sahadev Mane
Follow Us