ಸಮಿತಿ ವರದಿ ಬಂದ ನಂತರವೇ ಬಾಕಿ ಬಿಲ್ ಪಾವತಿ: ಸಿಎಂ ಸಿದ್ದರಾಮಯ್ಯ
ಕಾಮಗಾರಿಗಳಿಗೆ ಬಾಕಿ ಬಿಲ್ ಪಾವತಿ ವಿಚಾರವಾಗಿ ಕರ್ನಾಟಕ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಕೇಳಿಬರುತ್ತಿದೆ. ಅದರಲ್ಲೂ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ.
ಬೆಳಗಾವಿ, ಆಗಸ್ಟ್ 11: ಕಾಮಗಾರಿಗಳಿಗೆ ಬಾಕಿ ಬಿಲ್ ಪಾವತಿಗೆ ವಿಳಂಬ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ತನಿಖೆಗೆ ಮುಂದಾಗಿದೆ. ಈ ನಡುವೆ ಸರ್ಕಾರದ ವಿರುದ್ಧವೇ ಕಮಿಷ್ ಆರೋಪ ಕೇಳಿಬಂದಿದೆ. ಅದರಲ್ಲೂ ಡಿಸಿಎಂ ಡಿ.ಕೆ.ಶಿವಕುಮಾರ್ (D. K .Shivakumar) ವಿರುದ್ಧ. ಇದನ್ನು ಲೆಕ್ಕಿಸದ ಡಿಸಿಎಂ, ತನಿಖೆ ನಂತರವೇ ಬಾಕಿ ಬಿಲ್ ನೀಡುವುದಾಗಿ ಪಟ್ಟು ಹಿಡಿದಿದ್ದಾರೆ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕೂಡ ಅದೇ ಮಾತನ್ನು ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬೆಂಗಳೂರಿನಲ್ಲಿ ಕಾಮಗಾರಿಗಳ ಕುರಿತು ನಾಲ್ಕು ತಂಡ ರಚಿಸಿ ತನಿಖೆ ಮಾಡಿಸುತ್ತಿದ್ದೇವೆ. ಗುಣಮಟ್ಟದ ಕಾಮಗಾರಿಗೆ ಆಗಿದೆಯಾ ಇಲ್ಲವಾ ಎಂಬುದು ಗೊತ್ತಾಬೇಕು. ವರದಿ ಕೊಟ್ಟ ಬಳಿಕ ತಪ್ಪು ಮಾಡಿಲ್ಲ ಅಂದರೆ ಬಿಲ್ ಕೊಡುತ್ತೇವೆ ಎಂದರು.
ಇದನ್ನೂ ಓದಿ: ಆತ ನ್ಯಾಯವಾಗಿದ್ದರೆ ಯಾಕೆ ಜೈಲಿಗೆ ಹೋಗುತ್ತಿದ್ದ?: ಡಿಕೆ ಶಿವಕುಮಾರ್ ವಿರುದ್ಧ ರಾಯಚೂರು ಗುತ್ತಿಗೆದಾರರ ಆಕ್ರೋಶ
ಕರ್ನಾಟಕ ರಾಜ್ಯವನ್ನು ಬಿಜೆಪಿಯವರು ಹಾಳು ಮಾಡಿದ್ದಾರೆ. ಆರ್ಥಿಕವಾಗಿ, ಭ್ರಷ್ಟಾಚಾರ, ಧರ್ಮ ರಾಜಕಾರಣ ಮಾಡಿದ್ದಾರೆ. ನಾವು 135 ಸ್ಥಾನ ಗೆದ್ದಿದ್ದಕ್ಕೆ ಬಿಜೆಪಿಯವರಿಗೆ ಭಯ ಶುರುವಾಗಿದೆ. ಎಷ್ಟೇ ದುಡ್ಡು ಖರ್ಚು ಮಾಡಿದರೂ ಬಿಜೆಪಿಯವರು ಗೆಲ್ಲಲಿಲ್ಲ ಎಂದು ಹೇಳಿದ ಸಿದ್ದರಾಮಯ್ಯ, ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 20 ಕ್ಷೇತ್ರ ಗೆಲ್ಲುವ ಗುರಿ ಇಟ್ಟುಕೊಂಡಿದ್ದೇವೆ, ಅಷ್ಟೂ ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿ ಸಂಬಂಧ ಗುತ್ತಿಗೆದಾರರಿಗೆ ಬಿಲ್ ಪಾವತಿಸದ ರಾಜ್ಯ ಸರ್ಕಾರ ತನಿಖೆಗೆ ನಡೆಸುತ್ತಿದೆ. ಆದರೆ, ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಕೆ ಶಿವಕುಮಾರ್ ವಿರುದ್ಧ ಕಮಿಷನ್ ಕೇಳಿದ ಆರೋಪವನ್ನು ಗುತ್ತಿಗೆದಾರರು ಮಾಡಿದ್ದಾರೆ. ಅಲ್ಲದೆ, ರಾಜ್ಯಪಾಲರಿಗೆ ದೂರು ನೀಡಿ ಬಾಕಿ ಬಿಲ್ ಪಾವತಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.
ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಬಿಬಿಎಂಪಿ ಆಯುಕ್ತರನ್ನು ಕರೆಸಿ ಮಾಹಿತಿ ಪಡೆದಿದ್ದಾರೆ. ಈ ನಡುವೆ ರಾಯಚೂರು ಜಿಲ್ಲಾ ಗುತ್ತಿಗೆದಾರರ ಸಂಘವು ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ಹೊರಹಾಕಿದೆ. ಬಾಕಿ ಬಿಲ್ ಪಾವತಿಸಬೇಕು, ಇಲ್ಲವಾದಲ್ಲಿ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ