ಬೆಳಗಾವಿಯಲ್ಲಿ ಶುರುವಾಯ್ತು ಪ್ರವಾಹ ಭೀತಿ! ಎಚ್ಚರಿಕೆಯಿಂದಿರಲು ಜಿಲ್ಲಾಡಳಿತ ಸೂಚನೆ
ಕೃಷ್ಣಾ ನದಿಗೆ ಅಡ್ಡಲಾಗಿರುವ ಕಲ್ಲೋಳ-ಯಡೂರ ನಡುವಿನ ಸೇತವೆಯೂ ಜಲಾವೃತವಾಗಿದ್ದು, 8ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ.
ಬೆಳಗಾವಿ: ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಮತ್ತೆ ಪ್ರವಾಹ ಭೀತಿ ಶುರುವಾಗಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬಾರವಾಡ-ಕುಣ್ಣೂರ ನಡುವಿನ ಸೇತುವೆ ಮುಳುಗಡೆಯಾಗಿದೆ. ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆ ಜಲಾವೃತವಾಗಿದೆ. ದೂಧ್ಗಂಗಾ ನದಿ ನೀರಿನ ಹರಿವು ಹೆಚ್ಚಳವಾದ್ದರಿಂದ ಬೋಜ-ಕಾರದಗಾ ಸಂಪರ್ಕಿಸುವ ಸೇತುವೆ ಮುಳುಗಡೆಯಾಗಿದೆ.
ಮಾತ್ರವಲ್ಲದೇ ಕೃಷ್ಣಾ ನದಿಗೆ ಅಡ್ಡಲಾಗಿರುವ ಕಲ್ಲೋಳ-ಯಡೂರ ನಡುವಿನ ಸೇತವೆಯೂ ಜಲಾವೃತವಾಗಿದ್ದು, 8ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ. ಕೃಷ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ನದಿಯಲ್ಲಿ ಒಂದು ಲಕ್ಷ ಇಪ್ಪತ್ತು ಸಾವಿರ ಕ್ಯೂಸೆಕ್ ಹೊರ ಹರಿವು ಇದೆ. ಹೀಗಾಗಿ ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಉಕ್ಕಿ ಹರಿಯುತ್ತಿದೆ ಮಲಪ್ರಭಾ ನದಿ ನಿರಂತರ ಮಳೆಗೆ ಮಲಪ್ರಭಾ ನದಿ ತುಂಬಿ ಹರಿಯುತ್ತಿದೆ. ಈ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯಲ್ಲಿ ಮತ್ತೆ ಪ್ರವಾಹದ ಆತಂಕ ಶುರುವಾಗಿದೆ. ಬಾದಾಮಿ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ಮಲಪ್ರಭಾ ನದಿಗೆ ನಿರ್ಮಿಸಿರುವ ಕಿರುಸೇತುವೆ ಮುಳುಗಡೆಯಾಗಿದೆ. ಪಕ್ಕದ ಗದಗ ಜಿಲ್ಲೆಯ ಕೊಣ್ಣೂರ ಹಾಗೂ ಬಾಗಲಕೋಟೆ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದೆ. ಸೇತುವೆ ಮೇಲೆ ಎರಡ್ಮೂರು ಅಡಿ ನೀರು ಹರಿಯುತ್ತಿದ್ದು, ಮತ್ತೆ ತೋಟಗಾರಿಕಾ ಬೆಳೆಗಳು ಸಂಪೂರ್ಣ ನೀರಲ್ಲಿ ನಾಶವಾಗಿವೆ. ವರ್ಷದಲ್ಲಿ ಎರಡನೇ ಬಾರಿ ಬಾಗಲಕೋಟೆ ಜನರು ಪ್ರವಾಹ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಇದನ್ನೂ ಓದಿ
ಆದಿವಾಸಿ ಮಕ್ಕಳ ಕಲಿಕೆಗಾಗಿ ಮೈಸೂರಿನ 6 ಹಾಡಿಗಳಲ್ಲಿ ಚಿಗುರು ಶಾಲೆ ಆರಂಭ
ನುಗ್ಗೆಕಾಯಿ ಸೇವನೆಯಿಂದ ಆರೋಗ್ಯ ಪ್ರಯೋಜನಗಳು ಎಷ್ಟಿವೆ ಗೊತ್ತಾ?
(Flood panic has begun in Belgaum and Bagalkot)