ಬೆಳಗಾವಿ: ತಾರಕಕ್ಕೇರಿದ ರಸ್ತೆ ರಾಜಕೀಯ; ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಮತ್ತೆ ಮಾಜಿ ಶಾಸಕ ಸಂಜಯ್ ಪಾಟೀಲ್ ಕಿಡಿ
ವಿಡಿಯೋದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಮತ್ತೆ ಕಿಡಿಕಾರಿರುವ ಮಾಜಿ ಬಿಜೆಪಿ ಶಾಸಕ ಸಂಜಯ್ ಪಾಟೀಲ್, ಪೇಶ್ವೆಗಳ ಕಾಲದಲ್ಲಿ ಕುತಂತ್ರದಿಂದ ನಾರಾಯಣರಾವ್ ಪೇಶ್ವೆ ಸಾವಿಗೆ ಕಾರಣವಾದ ಆನಂದಿಬಾಯಿಗೆ ಲಕ್ಷ್ಮೀ ಹೆಬ್ಬಾಳ್ಕರ್‌ರನ್ನು ಹೋಲಿಸಿದ್ದಾರೆ.
ಬೆಳಗಾವಿ: ಗ್ರಾಮೀಣ ಕ್ಷೇತ್ರದಲ್ಲಿ ರಸ್ತೆ ರಾಜಕೀಯ ಮುಂದುವರಿದಿದೆ. ರಸ್ತೆ ಗುಂಡಿ ವಿಚಾರವಾಗಿ ಬಿಜೆಪಿ ಕಾಂಗ್ರೆಸ್ ಮಧ್ಯೆ ಶುರುವಾಗಿದ್ದ ರಾಜಕಾರಣ ರಾತ್ರಿ ರಾಜಕೀಯ ರಂಗು ಪಡೆದು, ಈಗ ಭಾಷಾ ರಾಜಕೀಯಕ್ಕೆ ನಾಂದಿಯಾಗಿದೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಮಾತನಾಡುವ ಭರದಲ್ಲಿ ರಾತ್ರಿ ರಾಜಕೀಯ ಸಂಸ್ಕೃತಿ ಗೊತ್ತಿದ್ದಿದ್ದರಿಂದಲೇ ನೀವು ಎಂಎಲ್‌ಎ ಆಗಿದ್ದೀರಿ ಎಂದು ವಿವಾದಾತ್ಮಕ ಹೇಳಿಕೆ ನೀಡಿ ಜನರ ಕೆಂಗಣ್ಣಿಗೆ ಸಂಜಯ್ ಪಾಟೀಲ್ ಗುರಿಯಾಗಿದ್ದಾರೆ. ಇದೇ ಹೇಳಿಕೆ ನೀಡುವ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಮರಾಠಿ ಜನರು ಬ್ಯಾನರ್ ಹಚ್ಚಿದ್ದಾರೆ. ಬಿಜೆಪಿ ಅಲ್ಲ ಎಂದು ಹೇಳಿದ್ದಾರೆ.
ಇದನ್ನೇ ಮುಂದಿಟ್ಟುಕೊಂಡು ಶಿವಸೇನೆ ಪ್ರತಿಭಟನೆ ನಡೆಸಿದೆ. ಮರಾಠಾ ಸಮುದಾಯಕ್ಕೆ ಮಾಜಿ ಶಾಸಕ ಸಂಜಯ್ ಪಾಟೀಲ್ ಅಪಮಾನ ಮಾಡಿದ್ದಾರೆಂದು ವಾಘವಡೆ ಗ್ರಾಮದಲ್ಲಿ ಶಿವಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಸಂಜಯ್ ಪಾಟೀಲ್ ಭಾವಚಿತ್ರದ ಬ್ಯಾನರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಸಂಜಯ್ ಪಾಟೀಲ್ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಮರಾಠಿ ಭಾಷಿಕರ ಕ್ಷಮೆಯಾಚನೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಮತ್ತೆ ಕಿಡಿಕಾರಿರುವ ಮಾಜಿ ಬಿಜೆಪಿ ಶಾಸಕ ಸಂಜಯ್ ಪಾಟೀಲ್, ಪೇಶ್ವೆಗಳ ಕಾಲದಲ್ಲಿ ಕುತಂತ್ರದಿಂದ ನಾರಾಯಣರಾವ್ ಪೇಶ್ವೆ ಸಾವಿಗೆ ಕಾರಣವಾದ ಆನಂದಿಬಾಯಿಗೆ ಲಕ್ಷ್ಮೀ ಹೆಬ್ಬಾಳ್ಕರ್‌ರನ್ನು ಹೋಲಿಸಿದ್ದಾರೆ.
ಮರಾಠಿ ಭಾಷೆಯಲ್ಲಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಸಂಜಯ್ ಪಾಟೀಲ್, ನಾನು ಮರಾಠಿ ವಿರುದ್ಧ ಮಾತನಾಡಲು ಸಾಧ್ಯವೇ? ಸಂಜಯ್ ಪಾಟೀಲ್ ಕೊಲ್ಲಾಪುರದಲ್ಲಿ ಜನಿಸಿದ್ದು, ಜನ್ಮದಿಂದಲೇ ಮರಾಠಿಗನಾಗಿದ್ದಾನೆ. ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಕಾಲದಲ್ಲಿ ಆನಂದಿಬಾಯಿ ಅಂತಾ ಇದ್ದಳು. ‘ಧ’ ಅಕ್ಷರ ‘ಮ’ ಮಾಡಿ ಷಡ್ಯಂತ್ರ ಮಾಡಿದ್ದಳು. ಅದೇ ರೀತಿ ಇಲ್ಲಿಯೂ ಒಬ್ಬಳು ಆನಂದಿಬಾಯಿ ಇದ್ದಾಳೆ. ‘ಧ’ ಇದ್ದದ್ದನ್ನು ‘ಮ’ ಮಾಡಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾಳೆ. ನನ್ನ ಮಾತೃಭಾಷೆ ಮರಾಠಿ ಬಗ್ಗೆ ನನಗೆ ಅಪಾರ ಪ್ರೇಮವಿದೆ. ಮರಾಠಿಗರ ವಿರುದ್ಧ ಸಂಜಯ್ ಪಾಟೀಲ್ ಮಾತನಾಡ್ತಾನಾ. ಯಾರದ್ದಾದರೂ ಮನಸು ನೋಯಿಸಿದರೆ ಕ್ಷಮೆಯಾಚಿಸುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ಗೆ ಮತ್ತೊಮ್ಮೆ ಟಾಂಗ್ ಕೊಟ್ಟಿದ್ದಾರೆ.
ಮತ್ತೊಂದೆಡೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಗುಂಡಿ ಮುಚ್ಚುವ ಅಭಿಯಾನ ಮುಂದುವರಿದಿದೆ. ಬಿಜೆಪಿ ವತಿಯಿಂದ ನಿನ್ನೆ (ಅಕ್ಟೋಬರ್ 5) ಸಹ ಸೇವಾ ಮತ್ತು ಸಮರ್ಪಣಾ ಅಭಿಯಾನ ನಡೆಸಲಾಯಿತು. ಬೆಳಗಾವಿ ತಾಲೂಕಿನ ಉಚಗಾಂವ – ಬೆಕ್ಕಿನಕೇರಿ ಗ್ರಾಮದ ಮಧ್ಯೆ ಗುಂಡಿ ಮುಚ್ಚುವ ಕಾರ್ಯವನ್ನು ಬಿಜೆಪಿ ಕಾರ್ಯಕರ್ತರು ಮಾಡಿದರು. ಬಿಜೆಪಿ ಮುಖಂಡ ಧನಂಜಯ ಜಾಧವ್ ನೇತೃತ್ವದಲ್ಲಿ ಬಿಜೆಪಿ ಬಾವುಟ ಹಿಡಿದು ಒಂದು ಟಿಪ್ಪರ್ ಸಿಮೆಂಟ್ ಮಿಶ್ರಿತ ಜಲ್ಲಿಕಲ್ಲು ತಂದು ರಸ್ತೆ ಗುಂಡಿ ಮುಚ್ಚಿದರು. ಇದೇ ವೇಳೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆಕ್ರೋಶ ಹೊರಹಾಕಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ 1200 ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡಿದ್ದಾಗಿ ಹೇಳುತ್ತಾರೆ. 1200 ಕೋಟಿ ರೂಪಾಯಿ ಅನುದಾನ ತಂದು ಅಭಿವೃದ್ಧಿ ಮಾಡಿದರೆ ರಸ್ತೆಯಲ್ಲಿ ಗುಂಡಿಗಳೇಕಿವೆ ಎಂದು ಪ್ರಶ್ನಿಸಿದರು. ಅಷ್ಟೇ ಅಲ್ಲದೇ ಸರ್ಕಾರ ರಸ್ತೆಗಳ ದುರಸ್ತಿಗೆ ಇಂತಿಷ್ಟು ಎಂದು ಪ್ರತಿ ವರ್ಷ ಹಣ ಬಿಡುಗಡೆ ಮಾಡುತ್ತಿದ್ದು, ಆ ಹಣ ಎಲ್ಲಿದೆ ಎಂದು ಬಿಜೆಪಿ ಮುಖಂಡ ಧನಂಜಯ ಜಾಧವ್ ಪ್ರಶ್ನಿಸಿದ್ದಾರೆ.
ಒಟ್ಟಾರೆಯಾಗಿ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಘೋಷಣೆಗೂ ಮುನ್ನವೇ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ಮಧ್ಯೆ ವಾಕ್ಸಮರ, ಜಟಾಪಟಿ ಮುಂದುವರಿದಿದ್ದು, ಇದು ಯಾವ ಹಂತ ತಲುಪುತ್ತದೆ ಎಂದು ಕಾದು ನೋಡಬೇಕು. ಆದರೆ ಈ ಇಬ್ಬರ ಗಲಾಟೆ ನಡುವೆ ಗುಂಡಿ ಮುಚ್ಚುವ ಕೆಲಸ ಆಗುತ್ತಿದ್ದು, ವಾಹನ ಸವಾರರು ಮಾತ್ರ ನಿರಾಳವಾಗಿ ಓಡಾಡುವಂತಾಗಿದೆ ಎನ್ನುವುದು ಮಾತ್ರ ನಿಜ.
ವರದಿ: ಸಹದೇವ ಮಾನೆ
ಇದನ್ನೂ ಓದಿ: ಪಾಲಿಕೆ ಚುನಾವಣೆ: ಮತದಾರರಿಗೆ ಪ್ರಧಾನಿ ಮೋದಿ ಭಾವಚಿತ್ರದ ಚೀಟಿ; ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪ, ಕಿಡಿಕಿಡಿ
Opinion: ಕೋಲಾರ ರಾಜಕೀಯ; ರಾಜಕಾರಣಿಗಳ ಬೀದಿ ನಾಟಕ, ಪಕ್ಷದಲ್ಲಿದ್ದರೆ ಜೈ, ಪಕ್ಷ ಬಿಟ್ಟರೆ ಬಾಯಿಗೆ ಬಂದಂತೆ ಬೈ