ಕೆಜಿಗಟ್ಟಲೆ ಚಿನ್ನ, 14 ಕೋಟಿ ರೂ. ಅಕ್ರಮ ಆಸ್ತಿ: ದಿನಗೂಲಿ ನೌಕರ ಕೋಟಿ ಕುಬೇರನಾಗಿದ್ದೇ ರೋಚಕ!

1992ರಲ್ಲಿ ದಿನಗೂಲಿ ನೌಕರನಾಗಿ ವೃತ್ತಿ ಆರಂಭಿಸಿದ ಅಜಯಸಿಂಗ್ ರಜಪೂತ್, ಸರ್ಕಾರಿ ಅಧಿಕಾರಿಯಾದ ಮೇಲೆ 14 ಕೋಟಿ ಅಕ್ರಮ ಆಸ್ತಿ ಗಳಿಸಿದ್ದಾರೆ! ಲೋಕಾಯುಕ್ತ ದಾಳಿಯಲ್ಲಿ 6 ಕೆಜಿ ಚಿನ್ನ, 25 ಲಕ್ಷ ರೂ. ಮೌಲ್ಯದ ಡೈಮಂಡ್ ನೆಕ್ಲೆಸ್ ಹಾಗೂ 18 ನಿವೇಶನಗಳು ಪತ್ತೆಯಾಗಿದ್ದು, ಇಂಜಿನಿಯರ್‌ನ ಭ್ರಷ್ಟಾಚಾರದ ರೋಚಕ ಕಥೆ ಬಯಲಾಗಿದೆ.

ಕೆಜಿಗಟ್ಟಲೆ ಚಿನ್ನ, 14 ಕೋಟಿ ರೂ. ಅಕ್ರಮ ಆಸ್ತಿ: ದಿನಗೂಲಿ ನೌಕರ ಕೋಟಿ ಕುಬೇರನಾಗಿದ್ದೇ ರೋಚಕ!
ಅಜಯಸಿಂಗ್ ರಜಪೂತ್ ಹಾಗೂ ಅವರ ಮನೆಯಲ್ಲಿ ಪತ್ತೆಯಾದ ಸಂಪತ್ತು
Image Credit source: tv9
Edited By:

Updated on: Apr 11, 2026 | 1:30 PM

ಬೆಳಗಾವಿ, ಏಪ್ರಿಲ್ 11: ಬೆಳಗಾವಿಯ (Belagavi) ನಗರಾಭಿವೃದ್ಧಿ ಕೋಶದ (DUDC) ಎಇಇ ಅಜಯಸಿಂಗ್ ರಜಪೂತ್ (Ajay Singh Rajput) ಮೇಲೆ ನಡೆದ ಲೋಕಾಯುಕ್ತ ದಾಳಿಯ (Lokayukta Raid) ತನಿಖೆ ಮುಂದುವರಿದಂತೆ ಬೆಚ್ಚಿಬೀಳಿಸುವ ಸತ್ಯಗಳು ಹೊರಬರುತ್ತಿವೆ. ಬರೋಬ್ಬರಿ 14 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅಕ್ರಮ ಆಸ್ತಿ ಪತ್ತೆಯಾಗಿರುವ ಈ ಪ್ರಕರಣದಲ್ಲಿ, ಒಬ್ಬ ಸಾಮಾನ್ಯ ದಿನಗೂಲಿ ನೌಕರ ಕೋಟಿ ಕುಬೇರನಾಗಿ ಬೆಳೆದ ಹಾದಿ ಸಿನಿಮೀಯವಾಗಿದೆ.

ದಿನಗೂಲಿ ಟು ಕೋಟಿ ಕುಬೇರ!

ಅಜಯಸಿಂಗ್ ರಜಪೂತ್ ವೃತ್ತಿಜೀವನ ಆರಂಭವಾಗಿದ್ದು 1992ರಲ್ಲಿ ಒಬ್ಬ ಸಾಮಾನ್ಯ ದಿನಗೂಲಿ ನೌಕರನಾಗಿ. ಎಂಜಿನಿಯರಿಂಗ್ ಪದವೀಧರರಾಗಿದ್ದ ಅವರು ಮೊದಲಿಗೆ ಗುತ್ತಿಗೆ ಆಧಾರದಲ್ಲಿ ದಿನಗೂಲಿ ನೌಕರನಾಗಿ ಸೇರಿಕೊಂಡಿದ್ದರು.  1992ರಿಂದ 2006ರವರೆಗೆ ಸತತ 14 ವರ್ಷಗಳ ಕಾಲ ಇವರು ದಿನಗೂಲಿ ನೌಕರನಾಗಿಯೇ ಕಾರ್ಯನಿರ್ವಹಿಸಿದ್ದರು. ಆದರೆ, 2006ರಲ್ಲಿ ಪೌರಾಡಳಿತ ಇಲಾಖೆಯಲ್ಲಿ ಜೂನಿಯರ್ ಇಂಜಿನಿಯರ್ ಆಗಿ ಕಾಯಂ ನೇಮಕಾತಿ ಪಡೆದ ನಂತರ ಇವರ ಅದೃಷ್ಟದ ಬಾಗಿಲು ತೆರೆಯಿತು. ಐದು ವರ್ಷಗಳಲ್ಲೇ ಅಸಿಸ್ಟೆಂಟ್ ಇಂಜಿನಿಯರ್ ಆಗಿ ಬಡ್ತಿ ಪಡೆದ ಇವರು, ನಗರಾಭಿವೃದ್ಧಿ ಕೋಶಕ್ಕೆ ಎಇಇ ಆಗಿ ವರ್ಗಾವಣೆಗೊಂಡ ನಂತರ ಅಕ್ರಮ ಆಸ್ತಿಯ ಸಾಮ್ರಾಜ್ಯವನ್ನೇ ಕಟ್ಟಿದ್ದಾರೆ.

ವಜ್ರದ ಹಾರ, ಕೆಜಿಗಟ್ಟಲೆ ಚಿನ್ನದ ಗಟ್ಟಿ!

ಅಜಯಸಿಂಗ್ ಅವರು ಕೇವಲ ಭೂಮಿಯ ಮೇಲೆ ಮಾತ್ರವಲ್ಲದೆ ಬ್ಯಾಂಕ್ ಲಾಕರ್‌ಗಳಲ್ಲೂ ಸಂಪತ್ತನ್ನು ಅಡಗಿಸಿಟ್ಟಿದ್ದರು. ಹೆಂಡತಿ ಮತ್ತು ಅತ್ತೆಯ ಹೆಸರಿನಲ್ಲಿರುವ ಎಸ್‌ಬಿಐ ಲಾಕರ್‌ಗಳನ್ನು ಅಧಿಕಾರಿಗಳು ತೆರೆದಾಗ ಕಣ್ಣು ಕೋರೈಸುವ ಆಭರಣಗಳು ಪತ್ತೆಯಾಗಿವೆ.

  • ವಜ್ರದ ನಕ್ಲೇಸ್: 25 ಲಕ್ಷ ರೂ. ಮೌಲ್ಯದ ಡೈಮಂಡ್ ನೆಕ್ಲೆಸ್ ಹಾಗೂ ವಜ್ರದ ಹರಳಿನ ಉಂಗುರಗಳು.
  • ಚಿನ್ನದ ರಾಶಿ: 5.96 ಕೆಜಿ ಚಿನ್ನ. ಇದರಲ್ಲಿ ಒಂದೂವರೆ ಕೆಜಿಯಷ್ಟು ಹಾಲ್‌ಮಾರ್ಕ್ ಚಿನ್ನದ ಗಟ್ಟಿಗಳು ಸೇರಿವೆ.
  • ಬೆಳ್ಳಿಯ ಸಂಪತ್ತು: ಸುಮಾರು 5 ಕೆಜಿ ಬೆಳ್ಳಿಯ ಆಭರಣ ಮತ್ತು ಗಟ್ಟಿಗಳು.
  • ಸ್ಥಿರಾಸ್ತಿ: ಹುಬ್ಬಳ್ಳಿ, ಸವದತ್ತಿ, ಹುಕ್ಕೇರಿ, ಗೋಕಾಕ್ ಮತ್ತು ಬೆಳಗಾವಿಯಲ್ಲಿ ಬರೋಬ್ಬರಿ 18 ನಿವೇಶನಗಳು.
  • ನಗದು: ಬ್ಯಾಂಕ್‌ಗಳಲ್ಲಿ 3.12 ಕೋಟಿ ರೂ. ಮೊತ್ತದ ಫಿಕ್ಸೆಡ್ ಡೆಪಾಸಿಟ್.

ಇದನ್ನೂ ಓದಿ: 6 ಕೆಜಿ ಚಿನ್ನ, 5 ಕೆಜಿ ಬೆಳ್ಳಿ, 14 ಕೋಟಿ ರೂ. ಅಕ್ರಮ ಆಸ್ತಿ! ಬೆಳಗಾವಿ ನಗರಾಭಿವೃದ್ಧಿ ಇಂಜಿನಿಯರ್ ಆಸ್ತಿ ಕಂಡು ಲೋಕಾಯುಕ್ತರೇ ಶಾಕ್

ಸುಳ್ಳು ಆದಾಯದ ಮೂಲಗಳನ್ನು ತೋರಿಸಿ ಇಷ್ಟೊಂದು ಬೃಹತ್ ಪ್ರಮಾಣದ ಆಸ್ತಿ ಸಂಪಾದಿಸಿರುವ ಅಜಯಸಿಂಗ್ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಆಂಜನೇಯ ನಗರದ ಮನೆಯಲ್ಲೇ ಅರ್ಧ ಕೆಜಿ ಚಿನ್ನ ಪತ್ತೆಯಾಗಿದ್ದರೆ, ವಿವಿಧ ಬ್ಯಾಂಕ್‌ಗಳ ಲಾಕರ್‌ನಲ್ಲಿ ಕೆಜಿಗಟ್ಟಲೆ ಚಿನ್ನದ ಬಿಸ್ಕೇಟ್‌ಗಳು ದೊರೆತಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:10 pm, Sat, 11 April 26

Follow Us