ನಾಲ್ಕು ವರ್ಷಗಳ ಪ್ರೀತಿ ಕೊಲೆಯಲ್ಲಿ ಅಂತ್ಯ! ಗೋಕಾಕ್ ಫಾಲ್ಸ್‌ಗೆ ಕರೆತಂದು ಪ್ರೇಯಸಿಯನ್ನೇ ಕೊಂದ ಪೇದೆ

ಬೆಳಗಾವಿ ಜಿಲ್ಲೆಯ ಗೋಕಾಕ್ ಫಾಲ್ಸ್‌ನಲ್ಲಿ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ರಕ್ಷಿತಾ ಸರಿಕರ್‌ಳನ್ನು ಮದುವೆ ವಿಚಾರವಾಗಿ ಉಂಟಾದ ಜಗಳದ ಹಿನ್ನೆಲೆಯಲ್ಲಿ ಪ್ರಿಯಕರ ಬಸಪ್ಪ ಸಾತಣ್ಣವರ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಅಕ್ಟೋಬರ್ 28ರಂದು ನಡೆದಿದ್ದ ಹತ್ಯೆ ನಾಪತ್ತೆ ಪ್ರಕರಣದ ತನಿಖೆಯಿಂದ ಬಯಲಾಗಿದೆ. ಕಾಲ್ ಹಿಸ್ಟರಿ ಆಧರಿಸಿ ತನಿಖೆ ನಡೆಸಿದ ಪೊಲೀಸರು ಎಸ್‌ಎಸ್‌ಬಿ ಪೇದೆಯನ್ನು ಬಂಧಿಸಿದ್ದಾರೆ.

ನಾಲ್ಕು ವರ್ಷಗಳ ಪ್ರೀತಿ ಕೊಲೆಯಲ್ಲಿ ಅಂತ್ಯ! ಗೋಕಾಕ್ ಫಾಲ್ಸ್‌ಗೆ ಕರೆತಂದು ಪ್ರೇಯಸಿಯನ್ನೇ ಕೊಂದ ಪೇದೆ
ಮದುವೆ ವಿಚಾರಕ್ಕೆ ಗೋಕಾಕ್ ಫಾಲ್ಸ್‌ಗೆ ಕರೆತಂದು ಪ್ರೇಯಸಿಯನ್ನೇ ಕೊಂದ ಪೇದೆ
Edited By:

Updated on: Nov 07, 2026 | 1:19 PM

ಮುಖ್ಯಾಂಶಗಳು

  • ನಾಲ್ಕು ವರ್ಷಗಳ ಪ್ರೀತಿಗೆ ಮದುವೆ ವಿಚಾರದಲ್ಲಿ ಭೀಕರ ಅಂತ್ಯ ಕಂಡ ರಕ್ಷಿತಾ.
  • ಗೋಕಾಕ್ ಫಾಲ್ಸ್‌ಗೆ ಕರೆತಂದು ಪ್ರೇಯಸಿಯ ಕತ್ತು ಹಿಸುಕಿ ಕೊಂದ ಪ್ರಿಯಕರ.
  • ಕಾಲ್ ಹಿಸ್ಟರಿ ಆಧರಿಸಿ ತನಿಖೆ ನಡೆಸಿ ಆರೋಪಿ ಬಸಪ್ಪನ ಬಂಧಿಸಿದ ಪೊಲೀಸರು.

ಬೆಳಗಾವಿ, ನವೆಂಬರ್ 07: ಪ್ರೀತಿ, ಮದುವೆ ಎಂದು ನಂಬಿಸಿ ನಾಲ್ಕು ವರ್ಷಗಳ ಕಾಲ ಯುವತಿಯೊಂದಿಗೆ ಸುತ್ತಾಡಿದ ಪ್ರಿಯಕರನೊಬ್ಬ ಕೊನೆಗೆ ಆಕೆಯನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ಫಾಲ್ಸ್‌ನಲ್ಲಿ ನಡೆದಿದೆ. ಮದುವೆಯಾಗುವಂತೆ ಒತ್ತಾಯಿಸಿದ್ದಕ್ಕೆ ಇಬ್ಬರ ನಡುವೆ ಜಗಳವಾಗಿದ್ದು, ಇದೇ ವಿಚಾರಕ್ಕೆ ಸಿಟ್ಟಿಗೆದ್ದ ಪ್ರಿಯಕರ ಯುವತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಮೃತದೇಹವನ್ನು ಫಾಲ್ಸ್‌ನ ಗುಡ್ಡದಲ್ಲಿ ಎಸೆದು ಪರಾರಿಯಾಗಿದ್ದಾನೆ. ನಾಪತ್ತೆ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಕಾಲ್ ಹಿಸ್ಟರಿ ಮೂಲಕ ಕೊಲೆಯ ರಹಸ್ಯ ಬಯಲಾಗಿದೆ. ಪ್ರೇಯಸಿಯನ್ನೇ ಕೊಂದ ಆರೋಪದ ಮೇಲೆ ಸಶಸ್ತ್ರ ಪಡೆ ಪೇದೆಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ನಾಲ್ಕು ವರ್ಷದ ಪ್ರೀತಿ, ಮದುವೆ ಭರವಸೆ!

ಬೆಳಗಾವಿ ಜಿಲ್ಲೆಯ ಗೋಕಾಕ್ ಫಾಲ್ಸ್‌ನಲ್ಲಿ ಕೊಲೆಯಾದ ಯುವತಿಯನ್ನು ರಾಯಬಾಗ ತಾಲೂಕಿನ ಹಾರೂಗೇರಿ ಗ್ರಾಮದ ರಕ್ಷಿತಾ ಸರಿಕರ್ (23) ಎಂದು ಗುರುತಿಸಲಾಗಿದೆ. ಅಥಣಿ ತಾಲೂಕಿನ ಅಡಳಹಟ್ಟಿ ಗ್ರಾಮದ ಬಸಪ್ಪ ಸಾತಣ್ಣವರ (29) ಕೊಲೆ ಆರೋಪಿಯಾಗಿದ್ದಾನೆ. ಈತ ಬಿಹಾರ ರಾಜ್ಯದ ಎಸ್‌ಎಸ್‌ಬಿ 21ನೇ ಬೆಟಾಲಿಯನ್‌ನಲ್ಲಿ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದ ಎನ್ನಲಾಗಿದೆ.

Loading...

ರಕ್ಷಿತಾ ಹಾಗೂ ಬಸಪ್ಪ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗುವುದಾಗಿ ನಂಬಿಸಿದ್ದ ಬಸಪ್ಪ, ರಕ್ಷಿತಾಳೊಂದಿಗೆ ಸುತ್ತಾಡುತ್ತಿದ್ದ. ಆದರೆ, ಮದುವೆ ವಿಚಾರ ಪ್ರಸ್ತಾಪವಾದಾಗಲೆಲ್ಲ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಇದೇ ವಿಚಾರವಾಗಿ ಮಾತನಾಡಲು ಅಕ್ಟೋಬರ್ 28ರಂದು ಬಸಪ್ಪ ರಕ್ಷಿತಾಳನ್ನು ಗೋಕಾಕ್ ಫಾಲ್ಸ್‌ಗೆ ಕರೆದುಕೊಂಡು ಹೋಗಿದ್ದ.

ಮದುವೆ ವಿಚಾರಕ್ಕೆ ಜಗಳ, ಕತ್ತು ಹಿಸುಕಿ ಹತ್ಯೆ!

ಬಸಪ್ಪನ ಮಾತು ನಂಬಿ ರಕ್ಷಿತಾ ಆತನೊಂದಿಗೆ ಗೋಕಾಕ್ ಫಾಲ್ಸ್‌ಗೆ ತೆರಳಿದ್ದಳು. ಅಲ್ಲಿ ಮದುವೆ ವಿಚಾರವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ. ಈ ವೇಳೆ ಬಸಪ್ಪ ರಕ್ಷಿತಾಳ ಕಿವಿಗೆ ಹೊಡೆದು ಹಲ್ಲೆ ನಡೆಸಿದ್ದಾನೆ. ಬಳಿಕ ಆಕೆಯ ಕತ್ತು ಹಿಸುಕಿ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಹತ್ಯೆಯ ನಂತರ ಮೃತದೇಹವನ್ನು ಗೋಕಾಕ್ ಫಾಲ್ಸ್‌ನ ಗುಡ್ಡದ ಪ್ರದೇಶದಲ್ಲಿ ಎಸೆದು ಅಲ್ಲಿಂದ ಪರಾರಿಯಾಗಿದ್ದಾನೆ.

ನಾಪತ್ತೆ ಪ್ರಕರಣದಿಂದ ಬಯಲಾಯ್ತು ಕೊಲೆ ರಹಸ್ಯ!

ಅಕ್ಟೋಬರ್ 28ರಂದು ರಕ್ಷಿತಾಳ ಹತ್ಯೆ ನಡೆದಿದ್ದರೆ, ನವೆಂಬರ್ 1ರಂದು ಆಕೆಯ ಸಂಬಂಧಿಕರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಯುವತಿ ನಾಪತ್ತೆಯಾಗಿರುವ ಬಗ್ಗೆ ದೂರು ಸ್ವೀಕರಿಸಿದ ಪೊಲೀಸರು ತನಿಖೆ ಆರಂಭಿಸಿದ್ದರು. ಈ ವೇಳೆ ರಕ್ಷಿತಾಳ ಮೊಬೈಲ್ ಕಾಲ್ ಹಿಸ್ಟರಿ ಪರಿಶೀಲಿಸಿದಾಗ ಬಸಪ್ಪನ ಜೊತೆಗಿನ ಆತ್ಮೀಯತೆ ಬೆಳಕಿಗೆ ಬಂದಿತ್ತು. ಇದರಿಂದ ಅನುಮಾನಗೊಂಡ ಪೊಲೀಸರು ಬಸಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ರಕ್ಷಿತಾಳನ್ನು ಹತ್ಯೆ ಮಾಡಿರುವ ಭೀಕರ ಕೃತ್ಯ ಬಯಲಾಗಿದೆ ಎನ್ನಲಾಗಿದೆ.

ನಾಲ್ಕು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿದ್ದ ಯುವತಿಯನ್ನೇ ಕೊಲೆ ಮಾಡಿದ ಆರೋಪದ ಮೇಲೆ ಬಸಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ಗೋಕಾಕ್ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More
Loading...
Unable to load recommendations.
Follow Us